ಶನಿವಾರ, ಫೆಬ್ರವರಿ 27, 2021
28 °C
ಚೆಕ್ ಡ್ಯಾಂ, ಕೃಷಿ ಹೊಂಡಗಳಿಗೆ ಹರಿದು ಬಂದ ನೀರು

ಉತ್ತಮ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತಮ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

ಚಿತ್ರದುರ್ಗ: ಜಿಲ್ಲೆಯಲ್ಲಿ ಗುರುವಾರ ರಾತ್ರಿ ಗುಡುಗು, ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ಹೊಳಲ್ಕೆರೆ ತಾಲ್ಲೂಕಿನಲ್ಲಿ 77 ಮಿ.ಮೀ ಮಳೆ ಸುರಿದಿದೆ. ಕೃಷಿ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಉದ್ದೇಶಕ್ಕೆ ನಿರ್ಮಿಸಿದ ಚೆಕ್‌ ಡ್ಯಾಂಗಳಿಗೆ ನೀರು ಹರಿದು ಬಂದಿದೆ. ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಬಿತ್ತನೆಗೆ ಭೂಮಿಯನ್ನು ಹದ ಮಾಡಿಕೊಳ್ಳುವಲ್ಲಿ ರೈತರು ನಿರತರಾಗಿದ್ದಾರೆ.

ಗುರುವಾರ ರಾತ್ರಿ 9 ಗಂಟೆಯ ಸುಮಾರಿಗೆ ಬಿರುಗಾಳಿ, ಗುಡುಗು ಸಹಿತ ಆರಂಭವಾದ ಮಳೆ ಸತತ ಎರಡೂವರೆ ಗಂಟೆ ಸುರಿಯಿತು. ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಗೆ ಚರಂಡಿಗಳು ತುಂಬಿ ಹರಿದವು. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಮಳೆಯ ಪರಿಣಾಮ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.

ನಗರದ ಹೊರವಲಯದ ಭೋವಿ ಗುರುಪೀಠದ ಸಮೀಪದಲ್ಲಿ ನಿರ್ಮಿಸಿದ ಎರಡು ಚೆಕ್‌ಡ್ಯಾಂಗಳಿಗೆ ನೀರು ಹರಿದು ಬಂದಿದೆ. ಬರಿದಾಗಿದ್ದ ಡ್ಯಾಂಗಳಲ್ಲಿ ನೀರು ಸಂಗ್ರಹವಾಗಿರುವುದು ಸುತ್ತಲಿನ ಪರಿಸರಕ್ಕೆ ಜೀವಕಳೆ ತಂದಿದೆ. ಜಿಲ್ಲೆಯ ವಿವಿಧೆಡೆ ಕೆರೆಗಳಿಗೂ ನೀರು ಹರಿದು ಬಂದಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರದಲ್ಲಿ 72 ಮಿ.ಮೀ, ಐನಹಳ್ಳಿ 30 ಮಿ.ಮೀ, ಹೊಳಲ್ಕರೆ ತಾಲ್ಲೂಕಿನ ಅರೆಹಳ್ಳಿಯಲ್ಲಿ 71 ಮಿ.ಮೀ, ಅನ್ನೇಹಾಳು 64 ಮಿ.ಮೀ, ಹಿರೆಮೈದೂರಿನಲ್ಲಿ 52 ಮಿ.ಮೀ ಮಳೆ ಸುರಿದಿದೆ. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ 20, ಹಿರಿಯೂರು ತಾಲ್ಲೂಕಿನಲ್ಲಿ 11 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 51 ಮಿ.ಮೀ ಮಳೆಯಾಗಿದೆ.

ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದಲ್ಲಿ ಕೃಷಿ ಜಮೀನಲ್ಲಿ ನಿರ್ಮಿಸಿದ ಕೃಷಿ ಹೊಂಡಗಳು ಭರ್ತಿಯಾಗಿವೆ. ತೋಟಗಾರಿಕೆ ಇಲಾಖೆಯ ಅನುದಾನದಡಿ ನಿರ್ಮಿಸಿದ ಹೊಂಡದಿಂದ ಹಲವು ರೈತರ ಜಮೀನುಗಳಿಗೆ ಅನುಕೂಲವಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.