ಚರಂಡಿಯಾದ ಲೋಕಾಪುರ ಹಳ್ಳ

7

ಚರಂಡಿಯಾದ ಲೋಕಾಪುರ ಹಳ್ಳ

Published:
Updated:
ಚರಂಡಿಯಾದ ಲೋಕಾಪುರ ಹಳ್ಳ

ಲೋಕಾಪುರ: ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಜೀವಜಲವಾಗಿದ್ದ ಲೋಕಾಪುರ ಹಳ್ಳ ಇಂದು ತ್ಯಾಜ್ಯ ಸಂಗ್ರಹಣ ಕೇಂದ್ರವಾಗಿದೆ.

ರಾಯಚೂರು–ಬೆಳಗಾವಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದುವ ಹಳ್ಳ, ಪಟ್ಟಣದ ಒಳಚರಂಡಿ ನೀರು, ತ್ಯಾಜ್ಯ ಶೇಖರಣೆಯ ತಾಣವಾಗಿದೆ. ಗಲೀಜು, ದುರ್ಗಂಧದಿಂದ ಕೂಡಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಸಾಂಕ್ರಾಮಿಕ ರೋಗಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಸುತ್ತಲೂ ಮುಳ್ಳು ಕಂಟಿಗಳು ಬೆಳೆದ ಕಾರಣ ಹಳ್ಳ ಕಾಣುವುದೇ ಇಲ್ಲ!

ಸುಮಾರು ವರ್ಷಗಳ ಹಿಂದೆ ಈ ಹಳ್ಳವೇ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ನೀರಿಗೆ ಮೂಲ ಸೆಲೆಯಾಗಿತ್ತು. ದನಕರುಗಳಿಗೆ ಕುಡಿಯಲು ನೀರು, ಬಟ್ಟೆ ತೊಳೆಯಲು, ರೈತರು ಈ ಹಳ್ಳದ ನೀರಿನಿಂದಲೇ ತಮ್ಮ ಹೊಲಗಳಿಗೆ ನೀರು ಪಡೆದುಕೊಂಡು ಬೆಳೆ ಬೆಳೆಯುತ್ತಿದ್ದರು. ಈ ಹಳ್ಳ ಬೇಸಿಗೆಯಲ್ಲಿಯೂ ಬತ್ತುತ್ತಿರಲಿಲ್ಲ.

‘ವರ್ಚಗಲ್ ಕೆರೆಯಿಂದ ಲೋಕಾಪುರ ಹಳ್ಳಕ್ಕೆ ನೀರು ಹರಿಸಿದರೆ, ನೂರಾರು ಎಕರೆ ಭೂಮಿಗೆ ನೀರು ಸಿಗುತ್ತದೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಸಂಬಂಧಿಸಿದವರು ಆದಷ್ಟು ಬೇಗನೆ ಕ್ರಮ ಕೈಗೊಳ್ಳಬೇಕು’ ಎಂದು ಚೌಡಾಪುರ ಗ್ರಾಮದ ರೈತ ಅರ್ಜುನ ಮಾಳಿ ಹೇಳುತ್ತಾರೆ.

‘ಬಸ್ ನಿಲ್ದಾಣದ ಎದುರಿಗೆ ಇರುವ ಹೋಟೆಲ್‌ಗಳು, ಖಾನಾವಳಿಗಳ ಎಲ್ಲ ತರಹದ ತ್ಯಾಜ್ಯಗಳನ್ನು ಈ ಹಳ್ಳದಲ್ಲಿಯೇ ಹಾಕುತ್ತಾರೆ. ಈ ತ್ಯಾಜ್ಯವನ್ನು ಬೇರೆ ಕಡೆ ಹಾಕುವ ವ್ಯವಸ್ದೆ ಗ್ರಾಮ ಪಂಚಾಯ್ತಿಯಿಂದ ಆಗಬೇಕಾಗಿದೆ’ ಎಂದು ಈಶ್ವರ ಪಾಟೀಲ ಹೇಳುತ್ತಾರೆ.

ಇದರ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆರ್‌.ಕೆ. ಮಹೇಂದ್ರಕರ ‘ಹಳ್ಳದ ಸ್ವಚ್ಚತೆ ಬಗ್ಗೆ ಗ್ರಾಮ ಪಂಚಾಯ್ತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry