ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯದ ಪೋಸ್ಟ್

ಮೋದಿ, ವಾಲಾ, ಅಮಿತ್‌ ಶಾ, ದೇವೇಗೌಡರ ಕಾಲೆಳೆದ ಜಾಲತಾಣಿಗರು
Last Updated 17 ಮೇ 2018, 19:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯ ರಾಜಕೀಯದ ಅತಂತ್ರ ಪರಿಸ್ಥಿತಿ, ರಾಜ್ಯಪಾಲರ ನಡೆಯನ್ನು ಖಂಡಿಸುವ, ವ್ಯಂಗ್ಯ ಮಾಡುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೆಲವು ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಪರ ಇದ್ದರೆ, ಇನ್ನು ಕೆಲವು ವಿರುದ್ಧ ಇವೆ.

ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಪೋಸ್ಟ್‌ಗಳನ್ನು ಹಾಕಲಾಗುತ್ತಿದ್ದು, ಅವುಗಳು ಈಗ ವೈರಲ್‌ ಆಗಿವೆ. ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿರುವ ರಾಜ್ಯಪಾಲರ ನಡೆ ಅತ್ಯಂತ ಕಟು ಟೀಕೆಗೆ ಒಳಗಾಗಿದೆ.

‘ರಾಜಭವನ ಉಳಿಸಿ’, ’ಕರ್ನಾಟಕ ಮಾರಾಟಕ್ಕೆ ಇಲ್ಲ’, ‘ಕುದುರೆ ವ್ಯಾಪಾರಕ್ಕೆ ರಾಜಭವನ ಬಳಕೆ’ ಎಂಬ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಜನರು ಹಾಕಿಕೊಳ್ಳುತ್ತಿದ್ದಾರೆ.

ಸರ್ಕಾರ ರಚನೆ ಮಾಡಿಕೊಂಡಿರುವುದನ್ನು ಬಿಜೆಪಿ ಬೆಂಬಲಿಗರು ಸಮರ್ಥಿಸಿಕೊಂಡರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬೆಂಬಲಿಗರು ಖಂಡಿಸುತ್ತಿದ್ದಾರೆ.

ಕುಮಾರಸ್ವಾಮಿ ಫಾರ್‌ ಸಿಎಂ ಫೇಸ್‌ಬುಕ್‌ ಪೇಜ್‌ನಲ್ಲಿದ್ದ ‘ಒಬ್ಬ ಶಾಸಕನಿಗೆ ₹100 ಕೋಟಿ ಕೊಟ್ಟು ಖರೀದಿಸಲು ಮುಂದಾದ ಕುಬೇರ ಚಾಯಿವಾಲಾ’ ಎಂದು ಪ್ರಧಾನಿ ನರೇಂದ್ರ ಮೋದಿ ಫೋಟೊ ಹಾಕಿ ಬಳಸಿರುವ ಪೋಸ್ಟ್‌ ಅನ್ನು ನೂರಾರು ಜನರು ಹಂಚಿಕೊಂಡಿದ್ದಾರೆ.

‘ಅಲ್ಲಾ ಗುರು ಇವಾಗ ಕೋಟಿ ಕೋಟಿ ಕೊಟ್ಟು ಎಂಎಲ್‌ಎಗಳನ್ನು ಕೊಂಡುಕೊಳ್ಳೋದಾದ್ರೆ, ಭ್ರಷ್ಟಾಚಾರ ಮುಕ್ತ ರಾಷ್ಟ್ರ ಮಾಡ್ತೀನಿ ಅಂತ  ಹೇಳ್ತಿದ್ ಮೋದಿನೇ ಭ್ರಷ್ಟಾಚಾರ ಮಾಡ್ದಂಗಲ್ವ’ ಎಂಬ ಪೋಸ್ಟ್‌ ಸಹ ಹರಿದಾಡುತ್ತಿದೆ.

‘ಬಂದಿರೋದು ಜುಜುಬಿ 38 ಸೀಟುಗಳು, 138 ಬಂದಿರೋ ರೇಂಜಿಗೆ ಬಿಲ್ಡಪ್‌ ಕೊಡ್ತಿರಲ್ಲೋ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಫೋಟೊ ಹಾಕಿ ಬಿಜೆಪಿ ಬೆಂಬಲಿಗರು ವ್ಯಂಗ್ಯದ ದಾಟಿಯಲ್ಲಿ ಟೀಕಿಸುತ್ತಿರುವ ಪೋಸ್ಟ್ ಹಾಕಿಕೊಂಡಿದ್ದಾರೆ.

‘ಅಂದು ಎಮ್ಮೆಗಳು ಕಳುವಾಗದಂತೆ ಜಾಗ್ರತೆ ವಹಿಸಲಾಗುತ್ತಿತ್ತು. ಇಂದು ‘ಎಮ್ಮೆಲ್ಲೆ’ಗಳು ಕಳುವಾಗದಂತೆ ಎಚ್ಚರ ವಹಿಸುತ್ತಿದ್ದಾರೆ’ ಎಂಬ ಪೋಸ್ಟ್‌ ಹೆಚ್ಚಿನ ಪ್ರಮಾಣದಲ್ಲಿ ವೈರಲ್‌ ಆಗಿದೆ.

‘ಕರ್ನಾಟಕದ 118 ಶಾಸಕರು ಕುಮಾರಣ್ಣನನ್ನು ಮುಖ್ಯಮಂತ್ರಿ ಮಾಡಲು ಒಪ್ಪಿದರೂ ಈ ಮೂವರು ಗುಜರಾತಿಗಳು ಒಪ್ಪುತ್ತಿಲ್ಲ. ಬನ್ನಿ ಕನ್ನಡಿಗರೆಲ್ಲ ಒಂದಾಗೋಣ’ ಎಂಬ ಪೋಸ್ಟ್‌ನಲ್ಲಿ ಮೇಲ್ಗಡೆ ಎಚ್‌.ಡಿ. ಕುಮಾರಸ್ವಾಮಿ ಅವರ ಫೋಟೊ ಹಾಕಿದ್ದರೆ, ಕೆಳಗಡೆ ಅಮಿತ್‌ ಶಾ, ನರೇಂದ್ರ ಮೋದಿ, ವಜುಭಾಯಿ ವಾಲಾ ಅವರ ಫೋಟೊ ಹಾಕಿ ಜೆಡಿಎಸ್‌ ಬೆಂಬಲಿಗರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

‘ನೋಡಪಾ... 2 ಸೀಟು ಗೆದ್ದ ಮೇಘಾಲಯವನ್ನೇ ಬಿಟ್ಟಿಲ್ಲ. ಇನ್ನ 104 ಸೀಟು ಗೆದ್ದಿರೋ ಕರ್ನಾಟಕ ಬಿಡ್ತಾರ ಅಮಿತ್‌ ಶಾ..?’ ಎಂಬುದು ಒಂದಾದರೆ, ಇನ್ನೊಂದರಲ್ಲಿ ‘ರಾಗಿ ಮುದ್ದೆ, ಮಸ್ಸೊಪ್ಪು ತಿನ್ನೋರೆ ಇಷ್ಟು ಆಡ್ತಾರೆ ಅಂದ್ರೆ, ಇನ್ನು ದಾಲ್‌ ಖಿಚಡಿ, ತುಪ್ಪ, ಮೊಸರು ತಿಂದೋರು ಸುಮ್ಮನಿರುತ್ತಾರೆಯೇ’ ಎನ್ನುವ ಮೂಲಕ ಬಿಜೆಪಿ ಬೆಂಬಲಿಗರು ಕಾಲೆಳೆದಿದ್ದಾರೆ.

‘ಸೋತವರೆಲ್ಲ ಒಂದಾಗಿ ಸರ್ಕಾರ ನಡೆಸ್ತೀವಿ ಅಂದ್ರೆ...! ಎಲೆಕ್ಷನ್‌ ಯಾಕ್ರೋ ಮಾಡಿದ್ರಿ... ಸುಮ್ನೆ ಟಾಸ್‌ ಹಾಕಿ ಅಧಿಕಾರ ಕೊಡಬಹುದಿತ್ತು ಅಲ್ವಾ’ ಎಂದು ಪ್ರಶ್ನಿಸುವ ಮೀಮ್‌ನಲ್ಲಿ ಹಾಸ್ಯ ನಟ ಸಾಧು ಕೋಕಿಲಾ ಅವರ ಫೋಟೊ ಹಾಕಲಾಗಿದೆ.

ಬಿಹಾರದಲ್ಲಿ ಆರ್‌ಜೆಡಿ, ಗೋವಾ ಮತ್ತು ಮೇಘಾಲಯದಲ್ಲಿ ಕಾಂಗ್ರೆಸ್‌ ಪಕ್ಷ ಅತಿ ಹೆಚ್ಚು ಸ್ಥಾನಗಳಿಸಿತ್ತು. ಈ ಎರಡೂ ಪಕ್ಷಗಳಿಗೆ ಬಹುಮತ ಸಾಬೀತಿಗೆ ಅವಕಾಶ ಕೊಡದ ಅಲ್ಲಿನ ರಾಜ್ಯಪಾಲರು, ಕಡಿಮೆ ಸ್ಥಾನ ಪಡೆದಿದ್ದ ಬಿಜೆಪಿಗೆ ಅವಕಾಶ ಮಾಡಿಕೊಟ್ಟಿದ್ದನ್ನು ಉಲ್ಲೇಖಿಸಿರುವ ಹಲವರು ‘ಬಿಜೆಪಿ ಮಾಡಿದರೆ ಚಾಣಕ್ಯ ನೀತಿ, ಬೇರೆಯೋರು ಮಾಡಿದರೆ ಹೊಲಸು, ಅಸಹ್ಯ ರಾಜಕಾರಣವೇ’ ಎಂದೂ ಆಕ್ರೋಶ ತೋಡಿಕೊಂಡಿದ್ದಾರೆ.

‘ಅತಂತ್ರವೋ, ಕುತಂತ್ರವೋ 5 ವರ್ಷಗಳೊಳಗೆ ಇನ್ನೊಂದು ಚುನಾವಣೆ ಬಾರದಿರಲಿ. ಸರ್ಕಾರಿ ನೌಕರರ ಪ್ರಾಣ ಹಿಂಡದಿರಲಿ. ಹೊಸ ವೇತನದೊಂದಿಗೆ ಡಿ.ಎ. ಮಾತ್ರ ಕಾಲಕಾಲಕ್ಕೆ ಕೊಡುತಿರಲಿ ಎಂದವ ಮಂಕುತಿಮ್ಮನಲ್ಲ ನೊಂದ ಸರ್ಕಾರಿ ನೌಕರ’ ಎಂಬ ಪೋಸ್ಟ್‌ ಸಹ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT