ಶುಕ್ರವಾರ, ಮಾರ್ಚ್ 5, 2021
30 °C

‘ಹಣ, ಧರ್ಮ ರಾಜಕಾರಣದಿಂದ ಬಿಜೆಪಿ ಗೆಲುವು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹಣ, ಧರ್ಮ ರಾಜಕಾರಣದಿಂದ ಬಿಜೆಪಿ ಗೆಲುವು’

ಶಿವಮೊಗ್ಗ: ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಧರ್ಮ, ಜಾತಿ ಹಾಗೂ ಹಣದ ಮೂಲಕ ರಾಜಕಾರಣ ಮಾಡಿ ಶಿವಮೊಗ್ಗ ಜಿಲ್ಲೆಯಲ್ಲಿ ಗೆಲವು ಸಾಧಿಸಿವೆ’ ಎಂದು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಜೆಡಿಎಸ್‌ ಮುಖಂಡ ನಾಗರಾಜ್ ಕಂಕಾರಿ ಆರೋಪಿಸಿದರು.

‘ಜಿಲ್ಲೆಯಲ್ಲಿ ಸಂಘಟನಾತ್ಮಕ ವೈಫಲ್ಯಗಳಿಂದ ನಮ್ಮ ಪಕ್ಷಕ್ಕೆ ಸೋಲಾಗಿದ್ದು, ಆದರೆ ಜಾತ್ಯತೀತ ನಿಲುವಿಗೆ ಬದ್ಧವಾದ ಜೆಡಿಎಸ್‌ ಯಾವುದೇ ಲಾಬಿ ಮಾಡದೇ ಇದ್ದರೂ ಹೆಚ್ಚಿನ ಸಂಖ್ಯೆಯ ಮತದಾರರು ಮತ ನೀಡಿದ್ದಾರೆ. ಆದರೆ ಜಾತಿ, ಹಣ, ಧರ್ಮ ರಾಜಕಾರಣದ ಮುಂದೆ ನಾವು ಸೋತಿದ್ದೇವೆ’→ ಎಂದು ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

‘ಶಿವಮೊಗ್ಗ ಗ್ರಾಮಾಂತರ, ಸೊರಬ, ಭದ್ರಾವತಿ, ಶಿಕಾರಿಪುರ ಸೇರಿದಂತೆ ಜಿಲ್ಲೆಯ ಬಹಳಷ್ಟು ಕ್ಷೇತ್ರಗಳಲ್ಲಿ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ. ಆದರೆ ಹಣದ ಹೊಳೆ ಹರಿದ ಪರಿಣಾಮ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಮುಂದಿನ ದಿನಗಳಲ್ಲಿ ಗೆಲುವು ಲಭಿಸುವ ವಿಶ್ವಾಸ ಜೆಡಿಎಸ್‌ ಪಕ್ಷಕ್ಕಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿದಾಗ ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಕೇಂದ್ರ ಸರ್ಕಾರ, ರಾಜ್ಯಪಾಲರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಬಹುಮತವಿದ್ದರೂ ಅವರಿಗೆ ಅಧಿಕಾರ ನೀಡದೇ ಬಿಜೆಪಿಯನ್ನು ಪ್ರಮಾಣ ವಚನ ಸ್ವೀಕಾರಕ್ಕೆ ಆಹ್ವಾನಿಸಿರುವ ರಾಜ್ಯಪಾಲರ ನಿಲುವು ಖಂಡನೀಯ’ ಎಂದರು.

‘ದಕ್ಷಿಣ ಬ್ಲಾಕ್ ನಗರ ಘಟಕದ ಅಧ್ಯಕ್ಷ ಸುಬ್ಬೇಗೌಡ ಮಾತನಾಡಿ, ‘ಶಿವಮೊಗ್ಗದಲ್ಲಿನ ಸೋಲು ನಿಜಕ್ಕೂ ಬೇಸರ ತರಿಸಿದ್ದು,  ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆಗೆ ರಾಜ್ಯ ಸಮಿತಿಯ ಗಮನಕ್ಕೆ ತರಲಾಗಿದೆ. ಈ ಹಿಂದೆ ಇದ್ದ ಎಂ.ಶ್ರೀಕಾಂತ್ ಅವರೇ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ರಾಮಕೃಷ್ಣ, ಸಿದ್ದಪ್ಪ, ಪಾಲಾಕ್ಷಿ, ನೂರುಲ್ಲಾ, ನುಮಾನ್, ರೇಖಾ ಚಂದ್ರಶೇಖರ್, ಆನಂದ್, ಮಂಜು ನಾಥ್, ಅಮೀರ್ ಹಂಜಾ, ಭಾಸ್ಕರ್, ರಾಮೇಗೌಡ, ಶಾಮೀರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.