ಮಂಗಳವಾರ, ಮಾರ್ಚ್ 2, 2021
31 °C
ಹೈಗ್ರೌಂಡ್ಸ್ ಹಾಗೂ ವರ್ತೂರು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಘಟನೆ

ಇಬ್ಬರು ರೌಡಿಗಳ ಬರ್ಬರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಬ್ಬರು ರೌಡಿಗಳ ಬರ್ಬರ ಹತ್ಯೆ

ಬೆಂಗಳೂರು: ಹೈಗ್ರೌಂಡ್ಸ್ ಸಮೀಪದ ವಸಂತನಗರ ಹಾಗೂ ಸರ್ಜಾಪುರ ರಸ್ತೆಯ ಕೊಡತಿ ಗೇಟ್ ಬಳಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಇಬ್ಬರು ರೌಡಿಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ರಾಕೇಶ್ ಅಲಿಯಾಸ್ ರಾಕಿ (36), ಶುಕ್ರವಾರ ಸಂಜೆ 6.45ರ ಸುಮಾರಿಗೆ ವಸಂತನಗರದ ತನ್ನ ಕಚೇರಿ ಬಳಿ ನಿಂತಿದ್ದ. ಈ ವೇಳೆ ಅಲ್ಲಿಗೆ ಬಂದ ಎಂಟು ಮಂದಿಯ ಗುಂಪು, ಏಕಾಏಕಿ ಆತನ ಮೇಲೆರಗಿದೆ.

ತಪ್ಪಿಸಿಕೊಂಡು ಓಡಲೆತ್ನಿಸಿದ ರಾಕೇಶ್‌ನನ್ನು ಕೆಳಗೆ ಬೀಳಿಸಿದ ಆರೋಪಿಗಳು, ಮಚ್ಚು–ಲಾಂಗುಗಳಿಂದ ಮನಸೋಇಚ್ಛೆ ಹಲ್ಲೆ ನಡೆಸಿ ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವಸಂತನಗರ ನಿವಾಸಿಯಾಗಿದ್ದ ರಾಕೇಶ್ ವಿರುದ್ಧ ಹೈಗ್ರೌಂಡ್ಸ್, ಮಡಿವಾಳ, ಜೆ.ಪಿ,ನಗರ, ಜಯನಗರ ಹಾಗೂ ಚಿತ್ರದುರ್ಗ ಪೊಲೀಸ್ ಠಾಣೆ ಗಳಲ್ಲಿ ಪ್ರಕರಣ ದಾಖಲಾಗಿದ್ದವು. ಉಪಟಳ ಹೆಚ್ಚಾಗಿದ್ದರಿಂದ 2016ರಲ್ಲಿ ಈತನ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ರಾಕೇಶ್‌ನ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆ ನಂತರ ಸ್ಥಳೀಯ ಮಹಿಳೆ ಜತೆ ಅನೈತಿಕ ಸಂಬಂಧ ಪ್ರಾರಂಭಿಸಿದ್ದ. ಅದೇ ವಿಚಾರಕ್ಕೆ ಹತ್ಯೆ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕಾರು ಅಡ್ಡಗಟ್ಟಿ ಹತ್ಯೆ: ಬಾಣಸವಾಡಿಯ ಜಾನಕಿರಾಮ್ ಲೇಔಟ್ ನಿವಾಸಿಯಾದ ಸೆಲ್ವ, ಪರಪ್ಪನ ಅಗ್ರಹಾರ ಸಮೀಪದ ರಾಯಸಂದ್ರದಲ್ಲಿ ನೆಲೆಸಿರುವ ಮೊದಲ ಪತ್ನಿಯ ಮನೆಗೆ ಹೋಗಿದ್ದ. ಅಲ್ಲಿಂದ ರಾತ್ರಿ 11.30ರ ಸುಮಾರಿಗೆ ಕಾರಿನಲ್ಲಿ ವಾಪಸಾಗುತ್ತಿದ್ದಾಗ, ವಾಹನ ಅಡ್ಡಗಟ್ಟಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹಲವು ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಸೆಲ್ವನ ವಿರುದ್ಧ ಬಾಣಸವಾಡಿ, ಹೆಣ್ಣೂರು ಹಾಗೂ ಕಾಡುಗೊಂಡನಹಳ್ಳಿ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜೈಲಿಗೆ ಹೋಗಿ ಬಂದರೂ, ಸುಲಿಗೆ ಮುಂದುವರಿಸಿದ್ದರಿಂದ ಬಾಣಸವಾಡಿ ಠಾಣೆಯ ರೌಡಿಪಟ್ಟಿಯಲ್ಲಿ ಈತನ ಹೆಸರು ಸೇರಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ ಸೆಲ್ವ, ಎರಡು ಮದುವೆ ಆಗಿದ್ದ. ತಾನು 2ನೇ ಪತ್ನಿಯೊಂದಿಗೆ ನೆಲೆಸಿದ್ದರೆ, ಮೊದಲ ಪತ್ನಿಗೆ ರಾಯಸಂದ್ರದಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದ. ಸೆಲ್ವ ಹಾಗೂ ನಾಗರಾಜ್ ಸ್ನೇಹಿತರಾಗಿದ್ದು, ಇತ್ತೀಚೆಗೆ ಹಣಕಾಸಿನ ವಿಚಾರವಾಗಿ ಅವರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಕೆಲ ದಿನಗಳ ಹಿಂದೆ ಮನೆ ಹತ್ತಿರ ಬಂದಿದ್ದ ನಾಗರಾಜ್‌ಗೆ, ಆತ ತನ್ನ ಪತ್ನಿಯ ಎದುರೇ ಬೈದು ಕಳುಹಿಸಿದ್ದ ಎಂದು ಪೊಲೀಸರು ವಿವರಿಸಿದರು.

ಇದೇ ದ್ವೇಷದಲ್ಲಿ ನಾಗರಾಜ್ ಸಹಚರರೊಂದಿಗೆ ಸೇರಿ ಹತ್ಯೆಗೈದಿರುವ ಸಾಧ್ಯತೆ ಇದೆ. ಶಂಕಿತರ ಮೊಬೈಲ್‌ಗಳು ಸ್ವಿಚ್ಡ್‌ಆಫ್ ಆಗಿವೆ. ಹಂತಕರ ಪತ್ತೆಗೆ ಏರ್‌ಪೋರ್ಟ್ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿದೆ ಎಂದು ಪೊಲೀಸರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.