ಮುಗಿಲು ಮುಟ್ಟಿದ ಸಂಭ್ರಮಾಚರಣೆ

7
ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಗೆಲುವು

ಮುಗಿಲು ಮುಟ್ಟಿದ ಸಂಭ್ರಮಾಚರಣೆ

Published:
Updated:

ನರಸಿಂಹರಾಜಪುರ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡರ ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮಾಚಾರಣೆ ಮುಗಿಲು ಮುಟ್ಟಿತ್ತು.

ಟಿ.ಡಿ.ರಾಜೇಗೌಡರು ಗೆಲುವು ಸಾಧಿಸಿದ್ದಾರೆಂಬ ಸುದ್ದಿ ದೃಶ್ಯಮಾಧ್ಯಮದಲ್ಲಿ ಪ್ರಕಟವಾಗುತ್ತಿದ್ದಂತೆ ಪಟ್ಟಣದ ಸಂತೆ ಮಾರುಕಟ್ಟೆ ಸಮೀಪವಿರುವ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಸೇರಿದ ಕಾರ್ಯಕರ್ತರು, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪಕ್ಷದ ಮುಖಂಡರ ಪರ ಘೋಷಣೆಯನ್ನು ಕೂಗಿ ಕುಣಿದು ಕುಪ್ಪಳಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು.

ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಭಾರಿ ಉದ್ದರ ಸರಮಾಲೆ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದರು. ಯುವ ಕಾಂಗ್ರೆಸ್ ಮುಖಂಡರು ಬೈಕ್‌ನಲ್ಲಿ ದೊಡ್ಡ ಗಾತ್ರದ ಕಾಂಗ್ರೆಸ್ ಧ್ವಜವನ್ನು ಹಿಡಿದು ಬೈಕ್ ರ್‍್ಯಾಲಿ ನಡೆಸಿದರು. ನಾಸಿಕ್ ಡೋಲ್ ನೊಂದಿಗೆ ಕಾಂಗ್ರೆಸ್ ಕಚೇರಿಯಿಂದ ಸಾವಿರಾರೂ ಸಂಖ್ಯೆಯಲ್ಲಿ ಕಾರ್ಯಕರ್ತರು ಮೆರವಣಿಗೆ ನಡೆಸಿ ನೀರಿನ ಟ್ಯಾಂಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕುಣಿದು ಕುಪ್ಪಳಿಸಿದರು. ನಂತರ ಪಟ್ಟಣದ ಪ್ರವಾಸಿ ಮಂದಿರದವರೆಗೂ ಮೆರವಣಿಗೆ ನಡೆಸಿದರು.

ಪಟ್ಟಣದಲ್ಲಿ ಕಾರ್ಯಕರ್ತರು ಗೆಲುವಿಗೆ ಸಂಭ್ರಮಿಸುತ್ತಿದ್ದರೆ ತಾಲ್ಲೂಕಿನ ಶೆಟ್ಟಿಕೊಪ್ಪ, ಸಿಂಸೆ, ಕೈಮರ ಮುಂತಾದ ಗ್ರಾಮಗಳಿಂದ ವಾಹನಗಳಲ್ಲಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮೆರವಣಿಗೆ ನಡೆಸಿ ಸಂಭ್ರಮಿಸಿದರು. ಸಂಜೆ 4.30ರ ವೇಳೆಗೆ ಗ್ರಾಮೀಣ ಭಾಗದ ಯುವಕರು ಪಟ್ಟಣದಲ್ಲಿ ಬೈಕ್ ಹಾಗೂ ವಾಹನಗಳ ರ್‍್ಯಾಲಿ ನಡೆಸಿ ಕಾಂಗ್ರೆಸ್ ಪರ ಜಯಘೋಷ ಕೂಗಿದರು.

ಹಾಲಿನ ಅಭಿಷೇಕ: ನರಸಿಂಹರಾಜಪುರ ಪಟ್ಟಣದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಅಳವಡಿಸಲಾಗಿರುವ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡರ ಕಟೌಟ್‌ಗೆ ಕಾರ್ಯಕರ್ತರು ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.

ಕೊಪ್ಪ: ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡರು ಜಯ ಗಳಿಸುತ್ತಿದ್ದಂತೆ ತಾಲ್ಲೂಕಿನೆಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ನೂರಾರು ಕಾರ್ಯಕರ್ತರು ಸಮಾವೇಶಗೊಂಡು ರಾಜೇಗೌಡರಿಗೆ ಜೈಕಾರ ಹಾಕುತ್ತಾ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಎಸ್. ಹರೀಶ್ ಭಂಡಾರಿ, ಕೆ. ಸಂದೇಶ್, ಕೆಡಿಪಿ ಸದಸ್ಯ ಕೆ. ಆನಂದ್, ಕಾಂಗ್ರೆಸ್ ನಗರ ಘಟಕದ ಮಾಜಿ ಅಧ್ಯಕ್ಷ ಕೆ.ಎನ್. ರಮೇಶ್ ಶೆಟ್ಟಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಜೇಸುದಾಸ್, ಮುಖಂಡರಾದ ಎಂ. ಕೇಶವ್, ಸದಾಶಿವ ಶೆಟ್ಟಿ, ಈವನ್ ಜೋಯೆಲ್, ಪ್ರಹ್ಲಾದ [ಪಾಲಿ], ಬಾಬು, ಶ್ರೀಧರ ಇದ್ದರು.

ಬಳಿಕ ಬ್ಲಾಕ್ ಕಾಂಗ್ರೆಸ್ ಕಚೇರಿವರೆಗೆ ಬೈಕ್ ರ್ಯಾಲಿ, ಮೆರವಣಿಗೆ ಮೂಲಕ ತೆರಳಿ ಸಾಗಿ ಅಲ್ಲಿಯೂ ಜಯ ಘೋಷಗಳನ್ನು ಮೊಳಗಿಸುತ್ತಾ ಪಟಾಕಿ ಸಿಡಿಸಿ, ಸಿಹಿ ಹಂಚಿದರಲ್ಲದೆ, ಪಕ್ಷದ ಗೆಲುವಿನ ಸಂಭ್ರಮದಲ್ಲಿ ಕುಣಿದಾಡಿದರು.

ಪಟ್ಟಣದ ರಾಘವೇಂದ್ರನಗರ, ಮೇಲಿನಪೇಟೆ, ತಾಲ್ಲೂಕಿನ ಕುದುರೆಗುಂಡಿ, ನಾರ್ವೆ, ಹರಿಹರಪುರ, ನಿಲುವಾಗಿಲು, ಜಯಪುರ, ಕಮ್ಮರಡಿ ಇನ್ನಿತರ ಕಡೆಗಳಲ್ಲೂ ಅದ್ದೂರಿಯಾಗಿ ವಿಜಯೋತ್ಸವ ಆಚರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry