ಗೆದ್ದವರಲ್ಲೂ ಸಂಭ್ರಮವಿಲ್ಲ; ತಳಮಳವಷ್ಟೇ ಎಲ್ಲ

7
lಮೂರು ಪಕ್ಷಗಳ ಕಚೇರಿ ಭಣ–ಭಣ l ಬೆಂಗಳೂರಿಗೆ ತೆರಳಿದ ವಿಜೇತರು

ಗೆದ್ದವರಲ್ಲೂ ಸಂಭ್ರಮವಿಲ್ಲ; ತಳಮಳವಷ್ಟೇ ಎಲ್ಲ

Published:
Updated:

ಚಿತ್ರದುರ್ಗ: ಕೋಟೆ ನಾಡಿನಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಬಿಜೆಪಿಯಲ್ಲಿ ಗೆಲುವನ್ನು ಸಂಭ್ರಮಿಸುವ ಉತ್ಸಾಹ ಕಾಣುತ್ತಿಲ್ಲ. ಮೈತ್ರಿ ಸರ್ಕಾರಕ್ಕೆ ಜೆಡಿಎಸ್‌–ಕಾಂಗ್ರೆಸ್‌ ನಿರ್ಧರಿಸಿದರೂ ಬಹಿರಂಗವಾಗಿ ಸಂತಸ ಹಂಚಿಕೊಳ್ಳಲು ಎರಡೂ ಪಕ್ಷಗಳ ಮುಖಂಡರೂ ಮುಂದೆ ಬರುತ್ತಿಲ್ಲ.

ಮತ ಎಣಿಕೆಯ ದಿನ ಕಳೆಗಟ್ಟಿದ್ದ ಚಿತ್ರದುರ್ಗ ನಗರ ಬುಧವಾರ ಎಂದಿನಂತೆ ಸಹಜವಾಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಎಂಬ ಲೆಕ್ಕಾಚಾರದಲ್ಲಿ ಮೂರೂ ಪಕ್ಷಗಳ ಕಾರ್ಯಕರ್ತರು ಮುಳುಗಿದ್ದಾರೆ. ಚುನಾವಣೆಯಲ್ಲಿ ಆಯ್ಕೆಯಾದವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಮೂರೂ ಪಕ್ಷಗಳ ಕಚೇರಿಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಚುನಾವಣೆಯ ಫಲಿತಾಂಶ ಮಂಗಳವಾರ ಹೊರಬೀಳುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಪಕ್ಷದ ಕಾರ್ಯಕರ್ತರ ಸಂಭ್ರಮಕ್ಕೆ ರಾತ್ರಿ ವೇಳೆ ಮಸುಕು ಕವಿಯಿತು. ಅಲ್ಲಲ್ಲಿ ಪಟಾಕಿಗಳು ಸದ್ದು ಮಾಡಿದವಾದರೂ ಸಂಭ್ರಮ ಕಾಣಲಿಲ್ಲ.

ಚಿತ್ರದುರ್ಗದಲ್ಲಿ ಜಿ.ಎಚ್‌.ತಿಪ್ಪಾರೆಡ್ಡಿ, ಹೊಸದುರ್ಗದಲ್ಲಿ ಗೂಳಿಹಟ್ಟಿ ಶೇಖರ್‌, ಹಿರಿಯೂರಿನಲ್ಲಿ ಕೆ. ಪೂರ್ಣಿಮಾ, ಹೊಳಲ್ಕೆರೆಯಲ್ಲಿ ಎಂ. ಚಂದ್ರಪ್ಪ ಹಾಗೂ ಮೊಳಕಾಲ್ಮುರಿನಲ್ಲಿ ಬಿ. ಶ್ರೀರಾಮುಲು ಗೆಲುವು ಸಾಧಿಸಿದ್ದಾರೆ. ಇದೇ ಮೊದಲ ಬಾರಿಗೆ ಬಿಜೆಪಿ ಐದು ಕ್ಷೇತ್ರಗಳಲ್ಲಿ ಗೆದ್ದು ಬೀಗುತ್ತಿದೆ. ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರದ ಗದ್ದುಗೆ ಹಿಡಿಯುವಷ್ಟು ಸಂಖ್ಯಾಬಲ ಇಲ್ಲದಿರುವುದು ಪಕ್ಷದ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರ ಸಂಭ್ರಮವನ್ನು ಕಸಿದುಕೊಂಡಿದೆ.

ಗೆದ್ದ ಅಭ್ಯರ್ಥಿಗಳು ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲು ರಾಜ್ಯ ರಾಜಧಾನಿಗೆ ತೆರಳಿದ್ದರಿಂದ ಜಿಲ್ಲಾ ಕೇಂದ್ರದಲ್ಲಿ ರಾಜಕೀಯ ಚಟುವಟಿಕೆ ಇಲ್ಲ. ಒಂದೂವರೆ ತಿಂಗಳಿಂದ ಪಕ್ಷಕ್ಕಾಗಿ ದುಡಿದ ಹಲವು ಮುಖಂಡರು ಕೂಡ ವಿಶ್ರಾಂತಿಗೆ ತೆರಳಿದ್ದಾರೆ. ಇನ್ನು ಕೆಲವರು ವಿಜೇತ ಅಭ್ಯರ್ಥಿಗಳೊಂದಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ಯಾರ ಪಾಲಾಗಲಿದೆ ಎಂಬುದು ಕೂಡ ಕುತೂಹಲ ಕೆರಳಿಸಿದೆ. ಬಿ. ಶ್ರೀರಾಮುಲು ಹಾಗೂ ಗೂಳಿಹಟ್ಟಿ ಶೇಖರ್‌ ಅವರಿಗೆ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಐದು ಬಾರಿ ಗೆಲುವು ಸಾಧಿಸಿದ ಜಿ.ಎಚ್‌. ತಿಪ್ಪಾರೆಡ್ಡಿ ಹಾಗೂ ಮೂರು ಬಾರಿ ಗೆದ್ದಿರುವ ಎಂ. ಚಂದ್ರಪ್ಪ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳು.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಗೆ ರಾಜಧಾನಿಯಲ್ಲಿ ಪ್ರಯತ್ನ ನಡೆಯುತ್ತಿದ್ದರೂ ಜಿಲ್ಲೆಯ ಎರಡೂ ಪಕ್ಷಗಳ ನಾಯಕರಲ್ಲಿ ಖುಷಿಯಿಲ್ಲ. ಮೂರು ಕ್ಷೇತ್ರಗಳಲ್ಲಿ ಗೆಲುವು ನಿರೀಕ್ಷಿಸಿದ್ದ ಜೆಡಿಎಸ್‌ ಅಭ್ಯರ್ಥಿಗಳಿಗೆ ನಿರಾಸೆ

ಯಾಗಿದೆ. ಚಿತ್ರದುರ್ಗ, ಚಳ್ಳಕೆರೆ ಹಾಗೂ ಹಿರಿಯೂರು ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನಡೆಸಿದರೂ ವಿಜಯಲಕ್ಷ್ಮಿ ಒಲಿದಿಲ್ಲ. ತಮ್ಮದೇ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಇದ್ದರೂ ಸ್ಥಳೀಯ ನಾಯಕರು ಹರ್ಷ ವ್ಯಕ್ತ

ಪಡಿಸುವ ಸ್ಥಿತಿಯಲ್ಲಿ ಇಲ್ಲ.

ಕಾಂಗ್ರೆಸ್‌ ಕೂಡ ಇಂತಹದೇ ಬೇಗುದಿ ಎದುರಿಸುತ್ತಿದೆ. ಜಿಲ್ಲೆಯಲ್ಲಿ ಈ ಪಕ್ಷ ಧೂಳಿಪಟವಾಗಿದ್ದು, ನಾಯಕರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಟಿ.ರಘುಮೂರ್ತಿ ಮರು ಆಯ್ಕೆಯಾಗುವ ಮೂಲಕ ಚಳ್ಳಕೆರೆಯನ್ನು ಉಳಿಸಿಕೊಂಡಿದ್ದಾರೆ. ಹೀಗಾಗಿ, ಈ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮ ಹಂಚಿಕೊಂಡಿದ್ದಾರೆ.

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ರಘುಮೂರ್ತಿ ಸಚಿವರಾಗುವ ಸಾಧ್ಯತೆ ಇದೆ. ಎರಡನೇ ಬಾರಿಗೆ ಆಯ್ಕೆಯಾದ ಇವರು ಜಿಲ್ಲೆಯಿಂದ ಕಾಂಗ್ರೆಸ್‌ನ ಏಕೈಕ ಪ್ರತಿನಿಧಿ.

ಬೇಸರ ಮರೆಯುವಲ್ಲಿ..

ಜೆಡಿಎಸ್ ಅಭ್ಯರ್ಥಿಗಳು ಸೋಲಿನ ಬೇಸರವನ್ನು ಮರೆಯಲು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಿದ್ದರು. ರಾಜ್ಯದ ರಾಜಧಾನಿಯಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿ ಸರ್ಕಾರ ರಚನೆಯ ಕಸರತ್ತು ನಡೆಯುತ್ತಿದ್ದರೂ, ಇಲ್ಲಿನ ಪಕ್ಷದೊಳಗೆ ಯಾವುದೇ ರೀತಿಯ ಚಟುವಟಿಕೆ ಕಾಣಲಿಲ್ಲ.

**

ಬಿಜೆಪಿ ಸರ್ಕಾರ ರಚಿಸುವ ವಿಶ್ವಾಸವಿದೆ. ರಾಜ್ಯಪಾಲರು ಪ್ರಮಾಣ ವಚನಕ್ಕೆ ಅನು ಮತಿ ಕೊಟ್ಟ ನಂತರ ಮುಂದಿನ ಕಾರ್ಯ ಕ್ರಮಗಳ ಬಗ್ಗೆ ಚಿಂತಿಸುತ್ತೇವೆ

- ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry