ಕೊಡಗಿನಲ್ಲಿ ಮತ್ತೆ ಅರಳಿದ ಕಮಲ

7
ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ತೀವ್ರ ಮುಖಭಂಗ, ಜೆಡಿಎಸ್‌ಗೆ ನಿರಾಸೆ

ಕೊಡಗಿನಲ್ಲಿ ಮತ್ತೆ ಅರಳಿದ ಕಮಲ

Published:
Updated:
ಕೊಡಗಿನಲ್ಲಿ ಮತ್ತೆ ಅರಳಿದ ಕಮಲ

ಮಡಿಕೇರಿ: ಕೊಡಗು ಜಿಲ್ಲೆಯು ಬಿಜೆಪಿ ಭದ್ರಕೋಟೆ ಎಂಬುದು ಮತ್ತೆ ಸಾಬೀತಾಗಿದೆ. ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲೂ ಕಮಲ ಅರಳಿದೆ. ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್‌ ನಿರಾಸೆ ಅನುಭವಿಸಿದರೆ, ಕಾಂಗ್ರೆಸ್‌ಗೆ ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ತೀವ್ರ ಮುಖಭಂಗವಾಯಿತು.

ಮಡಿಕೇರಿ ಕ್ಷೇತ್ರದಿಂದ ಬಿಜೆಪಿಯ ಎಂ.ಪಿ. ಅಪ್ಪಚ್ಚು ರಂಜನ್‌ ಅವರು ಗೆಲ್ಲುವ ಮೂಲಕ ‘ಹ್ಯಾಟ್ರಿಕ್’ ಸಾಧಿಸಿದರು. ರಾಜಕೀಯ ಜೀವನದಲ್ಲಿ ರಂಜನ್‌ಗೆ ಇದು 5ನೇ ಗೆಲುವು. 1994, 1999ರಲ್ಲಿ ಸೋಮವಾರಪೇಟೆ ಕ್ಷೇತ್ರದಿಂದ ಗೆದ್ದಿದ್ದರು. 2008 ಹಾಗೂ 2013ರಲ್ಲಿ ಮಡಿಕೇರಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಇನ್ನು ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರೂ ‘ಹ್ಯಾಟ್ರಿಕ್‌’ ಬಾರಿಸಿದರು. 2004ರಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಗೆದ್ದಿದ್ದ ಅವರು, 2008 ಹಾಗೂ 2013ರಲ್ಲಿ ವಿರಾಜಪೇಟೆಯಿಂದ ಆಯ್ಕೆಗೊಂಡಿದ್ದರು.

ಕುತೂಹಲ, ನಿರಾಸೆ: ಮಡಿಕೇರಿ ಕ್ಷೇತ್ರವು ಜೆಡಿಎಸ್‌ ಹಾಗೂ ಬಿಜೆಪಿಯ ನಡುವೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ಫಲಿತಾಂಶ ಬದಲಾವಣೆ ಆಗಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, ಮತ್ತೆ ಅಪ್ಪಚ್ಚು ರಂಜನ್‌ ಅವರಿಗೆ ಗೆಲುವು ಒಲಿಯಿತು. ಕಳೆದ ನಾಲ್ಕು ಚುನಾವಣೆಗಳಲ್ಲಿ 3 ಅಥವಾ 4 ಸಾವಿರ ಮತಗಳ ಅಂತರದಿಂದ ಗೆಲುವು ಪಡೆಯುತ್ತಿದ್ದ ರಂಜನ್‌, ಈ ಬಾರಿ 16,015ಕ್ಕೆ ಅಂತರ ಹೆಚ್ಚಿಸಿಕೊಂಡು ನಗೆ ಬೀರಿದರು.

ಆರಂಭದಲ್ಲಿ ಜೆಡಿಎಸ್‌ಗೆ ಮುನ್ನಡೆಯಿದ್ದರೂ, ಅದು ಕೊನೆಯ ತನಕವೂ ಉಳಿಯಲಿಲ್ಲ. ಬಂಡಾಯದ ಭೇಗುದಿಯಲ್ಲಿ ನಲುಗಿದ್ದ ಕಾಂಗ್ರೆಸ್‌ ಮತ್ತೊಮ್ಮೆ ಕ್ಷೇತ್ರದಲ್ಲಿ ತೀವ್ರ ಹಿನ್ನಡೆ ಅನುಭವಿಸಿತು. ಕಾಂಗ್ರೆಸ್‌ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರು ಮೂರನೇ ಸ್ಥಾನ ಪಡೆದುಕೊಂಡರು.

ಒಂದು ವೇಳೆ ಕಾಂಗ್ರೆಸ್‌ ಸಂಘಟನಾತ್ಮಕವಾಗಿ ಕೆಲಸ ಮಾಡಿ ಬಿಜೆಪಿ ಮತಗಳನ್ನು ಸೆಳೆದಿದ್ದರೆ ಜೆಡಿಎಸ್‌ ಜಯದ ಗೆಲುವಿನ ಹಾದಿ ಸುಲಭವಾಗುತ್ತಿತ್ತು. ಆದರೆ, ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಬಲ ಸವಾಲೊಡ್ಡಲಿಲ್ಲ ಎಂಬುದು ಈ ಫಲಿತಾಂಶದಲ್ಲಿ ಸಾಬೀತಾಗಿದೆ. 2013ರ ಚುನಾವಣೆಗಿಂತಲೂ (32 ಸಾವಿರ) ಕಾಂಗ್ರೆಸ್‌ ಮತಗಳನ್ನು ಹೆಚ್ಚಿಸಿಕೊಂಡಿದೆ. ಈ ಬಾರಿ ಚಂದ್ರಕಲಾ 38,219 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಉಳಿದಂತೆ ಪಕ್ಷೇತರ ಅಭ್ಯರ್ಥಿಗಳದ್ದು ಅದೇ ಆಟ. ಅಖಿಲ ಭಾರತ ಹಿಂದೂ ಮಹಾಸಭಾದ ಅಭ್ಯರ್ಥಿ ಭಾರ್ಗವ್‌ ಚೆರಿಯಮನೆ ಅವರು ಮಾತ್ರ 1,109 ಮತ ಪಡೆದರು. ಉಳಿದವರು ಯಾರೂ ಸಾವಿರ ಮತ ದಾಟಲಿಲ್ಲ.

ಬೋಪಯ್ಯ ಅವರೇ ‘ರಾಜ’: ಜಾತಿ ಸಂಘರ್ಷದ ತೀವ್ರ ಚರ್ಚೆಗೆ ಕಾರಣವಾಗಿದ್ದ ವಿರಾಜಪೇಟೆ ಕ್ಷೇತ್ರದ ಮತದಾರರು ಮತ್ತೊಮ್ಮೆ ಬಿಜೆಪಿಗೆ ಮಣೆ ಹಾಕಿದ್ದಾರೆ. ಸೌಮ್ಯ ರಾಜಕಾರಣಿ ಅರುಣ್‌ ಮಾಚಯ್ಯಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಮೂಲಕ ಗೆಲುವಿನ ಚಿಂತನೆ ನಡೆಸಿತ್ತು. ‘ಅರುಣೋದಯ’ದ ಲೆಕ್ಕಾಚಾರವಿತ್ತು. ಆದರೆ, ಅಲ್ಲಿಯೂ ಕಾಂಗ್ರೆಸ್‌ ಕೈಚೆಲ್ಲುವ ಮೂಲಕ ಜಿಲ್ಲೆಯಲ್ಲಿ ನೆಲಕಚ್ಚುವ ಸ್ಥಿತಿಗೆ ಬಂದುನಿಂತಿದೆ.

ಆರಂಭಿಕ ಎಣಿಕೆಯಿಂದಲೂ ಬೋಪಯ್ಯ ಮುನ್ನಡೆಯನ್ನೇ ಕಾಯ್ದುಕೊಳ್ಳುತ್ತಲೇ ಸಾಗಿದರು. ಪ್ರಥಮ ಸುತ್ತಿನಲ್ಲಿ 1,075 ಮತಗಳ ಮುನ್ನಡೆಯಿತ್ತು. ಮೂರನೇ ಸುತ್ತಿಗೆ ಅದು 6,924ಕ್ಕೆ ಏರಿತು. 10ನೇ ಸುತ್ತಿನ ವೇಳೆಗೆ 8,331 ಮತಗಳಿಗೆ ಅಂತರ ಹೆಚ್ಚಾಯಿತು.

ಯಾವ ಬೂತ್‌ನಲ್ಲೂ ಹಿನ್ನಡೆ ಆಗಿರಲಿಲ್ಲ. 11, 12ನೇ ಸುತ್ತಿನ ಎಣಿಕೆಯಲ್ಲಿ ಸ್ವಲ್ಪ ಅಂತರ ತಗ್ಗಿದರೂ, ಉಳಿದ ಸುತ್ತಗಳಲ್ಲಿ ಭಾರಿ ಮುನ್ನಡೆಯತ್ತ ಬೋಪಯ್ಯ ಹೆಜ್ಜೆ ಹಾಕಿದರು. ವಿರಾಜಪೇಟೆಯಲ್ಲಿ ಜೆಡಿಎಸ್‌ ಗೆಲ್ಲದಿದ್ದರೂ ಪೈಪೋಟಿ ನೀಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಸಂಕೇತ್‌ ಪೂವಯ್ಯ ಅವರು 11,224 ಮತಗಳನ್ನು ಮಾತ್ರ ಪಡೆಯಲು ಶಕ್ತರಾದರು. ವಿರಾಜಪೇಟೆಯಲ್ಲಿ ಜೆಡಿಎಸ್‌ ಆಟ ನಡೆಯಲಿಲ್ಲ.

ಕೊನೆಯಲ್ಲಿ ರಂಜನ್‌ ಭರ್ಜರಿ ಬ್ಯಾಟಿಂಗ್‌!

ಮಡಿಕೇರಿ ಕ್ಷೇತ್ರದಲ್ಲಿ 20 ಸುತ್ತುಗಳ ಎಣಿಕೆ ಕಾರ್ಯ ನಡೆಯಿತು. ಆರಂಭದ 12 ಸುತ್ತುಗಳ ತನಕವೂ ಜೆಡಿಎಸ್‌ ಅಭ್ಯರ್ಥಿ ಬಿ.ಎ. ಜೀವಿಜಯ ಮುನ್ನಡೆ ಕಾಯ್ದುಕೊಂಡಿದ್ದರು. ಆರಂಭಿಕ ಹಂತದಲ್ಲಿ ಸೋಮವಾರಪೇಟೆ ತಾಲ್ಲೂಕಿನ ಬೂತ್‌ಗಳ ಎಣಿಕೆ ನಡೆಯಿತು. ಆ ಬೂತ್‌ಗಳ ಎಣಿಕೆ ವೇಳೆ ಜೆಡಿಎಸ್‌ ಕಾರ್ಯಕರ್ತರು ಹಿಗ್ಗಿದರು.

ಪ್ರಥಮ ಸುತ್ತಿನಲ್ಲಿ 1,820 ಮತಗಳ ಮುನ್ನಡೆಯನ್ನು ಜೀವಿಜಯ ಪಡೆದುಕೊಂಡಿದ್ದರು. 2ನೇ ಸುತ್ತಿಗೆ ಅಂತರ ಮತ್ತಷ್ಟು ಹಿಗ್ಗಿತು. 2,990 ಮತಗಳ ಮುನ್ನಡೆಯಿಂದ 5ನೇ ಸುತ್ತಿಗೆ 5,393ಕ್ಕೆ ಹೆಚ್ಚಾಯಿತು. ಜೆಡಿಎಸ್‌ ಪಾಳೆಯಲ್ಲಿ ಸಂಭ್ರಮ. 6ನೇ ಸುತ್ತಿನಿಂದ ಅಂತರವು ಇಳಿಕೆ ಹಾದಿ ಹಿಡಿಯಿತು. 4,719 ಮತಗಳ ಅಂತರದಿಂದ 10ನೇ ಸುತ್ತಿನ ಎಣಿಕೆ ವೇಳೆಗೆ ಬರೀ 105ಕ್ಕೆ ಇಳಿಯಿತು. ಮತ್ತೆರಡು ಸುತ್ತುಗಳಲ್ಲಿ 200, 307ಕ್ಕೆ ಹೆಚ್ಚಾದರೂ ದೊಡ್ಡ ಲೀಡ್‌ ಸಿಗಲಿಲ್ಲ.

12ನೇ ಸುತ್ತಿನಿಂದ 20ರ ತನಕವೂ ಬಿಜೆಪಿಯ ಅಪ್ಪಚ್ಚು ರಂಜನ್‌ ಅವರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಬಳಿಕ ತೆರೆದ ವಿದ್ಯುನ್ಮಾನ ಮತಯಂತ್ರಗಳೆಲ್ಲವೂ ರಂಜನ್‌ಗೆ ವರವಾದವು. 12ರಲ್ಲಿ ಬಿಜೆಪಿಗೆ 1,179 ಮತಗಳ ಅಂತರದ ಮುನ್ನಡೆ ಲಭಿಸಿತು. ಕೊನೆಯ ತನಕವೂ ರಂಜನ್‌ ಸಿಕ್ಸರ್‌, ಬೌಂಡರಿಯನ್ನೇ ಬಾರಿಸಿದರು.

ಮಡಿಕೇರಿ ಭಾಗದಲ್ಲಿ ರಂಜನ್‌ಗೆ ಭಾರಿ ಮುನ್ನಡೆ ತಂದುಕೊಟ್ಟಿತು. 3,902, 5,997, 8,875, 10,853, 13,077, 15,228ಕ್ಕೆ ಅಂತರ ಹೆಚ್ಚಾಗುತ್ತಲೇ ಸಾಗಿತು. ಕೊನೆಯಲ್ಲಿ 16,015 ಮತಗಳ ಅಂತರದ ಗೆಲುವು ಲಭಿಸಿತು.

ಸುಂಟಿಕೊಪ್ಪ ಭಾಗದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಲಭಿಸಿದರೂ, ಚೆಟ್ಟಳ್ಳಿಯಲ್ಲಿ ಕಮಲಕ್ಕೆ ವರವಾಯಿತು. ಅದರೊಂದಿಗೆ ಕುಶಾಲನಗರ ಭಾಗದಲ್ಲೂ ಈ ಬಾರಿ ಬಿಜೆಪಿಗೆ ಮುನ್ನಡೆ ತಂದುಕೊಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry