ಗುರುವಾರ , ಮಾರ್ಚ್ 4, 2021
26 °C

ಜೆಡಿಎಲ್‌ಪಿ ನಾಯಕರಾಗಿ ಕುಮಾರಸ್ವಾಮಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಡಿಎಲ್‌ಪಿ ನಾಯಕರಾಗಿ ಕುಮಾರಸ್ವಾಮಿ ಆಯ್ಕೆ

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸರ್ವಾನುಮತದಿಂದ ಬುಧವಾರ ಆಯ್ಕೆ ಮಾಡಲಾಯಿತು.

ಆ ಬಳಿಕ, ಬಿಜೆಪಿಯ ಆಮಿಷಕ್ಕೆ ಒಳಗಾಗದಂತೆ ಒಗ್ಗಟ್ಟಾಗಿಡಲು ಪಕ್ಷದ ಎಲ್ಲ ಶಾಸಕರನ್ನು  ಖಾಸಗಿ ಹೋಟೆಲೊಂದರಲ್ಲಿ ಇರಿಸಲಾಯಿತು. ವರಿಷ್ಠರು ಹೇಳುವ ತನಕ ಅದೇ ಹೋಟೆಲ್‌ನಲ್ಲಿ ಇರಲು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ ಶಾಸಕಾಂಗ ಪಕ್ಷದ ಸಭೆ ಆರಂಭವಾಯಿತು. ಹಿರಿಯ ಶಾಸಕ ಜಿ.ಟಿ.ದೇವೇಗೌಡ ಶಾಸಕಾಂಗ ಪಕ್ಷದ ನಾಯಕನ ಹೆಸರು ಪ್ರಸ್ತಾಪ ಮಾಡಿದರು. ಶಾಸಕ ಬಂಡೆಪ್ಪ ಕಾಶೆಂಪೂರ ಅನುಮೋದಿಸಿದರು.

ಆದರೆ, ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರು ಮತ್ತು ಸಿಂಧನೂರು ಶಾಸಕ ವೆಂಕಟರಾವ್‌ ನಾಡಗೌಡ ಹಾಜರಿರಲಿಲ್ಲ. ಇಬ್ಬರೂ ಶಾಸಕರು ದೂರದ ಜಿಲ್ಲೆಗಳಿಂದ ಬರಬೇಕಾಗಿದ್ದುದರಿಂದ ಸಕಾಲದಲ್ಲಿ ತಲುಪಲು ಸಾಧ್ಯವಾಗದೆ, ಸಭೆ ಮುಗಿದ ಬಳಿಕ ಬಂದು ಸೇರಿದರು.

‘ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಮೈತ್ರಿ ಸರ್ಕಾರ ರಚಿಸಲು ಕಾಂಗ್ರೆಸ್‌ ನಮಗೆ ಬೆಂಬಲ ನೀಡಲು ಮುಂದಾಗಿದೆ. ಈ ಸಂದರ್ಭದಲ್ಲಿ, ಆಯ್ಕೆಯಾಗಿರುವ ಶಾಸಕರು ಒಗ್ಗಟ್ಟಿನಿಂದ ಇರಬೇಕು. ಬಿಜೆಪಿಯ ಯಾವುದೇ ಆಮಿಷಗಳಿಗೂ ಬಲಿಯಾಗಬಾರದು’ ಎಂದು ಕುಮಾರಸ್ವಾಮಿ ಕಟ್ಟುನಿಟ್ಟಾದ ಸೂಚನೆ ನೀಡಿದರು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್‌ ಬೆಂಬಲದೊಂದಿಗೆ ಸರ್ಕಾರ ರಚಿಸುವ ಹಕ್ಕು ಮಂಡಿಸಲು ನಿರ್ಧರಿಸಲಾಯಿತು. ಇದಕ್ಕೆ ಎಲ್ಲ ಶಾಸಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ಸಭೆ ಆಯೋಜಿಸಲಾಗಿದ್ದ ನಗರದ ಪಂಚತಾರಾ ಹೋಟೆಲ್‌ ಶಾಂಗ್ರಿಲಾ ಬಳಿ ಬೆಳಿಗ್ಗೆಯಿಂದಲೇ ಬಿರುಸಿನ ಚಟುವಟಿಕೆ ಆರಂಭವಾಗಿತ್ತು. ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು.

ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅತ್ತ ರಾಜಭವನಕ್ಕೆ ಹೋಗುತ್ತಿದ್ದಂತೆ, ಕಾಂಗ್ರೆಸ್ ಅಧ್ಯಕ್ಷ ಜಿ.ಪರಮೇಶ್ವರ, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ತರಾತುರಿಯಲ್ಲಿ ಹೋಟೆಲ್‌ಗೆ ಬಂದು ತುರ್ತು ಮಾತುಕತೆ ನಡೆಸಿದರು.

ಸಂಪರ್ಕಿಸಿಲ್ಲ: ಬಿಜೆಪಿಯ ಯಾವುದೇ ನಾಯಕರು ನನ್ನನ್ನು ಸಂಪರ್ಕಿಸಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾರಿ ಮತಗಳ ಅಂತರದಿಂದ ಸೋಲಿಸಿದ ಬಳಿಕ ಯಾವುದೇ ಬಿಜೆಪಿ ನಾಯಕರು ಶುಭಾಶಯವನ್ನೂ ಕೋರಿಲ್ಲ. ಜೆಡಿಎಸ್‌ ಬಿಟ್ಟು ಹೋಗುವ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ. ಇತರ ಶಾಸಕರೂ ಪಕ್ಷ ತೊರೆಯುವುದಿಲ್ಲ ಎಂದು ಅವರು ತಿಳಿಸಿದರು.

ಕಕ್ಕಾಬಿಕ್ಕಿಯಾದ ಕ್ರಿಕೆಟಿಗರು

ಶಾಂಗ್ರಿಲಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ಐಪಿಎಲ್‌ ಕ್ರಿಕೆಟ್‌ (ಹೈದರಾಬಾದ್‌) ಆಟಗಾರರು ಬೆಳಿಗ್ಗೆ ಜೆಡಿಎಸ್‌ ಕಾರ್ಯಕರ್ತರ ಗದ್ದಲಕ್ಕೆ ಕಕ್ಕಾಬಿಕ್ಕಿ ಆದರು. ಹೋಟೆಲ್‌ನ ಎಲ್ಲ ಮಹಡಿಗಳೂ ಜನರಿಂದ ತುಂಬಿದ್ದವು. ಹೊರಗೆ ಮಾಧ್ಯಮಗಳ ಭಾರಿ ದಂಡು ಸೇರಿತ್ತು. ಅಲ್ಲಿ ಕ್ರಿಕೆಟ್‌ ಆಟಗಾರರನ್ನು ಕೇಳುವವರೇ ಇರಲಿಲ್ಲ. ಅಭ್ಯಾಸಕ್ಕಾಗಿ ಕ್ರೀಡಾಂಗಣಕ್ಕೆ ತೆರಳಲೂ ಅವರಿಗೆ ಕಷ್ಟವಾಯಿತು. ಹೋಟೆಲ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿಗರೂ ತಂಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.