ಆರೈಕೆಯಲ್ಲಿ ವೈದ್ಯರಿಗಿಂತ ಶುಶ್ರೂಷಕರೇ ಮುಂದೆ

7
ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಉದ್ಘಾಟಿಸಿದ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕಿ ಡಾ.ನೀಲಾಂಬಿಕೆ

ಆರೈಕೆಯಲ್ಲಿ ವೈದ್ಯರಿಗಿಂತ ಶುಶ್ರೂಷಕರೇ ಮುಂದೆ

Published:
Updated:

ದಾವಣಗೆರೆ: ರೋಗಿಗಳನ್ನು ವೈದ್ಯರು ಪರೀಕ್ಷೆ ಮಾಡಿ ಸಲಹೆ ನೀಡಿ ಹೋಗುತ್ತಾರೆ. ಶುಶ್ರೂಷಕರು 24 ಗಂಟೆಯೂ ಆರೈಕೆ ಮಾಡುತ್ತಾರೆ. ರೋಗಿಗಳ ಪಾಲಿಗೆ ವೈದ್ಯರಿಗಿಂತ ಶುಶ್ರೂಷಕರೇ ಹೆಚ್ಚು ಎಂದು ಜಿಲ್ಲಾ ಆಸ್ಪತ್ರೆಯ ಅಧೀಕ್ಷಕಿ ಡಾ. ನೀಲಾಂಬಿಕೆ ಹೇಳಿದರು.

ರಾಜ್ಯ ಸರ್ಕಾರಿ ಶುಶ್ರೂಷಕರ ಸಂಘದ ಜಿಲ್ಲಾ ಶಾಖೆ ಭಾನುವಾರ ಸರ್ಕಾರಿ ನೌಕರರ ಸಭಾಭವನ

ದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಹುಟ್ಟಿದ ದಿನವಾದ ಮೇ 12ರಂದು ಶುಶ್ರೂಷಕರ ದಿನಾಚರಣೆ ನಡೆಸಲಾಗುತ್ತದೆ. ಈ ಬಾರಿ ಚುನಾವಣೆ ಬಂದಿದ್ದರಿಂದ ಮುಂದೂಡಲಾಯಿತು. ನೈಟಿಂಗೇಲ್‌ ಅವರು ಶುಶ್ರೂಷಕಿಯಾಗಿ ಸಲ್ಲಿಸಿದ ಸೇವೆಯ ನೆನಪು ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿದಿನವೂ ಇರಬೇಕು. ಅದೇ ರೀತಿಯ ಸೇವೆ ನೀಡಲು ಸಾಧ್ಯವಾಗಬೇಕು ಎಂದು ತಿಳಿಸಿದರು.

ಔಷಧದಿಂದಷ್ಟೇ ರೋಗ ವಾಸಿಯಾಗುವುದಿಲ್ಲ. ಅದರ ಜತೆಗೆ ವೈದ್ಯರು ಮತ್ತು ನರ್ಸ್‌ಗಳ ಮಾತೂ ಮುಖ್ಯವಾಗುತ್ತದೆ. ರೋಗಿಗಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರಿಗೆ ಸ್ಥೈರ್ಯ ತುಂಬಿದಾಗ ರೋಗ ವಾಸಿ ಮಾಡುವುದು ಸುಲಭವಾಗುತ್ತದೆ ಎಂದರು.

ಪ್ರತಿ ವರ್ಷ ಶುಶ್ರೂಷಕಿಯರಿಗೆ ಪ್ರಶಸ್ತಿ ನೀಡಲಾಗುತ್ತದೆ. ‘ಇಲ್ಲಿಗೆ ನಮ್ಮ ಕೆಲಸ ಮುಗಿಯಿತು’ ಎಂದು ಪ್ರಶಸ್ತಿ ಪಡೆದವರು ಸಂತೃಪ್ತಿ ಪಡಲು ಅಲ್ಲ. ಪ್ರಶಸ್ತಿ ನೀಡಿರುವುದು ಇನ್ನಷ್ಟು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಲು ಎಂದು ತಿಳಿಯಬೇಕು ಎಂದು ಸಲಹೆ ನೀಡಿದರು.

ಜಮಖಂಡಿಯ ಶುಶ್ರೂಷಕ ಜೆ.ಡಿ.ಧನ್ನೂರ ಮಾತನಾಡಿ, ‘ಶಕ್ತಿಯಾನುಸಾರ ನಾವು ಕೆಲಸ ಮಾಡುತ್ತಿದ್ದೇವೆ.

ಸಿಬ್ಬಂದಿ ಕೊರತೆ ಇದ್ದರೆ ಅವರ ಕೆಲಸವನ್ನೂ ನಾವು ಮಾಡಬೇಕಾಗುತ್ತದೆ. ಆದರೆ ಇವುಗಳನ್ನು ಗುರುತಿಸುವವರು ಯಾರೂ ಇಲ್ಲ. ರಾತ್ರಿ ಪಾಳಿ ಕೆಲಸ ಮಾಡಿದರೆ ಅದಕ್ಕೆ ಭತ್ಯೆ ನೀಡುತ್ತಿಲ್ಲ. ಬಿ.ಎಸ್‌ಸಿ, ಎಂ.ಎಸ್‌ಸಿ ಮಾಡುತ್ತೇವೆ ಎಂದರೆ ಅದಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ. ಎಷ್ಟೋ ಬಾರಿ ಇದಕ್ಕೆಲ್ಲ ಹೊರಗಿನವರು ಕಾರಣವಾಗದೇ ನಮ್ಮವರೇ ಕಾರಣವಾಗಿರುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಧನ್ನೂರ ನೇತೃತ್ವದಲ್ಲಿ ಹೊರತಂದ ‘ದೀಪ ಧಾರಿಣಿ’ ಭಾವಗೀತೆಗಳ ಸಿ.ಡಿ. ಬಿಡುಗಡೆಗೊಳಿಸಲಾಯಿತು. ಶುಶ್ರೂಷಕರಾದ ಎಚ್‌.ಎನ್‌. ಪಾಟೀಲ್‌, ಕೆ. ರಂಗಮ್ಮ, ಅಚ್ಚಮ, ಎಂ. ಅಂಬುಜಾಕ್ಷಿ, ಸಿ. ಮೀನಾಕ್ಷಮ್ಮ, ಜಾನಕಮ್ಮ, ಶಿವಮೂರ್ತಿ, ಆರ್‌. ಗೀತಾ, ಟಿ. ಕುಮಾರ್‌, ಮೇರಿ ಫ್ರಾನ್ಸಿಸ್‌, ಜೆ.ಎಚ್‌. ಏಕಾಂತಮ್ಮ, ಕೆ.ಸುಮಿತ್ರಾ ಅವರಿಗೆ ‘ಅತ್ಯುತ್ತಮ ಶುಶ್ರೂಷಕರು’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಲೇಶಪ್ಪ, ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ರಾಘವೇಂದ್ರ ಸ್ವಾಮಿ, ಸಂಜೀವಿನಿ ಸ್ಕೂಲ್‌ ಆಫ್‌ ನರ್ಸಿಂಗ್‌ ಪ್ರಾಂಶುಪಾಲ ದುರ್ಗಪ್ಪ, ಜಿಲ್ಲಾ ಆಸ್ಪತ್ರೆಯ ಸ್ಕೂಲ್‌ ಆಫ್‌ ನರ್ಸಿಂಗ್‌ ಪ್ರಾಂಶುಪಾಲರಾದ ಬಸವಣ್ಯಮ್ಮ ಎಫ್‌. ಹಿರೇಮಠ್‌, ಶುಶ್ರೂಷಕರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಆರ್‌.ಎಚ್‌. ಗೋವಿಂದಪ್ಪ, ಗೌರವ ಅಧ್ಯಕ್ಷೆ ಎಂ. ಶ್ರೀದೇವಿ, ಕಾರ್ಯಾಧ್ಯಕ್ಷರಾದ ಎಸ್‌.ಎಂ. ವಿಶಾಲಾಕ್ಷಿ, ಕಲ್ಲೇಶ್‌, ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಖಜಾಂಚಿ ಇಂದಿರಮ್ಮ, ಮಾಲ್ತೇಶ್‌ ಅವರೂ ಇದ್ದರು.

‌ಎಸ್‌ಎಸ್‌ಎಲ್‌ಸಿ ಮತ್ತು ಪಿ.ಯು ಪರೀಕ್ಷೆಯಲ್ಲಿ ಶೇ 90ಕ್ಕಿಂತ ಅಧಿಕ ಅಂಕ ಪಡೆದ ಶುಶ್ರೂಷಕರ ಮಕ್ಕಳನ್ನು ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮೊದಲು ಗುಂಡಿ ಸರ್ಕಲ್‌ನಿಂದ ಸಭಾಭವನದ ವರೆಗೆ ಜಾಥಾ ನಡೆಯಿತು.

ಹೆಚ್ಚುತ್ತಿರುವ ಹಲ್ಲೆಗಳು: ಕಳವಳ

ವೈದ್ಯರು, ನರ್ಸ್‌ಗಳು ದೇವರಲ್ಲ. ಶಕ್ತಿ ಮೀರಿ ಪ್ರಯತ್ನಿಸಿದರೂ ಕೆಲವೊಮ್ಮೆ ಕೆಲವರನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ಹಲ್ಲೆಗಳನ್ನು ಮಾಡುತ್ತಿರುವುದು ಹೆಚ್ಚಾಗುತ್ತಿದೆ ಎಂದು ಡಾ. ನೀಲಾಂಬಿಕೆ ಕಳವಳ ವ್ಯಕ್ತಪಡಿಸಿದರು.

’ಕಾನೂನುಗಳಿವೆ. ಆದರೂ ಹಲ್ಲೆಗಳು ಹೆಚ್ಚುತ್ತಿರುವುದು ವರದಿಯಾಗುತ್ತಲೇ ಇವೆ. ಸರ್ಕಾರವೂ ನಮ್ಮ ಪರ ನಿಲ್ಲುತ್ತಿಲ್ಲ. ಊಟ, ನಿದ್ದೆ ಬಿಟ್ಟು ಕೆಲಸ ಮಾಡಿದರೂ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆದರಿಕೊಂಡೇ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ. ನಮ್ಮ ರಕ್ಷಣೆ ನಾವೇ ಹೇಗೆ ಮಾಡಿಕೊಳ್ಳುವುದು ಎಂಬುದರ ಬಗ್ಗೆ ನಾವು ಚಿಂತಿಸಬೇಕು’ ಎಂದು ಹೇಳಿದರು.

**

ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಟಾಫ್‌ ನರ್ಸ್‌ಗಳ ಕೊರತೆ ಇದೆ. ಆರೇಳು ಮಂದಿ ಕೆಲಸ ಮಾಡಬೇಕಾದಲ್ಲಿ ಒಬ್ಬರೇ ಇದ್ದಾರೆ. ಸಿಬ್ಬಂದಿ ಕೊರತೆ ನೀಗಿಸಲು ಸರ್ಕಾರಕ್ಕೆ ಮನವಿ ಸಲ್ಲಿಸೋಣ

ಡಾ. ನೀಲಾಂಬಿಕೆ, ಜಿಲ್ಲಾ ಆಸ್ಪತ್ರೆಯ ಅಧೀಕ್ಷಕಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry