3

ಜಲ ಸಂರಕ್ಷಣೆಗೆ ದಾರಿ

Published:
Updated:
ಜಲ ಸಂರಕ್ಷಣೆಗೆ ದಾರಿ

ಡಾ. ಕೆ.ಮಂಜಪ್ಪ / ನೇಸರ ಕೆ.ಎಂ.

ನಾಡಿನಾದ್ಯಂತ ಈಗ ಜಲ ಸಂರಕ್ಷಣೆಯ ಕೂಗು ಕೇಳಿಬರುತ್ತಿದೆ. ಅಂತರ್ಜಲ ಪಾತಾಳಕ್ಕೆ ಕುಸಿದಿದ್ದರಿಂದ ನೀರಿಗಾಗಿ ಹಾಹಾಕಾರ ಏಳುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ನೀರಿನ ಅಭಾವಕ್ಕೆ ಮುಖ್ಯವಾದ ಕೆಲವು ಕಾರಣಗಳು ಹೀಗಿವೆ: ಬಿದ್ದ ಮಳೆ ನೀರು ಸರಿಯಾಗಿ ಮಣ್ಣಿನಲ್ಲಿ ಇಂಗದೆ ಭೂಮಿ ಮೇಲೆ ಹರಿದು ಭೂಮಿಯ ಸವಕಳಿಯಿಂದ ಕೆರೆ-ಕಟ್ಟೆ ಹಾಗೂ ಜಲಾಶಯದಲ್ಲಿ ಹೂಳು ತುಂಬಿಕೊಂಡು ಅವುಗಳ ನೀರಿನ ಶೇಖರಣಾ ಸಾಮರ್ಥ್ಯ ಕಡಿಮೆಗೊಳ್ಳುತ್ತಲಿದೆ.

ಅರಣ್ಯ ಸಂಪತ್ತು ಕ್ರಮೇಣ ನಾಶಹೊಂದುತ್ತ ಮಣ್ಣು ಸವಕಳಿಗೆ ಹಾಗೂ ಹವಾಮಾನದಲ್ಲಿನ ವೈಪರೀತ್ಯಕ್ಕೆ ಕಾರಣವಾಗಿರುತ್ತದೆ. ಊರು-ನಗರಗಳಲ್ಲಿ ಅನಾದಿಕಾಲದಿಂದ ನೀರು ಶೇಖರಣೆಗೆಂದೇ ನಿರ್ಮಿತಗೊಂಡ ಕೆರೆ-ಕಟ್ಟೆಗಳು ನೀರಿನ ಶೇಖರಣೆಗೆ ಅಸಮರ್ಪಕವಾಗಿವೆ ಇಲ್ಲವೆ ಕಣ್ಮರೆಯಾಗುತ್ತಿವೆ. ಅವೈಜ್ಞಾನಿಕವಾಗಿ ಕೊಳವೆ ಬಾವಿಗಳನ್ನು ತೋಡಿ ನೀರಿನ ಅತೀ ಬಳಕೆಯಿಂದ ಅಂತರ್ಜಲದ ಮಟ್ಟ ಸಾವಿರ ಅಡಿ ಆಳಕ್ಕೂ ಹೆಚ್ಚು ಇಳಿದಿದೆ.

ಪರಿಸ್ಥಿತಿ ಹೀಗಿರುವಾಗ ಜಲಸಂರಕ್ಷಣೆ ಸದ್ಯದ ಅಗತ್ಯವಾಗಿದೆ. ಮಳೆಯಿಂದ ಬಿದ್ದ ನೀರು ಪೋಲಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಆ ಕ್ರಮಗಳು ಹೀಗಿವೆ:

ಕೆರೆ ಕಟ್ಟೆಗಳ ನಿರ್ವಹಣೆ

ಭಾರತದ ಪ್ರತಿಯೊಂದು ಹಳ್ಳಿಯಲ್ಲಿ ನೀರಿನ ಶೇಖರಣೆಗಾಗಿ ಕೆರೆ-ಕಟ್ಟೆಗಳಿವೆ. ಇವು ಕಾಲಕ್ರಮೇಣ ಹೂಳು ಹಾಗೂ ಜಲಸಸ್ಯಗಳಿಂದ ಆವೃತಗೊಂಡು ನೀರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗುತ್ತಿವೆ. ಇದರಿಂದ ಅಂತರ್ಜಲ ಮಟ್ಟ ಸಹ ಕಡಿಮೆಯಾಗುತ್ತಿದೆ.

ಕೆರೆ-ಕಟ್ಟೆಗಳ ಹೂಳು ತೆಗೆಯಲು ಜನಸಮೂಹ/ಸರ್ಕಾರ ಎಚ್ಚೆತ್ತುಕೊಂಡು ತೊಡಗಿಸಿಕೊಳ್ಳಬೇಕು. ಇಂತಹ ಕಾರ್ಯ ಮೂರು ವರ್ಷಗಳಿಗೊಮ್ಮೆ ನಡೆದಲ್ಲಿ ಕೆರೆ ಕಟ್ಟೆಗಳಲ್ಲಿ ನೀರಿನ ಸಮರ್ಪಕ ನಿರ್ವಹಣೆ ಮಾಡಿದಂತಾಗುತ್ತದೆ. ಅಲ್ಲದೆ ಅಂತರ್ಜಲವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ವಿವಿಧ ಜಾತಿಯ ಮೀನು ಕೃಷಿ ಕೈಗೊಂಡು ಮೀನು ಉತ್ಪಾದನೆಯಲ್ಲಿ ಯಶಸ್ಸನ್ನು ಕಾಣಬಹುದು.

ಅರಣ್ಯ ಸಂಪತ್ತು ನಿರ್ವಹಣೆ

ಯಾವುದೇ ಒಂದು ದೇಶದ ಭೂಪ್ರದೇಶಕ್ಕೆ ಶೇ 33ರಷ್ಟು ಅರಣ್ಯ ಪ್ರದೇಶವಿರಬೇಕು. ಆದರೆ ಈ ಪ್ರದೇಶ ಕ್ಷೀಣಿಸಿ ಪರಿಸರದ ಏರುಪೇರಿನಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತಲಿದೆ. ಸಾಮಾಜಿಕ ಅರಣ್ಯಗಳನ್ನು, ನೆಡುತೋಪುಗಳನ್ನು ದೇವರ ಕಾಡುಗಳೆಂದು ಗುರುತಿಸಿ ಮರ ನೆಡುವುದರ ಮೂಲಕ ಅರಣ್ಯ ಸಂವರ್ಧನೆ ಹಾಗೂ ಜಲಸಂವರ್ಧನೆಗೆ ಪ್ರತಿಯೊಬ್ಬರು ಭಾಗಿಯಾಗಬೇಕು.

ಕೃಷಿ ಹೊಂಡಗಳ ನಿರ್ಮಾಣ

ಇತ್ತೀಚಿನ ದಿನಗಳಲ್ಲಿ ಕೃಷಿ ಹೊಂಡಗಳು ಜಲ ಸಂರಕ್ಷಣೆ ವಿಧಾನಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಭೂಹಿಡುವಳಿದಾರರು ತಮ್ಮ ಜಮೀನಿನಲ್ಲಿ ತಗ್ಗು ಪ್ರದೇಶದಲ್ಲಿ ಸುಮಾರು 12 ಮೀ x 12 ಮೀ x 3 ಮೀ ಅಳತೆಯ ಕೃಷಿಹೊಂಡ ನಿರ್ಮಿಸುವ ಮೂಲಕ ಮಳೆಯ ನೀರು ಪೋಲಾಗದಂತೆ ಸಂಗ್ರಹಿಸಿಟ್ಟು ಕೊಳ್ಳಬಹುದು. ಕೃಷಿ ಹೊಂಡದಲ್ಲಿ ಸಂಗ್ರಹವಿರುವ ನೀರನ್ನು ಬೆಳೆಗಳಿಗೆ ಮರು ಉಪಯೋಗ ಮಾಡುವುದರಿಂದ ಬೆಳೆ ಬೆಳೆಯಲು ಸಹಕಾರಿ. ಜೊತೆಗೆ ಮೀನು ಉತ್ಪಾದನೆ ಮಾಡಬಹುದು.

ಬದುಗಳ ವ್ಯವಸ್ಥೆ

ಕೃಷಿಭೂಮಿಯಲ್ಲಿ ಸಾಮಾನ್ಯ ಇಳಿಜಾರು ಅಥವಾ ಹೆಚ್ಚು ಇಳಿಜಾರುಗಳಿದ್ದಲ್ಲಿ ಬಿದ್ದ ಮಳೆನೀರು ರಭಸವಾಗಿ ಹರಿದು ಮಣ್ಣಿನ ಸವಕಳಿಯನ್ನು ಹೆಚ್ಚಿಸುತ್ತದೆ. ಇಂತಹ ಭೂಮಿಗಳಲ್ಲಿ ಬದುಗಳು ಹೆಚ್ಚು ಸಹಕಾರಿಯಾಗಿ ಕಂಡು ಬರುತ್ತವೆ. ಕೃಷಿಭೂಮಿ ತನ್ನ ಇಳಿಜಾರುವಿನಲ್ಲಿ ಶೇ 5ಕ್ಕಿಂತ ಕಡಿಮೆ ಇದ್ದು, ಇಂತಹ ಭೂಮಿಯ ಇಳಿಜಾರಿಗೆ ಅಡ್ಡಲಾಗಿ ಸಮ ಪಾತಾಳಿ ಬದುಗಳನ್ನು ಹಾಗೂ ಹೆಚ್ಚು ಇಳಿಜಾರು ಇರುವ ಕೃಷಿ ಭೂಮಿಗೆ ಬೆಂಚು ಬದುಗಳನ್ನು ನಿರ್ಮಿಸಿ ಹರಿದು ಹೋಗುವ ಮಳೆ ನೀರನ್ನು ಭೂಮಿಯಲ್ಲಿಯೇ ಸಂರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ ಹನಿ ನೀರಾವರಿ ಪದ್ಧತಿಯಿಂದ ಬೆಳೆಗಳಿಗೆ ನೀರುಣಿಸುವ ಮೂಲಕ ಜಲ ಸಂರಕ್ಷಣೆ ಸಾಧಿಸಬಹುದು.

ಚೆಕ್ ಡ್ಯಾಮ್‍ ವ್ಯವಸ್ಥೆ

ಬಹುದೊಡ್ಡ ಹಳ್ಳಿಗಳಲ್ಲಿ ಮಳೆನೀರು ಹರಿದು ಮುಂದೆ ಸಾಗುತ್ತಿರುತ್ತದೆ. ಇದಕ್ಕೆ ಕಡಿವಾಣದಂತೆ ಹಳ್ಳಿಗಳ ತಗ್ಗು ಪ್ರದೇಶಗಳಲ್ಲಿ ಅಡ್ಡಲಾಗಿ ನಿಂತು ಮುಂದೆ ಸಾಗುತ್ತಿರುತ್ತದೆ. ಇಂತಹ ವಿಧಾನಗಳು ಇಂಗು ತೊಟ್ಟಿಯಂತೆ ಕಾರ್ಯ ನಿರ್ವಹಿಸಿ ಜಲ ಸಂವರ್ಧನೆಗೆ ನಾಂದಿಯಾಗಬಲ್ಲದು, ಜೊತೆಗೆ ದನ ಕರುಗಳಿಗೆ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸಿದಂತಾಗುತ್ತದೆ.

ಚಾವಣಿ ನೀರಿನ ಸಂಗ್ರಹ

ನೀರಿನ ಬೆಲೆಯನ್ನು ಕಂಡುಕೊಂಡು ನಾವು ಇತ್ತೀಚಿನ ದಿನಗಳಲ್ಲಿ ಮನೆಯ ಚಾವಣಿಗಳಲ್ಲಿ ಬಿದ್ದ ಮಳೆನೀರನ್ನು ಸಂರಕ್ಷಿಸಿಕೊಳ್ಳಲು ಮುಂದಾಗಿದ್ದೇವೆ. ಒಂದು ಅಧ್ಯಯನದಂತೆ ಸುಮಾರು 10 ಚದರ ವಿಸ್ತೀರ್ಣದ ಮನೆಯ ಮೇಲೆ ಬಿದ್ದ ಮಳೆನೀರನ್ನು ಸಂಗ್ರಹಿಸಿದರೆ ವರ್ಷದಲ್ಲಿ ಸುಮಾರು 80,000 ಲೀಟರ್ ನೀರು ಸಂಗ್ರಹವಾಗುತ್ತದೆ. ಹಾಗೆಯೇ ಐದು ಜನರಿರುವ ಒಂದು ಕುಟುಂಬಕ್ಕೆ ಕನಿಷ್ಠ 400 ಲೀಟರ್ ನೀರು ಪ್ರತಿನಿತ್ಯ ಬಳಕೆಗೆ ಬೇಕಾಗುತ್ತದೆಂದು ಅಂದಾಜಿಸಲಾಗಿದೆ. ಅಂದರೆ ಸುಮಾರು ಆರು ತಿಂಗಳ ಕಾಲ ಸಂಗ್ರಹಿಸಿದ ಮಳೆ ನೀರನ್ನು ಉಪಯೋಗ ಮಾಡಿಕೊಳ್ಳಬಹುದು. ಅರಣ್ಯ ಸಂರಕ್ಷಣೆಗೆ ಇನ್ನು ಹಲವಾರು ವಿಧಾನಗಳು ಇದ್ದರೂ, ವ್ಯವಸ್ಧಿತವಾಗಿ ಕೆಲವನ್ನಾದರೂ ಮನವರಿಕೆ ಮಾಡಿಕೊಂಡು ಅನುಷ್ಠಾನಗೊಳಿಸಿಕೊಳ್ಳುತ್ತ ಬಂದರೆ ನೆಲ ಹಸಿರಾಗಿರುತ್ತದೆ, ಗಿಡಗಳು ಚಿಗುರೊಡೆಯುತ್ತವೆ. ಅರಣ್ಯ ಸಂವರ್ಧನೆಗೊಳ್ಳುತ್ತಲೇ ಇರುತ್ತದೆ. 

ಇಂಗು ಗುಂಡಿ ನಿರ್ಮಾಣ

ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಿದಂತೆಲ್ಲ ಅಂತರ್ಜಲ ಇಳಿಮುಖಗೊಂಡು ಸಾಕಷ್ಟು ಕೊಳವೆ ಬಾವಿಗಳು ವಿಫಲವಾಗಿರುವುದನ್ನು ಕಾಣುತ್ತಿದ್ದೇವೆ. ಇಂತಹ ಕೊಳವೆ ಬಾವಿಗಳಿಂದ ಅಂತರ್ಜಲ ಮರು ಸಂವರ್ಧನೆಗೆ ಪ್ರಯತ್ನಗಳು ನಡೆದಿರುತ್ತವೆ. ಅಂತಹ ಕೊಳವೆ ಬಾವಿಗಳ ಕೇಸಿಂಗ್ ಸುತ್ತ ಸುಮಾರು 7 ಅಡಿ ವ್ಯಾಸದ ಹಾಗೂ 10 ಅಡಿ ಆಳದ ಇಂಗು ಗುಂಡಿಯನ್ನು ನಿರ್ಮಿಸತಕ್ಕದ್ದು. ಕೇಸಿಂಗ್ ಪೈಪುಗಳಿಗೆ ಚ್ಯುತಿ ಬಾರದಂತೆ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿ, ಮಳೆಯಿಂದ ಬಿದ್ದ ನೀರು ನೇರವಾಗಿ ಇಂಗು ಗುಂಡಿಗೆ ಬೀಳುವಂತೆ ಕಾಲುವೆಗಳನ್ನು ತೋಡಿರಬೇಕು. ಮಳೆಗಾಲದಲ್ಲಿ ಬಿದ್ದ ನೀರು ಪೋಲಾಗದೆ ಇಂಗು ಗುಂಡಿ ಮೂಲಕ ಅಂತರ್ಜಲ ಮರು ಸಂವರ್ಧನೆಗೆ ಸಹಾಯಕವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry