ಸೋಮವಾರ, ಮಾರ್ಚ್ 8, 2021
19 °C

ಮಾತಿಲ್ಲದ ಸಿನಿಮಾ ಪರಿಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾತಿಲ್ಲದ ಸಿನಿಮಾ ಪರಿಧಿ

ಸಿನಿಮಾಗಳಲ್ಲಿ ಮಾತಿನ ಅಬ್ಬರ ಎಲ್ಲೆ ಮೀರಿ ಪ್ರೇಕ್ಷಕರಿಗೆ ರೇಜಿಗೆ ಹುಟ್ಟಿಸುವುದೇ ಹೆಚ್ಚು. ಆದರೆ, ಮಾತಿಲ್ಲದ ಚಿತ್ರ ಮಾಡಿ ಪ್ರೇಕ್ಷಕರಿಗೆ ತಲುಪಿಸಲು ಮುಂದಾಗಿದ್ದಾರೆ ನಿರ್ದೇಶಕ ಎಸ್‌.ಬಿ. ಶ್ರೀನಿವಾಸ್‌. ಅದಕ್ಕೆ ಅವರಿಟ್ಟಿರುವ ಹೆಸರು ‘ಪರಿಧಿ’. ಇದರ ಕಥೆ, ಚಿತ್ರಕಥೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ.

ಶ್ರೀನಿವಾಸ್‌ ಮೂರ್ನಾಲ್ಕು ಚಿತ್ರಗಳಿಗೆ ಸ್ಕ್ರಿಪ್ಟ್‌ ಬರೆದು ನಿರ್ದೇಶನಕ್ಕೆ ಮುಂದಾಗಿದ್ದರಂತೆ. ಆದರೆ, ಅವರ ನಿರೀಕ್ಷೆಯಂತೆ ಚಿತ್ರಗಳ ನಿರ್ಮಾಣ ಸಾಧ್ಯವಾಗಲಿಲ್ಲವಂತೆ. ಪ್ರಯೋಗಾತ್ಮಕ ಚಿತ್ರಗಳಿಗೆ ತುಡಿಯುವ ಅವರ ಮನದಲ್ಲಿ ಒಮ್ಮೆ ಮಾತಿಲ್ಲದ ಚಿತ್ರ ನಿರ್ದೇಶನ ಮಾಡಬೇಕೆಂಬ ಆಲೋಚನೆ ಹೊಳೆಯಿತಂತೆ. ಅವರ ಆಸೆಗೆ ಬಂಡವಾಳ ಹೂಡಿ ಪ್ರೋತ್ಸಾಹಿಸಿದ್ದು ತಮಿಳುನಾಡು ಮೂಲದ ನಂದಕುಮಾರ್.

ಹಾರರ್‌, ಸಸ್ಪೆನ್ಸ್‌ ಇರುವ ಈ ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ ಯು/ಎ ‍ಪ್ರಮಾಣಪತ್ರ ಸಿಕ್ಕಿದೆ. ಮುಂದಿನ ತಿಂಗಳು ಚಿತ್ರ ತೆರೆಕಾಣಲು ಸಿದ್ಧವಾಗಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಬಂದಿತ್ತು.

‘ಮಾತಿನ ಚಿತ್ರ ಮಾಡುವ ಆಲೋಚನೆ ಇತ್ತು. ಚಿತ್ರದ ಸನ್ನಿವೇಶ ನೋಡಿದಾಗ ಮೂಕಿ ಚಿತ್ರ ಮಾಡಿದರೆ ಚೆನ್ನಾಗಿರುತ್ತದೆ ಅನಿಸಿತು. ಇದಕ್ಕೆ ಚಿತ್ರತಂಡದ ಸಹಮತ ಸಿಕ್ಕಿದೆ’ ಎಂದರು ಶ್ರೀನಿವಾಸ್‌.

ಚಿತ್ರದ ಕಥಾ ನಾಯಕ ಜೀವ. ಆತನದು ಪಾರ್ಸೆಲ್‌ ಕಂಪನಿಯಲ್ಲಿ ಕೆಲಸ. ಐಶಾರಾಮಿ ಜೀವನದ ಆಸೆಗೆ ಬಲಿಯಾಗುತ್ತಾನೆ. ಅವನಿಗೆ ಗೊತ್ತಿಲ್ಲದಂತೆಯೇ ಅಪರಾಧ ಜಗತ್ತಿಗೆ ಪ್ರವೇಶಿಸುತ್ತಾನೆ. ಅವನ ನೆಮ್ಮದಿಯ ಜೀವನ ಚಿತ್ರವಿಚಿತ್ರ ತಿರುವು ಪಡೆಯುತ್ತದೆ. ನಿಧಾನವಾಗಿ ಇದಕ್ಕೆಲ್ಲಾ ಕಾರಣವಾಗಿರುವ ಹಿನ್ನೆಲೆಯ ಅರಿವಾಗುತ್ತದೆ. ಆ ಪರಧಿಯಿಂದ ಹೇಗೆ ಹೊರಬರುತ್ತಾನೆ ಎಂಬುದೇ ಚಿತ್ರದ ಕಥಾಹಂದರ.

‘ಮಿಸ್ಡ್‌ಕಾಲ್‌’ ಚಿತ್ರದಲ್ಲಿ ನಟಿಸಿದ್ದ ರಾಜ್‌ಕಿರಣ್‌ ಈ ಚಿತ್ರದ ನಾಯಕ. ‘ಸಂಭಾಷಣೆ ಇಲ್ಲದೆ ಚಿತ್ರ ಕಟ್ಟಿಕೊಡಲಾಗಿದೆ. ಜನರಿಗೆ ಚಿತ್ರ ಇಷ್ಟವಾಗಲಿದೆ’ ಎಂದರು.

ನಿಶಾ ಈ ಚಿತ್ರದ ನಾಯಕಿ. ಅವರಿಗೆ ಇದು ಎರಡನೇ ಚಿತ್ರ. ‘ನನ್ನ ಪಾತ್ರವನ್ನು ನಿರ್ದೇಶಕರು ನಿಗೂಢವಾಗಿಟ್ಟಿದ್ದಾರೆ’ ಎಂದ ಅವರು ಪಾತ್ರದ ಗುಟ್ಟುಬಿಟ್ಟುಕೊಡಲಿಲ್ಲ.

ಹಿರಿಯ ನಟ ಅಮರನಾಥ್‌, ‘ಹೊಸಬರ ಆಲೋಚನೆಗಳು ಭಿನ್ನವಾಗಿವೆ. ಉತ್ತಮ ಪ್ರಯೋಗಗಳಿಗೆ ಪ್ರಯತ್ನಿಸುತ್ತಾರೆ. ಅವರಿಗೆ ಪ್ರೋತ್ಸಾಹ ನೀಡಬೇಕಿದೆ’ ಎಂದು ಆಶಿಸಿದರು.

ಜೀವ ಅಂಥೋಣಿ ಛಾಯಾಗ್ರಹಣ ಚಿತ್ರಕ್ಕಿದೆ. ದಿವ್ಯಾ, ಚಂದ್ರಶೇಖರ್, ಭದ್ರಾವತಿ ಶ್ರೀನಿವಾಸ್‌, ಮಂಜುಳಾ ತಾರಾಗಣದಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.