4

ಜನಾರ್ದನರೆಡ್ಡಿ, ಶ್ರೀರಾಮುಲು ಯಾರ್‍ಯಾರ ಜತೆ ಏನು ಮಾತಾಡಿದ್ದಾರೆಂಬ ಮಾಹಿತಿ ಇದೆ: ಸಿದ್ದರಾಮಯ್ಯ

Published:
Updated:
ಜನಾರ್ದನರೆಡ್ಡಿ, ಶ್ರೀರಾಮುಲು ಯಾರ್‍ಯಾರ ಜತೆ ಏನು ಮಾತಾಡಿದ್ದಾರೆಂಬ ಮಾಹಿತಿ ಇದೆ: ಸಿದ್ದರಾಮಯ್ಯ

ಬೆಂಗಳೂರು: ಆನಂದ್‌ಸಿಂಗ್ ಕಿಡ್ನ್ಯಾಪ್ ಆಗಿದೆ. ಪ್ರತಾಪ್‌ಗೌಡ ಪಾಟೀಲ್ ನಮ್ಮ ಪರವಾಗಿ ಸಹಿ ಹಾಕಿದ್ದಾರೆ. ಆನಂದ್ ಸಿಂಗ್ ಅವರನ್ನು ಬಿಜೆಪಿ ಅಪಹರಿಸಿ, ಅಕ್ರಮ ಬಂಧನದಲ್ಲಿ ಇಟ್ಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಪಾದಿಸಿದರು.

ಶುಕ್ರವಾರ ಸುಪ್ರೀಂ ಕೋರ್ಟ್ ಆದೇಶ ಬಂದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್‌ ಶಾ ಎಲ್ಲ ರಾಜ್ಯಗಳಲ್ಲೂ ಇದೇ ಥರ ಮಾಡಿದ್ದಾರೆ. ಅವರು ಗೋಬೆಲ್ಸ್ ಥಿಯರಿಯನ್ನು ಅರ್ಥಮಾಡಿಕೊಂಡು ಕೆಲಸ ಮಾಡ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಅವರ ಆಟ ನಡೆಯಲ್ಲ. ನಡೆಸೋಕೆ ಬಿಡುವುದೂ ಇಲ್ಲ ಎಂದರು.

ಮೋದಿ, ಅಮಿತ್ ಶಾ ಅಣತಿಯಂತೆ 15 ದಿನ ಅವಕಾಶ ಕೊಟ್ಟಿದ್ದಾರೆ. ಕುದುರೆ ವ್ಯಾಪಾರಕ್ಕೆ ಅನುವು ಮಾಡಿಕೊಡುವುದೇ ಇದರ ಉದ್ದೇಶ. ಜನಾರ್ದನರೆಡ್ಡಿ, ಶ್ರೀರಾಮುಲು ಯಾರ್ಯಾರ ಜೊತೆ ಏನು ಮಾತಾಡಿದ್ದಾರೆ ಎಂಬ ಮಾಹಿತಿ ನನ್ನ ಬಳಿ ಇದೆ. ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡ್ತೀವಿ ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ನ್ಯಾಯಾಧೀಶರನ್ನು ಅಭಿನಂದಿಸುತ್ತೇನೆ. ದೇಶದ ಇತಿಹಾಸದಲ್ಲಿ ಇದು ಮೈಲಿಗಲ್ಲಾಗುವ ತೀರ್ಪು ಎಂದು ಹೇಳಿದರು.

ಈ ತೀರ್ಪಿನ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣ ಎಮಾಡುವ ಕರ್ತವ್ಯ ನಿರ್ವಹಿಸಿದ್ದಾರೆ. ಸಂವಿದಾನದಲ್ಲಿ ರಾಜ್ಯಪಾಲರ ಪಾತ್ರ ಮಹತ್ವದ್ದು. ಅವರು ಸಂವಿಧಾನ ಎತ್ತಿ ಹಿಡಿಯಬೇಕು ಎಂದರು.

ಯಾವ ಪಕ್ಷಕ್ಕೂ ಬಹುಮತ ಬರದಿದ್ದಾಗ ಸಂವಿಧಾನ ಮತ್ತು ಸುಪ್ರಿಂಕೋರ್ಟ್‌ ತೀರ್ಪುಗಳನ್ನು ಅನುಸರಿಸಿ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಆದರೆ ರಾಜ್ಯಪಾಲರು ಸುಪ್ರಿಂ ಕೋರ್ಟ್ ತೀರ್ಪು ಕಡೆಗಣಿಸಿ ಬಿಜೆಪಿ– ಕೇಂದ್ರ ಸರ್ಕಾರದ ಬಾಲಬಡುಕರಂತೆ ನಡೆದುಕೊಂಡಿದ್ದಾರೆ ಎಂದು ಆಪಾದಿಸಿದರು.

ಕಾಂಗ್ರೆಸ್‌ನ ಹಿರಿಯ ನಾಯಕರು ಮೊದಲೇ ಹೋಗಿ ಬಿಜೆಪಿಗೆ ಬಹುಮತ ಇಲ್ಲ ಅನ್ನೋದನ್ನು ಮನವರಿಕೆ ಮಾಡಿಕೊಟ್ಟೆದ್ದೆವು. ಅವರು 104 ಇದ್ದಾರೆ, ನಾವು 117 ಸ್ಥಾನ ಇದ್ದೇವೆ. ನಮಗೆ ಆಹ್ವಾನ ಮಾಡಬೇಕು ಅಂತ ಮೂರು ಬಾರಿ ಹಕ್ಕು ಮಂಡಿಸಿದ್ದೆವು. ಯಾರ ಬಹುಮತ ಇದೆಯೋ ಅವರನ್ನು ಕರೆಯಬೇಕು ಅಂತ ಕೇಳಿದ್ವಿ. ಈ ಸಂಬಂಧ ಸುಪ್ರಿಂ ಕೋರ್ಟ್‌ ತೀರ್ಪು ಕೂಡ ಇದೆ. ಗುಲಾಂ ನಬಿ ಆಜಾದ್ ಅವರು ನಮ್ಮ ಪತ್ರದೊಡನೆ ಸುಪ್ರಿಂ ಕೋರ್ಟ್ ತೀರ್ಪಿನ ಪ್ರತಿಯನ್ನೂ ಕೊಟ್ಟಿದ್ದರು ಎಂದರು.

ಅವರು ಹೇಗೆ ಯಡಿಯೂರಪ್ಪ ಅವರನ್ನು ಕರೆಯಲು ತೀರ್ಮಾನಿಸಿದರೋ ಗೊತ್ತಿಲ್ಲ. ಅದ್ಯಾರು ರಾಜ್ಯಪಾಲರಿಗೆ ಇಂಥ ಸಲಹೆ ಕೊಟ್ಟರೋ? ಯಡಿಯೂರಪ್ಪ ಅವರು ಕೇವಲ ಒಂದು ವಾರದ ಸಮಯ ಕೇಳಿದ್ದರು. ಅಗತ್ಯ ಸಂಖ್ಯೆಯ ಶಾಸಕರ ಹೆಸರನ್ನು ಕೊಟ್ಟಿರಲಿಲ್ಲ. ಇಷ್ಟೆಲ್ಲಾ ಇದ್ದರೂ ರಾಜ್ಯಪಾಲರು ಉದ್ದೇಶಪೂರ್ವಕವಾಗಿ ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟರು. ರಾಜ್ಯಪಾಲರು ಮಾಡಿದ್ದು ಅಸಂವಿಧಾನಿಕ ಎಂದು ದೂರಿದರು.

ಯಡಿಯೂರಪ್ಪ ಕೇಳದಿದ್ದರೂ ಬಹುಮತ ಸಾಬೀತಿಗೆ 15 ದಿನ ಅವಕಾಶ ಕೊಟ್ಟಿದ್ದಾರೆ. ಏನು ಇದರರ್ಥ? ಇಲ್ಲಿನ ರಾಜ್ಯಪಾಲರು ನರೇಂದ್ರ ಮೋದಿ ಮತ್ತು ಅಮಿತ್‌ಶಾ ಆದೇಶದಂತೆ ನಡೆದುಕೊಂಡಿದ್ದಾರೆ. ಸಂವಿಧಾನದ ಪ್ರಕಾಶ ನಡೆದುಕೊಂಡಿದ್ದರೆ ಹೀಗೆ ಮಾಡಲು ಸಾಧ್ಯವೇ ಇರಲಿಲ್ಲ. ನಾನು ಇದನ್ನು ಖಂಡಿಸ್ತೇನೆ. ಪ್ರಜಾಪ್ರಭುತ್ವದ ಕೊಲೆ ಇದು. ಮೋದಿ ಮತ್ತು ಶಾ ಈ ದೇಶದಲ್ಲಿರುವ ಹಿಟ್ಲರ್‌ನ ಪಳೆಯುಳಿಕೆಗಳು. ಅವರಿಗೆ ಈ ದೇಶದ ಬಗ್ಗೆ ಸಂವಿಧಾನದ ಬಗ್ಗೆ ಗೌರವವಿಲ್ಲ. ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆ. ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಲ್ಲಿಯೂ 15 ದಿನ ಸಮಯ ಕೊಟ್ಟಿರುವ ಉದಾಹರಣೆ ಇಲ್ಲವೇ ಇಲ್ಲ. 7 ದಿನ ಕೇಳಿದ್ರೆ 14 ದಿನ ಕೊಟ್ಟರೆ ಏನರ್ಥ? ರಾಜ್ಯದ ರಾಜ್ಯಪಾಲರು ಬಿಜೆಪಿ ರೂಪಿಸಿದ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ ಎಂದರು.

ಸಂವಿಧಾನದ ಆಶಯ ಉಲ್ಲಂಘಿಸಲು ಮುಂದಾದವರಿಗೆ ಸುಪ್ರಿಂಕೋರ್ಟ್ ಕಪಾಳಮೋಕ್ಷ ಮಾಡಿದೆ. ಆನಂದ್‌ ಸಿಂಗ್ ಅವರನ್ನು ಬಿಜೆಪಿ ಕೂಡಿಹಾಕಿದೆ. ನಾಳೆ ಅವರು ನಮ್ಮ ಪರವಾಗಿ ಮತ ಹಾಕ್ತಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry