ಮಳೆ– ಗಾಳಿ; ತರಕಾರಿ ಬೆಲೆಯಲ್ಲಿ ಏರಿಳಿತ

7
ಅಂತರಸನಹಳ್ಳಿ ಕೃಷಿ ಮಾರುಕಟ್ಟೆಯಲ್ಲಿ ರೈತರು– ಗ್ರಾಹಕರ ಪರದಾಟ

ಮಳೆ– ಗಾಳಿ; ತರಕಾರಿ ಬೆಲೆಯಲ್ಲಿ ಏರಿಳಿತ

Published:
Updated:
ಮಳೆ– ಗಾಳಿ; ತರಕಾರಿ ಬೆಲೆಯಲ್ಲಿ ಏರಿಳಿತ

ತುಮಕೂರು: ತರಕಾರಿಯ ಬೆಲೆ ದಿನದಿಂದ ದಿನಕ್ಕೆ ಏರಿಳಿತವಾಗುತ್ತಿದೆ. ಈ ವಾರ ಈರುಳ್ಳಿ ಬೆಲೆ ಇಳಿಕೆಯಾಗಿದೆ. ಆದರೆ, ಟೊಮೆಟೊ ಬೆಲೆ ತೀರಾ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.

ಕಳೆದ ಎರಡು ವಾರಗಳಿಂದ ಈರುಳ್ಳಿ ₹ 40 ರಿಂದ 50ರವರೆಗೆ ಮಾರಾಟವಾಗುತ್ತಿತ್ತು. ಆದರೆ, ಈ ವಾರ ಸಣ್ಣ ಈರುಳ್ಳಿ ಕೆ.ಜಿ.ಗೆ ₹ 20 ರಿಂದ 25 ಕ್ಕೆ ಇಳಿದಿದೆ. ದಪ್ಪ ಈರುಳ್ಳಿ ₹ 30 ಕ್ಕೆ ಮಾರಾಟವಾಗುತ್ತಿದೆ.

ನಗರದ ಅಂತರಸನಹಳ್ಳಿ ಕೃಷಿ ಮಾರುಕಟ್ಟೆಗೆ ಸುತ್ತಮುತ್ತ ಗ್ರಾಮಗಳು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮಗಳಿಂದ ತರಕಾರಿ ಪೂರೈಕೆಯಾಗುತ್ತಿದೆ.

ಕಳೆದ ವಾರ ಹಸಿಮೆಣಸಿನಕಾಯಿ ₹ 40 ಕ್ಕೆ ಮಾರಾಟವಾಗಿದ್ದು, ಈ ವಾರ ₹ 28ಕ್ಕೆ ತಗ್ಗಿದೆ. ಹುರುಳಿ ಕಾಯಿಬೆಲೆ ಏರಿದ್ದು, ₹ 60 ಕ್ಕೆ ಹೆಚ್ಚಳವಾಗಿದೆ.

ಕ್ಯಾರೆಟ್‌, ಬೀಟ್‌ರೂಟ್‌, ಮೂಲಂಗಿ, ಬದನೆಕಾಯಿ, ಗೋರಿ ಕಾಯಿ, ಹಿರೇಕಾಯಿ, ತೊಂಡೆಕಾಯಿ, ಸೌತೆಕಾಯಿ, ನವಿಲು ಕೋಸು, , ಎಲೆ ಕೋಸು, ಹೂ ಕೋಸು ಸೇರಿದಂತೆ ಇತರೆ ತರಕಾರಿ ಬೆಲೆ ಕೆ.ಜಿಗೆ ₹ 20ಕ್ಕೆ ಇಳಿದಿದೆ. ಆಲೂಗಡ್ಡೆ, ಸೀಮೆ ಬದನೆ ಕಾಯಿ ಕೊಂಚ ತುಟ್ಟಿಯಾಗಿದೆ.

ಹೂವಿನ ವ್ಯಾಪಾರ ಜೋರು: ಕನಕಾಂಬರ ಹೂವು ಪ್ರತಿ ಕೆ.ಜಿಗೆ ₹ 300, ಮಲ್ಲಿಗೆ ಕೆ.ಜಿಗೆ ₹ 100, ಚೆಂಡು ಹೂವು, ಬಿಳಿ ಸೇವಂತಿಗೆ, ಸುಗಂಧ  ರಾಜ ಕೆ.ಜಿಗೆ ₹ 20 ಕ್ಕೆ ಮಾರಾಟ ಆಗುತ್ತಿದೆ.

ಹಸಿ ಸೊಪ್ಪಿನ ಬೆಲೆ ಸ್ಥಿರ: ಮೆಂತೆ ಸೊಪ್ಪು ಕೆ.ಜಿ.ಗೆ ₹ 80, ಕೊತ್ತಂಬರಿ ಕೆ.ಜಿಗೆ ₹ 80, ಸಬ್ಬಸಗಿ ₹ 80, ಪುದಿನಾ ₹ 50ಕ್ಕೆ ಮಾರಾಟ ಆಗುತ್ತಿದೆ.

ಮಳೆ ಗಾಳಿಗೆ ಆತಂಕ: ಇತ್ತೀಚೆಗೆ ಮಳೆ ಗಾಳಿ ಹೆಚ್ಚಾಗಿರುವುದರಿಂದ ಬೆಳೆ ಹಾಳಾಗುತ್ತದೆ ಎನ್ನುವ ಆಂತಕ ರೈತರಲ್ಲಿ ಉಂಟಾಗಿದೆ.ಹಾಗಾಗಿ ತರಕಾರಿಯನ್ನು ರೈತರೆ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ. ಆದರೆ ಈವಾರ ಎಲ್ಲ ತರಕಾರಿಯ ದರ ಕುಸಿದಿರುವುದರಿಂದ ಬೆಳೆದ ಬೆಳೆ ಹೊರೆಯಾಗಿದೆ.

ಬೆಳೆಗೆ ತಕ್ಕಷ್ಟು ಬೆಲೆ ಇಲ್ಲ

‘ನಾನು ಎಲ್ಲ ರೀತಿಯ ತರಕಾರಿಯನ್ನು ಬೆಳೆಯುತ್ತೇನೆ. ಈ ವಾರ ಹುರುಳಿ ಕಾಯಿ 2 ಮೂಟೆ ತಂದಿದ್ದೆ. ಕೆ.ಜಿ ಗೆ ₹ 60 ರಂತೆ ಮಾರಾಟವಾಯಿತು. ಲಾಭವಾಗಲಿಲ್ಲ. ಬೆಳೆಗೆ ತಕ್ಕಷ್ಟು ಬೆಲೆ ಸಿಗಲಿಲ್ಲ’ ಎಂದು ರೈತ ಜಯಣ್ಣ 'ಪ್ರಜಾವಾಣಿ'ಗೆ ತಿಳಿಸಿದರು.

₹ 2ರಷ್ಟು ಲಾಭದ ಮೇಲೆ ಮಾರಾಟ

‘ಸುಮಾರು ವರ್ಷಗಳಿಂದ ತರಕಾರಿ ವ್ಯಾಪಾರ ಮಾಡುತ್ತಿದ್ದು, ನೇರವಾಗಿ ರೈತರಿಂದಲೇ ಕೊಂಡುಕೊಳ್ಳುತ್ತೇವೆ. ರೈತರಿಗೆ ಕೊಡುವ ಬೆಲೆಗಿಂತ ₹ 2ರಷ್ಟು ಲಾಭದ ಮೇಲೆ ಗ್ರಾಹಕರಿಗೆ ಮಾರಾಟ ಮಾಡುತ್ತೇವೆ’ ಎಂದು ತರಕಾರಿ ವ್ಯಾಪಾರಿ ಮಂಜುನಾಥ್ ತಿಳಿಸಿದರು.

ಎಲ್ಲೆಂದರಲ್ಲಿ ವಾಹನ ನಿಲುಗಡೆ

‘ಪ್ರತಿನಿತ್ಯ ಮಾರುಕಟ್ಟೆಗೆ ವ್ಯಾಪಾರಿಗಳು, ಗ್ರಾಹಕರು, ತರಕಾರಿಯನ್ನು ತರುವ ವಾಹನಗಳು ಎಲ್ಲವೂ ಎಲ್ಲೆಂದರಲ್ಲಿ ರಸ್ತೆಗಳಲ್ಲಿ ನಿಲುಗಡೆ ಮಾಡಲಾಗುತ್ತದೆ. ಮಾರುಕಟ್ಟೆಗೆ ಬರುವವರಿಗೆ ಸಮಸ್ಯೆಯಾಗುತ್ತದೆ’ ಎಂದು ಮಾರುಕಟ್ಟೆಯ ವ್ಯಾಪಾರಿ ಕುಮಾರ್ 'ಪ್ರಜಾವಾಣಿ'ಗೆ ತಿಳಿಸಿದರು.

ಕಮಿಷನ್ ಮೇಲೆ ಮಾರಾಟ

‘ಮಧುಗಿರಿ ಮಂಡಿಗಳಿಂದ ಹೂವನ್ನು ತೆಗೆದುಕೊಂಡು ತುಮಕೂರು ಮಾರುಕಟ್ಟೆಗೆ ತಂದು ಒಂದು ಕೆ.ಜಿ.ಗೆ ₹ 100ಕ್ಕೆ ₹ 10 ರಂತೆ ಮಾಲೀಕರಿಗೆ ಕಮಿಷನ್ ನೀಡಿ ಅಂಗಡಿ ಮುಂದೆ ಮಾರುತ್ತೇವೆ’ ಎಂದು ಮಧ್ಯವರ್ತಿ ತಿಮ್ಮಣ್ಣ ತಿಳಿಸಿದರು.

ಬಾಬು ಆರ್‌.ಎಲ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry