ಗುರುವಾರ , ಫೆಬ್ರವರಿ 25, 2021
29 °C

ಇರಾನ್: ಮುರುಟಿದ್ದ ಅಣ್ವಸ್ತ್ರ ಮೊಳೆಯುವುದೇ?

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ಇರಾನ್: ಮುರುಟಿದ್ದ ಅಣ್ವಸ್ತ್ರ ಮೊಳೆಯುವುದೇ?

ಮೊನ್ನೆ, ಮೇ 10ರ ಗುರುವಾರ ಇರಾನ್ ತನ್ನ ಸಿರಿಯಾ ಸೇನಾ ನೆಲೆಯಿಂದ ಇಸ್ರೇಲ್ ಮೇಲೆ ದಾಳಿ ಮಾಡಿತು. ಇದಕ್ಕೆ ಪ್ರಬಲ ಪ್ರತಿರೋಧ ಒಡ್ದಿದ ಇಸ್ರೇಲ್, ಸಿರಿಯಾ ಗಡಿಯುದ್ದಕ್ಕೂ ಹರಡಿಕೊಂಡಿದ್ದ ಇರಾನ್ ಗಡಿ ಭದ್ರತಾ ಪಡೆಯ (Quds Force) ಗುಡಾರಗಳನ್ನು ಧ್ವಂಸ ಮಾಡಿತು. 1974ರ ‘ಯಾಮ್ ಕಿಪ್ಪೂರ್’ ಕದನದ ಬಳಿಕ ಸಿರಿಯಾ ಗಡಿಯಲ್ಲಿ ಇಸ್ರೇಲ್ ನಡೆಸಿದ ಅತಿದೊಡ್ಡ ಸೇನಾ ಕಾರ್ಯಾಚರಣೆ ಎಂದು ಇದನ್ನು ಕರೆಯಲಾಯಿತು. ಇದೀಗ ಇರಾನ್ ಮುಯ್ಯಿ ತೀರಿಸಿಕೊಳ್ಳುವ ಮಾತನಾಡುತ್ತಿದೆ. ಕದನ ಸಂಭವಿಸಬಹುದೇ ಎಂಬ ಆತಂಕ ಮೂಡಿದೆ.

ಹಾಗೆ ನೋಡಿದರೆ, 1979ರ ‘ಇಸ್ಲಾಮಿಕ್ ಕ್ರಾಂತಿ’ಯ ಬಳಿಕ  ಕದನ ಭೂಮಿಯಲ್ಲಿ ಇರಾನ್ ಮತ್ತು ಇಸ್ರೇಲ್ ನೇರವಾಗಿ ಸೆಣಸಿಲ್ಲ. ಆದರೆ ಮುಸುಕಿನ ಯುದ್ಧವಂತೂ ಚಾಲ್ತಿಯಲ್ಲಿದೆ. ಇದರ ನಡುವೆ ಅಮೆರಿಕ ಅಧ್ಯಕ್ಷ ಟ್ರಂಪ್, ‘ಇರಾನ್ ಜೊತೆಗಿನ ಸಮಗ್ರ ಜಂಟಿ ಕ್ರಿಯಾ ಯೋಜನೆ (JCPOA) ಅಥವಾ ಇರಾನ್ ಅಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯಲಿದೆ’ ಎಂದು ಘೋಷಿಸಿದ್ದಾರೆ. ಅಮೆರಿಕದ ಈ ನಿರ್ಧಾರ ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದವನ್ನು ಪ್ರಚೋದಿಸುತ್ತದೆಯೇ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಹಾಗಾದರೆ, ಅಂದು ಒಬಾಮ ಆಡಳಿತ ತುಂಬು ಉತ್ಸಾಹದಿಂದ ಅಣು ಒಪ್ಪಂದ ಮಾಡಿಕೊಂಡದ್ದಾದರೂ ಏಕೆ? ಇದೀಗ ಟ್ರಂಪ್ ಆಡಳಿತ ಏಕಾಏಕಿ ಹೆಜ್ಜೆ ಹಿಂದಿಡಲು ಕಾರಣಗಳೇನು? ಇರಾನ್ ಅಣು ಒಪ್ಪಂದದ ಔಚಿತ್ಯ ಅರ್ಥವಾಗಬೇಕಿದ್ದರೆ ಪೂರಕವಾಗಿ ಒಂದಿಷ್ಟು ಮಾಹಿತಿಗಳು ಬೇಕಾಗುತ್ತವೆ. ಹಿಂದಿನಿಂದಲೂ ಇರಾನ್ ಅಣ್ವಸ್ತ್ರ ಮೋಹಿಯೇ. ವಿಶ್ವಸಂಸ್ಥೆ ಎಚ್ಚರಿಕೆ ಕೊಟ್ಟಾಗಿಯೂ ತನ್ನ ಚಟುವಟಿಕೆಗಳನ್ನು ಇರಾನ್ ಮುಂದುವರಿಸಿದಾಗ ಅಮೆರಿಕ ಸೇರಿದಂತೆ ಇತರ ಸಮಾನ ಮನಸ್ಕ ರಾಷ್ಟ್ರಗಳು ದಿಗ್ಬಂಧನ ಹೇರಿದ್ದವು. ಇದರಿಂದಾಗಿ ಇರಾನ್ ಆರ್ಥಿಕತೆ ಕುಸಿದು ಬಿತ್ತು. ಆದರೂ ಇರಾನ್ ಅಣ್ವಸ್ತ್ರದ ಉಮೇದು ಬಿಡಲಿಲ್ಲ. ಆಗ ಅಮೆರಿಕ ದಾಳಿ ಮಾಡುವ ಬೆದರಿಕೆ ಹಾಕಿತು. ಬೆದರಿದ ಇರಾನ್ ‘ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದ’ಕ್ಕೆ ತಾನು ಬದ್ಧ ಎಂದು ಘೋಷಿಸಿ ಒಳಗೊಳಗೇ ಅಣ್ವಸ್ತ್ರ ಅಭಿವೃದ್ಧಿ ಯೋಜನೆಯನ್ನು ಮುಂದುವರೆಸಿತು.

2013ರಲ್ಲಿ ಇರಾನ್ ಅಧ್ಯಕ್ಷರಾಗಿದ್ದ ಮಹಮೂದ್ ಅಹ್ಮದಿನೆಜಾದ್ ‘ಇಸ್ರೇಲ್ ವಿರುದ್ಧ ಅಣುಯುದ್ಧ ಮಾಡಿಯೇ ತೀರುತ್ತೇವೆ’ ಎಂಬ ಹಟಕ್ಕೆ ಬಿದ್ದಿದ್ದರು. ಇಸ್ರೇಲ್ ಮತ್ತು ಇರಾನ್ ಪರಸ್ಪರ ವ್ಯಗ್ರಗೊಂಡು ಯುದ್ಧಕ್ಕೆ ಸಜ್ಜಾಗಿದ್ದವು. ಆಗ ಅಮೆರಿಕ ಮಧ್ಯಪ್ರವೇಶಿಸಿ ಎರಡೂ ದೇಶಗಳನ್ನು ಶಾಂತಗೊಳಿಸಿತ್ತು. ಇದೆಲ್ಲದರ ನಡುವೆ ಇರಾನ್‌ನಲ್ಲಿ ಚುನಾವಣೆ ನಡೆದು ಹೊಸ ಅಧ್ಯಕ್ಷ ರೊಹಾನಿ ಚುಕ್ಕಾಣಿ ಹಿಡಿದರು. ರೊಹಾನಿ ಸುಧಾರಣಾವಾದಿ. ಅಮೆರಿಕದೊಂದಿಗೆ ಸ್ನೇಹ ಬೆಳೆಸುವ ಪ್ರಯತ್ನಕ್ಕೆ ಚಾಲನೆ ಕೊಟ್ಟರು. ಸತತ 33 ವರ್ಷಗಳ ಕಾಲ ಅಮೆರಿಕದ ಅಧ್ಯಕ್ಷರೊಂದಿಗೆ ಮಾತಿಗೂ ಕೂರದ ಇರಾನ್ ಕೈಕುಲುಕಲು ಮುಂದಾಯಿತು!

ಅಮೆರಿಕದೊಂದಿಗಿನ ಅಣು ಒಪ್ಪಂದವನ್ನು ಇರಾನ್ ಎರಡು ರೀತಿಯಲ್ಲಿ ನೋಡಿತು. ಒಂದು, ಜಾಗತಿಕ ಸಮುದಾಯ ಹೇರಿದ್ದ ಆರ್ಥಿಕ ನಿರ್ಬಂಧದಿಂದ ಹೊರಬಂದು, ಹರಿದುಬರುವ ಸಹಾಯಧನ, ಬಂಡವಾಳ ಬಳಸಿ ದೇಶದ ಆರ್ಥಿಕತೆಗೆ ಒಂದಿಷ್ಟು ಜೀವ ತುಂಬುವುದು. ಅದಕ್ಕೂ ಮಿಗಿಲಾಗಿ ಈ ಒಪ್ಪಂದದಿಂದ ಹಿರಿಯಣ್ಣನೊಂದಿಗೆ ಕೈಕುಲುಕಿ ತನ್ನ ಶತ್ರು ರಾಷ್ಟ್ರ ಇಸ್ರೇಲ್ ನಿದ್ದೆಕೆಡಿಸುವುದು.

2015ರ ಜುಲೈ 14ರಂದು ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲಿ ಪಿ5+1 ಎಂದು ಕರೆಸಿಕೊಳ್ಳುವ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ, ರಷ್ಯಾ ಮತ್ತು ಜರ್ಮನಿ ‘ಇರಾನ್ ಅಣು ಒಪ್ಪಂದ’ಕ್ಕೆ ಸಹಿಹಾಕಿದವು. ವಾಣಿಜ್ಯ ದೃಷ್ಟಿಯಿಂದ ಈ ಒಪ್ಪಂದ ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಆಶಾವಾದದಂತೆ ಕಂಡಿತು. ಆದರೆ ಇಸ್ರೇಲ್ ಮತ್ತು ಅರಬ್ ಜಗತ್ತಿನ ಕೆಲವು ರಾಷ್ಟ್ರಗಳು ‘ಇದು ಯಶಸ್ವಿಯಾಗದ, ಅಪಾಯ ತಂದೊಡ್ಡುವ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟಿದ್ದವು. ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಒಂದು ಹೆಜ್ಜೆ ಮುಂದೆ ಹೋಗಿ ‘ಇದೊಂದು ಐತಿಹಾಸಿಕ ತಪ್ಪುಹೆಜ್ಜೆ, ಘೋರ ಪರಿಣಾಮಗಳು ಎದುರಾಗಲಿವೆ’ ಎಂದು ಎಚ್ಚರಿಸಿದ್ದರು. ಇದೀಗ ಆ ಘೋರ ಪರಿಣಾಮಗಳ ಅನುಭವ ಟ್ರಂಪ್ ಆಡಳಿತಕ್ಕೆ ಆದಂತಿದೆ!

ಮೇ 8 ರಂದು ಟ್ರಂಪ್ ಮಾಡಿದ ಭಾಷಣದಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಾ ‘ಇರಾನ್ ಒಪ್ಪಂದದ ನಿಬಂಧನೆಗಳು ತೀರಾ ದುರ್ಬಲವಾಗಿವೆ. ಸಿರಿಯಾ, ಯೆಮೆನ್ ಮತ್ತಿತರ ಪ್ರದೇಶಗಳಲ್ಲಿ ಇರಾನ್ ನಡೆಸುತ್ತಿರುವ ಕಾರ್ಯಚಟುವಟಿಕೆಗಳಿಗೆ ಅಂಕುಶ ಹಾಕಬಲ್ಲ ಯಾವ ಅಂಶಗಳೂ ಇರಾನ್ ಒಪ್ಪಂದದಲ್ಲಿ ಇಲ್ಲ. ಮೇಲಾಗಿ ಇರಾನ್ ಆಡಳಿತ ಮಾರಕಾಸ್ತ್ರ ಮತ್ತು ಕ್ಷಿಪಣಿಗಳನ್ನು ಉಗ್ರರಿಗೆ ಸರಬರಾಜು ಮಾಡುತ್ತಿದೆ. ತನ್ಮೂಲಕ ಮಧ್ಯಪ್ರಾಚ್ಯದ ಸಂಘರ್ಷಕ್ಕೆ ಕಾರಣವಾಗಿದೆ. ಉಗ್ರ ಸಂಘಟನೆಗಳಾದ ಹೆಜ್ಬೊಲ್ಲಾ, ಹಮಾಸ್ ಮತ್ತು ಅಲ್ ಕೈದಾಗಳಿಗೆ ಇರಾನ್ ಬೆಂಬಲವಾಗಿ ನಿಂತಿದೆ. ಇರಾನ್ ಪ್ರಚೋದನೆಯೊಂದಿಗೆ ಈ ಉಗ್ರ ಸಂಘಟನೆಗಳು ಅಮೆರಿಕದ ರಾಯಭಾರ ಕಚೇರಿ, ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಿ ಅಮೆರಿಕದ ನೂರಾರು ಯೋಧರು, ಅಧಿಕಾರಿಗಳ ಹತ್ಯೆಗೆ ಕಾರಣವಾಗಿವೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಇರಾನ್ ಸರ್ಕಾರದ ಮೌನ ಅಪಾಯಕಾರಿ’ ಎಂದಿದ್ದಾರೆ.

ಟ್ರಂಪ್ ಮಾತನ್ನು ಅಲ್ಲಗಳೆಯುವಂತಿಲ್ಲ. ಈ ಹಿಂದಿನಿಂದಲೂ ಅಮೆರಿಕ ವಿರೋಧಿ ರಾಷ್ಟ್ರವಾಗಿ ಇರಾನ್ ಗುರುತಿಸಿಕೊಂಡು ಬಂದಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹಿತಾಸಕ್ತಿಗೆ ವಿರುದ್ಧವಾಗಿ ದಾಳ ಉರುಳಿಸುವಲ್ಲಿ ಅದು ಸಫಲವಾಗಿದೆ. ಇದೀಗ ಇರಾಕ್, ಸಿರಿಯಾದಲ್ಲೂ ಪ್ರಭಾವ ವಿಸ್ತರಿಸಿಕೊಂಡು ಶಕ್ತಿ ವೃದ್ಧಿಸಿಕೊಂಡಿದೆ. ಹಾಗಾಗಿಯೇ ಟ್ರಂಪ್ ‘ಇರಾನ್ ಅಣು ಒಪ್ಪಂದ ಪುನರ್ಪರಿಶೀಲನಾ ವಿಧೇಯಕ’ವನ್ನು (INARA) ಬಳಸಿಕೊಂಡಿದ್ದಾರೆ.

ಅಮೆರಿಕದ ಕಾಂಗ್ರೆಸ್‌ನಲ್ಲಿ 2015ರಲ್ಲಿ ಅನುಮೋದನೆಗೊಂಡ ಈ ವಿಧೇಯಕದನ್ವಯ ‘90 ದಿನಗಳಿಗೊಮ್ಮೆ ಅಮೆರಿಕ ಅಧ್ಯಕ್ಷರು ಅಣು ಒಪ್ಪಂದದ ಕರಾರಿಗೆ ಇರಾನ್ ಬದ್ಧವಾಗಿದೆಯೇ ಎಂಬುದನ್ನು ದೃಢೀಕರಿಸಬೇಕು. ಆಗ ಮಾತ್ರ ಒಪ್ಪಂದ ಮುಂದಿನ ಮೂರು ತಿಂಗಳ ಅವಧಿಗೆ ಊರ್ಜಿತಗೊಳ್ಳುತ್ತದೆ’. 2016ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆಯೇ ಇರಾನ್ ಒಪ್ಪಂದವನ್ನು ‘ಅತಿದೊಡ್ಡ ಪ್ರಮಾದ’ ಎಂದು ಟ್ರಂಪ್ ಬಣ್ಣಿಸಿದ್ದರಾದರೂ ರಕ್ಷಣಾ ಕಾರ್ಯದರ್ಶಿಯಾಗಿದ್ದ ಜೇಮ್ಸ್ ಮ್ಯಾಟಿಸ್ ಮತ್ತು ವಿದೇಶಾಂಗ ಕಾರ್ಯದರ್ಶಿಯಾಗಿದ್ದ ರೆಕ್ಸ್ ಟಿಲ್ಲರ್‌ಸನ್ ಒತ್ತಾಸೆಯಂತೆ ಮೂರ್ನಾಲ್ಕು ಬಾರಿ ಇರಾನ್ ಬದ್ಧತೆಯನ್ನು ದೃಢೀಕರಿಸಿದ್ದರು!

ಈಗ ಟ್ರಂಪ್, ಏಕಾಏಕಿಯಾಗಿ  ಒಪ್ಪಂದದಿಂದ ಹಿಂದೆ ಸರಿಯಲು ಮತ್ತೊಂದು ಕಾರಣವಿದೆ. ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿ ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುವ ಎರಡು ಪ್ರಮುಖ ರಾಷ್ಟ್ರಗಳು ಇಸ್ರೇಲ್ ಮತ್ತು ಸೌದಿ ಅರೇಬಿಯಾ. ಹಿಂದೆ ಅಣು ಒಪ್ಪಂದ ಏರ್ಪಟ್ಟಾಗ ‘ಈ ಒಪ್ಪಂದದಿಂದಾಗಿ ಜಗತ್ತಿನ ವಹಿವಾಟಿಗೆ ಇರಾನ್ ಅರ್ಥವ್ಯವಸ್ಥೆ ತೆರೆದುಕೊಳ್ಳುತ್ತದೆ. ತೈಲ ಮೂಲದ ಆದಾಯವನ್ನು ಸಿರಿಯಾ ಮತ್ತು ಇರಾಕ್ ಭಾಗದಲ್ಲಿ ಉಗ್ರರಿಗೆ ಶಕ್ತಿ ತುಂಬಲು ಇರಾನ್ ಬಳಸಿದರೆ ಅಪಾಯಕಾರಿ’ ಎಂದು ಈ ಉಭಯ ದೇಶಗಳು ಅಭಿಪ್ರಾಯಪಟ್ಟಿದ್ದವು. ಆದರೆ ಒಬಾಮ ಮತ್ತು ಅಂದಿನ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ‍್ರಿ ಈ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಟ್ರಂಪ್ ಅಧ್ಯಕ್ಷರಾಗುತ್ತಲೇ ಈ ಎರಡೂ ದೇಶಗಳು ಇರಾನ್ ವಿರುದ್ಧ ಟ್ರಂಪ್ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದವು. ಸುನ್ನಿ ಮುಸ್ಲಿಮರ ಪ್ರಾಬಲ್ಯವಿರುವ ಸೌದಿ ಮತ್ತು ಶಿಯಾ ಮುಸ್ಲಿಮರ ಇರಾನ್ ವೈರತ್ವ ಎಷ್ಟಿದೆಯೆಂದರೆ, ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸೌದಿ ಯುವರಾಜ ಮೊಹಮದ್ ಬಿನ್ ಸಲ್ಮಾನ್, ಇರಾನ್ ಪ್ರಭಾವಿ ನಾಯಕ ಅಯಾತ್‌ ಉಲ್ಲಾ ಖೊಮೇನಿ ಅವರನ್ನು ‘ದಿ ನ್ಯೂ ಹಿಟ್ಲರ್’ ಎಂದು ಕರೆದಿದ್ದರು.

ಏಪ್ರಿಲ್ 30ರಂದು ಪತ್ರಿಕಾಗೋಷ್ಠಿ ನಡೆಸಿದ್ದ ನೆತನ್ಯಾಹು, ಇರಾನಿನ ರಹಸ್ಯ ಕಡತಗಳನ್ನು ಪುರಾವೆಯಾಗಿ ಇಟ್ಟುಕೊಂಡು ಇಸ್ರೇಲ್ ಮೇಲೆರಗಲು ಇರಾನ್ ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ ಎಂದು ವಿವರಿಸಿದ್ದರು. ನೆತನ್ಯಾಹು ಮಾತಿಗೆ ಮತ್ತೊಂದು ಇಂಗಿತವೂ ಇತ್ತು. ಮುಖ್ಯವಾಗಿ ಇರಾನ್ ಜೊತೆಗಿನ ಅಣು ಒಪ್ಪಂದ ಹೇಗೆ ನಿಷ್ಪ್ರಯೋಜಕ ಎಂಬುದನ್ನು ಟ್ರಂಪ್ ಅವರಿಗೆ ಮನವರಿಕೆ ಮಾಡಿಕೊಡಲು ಅದುವರೆಗೂ ಗೋಪ್ಯವಾಗಿದ್ದ ಸುಮಾರು 55 ಸಾವಿರ ಪುಟಗಳ ಕಡತವನ್ನು ಬಹಿರಂಗ ಪಡಿಸಲಾಯಿತು. ಆ ಮಾಹಿತಿಯನ್ನು 183 ಕಾಂಪಾಕ್ಟ್ ಡಿಸ್ಕ್‌ಗಳಲ್ಲಿ ಸಂಗ್ರಹಿಸಲಾಗಿತ್ತು. ಈ ದಾಖಲೆಗಳ ಮೂಲಕ ‘ಇರಾನ್ ನಂಬಿಕಸ್ಥ ರಾಷ್ಟ್ರವಲ್ಲ’ ಎಂಬುದನ್ನು ನೆತನ್ಯಾಹು ಹೇಳಿದರು.

ಇನ್ನು, ಟ್ರಂಪ್ ನಿರ್ಧಾರದ ಹಿಂದಿರುವ ಮೂರನೆಯ ಕಾರಣ, ಮಧ್ಯಪ್ರಾಚ್ಯದಲ್ಲಿ ತನ್ನ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಇರಾನ್ ಸರ್ಕಾರವನ್ನು ಬದಲಿಸುವುದು. ಆ ಮೇರು ಯೋಜನೆಯ ಭಾಗವಾಗಿ ದಿಗ್ಬಂಧನ ಹೇರುವ, ವಿರೋಧ ಪಕ್ಷಗಳಿಗೆ ಶಕ್ತಿ ತುಂಬುವ ಮತ್ತು ಕೊನೆಯದಾಗಿ ಸೇನಾ ಕಾರ್ಯಾಚರಣೆಗೆ ಮುಂದಾಗುವ ಏರ್ಪಾಡನ್ನು ಅಮೆರಿಕ ಮಾಡಿಕೊಳ್ಳುತ್ತಿದೆ.

ಇದೀಗ ಟ್ರಂಪ್ ಮುಂದಿರುವ ಸವಾಲು ಎಂದರೆ, ತಮ್ಮ ನಿರ್ಧಾರಕ್ಕೆ ಅಮೆರಿಕದ ಮಿತ್ರ ರಾಷ್ಟ್ರಗಳನ್ನು ಒಪ್ಪಿಸುವುದು. ಅದು ಸುಲಭವಲ್ಲ. ‘ಸಕಾರಣವಿಲ್ಲದೇ ಒಪ್ಪಂದಗಳಿಂದ ಹಿಂದೆ ಸರಿಯುವುದು ಇತರ ದೇಶಗಳ ಒಡಂಬಡಿಕೆಯ ಮೇಲೂ ಪರಿಣಾಮ ಬೀರಲಿದೆ. ಒಪ್ಪಂದಗಳ ವಿಶ್ವಾಸಾರ್ಹತೆ ಕುಗ್ಗಲಿದೆ’ ಎಂಬ ಅಭಿಪ್ರಾಯ ಈಗಾಗಲೇ ಅಂತರರಾಷ್ಟ್ರೀಯ ಸಮುದಾಯದಿಂದ ಬಂದಿದೆ. ‘ಇರಾನನ್ನು ಕಟ್ಟಿಹಾಕಲು ಅಣು ಒಪ್ಪಂದದಿಂದ ಸಾಧ್ಯವೇ ಹೊರತು, ದಿಗ್ಬಂಧನದಂತಹ ಕ್ರಮಗಳಿಂದಲ್ಲ’ ಎಂಬ ಮಾತನ್ನು ಫ್ರಾನ್ಸ್, ಇಂಗ್ಲೆಂಡ್ ಮತ್ತು ಜರ್ಮನಿ ಆಡಿವೆ. ಹಾಗಾಗಿ ಈ ನಿಲುವಿನ ಮಟ್ಟಿಗೆ ಅಮೆರಿಕ ಏಕಾಂಗಿಯಾಗಬಹುದು.

ಅದು ಬಿಡಿ, ಇರಾನ್ ಕುರಿತ ಅಮೆರಿಕದ ಈ ನಿರ್ಧಾರವು ಭಾರತದ ಮೇಲೆ ಪರಿಣಾಮ ಬೀರಲಿದೆಯೇ ಎಂಬುದಷ್ಟೇ ನಮಗೆ ಮುಖ್ಯ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ಕದಡಿದರೆ ಅದು ಭಾರತದ ಮೇಲೆ ರಾಜತಾಂತ್ರಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಬೀರುವುದು ಖಚಿತ. ತೈಲ ಬೆಲೆ ಏರಿಕೆಯ ಜೊತೆಗೆ ಆ ಭಾಗದಲ್ಲಿ ದುಡಿಯುತ್ತಿರುವ ಭಾರತ ಮೂಲದ ಅಸಂಖ್ಯ ಜನರು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಭಾರತಕ್ಕೆ ಮರಳಬೇಕಾದ ಪರಿಸ್ಥಿತಿ ಉಂಟಾದರೂ ಅಚ್ಚರಿಯಲ್ಲ. ಇದುವರೆಗೆ ಒಂದೆಡೆ ಇರಾನ್ ಮತ್ತು ಮತ್ತೊಂದೆಡೆ ಅಮೆರಿಕ, ಇಸ್ರೇಲ್ ಹಾಗೂ ಸೌದಿ ಅರೇಬಿಯಾ ಜೊತೆಗಿನ ಸಂಬಂಧವನ್ನು ಆಯ ತಪ್ಪದಂತೆ ಭಾರತ ಕಾಯ್ದುಕೊಂಡು ಬಂದಿದೆ. ಅದು ಇನ್ನು ಸುಲಭವಾಗಲಾರದು. ಮಧ್ಯ ಏಷ್ಯಾವನ್ನು ಇರಾನ್ ಮೂಲಕ ತಲುಪುವುದು ಭಾರತದ ಮಹತ್ವಾಕಾಂಕ್ಷೆ. ‘ಚಬಹರ್ ಬಂದರು ಯೋಜನೆ’ಯ ಮೇಲೆ ಅಮೆರಿಕ ಹೇರುವ ಆರ್ಥಿಕ ದಿಗ್ಬಂಧನ ಉಂಟು ಮಾಡುವ ಪರಿಣಾಮ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ ಭಾರತ ತಕ್ಷಣದ ಪ್ರತಿಕ್ರಿಯೆ ನೀಡದೇ ಕಾದು ನೋಡುವ ತಂತ್ರವನ್ನು ಅನುಸರಿಸಿದೆ.

ಒಟ್ಟಿನಲ್ಲಿ, ಚುನಾವಣಾ ಸಮಯದಲ್ಲಿ ನುಡಿದಂತೆ ನಡೆಯುತ್ತಿದ್ದೇನೆ ಎಂಬುದನ್ನು ಟ್ರಂಪ್ ತಮ್ಮ ನಿರ್ಧಾರಗಳಿಂದ ತೋರಿಸುತ್ತಿದ್ದಾರೆ. ಆದರೆ ಇಂತಹ ಏಕಪಕ್ಷೀಯ ನಡೆಗಳು ಪಾಶ್ಚಿಮಾತ್ಯ ರಾಷ್ಟ್ರಗಳ ಏಕತೆಗೆ ಭಂಗ ತರುವ ಸಾಧ್ಯತೆ ಇದೆ. ಉಳಿದಂತೆ, ಈ ನಿರ್ಧಾರದಿಂದ ಕೆಲವು ಅಪಾಯಗಳನ್ನೂ ಅಮೆರಿಕ ಬೆನ್ನಿಗೆ ಕಟ್ಟಿಕೊಂಡಂತಾಗಿದೆ. ಟ್ರಂಪ್ ನಿಲುವು ಪ್ರಕಟಿಸಿದ ತಕ್ಷಣವೇ ಇರಾನ್ ಅಧ್ಯಕ್ಷ ಹಸನ್ ರೊಹಾನಿ, ಯುರೇನಿಯಂ ಪುಷ್ಟೀಕರಣ ಪ್ರಕ್ರಿಯೆಯನ್ನು ಪುನರಾರಂಭಿಸುವುದಕ್ಕೆ ಇರಾನಿನ ಅಣು ಕೈಗಾರಿಕಾ ಘಟಕಕ್ಕೆ ಆದೇಶಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕ ದ್ವೇಷ ವ್ಯಾಪಕಗೊಂಡು ಉಗ್ರ ಸಂಘಟನೆಗಳು ಪ್ರತೀಕಾರ ಕ್ರಮಕ್ಕೆ ಯೋಜನೆ ರೂಪಿಸುವ ಸಾಧ್ಯತೆ ಇಲ್ಲದಿಲ್ಲ. ಅಮೆರಿಕ, ಇಸ್ರೇಲ್ ಮತ್ತು ಸೌದಿಯನ್ನು ಒಟ್ಟಾಗಿ ಸಾಮರಿಕವಾಗಿ ಎದುರಿಸುವ ಸೇನಾ ಸಾಮರ್ಥ್ಯ ಇರಾನಿಗೆ ಇರದ ಕಾರಣ, ರಣಕಹಳೆ ಮೊಳಗಲಾರದು. ಆದರೆ ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳಲ್ಲಿ ಈಗಾಗಲೇ ಸರ್ಕಾರಗಳು ಅಸ್ಥಿರಗೊಂಡು ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಅಂತರ್‌ಯುದ್ಧ, ಜನಾಂಗೀಯ ಕಲಹ, ನಿರಾಶ್ರಿತರ ವಲಸೆ ಸಮಸ್ಯೆ ಆ ಭಾಗದಲ್ಲಿ ಉದ್ದೀಪನಗೊಂಡಿದೆ. ಇರಾನ್ ಸರ್ಕಾರವನ್ನು ಅಸ್ಥಿರಗೊಳಿಸಲು ಅಮೆರಿಕ ಪ್ರಯತ್ನಿಸಿದರೆ ಈ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ.

ವಿಪರ್ಯಾಸ ನೋಡಿ, ಅತ್ತ ಕೊರಿಯಾ ಪರ್ಯಾಯ ದ್ವೀಪದಲ್ಲಿ ಅಣುಬಾಂಬ್ ಮುರುಟಿತು ಎಂದು ನಿಟ್ಟುಸಿರು ಬಿಟ್ಟು ನಾಲ್ಕು ವಾರಗಳಾಗಿಲ್ಲ. ಇತ್ತ ಮಧ್ಯ ಪ್ರಾಚ್ಯದಲ್ಲಿ ಅಣ್ವಸ್ತ್ರ ಮೊಳೆಯುವ ಸೂಚನೆ ಕಾಣುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.