ಶನಿವಾರ, ಫೆಬ್ರವರಿ 27, 2021
31 °C
ಚಿಕ್ಕಮಗಳೂರು, ತರೀಕೆರೆ, ಮೂಡಿಗೆರೆ, ಕಡೂರಿನಲ್ಲಿ ಬಿಜೆಪಿ ಜಯಭೇರಿ– ಸಿ.ಟಿ ರವಿಗೆ ಗೆಲುವು; ಮೋಟಮ್ಮ , ಜೀವರಾಜ್‌, ದತ್ತ, ನಿಂಗಯ್ಯಗೆ ಸೋಲು

ಕಾಫಿನಾಡಿನಲ್ಲಿ ಅರಳಿದ ಕಮಲ, ಶೃಂಗೇರಿ ಕ್ಷೇತ್ರ ‘ಕೈ’ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಫಿನಾಡಿನಲ್ಲಿ ಅರಳಿದ ಕಮಲ, ಶೃಂಗೇರಿ ಕ್ಷೇತ್ರ ‘ಕೈ’ ವಶ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ್ದು, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನು ತೆಕ್ಕೆಗೆ ಹಾಕಿಕೊಂಡಿದೆ. ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿ.ಟಿ.ರವಿ ಅವರು ಸತತ ನಾಲ್ಕನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ. ತರೀಕೆರೆಯಲ್ಲಿ ಬಿಜೆಪಿಯ ಡಿ.ಎಸ್‌.ಸುರೇಶ್‌, ಕಡೂರಿನಲ್ಲಿ ಬಿಜೆಪಿಯ ಕೆ.ಎಸ್‌.ಪ್ರಕಾಶ್‌ (ಬೆಳ್ಳಿ ಪ್ರಕಾಶ್‌), ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರು ಅಲ್ಪಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್‌ ಖಾತೆಯನ್ನೇ ತೆರೆದಿಲ್ಲ.

ಮಲೆನಾಡು, ಅರೆಮಲೆನಾಡು, ಬಯಲುಸೀಮೆಯ ಈ ಜಿಲ್ಲೆಯ ಐದೂ ಕ್ಷೇತ್ರಗಳಿಂದ 60 ಮಂದಿ ಕಣದಲ್ಲಿ ಇದ್ದರು. ಜಿಲ್ಲೆಯಲ್ಲಿ ಈ ಬಾರಿ ಅಭ್ಯರ್ಥಿಗಳು ನೀರಾವರಿ, ಅಭಿವೃದ್ಧಿ ಮುಂದಿಟ್ಟುಕೊಂಡು ಮತಯಾಚನೆ ಮಾಡಿದ್ದರು. ‘ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ವಿಚಾರ’, ‘ಹಿಂದುತ್ವ’ದಂಥ ಭಾವನಾತ್ಮಕ ವಿಚಾರಗಳು ಮುನ್ನೆಲೆಯಲ್ಲಿ ಇರಲಿಲ್ಲ.

ಚಿಕ್ಕಮಗಳೂರು ಕ್ಷೇತ್ರ: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 18 ಮಂದಿ ಕಣದಲ್ಲಿದ್ದರು. ಬಿಜೆಪಿಯಿಂದ ಸಿ.ಟಿ.ರವಿ ಅವರು ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಕಾಂಗ್ರೆಸ್‌ ಘಟಾನುಘಟಿ ರಾಜಕಾರಣಿ ಬಿ.ಎಲ್.ಶಂಕರ್‌ ಅವರನ್ನು ಕಣಕ್ಕಿಳಿಸಿತ್ತು. ಜೆಡಿಎಸ್‌ನಿಂದ ತರಕಾರಿ ವರ್ತಕ ಬಿ.ಎಚ್‌.ಹರೀಶ್‌ ಕಣಕ್ಕಿಳಿದಿದ್ದರು.

ಜೆಡಿಎಸ್‌ ಅಭ್ಯರ್ಥಿ ಹೊಸಮುಖ ಆಗಿದ್ದರು. ಜನರ ನಾಡಿಮಿಡಿತ ಹಿಡಿಯುವ ಚಾಣಾಕ್ಷತೆ, ತಂತ್ರಗಾರಿಕೆ, ಅನುಭವದ ಕೊರತೆಗಳು ಅವರನ್ನು ಸೋಲಿನ ತೆಕ್ಕೆಗೆ ದೂಡಿವೆ. ಕ್ಷೇತ್ರದಲ್ಲಿ ರೈತರು, ವರ್ತಕರ ಒಡನಾಟ ಇದ್ದರೂ, ಅದು ಮತಗಳಾಗಿ ಪರಿವರ್ತನೆಯಾಗಿಲ್ಲ. ಪ್ರಬಲ ಸಮುದಾಯದ ಕಣಕ್ಕಿಳಿಸಿದರೆ ಅನುಕೂಲವಾಗುತ್ತದೆ ಎಂಬ ಜೆಡಿಎಸ್‌ ಲೆಕ್ಕಾಚಾರವೂ ಹುಸಿಯಾಗಿದೆ.

ಕಾಂಗ್ರೆಸ್‌ ಪಕ್ಷವು ಕೊನೆ ಹಂತದಲ್ಲಿ ಅಭ್ಯರ್ಥಿ ಹೆಸರು ಪ್ರಕಟಿಸಿತ್ತು. ಜಿಲ್ಲೆಯಲ್ಲಿ ಪಕ್ಷದ ನಾಯಕತ್ವ ಗಮನದಲ್ಲಿಟ್ಟುಕೊಂಡು ಮುತ್ಸದ್ಧಿ ಬಿ.ಎಲ್‌.ಶಂಕರ್‌ ಅವರನ್ನು ಕಣಕ್ಕಿಳಿಸಿತ್ತು. ಗಾಯತ್ರಿ ಶಾಂತೇಗೌಡ ಪ್ರಬಲ ಆಕಾಂಕ್ಷಿಯಾಗಿದ್ದರು. ಶಂಕರ್‌ ಅವರಿಗೆ ಟಿಕೆಟ್‌ ನೀಡಿದ್ದು ಗಾಯತ್ರಿ ಅವರ ಬೆಂಬಲಿಗರು, ಕೆಲ ಕಾಂಗ್ರೆಸ್‌ ಮುಖಂಡರಲ್ಲಿ ಅಸಮಾಧಾನ ಮೂಡಿಸಿತ್ತು. ಪಕ್ಷದ ಅಣತಿಯಂತೆ ಶಂಕರ್‌ ಕಾರ್ಯಗತವಾಗಿದ್ದರು. ಆದರೆ, ಕ್ಷೇತ್ರದಲ್ಲಿ ತಂತ್ರ ಫಲಿಸಿಲ್ಲ.

ಆರಂಭದಿಂದಲೂ ರಣತಂತ್ರ ಉತ್ತಮವಾಗಿತ್ತು. ಆದರೆ ಕೊನೆಹಂತದ ತಂತ್ರಗಾರಿಕೆಯಲ್ಲಿ (ಮತದಾನದ ಮುಂಚಿನ ಎರಡು ದಿನ) ಕೈಚೆಲ್ಲಿದ್ದು ಸೋಲಿನ ದವಡೆಗೆ ನೂಕಿತು ಎಂದು ಕೆಲ ಕಾಂಗ್ರೆಸ್‌ ಮುಖಂಡರು ಸೋಲಿಗೆ ಕಾರಣ ವಿಶ್ಲೇಷಿಸುತ್ತಾರೆ.

ಹ್ಯಾಟ್ರಿಕ್‌ ಸಾಧಿಸಿದ್ದ ಬಿಜೆಪಿಯ ಸಿ.ಟಿ.ರವಿ ಅವರು ಕ್ಷೇತ್ರದ ಜನರು ಒಳಗುಟ್ಟುಗಳನ್ನು ಬಲ್ಲವರು. ತಮ್ಮದೇ ಆದ ತಂತ್ರಗಾರಿಕೆ, ಜನಸಂಪರ್ಕ, ಪಟ್ಟುಗಳನ್ನು ಪ್ರಯೋಗಿಸಿ ಪ್ರತಿಸ್ಪರ್ಧಿಗಳನ್ನು ಹಣಿಯುವಲ್ಲಿ ಸಫಲರಾಗಿದ್ದಾರೆ. ಚುನಾವಣೆಗೆ ಮೂರು ದಿನ ಮುನ್ನ ಚಿಕ್ಕಮಗಳೂರಿನಲ್ಲಿ ಏರ್ಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ರ್‌್ಯಾಲಿಯು ಮೋಡಿ ಮಾಡಿದೆ, ಜಿಲ್ಲೆಯಲ್ಲಿ ಮತಗಳಿಕೆಗೆ ಸಹಕಾರಿಯಾಗಿದೆ ಎಂಬುದು ಬಿಜೆಪಿ ಮುಖಂಡರ ವಿಶ್ಲೇಷಣೆ.

ಶೃಂಗೇರಿ ಕ್ಷೇತ್ರ:

ಅಪ್ಪಟ ಮಲೆನಾಡಿನ ಮೂರು ತಾಲ್ಲೂಕುಗಳಿರುವ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸರದಾರ ಬಿಜೆಪಿಯ ಡಿ.ಎನ್‌.ಜೀವರಾಜ್‌ ಅವರನ್ನು ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರು ಅಲ್ಪಮತಗಳ ಅಂತರದಲ್ಲಿ ಮಣಿಸಿದ್ದಾರೆ.

ಕಳೆದ ಬಾರಿ ರಾಜೇಗೌಡ ಅವರು ಜೀವರಾಜ್‌ ವಿರುದ್ಧ ಕೆಲವೇ ಮತಗಳ ಅಂತರದಲ್ಲಿ ಸೋಲುಂಡಿದ್ದರು. ‘ಮಲೆನಾಡಿನ ಗಾಂಧಿ’ ಎಂದು ಹೆಸರಾಗಿದ್ದ ದಿವಂಗತ ಮಾಜಿ ಸಚಿವ ಎಚ್‌.ಜಿ.ಗೋವಿಂದೇಗೌಡ ಪುತ್ರ ಎಚ್‌.ಜಿ.ವೆಂಕಟೇಶ್‌ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರು. ಶಿವಸೇನೆಯಿಂದ ಪ್ರವೀಣ್‌ ಖಾಂಡ್ಯ ಕಣಕ್ಕಿಳಿದಿದ್ದರು.

ಜೆಡಿಎಸ್‌ನ ವೆಂಕಟೇಶ್‌ ಅವರು ಕೊನೆ ಹಂತದಲ್ಲಿ ಕೈ ಚೆಲ್ಲಿದರು, ಹೀಗಾಗಿ ಜೆಡಿಎಸ್‌ನ ಕೆಲ ಮತಗಳು ಕಾಂಗ್ರೆಸ್‌ನತ್ತ ವಾಲಿದವು. ಬಿಜೆಪಿಯೊಂದಿಗೆ ಅಸಮಾಧಾನಗೊಂಡು ಸಿಡಿದೆದ್ದು ಕಣಕ್ಕಿಳಿದಿದ್ದ ಪ್ರವೀಣ್‌ ಖಾಂಡ್ಯ ಸಾಂಪ್ರದಾಯಿಕ ಮತಗಳನ್ನು ಕಸಿದಿದ್ದು ಬಿಜೆಪಿಗೆ ಮುಳುವಾಗಿದೆ. ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯೂ ಇತ್ತು ಎಂದು ಕೆಲ ಬಿಜೆಪಿ ಮುಖಂಡರು ವಿಶ್ಲೇಷಿಸುತ್ತಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಂಥ ನಾಯಕರು ಇಲ್ಲಿ ಪ್ರಚಾರ ಕೈಗೊಂಡಿದ್ದರು. ಬಿಜೆಪಿ ತಂತ್ರಗಾರಿಕೆಗಳು ಇಲ್ಲಿ ಫಲ ನೀಡಿಲ್ಲ.

ಮೂಡಿಗೆರೆ ಕ್ಷೇತ್ರ:

ಮೂಡಿಗೆರೆಯು ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿದೆ. ಮಾಜಿ ಶಾಸಕ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ನ ಮೋಟಮ್ಮ ಅವರನ್ನು ಮಣಿಸಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಶಾಸಕ ಬಿ.ಬಿ.ನಿಂಗಯ್ಯ ಸೋಲುಂಡಿದ್ದಾರೆ.

ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ಇತ್ತು. ಕಾಂಗ್ರೆಸ್‌ನ ಹಿರಿಯ ನಾಯಕಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದರೆ, ಆ ಛಾಪು ಮತಗಳಾಗಿ ಪರಿವರ್ತನೆಯಾಗಿಲ್ಲ.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಜನರೊಂದಿಗೆ ಹೆಚ್ಚು ಬೆರೆಯುತ್ತಾರೆ, ಒಡನಾಟ ಚೆನ್ನಾಗಿದೆ. ಅದು ಅವರಿಗೆ ವರದಾನವಾಗಿದೆ.

ಮತದಾರರು ಅವರನ್ನು ಬೆಂಬಲಿಸಿದ್ದಾರೆ ಎಂಬ ಅಭಿಪ್ರಾಯ ದಟ್ಟವಾಗಿದೆ. ಕಳಸವನ್ನು ತಾಲ್ಲೂಕು ಕೇಂದ್ರವಾಗಿಸುವ ನಿಟ್ಟಿನಲ್ಲಿ ವಿಫಲವಾಗಿದ್ದು ಜೆಡಿಎಸ್‌ ನಿಂಗಯ್ಯ ಅವರಿಗೆ ಮುಳುವಾಯಿತು,ಜನರ ನಾಡಿಮಿಡಿತ ಹಿಡಿಯುವ ನಿಟ್ಟಿನಲ್ಲಿ ಅವರ ತಂತ್ರಗಾರಿಕೆ ಫಲ ನೀಡಿಲ್ಲ.

ತರೀಕೆರೆ ಕ್ಷೇತ್ರ:

ಬಯಲು ಸೀಮೆಯ ತರೀಕೆರೆ ಕ್ಷೇತ್ರದಲ್ಲಿ ಬಿಜೆಪಿಯ ಡಿ.ಎಸ್.ಸುರೇಶ್‌ ಅವರು ಪಕ್ಷೇತರ ಅಭ್ಯರ್ಥಿ ಜಿ.ಎಚ್‌.ಶ್ರೀನಿವಾಸ್‌ ಅವರನ್ನು ಮಣಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಹುಕೋನ ಸ್ಪರ್ಧೆ ಏರ್ಪಟ್ಟಿತ್ತು. ಪಕ್ಷಗಳ ಮೂವರು, ಇಬ್ಬರು ಪಕ್ಷೇತರರ ನಡುವೆ ಹಣಾಹಣಿ ಇತ್ತು.

ಶಾಸಕ ಜಿ.ಎಚ್.ಶ್ರೀನಿವಾಸ್‌ ಅವರು ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿ ಪಕ್ಷೇತರವಾಗಿ ಕಣಕ್ಕಿಳಿದಿದ್ದರು. ಬಿಜೆಪಿಯ ಟಿಕೆಟ್‌ ಕೈತಪ್ಪಿ ಎಚ್‌.ಎಂ.ಗೋಪಿ ಪಕ್ಷೇತರವಾಗಿ ಕಣಕ್ಕಿಳಿದಿದ್ದರು. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಸ್‌.ಎಂ.ನಾಗರಾಜ್‌ ಮತ್ತು ಜೆಡಿಎಸ್‌ನಿಂದ ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ ಕಣಕ್ಕಿಳಿದಿದ್ದರು.

ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಲಿಂಗಾಯತ ಸಮುದಾಯ, ಜಡಿಎಸ್‌ನ ಶಿವಶಂಕರಪ್ಪ ಮತ್ತು ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್‌ ಅವರು ಕುರುಬ ಸಮುದಾಯದವರಾಗಿದ್ದರು. ಪ್ರಬಲ ಪೈಪೋಟಿಯೊಡ್ಡಿದ್ದ ಎಚ್‌.ಎಂ.ಗೋಪಿ ಅವರು ಮಡಿವಾಳ ಸಮುದಾಯವರಾಗಿದ್ದರು.

ಕ್ಷೇತ್ರದಲ್ಲಿ ಈ ಬಾರಿ ಗೆದ್ದವರು ಮುಂದಿನ ಬಾರಿ ಗೆಲ್ಲುವುದಿಲ್ಲ ಎಂಬ ಮಾತು ಇದೆ. ಕ್ಷೇತ್ರದಲ್ಲಿ ಜನರ ನಾಡಿಮಿಡಿತ ಹಿಡಿಯುವಲ್ಲಿ ಬಿಜೆಪಿ ತಂತ್ರಗಾರಿಕೆ ಫಲಿಸಿದೆ.

ಕಡೂರು ಕ್ಷೇತ್ರ: ಅಪ್ಪಟ್ಟ ಬಯಲು ಸೀಮೆಯ ಕಡೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರಭಾವಿ ನಾಯಕ ವೈ.ಎಸ್‌.ವಿ. ದತ್ತ ಅವರನ್ನು ಬಿಜೆಪಿಯ ಕೆ.ಎಸ್‌.ಪ್ರಕಾಶ್‌ ಸೋಲಿಸಿದ್ದಾರೆ. ಇಲ್ಲಿ ಜೆಡಿಎಸ್‌, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿಯ ಹಣಾಹಣಿ ಇತ್ತು.

ಕಳೆದ ಬಾರಿ ಪ್ರೀತಿ ರಾಜಕಾರಣದ ಅಲೆಯಲ್ಲಿ ಗೆದ್ದಿದ್ದ ಜೆಡಿಎಸ್‌ನ ದತ್ತ ಅವರ ತಂತ್ರಗಾರಿಕೆ ಈ ಬಾರಿ ಫಲ ನೀಡಿಲ್ಲ. ಪಾದಯಾತ್ರೆಯು ನಿರೀಕ್ಷಿತ ಮಟ್ಟದಲ್ಲಿ ಜನರ ಮನಮುಟ್ಟಿಲ್ಲ. ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ ಛಾಪು ಹೊಂದಿರುವ ದತ್ತ ಕ್ಷೇತ್ರದರ ಮತದಾರರ ನಾಡಿಮಿಡಿತ ಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಕೆಲ ಮುಖಂಡರು ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.

ಕಾಂಗ್ರೆಸ್‌ ಕೊನೆ ಹಂತದಲ್ಲಿ ಹೊಸ ಮುಖ ಕೆ.ಎಸ್‌.ಆನಂದ್‌ ಅವರಿಗೆ ಟಿಕೆಟ್‌ ನೀಡಿತ್ತು. ಪಕ್ಷದಲ್ಲಿ ಕೆಲವರಲ್ಲಿ ಇದು ಅಸಮಾಧಾನವನ್ನೂ ಮೂಡಿಸಿತ್ತು. ಕಾಂಗ್ರೆಸ್‌ ತಂತ್ರಗಾರಿಕೆಗಳೂ ಇಲ್ಲಿ ಫಲ ನೀಡಿಲ್ಲ.

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಡೂರು ಕ್ಷೇತ್ರದ ಬಿಜೆಪಿಯ ಕೆ.ಎಸ್‌.ಪ್ರಕಾಶ್‌ ಮತ್ತು ಶೃಂಗೇರಿ ಕ್ಷೇತ್ರದ ಟಿ.ಡಿ.ರಾಜೇಗೌಡ ಇದೇ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಕೆ.ಎಸ್‌.ಪ್ರಕಾಶ್‌ ಅವರು ಸಿಂಟಗೆರೆ ಹೋಬಳಿಯ ಕುಂದೂರಿನವರು. ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಬಿ.ಇ, ಎಲ್‌ಎಲ್‌ಬಿ ವ್ಯಾಸಂಗ ಮಾಡಿದ್ದಾರೆ. ಪತ್ನಿ ಕವಿತಾ, ಮೂವರು ಮಕ್ಕಳು ಇದ್ದಾರೆ. ಬಿಜೆಪಿಯ ಕಡೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದಾರೆ. ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು.

ಟಿ.ಡಿ.ರಾಜೇಗೌಡ ಅವರು ಖಾಂಡ್ಯ ಬೋಬಳಿಯ ಬಾಸಾಪುರ ಗ್ರಾಮದವರು. ವೃತ್ತಿಯಲ್ಲಿ ಕೃಷಿಕರಾಗಿದ್ದಾರೆ. ಬಿ.ಕಾಂ ಪದವೀಧರರಾಗಿದ್ದಾರೆ. ಪತ್ನಿ ಡಿ.ಕೆ.ಪುಷ್ಪಾ, ಇಬ್ಬರು ಮಕ್ಕಳು ಇದ್ದಾರೆ. ಕಾಂಗ್ರೆಸ್‌ ಜಿಲ್ಲಾ ಸಮಿತಿ ಉಪಾಧ್ಯಕ್ಷರಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.