ಮನೆ ಖರೀದಿದಾರರಿಗೆ ವರವಾದ ನಿರ್ಧಾರ

7
ದಿವಾಳಿ ಸಂಹಿತೆ ತಿದ್ದುಪಡಿಗೆ ಕೇಂದ್ರ ಸಂಪುಟ ಅಸ್ತು

ಮನೆ ಖರೀದಿದಾರರಿಗೆ ವರವಾದ ನಿರ್ಧಾರ

Published:
Updated:

ನವದೆಹಲಿ: ದಿವಾಳಿ ಸಂಹಿತೆಯ (ಐಬಿಸಿ) ತಿದ್ದುಪಡಿಗಳಿಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಇದರಿಂದಾಗಿ, ದಿವಾಳಿ ಅಂಚಿನಲ್ಲಿರುವ ರಿಯಲ್‌ ಎಸ್ಟೇಟ್‌ ಕಂಪನಿಗಳಿಂದ ಮನೆಗಳನ್ನು ಖರೀದಿಸಿದವರಿಗೆ ಅನುಕೂಲ ಆಗಲಿದೆ.

ಮನೆ ಖರೀದಿಯ ಉದ್ದೇಶದಿಂದ ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ಹಣ ನೀಡಿದ ಮನೆ ಖರೀದಿದಾರರನ್ನು ಆ ಕಂಪನಿಗೆ ಸಾಲ ನೀಡಿದ ಹಣಕಾಸು ಸಂಸ್ಥೆಗಳಿಗೆ ಸಮಾನವಾಗಿ ಪರಿಗಣಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಮನೆ ಖರೀದಿದಾರರು ದಿವಾಳಿಯಾದ ಕಂಪನಿಯಿಂದ ತ್ವರಿತವಾಗಿ ಹಣ ಪಡೆಯಲು ಸಾಧ್ಯವಾಗಲಿದೆ.

ಸಂಹಿತೆಯನ್ನು ‍ಪರಿಶೀಲಿಸಲು 14 ಸದಸ್ಯರ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ಸಮಿತಿಯ ಶಿಫಾರಸುಗಳ ಅನ್ವಯ ತಿದ್ದುಪಡಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ದಿವಾಳಿಯಾದ ಕಂಪನಿಯಿಂದ ಮನೆ ಖರೀದಿದಾರರು ಸುಲಭವಾಗಿ ಹಣ ಪಡೆಯಲು ಸಾಧ್ಯವಾಗುವಂತಹ ನಿಯಮ ರೂಪಿಸಬೇಕು ಎಂಬುದು ಸಮಿತಿಯ ಸಲಹೆಯಾಗಿತ್ತು.

ದಿವಾಳಿ ಪ್ರಕ್ರಿಯೆಯಲ್ಲಿ ಮನೆ ಖರೀದಿಗಾಗಿ ಹಣ ಪಾವತಿ ಮಾಡಿದವರಿಗೂ ಸಮಾನ ಪ್ರಾತಿನಿಧ್ಯ ಸಿಗಲಿದೆ. ಜೇಪೀ ಇನ್‌ಫ್ರಾಟೆಕ್‌ನಂತಹ ರಿಯಲ್‌ ಎಸ್ಟೇಟ್‌ ಕಂಪನಿಗಳ ದಿವಾಳಿ ಪ್ರಕ್ರಿಯೆ ಆರಂಭವಾಗಿದೆ.

ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಸಹಿ ಹಾಕಿದರೆ ಹೊಸ ನಿಯಮಗಳು ಜಾರಿಗೆ ಬರಲಿವೆ. ಅರ್ಧಕ್ಕೆ ನಿಂತುಹೋದ ಮನೆ ನಿರ್ಮಾಣ ಯೋಜನೆಗಳಿಂದ ತೊಂದರೆಗೊಳಗಾದ ಗ್ರಾಹಕರ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿನ ಪರಿಹಾರವನ್ನು ಇದು ನೀಡಲಿದೆ.

ವಿನಾಯಿತಿ: ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೆ ವಿವಾದ ಪರಿಹಾರ ಪ್ರಕ್ರಿಯೆಯ ಹಲವು ನಿಬಂಧನೆಗಳಿಂದ ವಿನಾಯಿತಿ ನೀಡಲಾಗಿದೆ. ಉದ್ದೇಶಪೂರ್ವಕ ಸುಸ್ತಿದಾರರನ್ನು ಬಿಟ್ಟು ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳ ಮಾಲೀಕರು ಪರಿಹಾರ ಪ್ರಕ್ರಿಯೆಯಲ್ಲಿ ತಮ್ಮದೇ ಕಂಪನಿಯನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಇದರಿಂದಾಗಿ ದಿವಾಳಿಯಾದ ಕಂಪನಿಯ ಪುನಶ್ಚೇತನ ಸಾಧ್ಯವಾಗಲಿದೆ ಎಂಬ ಬಗ್ಗೆ ಸಂಪುಟದಲ್ಲಿ ಚರ್ಚೆಯಾಗಿದೆ ಎಂದು ಮೂಲಗಳು ಹೇಳಿವೆ.

ದಿವಾಳಿ ಸಂಹಿತೆಯ ಅಡಿಯಲ್ಲಿ, ಪಾವತಿಯಾಗದ ಸಾಲದ ಸಮಸ್ಯೆ ಪರಿಹಾರ ಪ್ರಕ್ರಿಯೆಗೆ ಸಾಕಷ್ಟು ಯಶಸ್ಸು ಸಿಕ್ಕಿದೆ. ಈ ಸಂಹಿತೆಯ ಪ್ರಕಾರವೇ ಭೂಷಣ್‌ ಸ್ಟೀಲ್‌ ಕಂಪನಿಯನ್ನು ಟಾಟಾ ಸ್ಟೀಲ್‌ ಖರೀದಿ ಮಾಡಿದೆ. ಇದರಿಂದಾಗಿ ಸಾಲ ನೀಡಿದ ಬ್ಯಾಂಕುಗಳಿಗೆ ₹36,400 ಕೋಟಿ ಹಣ ಮರುಪಾವತಿ ಸಾಧ್ಯವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry