ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಜಾನಪದ

Last Updated 16 ಮೇ 2018, 19:30 IST
ಅಕ್ಷರ ಗಾತ್ರ

ಚುನಾವಣೆಗಳು ಜನಸಮುದಾಯಗಳಲ್ಲಿ ಅಲ್ಪಕಾಲಿಕವಾಗಿ ನೆಲೆಗೊಂಡು ಪ್ರಭಾವಿಸುತ್ತವೆ. ಮತದ ಹಕ್ಕಿನ ಪ್ರತಿನಿಧಿಗಳಾಗಿ  ಜನರು ಬದಲಾಗುವುದರಿಂದ ಇಂತಹ ಜನರನ್ನು ಪ್ರಭಾವಿಸಲು ಬಗೆಬಗೆಯ ಕಸರತ್ತುಗಳನ್ನು ರಾಜಕೀಯ ಪ್ರತಿನಿಧಿಗಳು ಮಾಡುತ್ತಾರೆ. ಹಾಗೆಯೇ ಜನರೂ ತಮ್ಮೊಳಗಿನ ಚುನಾವಣೆಯ ತಿಳಿವನ್ನು ಅರಗಿಸಿಕೊಂಡು ಮರುಕಥನಗಳನ್ನು ಕಟ್ಟುತ್ತಾರೆ. ಜನರನ್ನು ತಲುಪಲು ಅವರದೇ ಮಾಧ್ಯಮಗಳನ್ನೂ ಪ್ರತಿನಿಧಿಗಳು ಆಯ್ದುಕೊಳ್ಳುತ್ತಾರೆ. ಅಂತೆಯೇ ಜನರೂ ತಮ್ಮದೇ ತಿಳಿವಿನ ದಾರಿಯಲ್ಲಿ ಈ ಚುನಾವಣಾ ಪ್ರತಿನಿಧಿಗಳನ್ನು ಎದುರಾಗುತ್ತಾರೆ. ಈ ಇಬ್ಬರೂ ಸಂಧಿಸುವ ಬಿಂದುವಿನಲ್ಲಿ ‘ಚುನಾವಣಾ ಜಾನಪದ’ ಮೈದಾಳುತ್ತದೆ.

ಚುನಾವಣಾ ಸಂದರ್ಭದ ಹೊಟ್ಟೆಯೊಳಗಿಂದ ನವಜಾನಪದ ಹುಟ್ಟುವುದರ ಜೊತೆಗೆ ಈಗಾಗಲೇ ನೆಲೆಗೊಂಡ ನಂಬಿಕೆ ಲೋಕಗಳು ಚುನಾವಣೆಯ ಜತೆ ನಂಟು ಬೆಸೆದುಕೊಳ್ಳುತ್ತವೆ. ಜನಪದ ಲೋಕದ ನಂಬಿಕೆ, ಆಚರಣೆ, ನುಡಿಗಟ್ಟುಗಳು ತಾತ್ಕಾಲಿಕವಾಗಿ ’ಚುನಾವಣಾ’ ಸಂಗತಿಯ ಜತೆ ತಳಕು ಹಾಕಿಕೊಂಡು ಹೊಸತಾಗುತ್ತವೆ. ಹೀಗೆ ರೂಪಾಂತರಗೊಳ್ಳುವ ಹೊಸ ಚಹರೆಗಳ ಗುರುತಿಸುವಿಕೆಯನ್ನು`ಚುನಾವಣಾ ಜಾನಪದ’ ಎನ್ನಬಹುದು. ಅಂತೆಯೇ ಚುನಾವಣಾ ಸಂದರ್ಭಗಳೇ ಹುಟ್ಟಿಸುವ ನವಜಾನಪದ, ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುವ ಸೈಬರ್ ಜಾನಪದ ಕೂಡ ಕುತೂಹಲಕಾರಿಯಾಗಿರುತ್ತವೆ.

ಈ ಬಾರಿಯ ಕರ್ನಾಟಕದ ಚುನಾವಣಾ ಪ್ರಚಾರದಲ್ಲಿ ಜನಪ್ರಿಯ ಸಿನಿಮಾ ಗೀತೆಗಳ ರಿಮಿಕ್ಸ್‌ಗಳು ಯಥೇಚ್ಛವಾಗಿ ಬಳಕೆಯಾದವು. ಪಕ್ಷ ಸಿದ್ಧಪಡಿಸಿದ ಹಾಡು– ವಿಡಿಯೊಗಳ ಜತೆ, ಆಯಾ ಭಾಗದ ಚುನಾಯಿತ ಪ್ರತಿನಿಧಿಗಳೂ ತಮ್ಮ ಬಗೆಗಿನ ಹಾಡು–ವಿಡಿಯೊಗಳನ್ನು ಸಿದ್ಧಪಡಿಸಿ ಮೊಬೈಲುಗಳಲ್ಲಿ ಹರಿಬಿಟ್ಟರು. ಇಂತಹ ಅಭಿವ್ಯಕ್ತಿಯ ರೂಪಗಳನ್ನು ಸಂಗ್ರಹಿಸಿದರೆ ಪ್ರಜಾಪ್ರಭುತ್ವದ ಬಗೆಗಿನ ಜನಾಭಿಪ್ರಾಯವೂ ತಿಳಿಯುತ್ತದೆ. ಅಂತೆಯೇ ಜಾನಪದದ ಗ್ರಹಿಕೆಗೆ ಹೊಸ ನೆಲೆಯೊಂದು ಒದಗುತ್ತದೆ.

ಹೆಚ್ಚು ಪ್ರಚಲಿತದಲ್ಲಿರುವ ಜಾನಪದ ಲೋಕದ ಸಂಗತಿಗಳನ್ನು ಚುನಾವಣೆಗಳು ಬಳಸಿಕೊಳ್ಳುತ್ತವೆ. ದೇವಾಲಯಗಳಿಗೆ, ಜಾತ್ರೆ– ಹಬ್ಬಗಳಿಗೆ ಪ್ರತಿನಿಧಿಗಳು ಹಣ ಕೊಡುವುದು, ದೇವಾಲಯಗಳಲ್ಲಿಯೇ ಹಣ ಹಂಚುವುದು, ಆಯಾ ಭಾಗದ ಜನಪ್ರಿಯ ದೇವರಲ್ಲಿ ಸೋಲು–ಗೆಲುವಿನ ಬಗ್ಗೆ ಹೂ, ಪತ್ರೆ ಮೊದಲಾದ ವರ ಕೇಳುವುದು... ಇವೆಲ್ಲ ಅದರಲ್ಲಿ ಸೇರಿವೆ. ಗೆದ್ದರೆ ಇಂತಿಂತಹ ಹರಕೆ ಹೊರುವುದನ್ನು ಬಹಿರಂಗ ಪಡಿಸುವುದೂ ನಡೆಯುತ್ತದೆ. ಇದರಲ್ಲಿ ದೈವದ ಹೆಸರಿನ `ಆಣೆಪ್ರಮಾಣ’ ಹೆಚ್ಚು ಬಳಕೆಯಾಗುತ್ತದೆ. ಈಚೆಗೆ ಧರ್ಮಸ್ಥಳಕ್ಕೆ ಆಣೆ ಮಾಡಿಸಲು ಹೆಣ್ಣುಮಕ್ಕಳನ್ನು ತುಂಬಿಕೊಂಡು ಹೊರಟ ಎರಡು ಬಸ್ಸುಗಳನ್ನು ಚುನಾವಣಾ ಆಯೋಗ ಗುರುತಿಸಿತ್ತು. ನಂತರ ವೀರೇಂದ್ರ ಹೆಗ್ಗಡೆಯವರು ಮಂಜುನಾಥನ ಹೆಸರಿನ ಆಣೆ– ಪ್ರಮಾಣಕ್ಕೆ ಜನರು ಬಲಿಯಾಗಬಾರದೆಂದು ಕರಪತ್ರ ಹಂಚಿದ್ದರು. ಸವದತ್ತಿ ಭಾಗದಲ್ಲಿ ಬಂಡಾರವನ್ನು ಮುಟ್ಟಿಸಿಕೊಂಡು ತಮಗೆ ಮತ ಹಾಕಬೇಕೆಂದು ಆಣೆ ಮಾಡಿಸಿದ್ದರಂತೆ. ಮತದಾರರಿಂದ ಆಣೆ–ಪ್ರಮಾಣ ಮಾಡಿಸುವ ನಂಬಿಕೆ ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಕಂಡುಬರುತ್ತದೆ.

ಮೈಲಾರನ ಕಾರಣಿಕ ನಡೆವ ಹಡಗಲಿ, ಹಾವೇರಿ, ಶಿಗ್ಗಾವಿ ಭಾಗದಲ್ಲಿ`ಕಾರಣಿಕ’ ಮಾದರಿಯ ಹೇಳಿಕೆಗಳು ಚುನಾವಣಾ ಸಂದರ್ಭಕ್ಕೆ ಹುಟ್ಟುತ್ತವೆ. ಶಿಗ್ಗಾವಿ, ಸವಣೂರು ಭಾಗದಲ್ಲಿ ಸಿಕ್ಕ ಕಾರಣಿಕವೊಂದು ಹೀಗಿದೆ: `ಮಳೆಯಿಲ್ಲದೆ ಕೆಸರು ಒಣಗಿ, ಕಮಲ ಬಾಡಿ ಕೈ ಮೇಲೆದ್ದಿತಲೇ ಫರಾಕ್’. ಇದನ್ನು ಆಯಾ ಪಕ್ಷದವರು ಎಡಿಟ್ ಮಾಡಿ ಅವರವರ ಪಕ್ಷವನ್ನು ಸೇರಿಸಿ ಮಾತುಕತೆಗಳಲ್ಲಿಯೂ, ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಬಿಟ್ಟರು.

ಚಿತ್ರದುರ್ಗ ಭಾಗದ ಹಳ್ಳಿಯೊಂದರಲ್ಲಿ ‘ಇಂದ್ರಾಗಾಂಧಿ ಬಸಜ್ಜ’ ಎನ್ನುವ ವ್ಯಕ್ತಿ ಇದ್ದ. ಈತ ಕುಡಿದು ಮತ್ತೇರಿದ ತಕ್ಷಣ ಇಂದಿರಾ ಗಾಂಧಿ ಬಗ್ಗೆ ಕತೆ ಹೇಳುತ್ತಿದ್ದ. ಇಂದಿರಾ ಗಾಂಧಿ ಕರ್ನಾಟಕದಲ್ಲಿ ಹಿಂದೊಮ್ಮೆ ಚುನಾವಣೆಗೆ ನಿಂತಾಗ, ಚಿತ್ರದುರ್ಗದಿಂದ ದಾವಣಗೆರೆಗೆ ಹಾದು ಹೋಗುವಾಗ ಕಾರು ನಿಲ್ಲಿಸಿ ಜನರನ್ನು ಮಾತನಾಡಿಸಿದರಂತೆ. ಆಗ ಇಂದಿರಾ ಗಾಂಧಿಗೆ ಬಸಜ್ಜ ಅಡ್ಡಬಿದ್ದಾಗ ಇಂದಿರಮ್ಮ ಬಸಜ್ಜನ ಕೈಹಿಡಿದು ಮೇಲಕ್ಕೆತ್ತಿದರಂತೆ. ಅಂದಿನಿಂದ ಬಸಜ್ಜ, ಇಂದಿರಾ ಗಾಂಧಿ ಬಗೆಗೆ ಕತೆ ಕಟ್ಟಲಾರಂಭಿಸಿದ. ಹಾಗಾಗಿ ಆ ಹಳ್ಳಿಯವರು ಇವರಿಗೆ ‘ಇಂದ್ರಾಗಾಂಧಿ ಬಸಜ್ಜ’ ಎಂದು ಅಡ್ಡಹೆಸರಿಟ್ಟರು. ಈ ಘಟನೆ ಕೃಷ್ಣಮೂರ್ತಿ ಹನೂರು ಅವರ ‘ಕಾಲುದಾರಿಯ ಕಥನಗಳು’ ಪುಸ್ತಕದಲ್ಲಿ ಉಲ್ಲೇಖಗೊಂಡಿದೆ.

ಮತದಾನದ ಆರಂಭ ವೇಳೆ ಬೋಣಿಗೆಯಾಗಿ ಆಯಾ ಪಕ್ಷದವರು ಕುರುಬ ಸಮುದಾಯದ ವ್ಯಕ್ತಿಯಿಂದ ಮೊದಲ ವೋಟ್ ಮಾಡಿಸುತ್ತಾರೆ. ಕುರುಬರು ಮೊದಲು ವೋಟ್ ಮಾಡಿದರೆ, ಅದೃಷ್ಟಲಕ್ಷ್ಮಿ ಒಲಿಯುತ್ತಾಳೆ ಎನ್ನುವ ನಂಬಿಕೆ ಕೆಲವು ಭಾಗಗಳಲ್ಲಿದೆ. ಎಷ್ಟೋ ಜನಪದ ನುಡಿಗಟ್ಟುಗಳು ಚುನಾವಣಾ ಸಂದರ್ಭಕ್ಕೆ ಹೊಸ ಅರ್ಥ ಪಡೆಯುತ್ತವೆ. ಚುನಾವಣಾ ಪ್ರಚಾರದ ರ‍್ಯಾಲಿಗೆ ಜನಪದ ಕಲಾತಂಡಗಳನ್ನು ಬಳಸುವುದು, ಅಲಂಕೃತ ಎತ್ತಿನ ಬಂಡಿಗಳಲ್ಲಿ ಚುನಾಯಿತ ಪ್ರತಿನಿಧಿಗಳ ಮೆರವಣಿಗೆ ಮಾಡುವುದು, ಜನಪದ ಹಾಡಿಕೆ ತಂಡಗಳಿಗೆ ಹಣ ನೀಡಿ ಪದಕಟ್ಟಿಸಿ ಹಾಡಿಸುವುದು ಮುಂತಾದ ಪ್ರಯೋಗಗಳೂ ನಡೆಯುತ್ತವೆ.

ಇನ್ನು ಜಾಲತಾಣಗಳಲ್ಲಿ ಜೊತೆಯಾಗುವ ಜನರೊಳಗೆ ದೊಡ್ಡಮಟ್ಟದ ಸಂವಹನ ನಡೆವ ಕಾರಣ ನವಮೌಖಿಕ ಜಾನಪದವೂ ಹುಟ್ಟುತ್ತದೆ. ಈ ಲೋಕದ ಒಳಗೆ ಮಿಥ್‍ಗಳೂ, ನಂಬಿಕೆಗಳೂ, ಕೌತುಕಗಳು, ಅತಿರಂಜಿತ ಕಥೆಗಳು, ಮನರಂಜನೆಯ ಭಿನ್ನ ಮಾಧ್ಯಮಗಳನ್ನೊಳಗೊಂಡ `ಸೈಬರ್ ಫೋಕ್’ ಸದ್ದಿಲ್ಲದೆ ಹುಟ್ಟಿದೆ. ಈ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆ ಕುರಿತು, ರಾಜಕೀಯ ಪಕ್ಷಗಳ ಕುರಿತು, ಚುನಾವಣೆಗೆ ಸ್ಪರ್ಧಿಸಿದವರ ಕುರಿತು, ರಾಜಕೀಯ ನಾಯಕರ ಬಗೆಗೆ ಹಲವು ಜೋಕ್‍ಗಳು, ವ್ಯಂಗ್ಯಗಳು ಹುಟ್ಟಿವೆ. ಈ ಚುನಾವಣೆಯ ಸೈಬರ್ ಫೋಕ್ ಬಹುರೂಪಿಯಾಗಿದೆ. ಸಂಯೋಜಿತ ಚಿತ್ರ, ಕಾರ್ಟೂನ್ , ವಿಡಿಯೊ ಹಾಗೂ, ಟೆಕ್ಸ್ಟ್ ರೂಪದಲ್ಲಿಯೂ ಹಂಚಲಾಗಿದೆ.

ಈ ಸಲದ ಚುನಾವಣೆ ಮುಗಿದು, ಅತಂತ್ರ ಸ್ಥಿತಿ ನಿರ್ಮಾಣವಾದಾಗ ನೂರಾರು ಜೋಕುಗಳು ಹುಟ್ಟಿಕೊಂಡವು. ಮುಖ್ಯವಾದವುಗಳನ್ನು ಗಮನಿಸುವುದಾದರೆ, ‘ಇಬ್ಬರ ಜಗಳ ಮೂರನೆಯವನಿಗೆ ಲಾಭ’, `ಗೆದ್ದವ ಸೋತ, ಸೋತವ ಗೆದ್ದ, ಗೆದ್ದೆತ್ತಿನ ಬಾಲ ಹಿಡಿದವ ಎದ್ದ’ ಗಾದೆಗಳ ರೂಪಾಂತರಗಳು ಹುಟ್ಟಿದವು. ಓಡೋಡಿ ಇನ್ನೇನು ಗುರಿ ಮುಟ್ಟಲಿರುವ ಅಥ್ಲೀಟ್ ಒಬ್ಬರು ಇದ್ದಕ್ಕಿದ್ದಂತೆ ಮುಗ್ಗರಿಸಿ ಸೋತ ವಿಡಿಯೊ, ಸ್ವಿಚ್ ಬೋರ್ಡ್ ಮೇಲೆ ಕುಳಿತ ಎರಡು ಬೆಕ್ಕುಗಳ ಜೊತೆ ಸೇರಲು ಪ್ರಯಾಸಪಡುವ ಮೂರನೇ ಬೆಕ್ಕು ಹೇಗೋ ಏರಿ, ಅಲ್ಲಿದ್ದ ಎರಡೂ ಬೆಕ್ಕುಗಳನ್ನು ಕೆಳಕ್ಕುರುಳಿಸುವ ವಿಡಿಯೊ...

ಹೀಗೆ ಜಾನಪದವನ್ನು ಸಂಗ್ರಹಿಸಿ ವಿಶ್ಲೇಷಿಸಿದರೆ ಕುತೂಹಲಕಾರಿ ಸಂಗತಿಗಳು ಗಮನಸೆಳೆಯುತ್ತವೆ. ಜನರ ನಂಬಿಕೆಗಳನ್ನು ಬಳಸಿಯೇ ಚುನಾಯಿತ ಪ್ರತಿನಿಧಿಗಳು ಹೇಗೆ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಮುಕ್ಕಿಸುತ್ತಾರೆ ಎನ್ನುವುದೂ ಅರಿವಾಗುತ್ತದೆ. ಅಂತೆಯೇ ಜನರಲ್ಲಿ ಹುಸಿಕತೆಗಳನ್ನು ಹರಿಬಿಟ್ಟು ಮೋಸಗೊಳಿಸುವಿಕೆಯೂ ತಿಳಿಯುತ್ತದೆ. ಕಲಿತವರು ಪ್ರಜಾಪ್ರಭುತ್ವದ ಸೋಲು–ಗೆಲುವಿನ ಚರ್ಚೆಯನ್ನು ವ್ಯಂಗ್ಯ ಅಥವಾ ಹಾಸ್ಯದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೊರಹಾಕುತ್ತಾರೆ. ಚುನಾವಣ ಆಯೋಗವು ಈ ಬಗೆಯ ಚುನಾವಣ ಸಂದರ್ಭದಲ್ಲಿ ಹುಟ್ಟಿದ ಜಾನಪದದ ಕುರಿತು ಅಧ್ಯಯನ ನಡೆಸಿದರೆ, ಜನಪದರ ನಂಬಿಕೆಯ ಲೋಕವನ್ನು ಬಳಸಿಯೇ ಮತದಾನದ ಜಾಗೃತಿಯನ್ನೂ ಅರಿವನ್ನೂ ಮೂಡಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT