ಪಕ್ಷಿ ಸಂಕುಲಕ್ಕೆ ಅನ್ನ, ನೀರಿನ ಸೇವೆ

7
ದತ್ತ ಗಜಾನನ ಮಂಡಳಿಯ ಅನನ್ಯ ಕಾಯಕ

ಪಕ್ಷಿ ಸಂಕುಲಕ್ಕೆ ಅನ್ನ, ನೀರಿನ ಸೇವೆ

Published:
Updated:
ಪಕ್ಷಿ ಸಂಕುಲಕ್ಕೆ ಅನ್ನ, ನೀರಿನ ಸೇವೆ

ಚಿಕ್ಕೋಡಿ: ಬಿಸಿಲಿನ ಬೇಗೆಯಲ್ಲಿ ಅನ್ನ, ನೀರು ಅರಸುತ್ತಾ ಹಾರಾಡುವ ಪಕ್ಷಿ ಸಂಕುಲಕ್ಕೆ ತಾಲ್ಲೂಕಿನ ಯಕ್ಸಂಬಾ ಪಟ್ಟಣದ ದತ್ತ ಗಜಾನನ ಮಂಡಳ ನೀರು ಹಾಗೂ ಆಹಾರ ವ್ಯವಸ್ಥೆ ಕಲ್ಪಿಸುತ್ತಿದ್ದು, ನಿತ್ಯವೂ ಸಾವಿರಾರು ಪಕ್ಷಿಗಳು ಇಲ್ಲಿ ಅನ್ನ, ನೀರು ಸೇವಿಸುತ್ತಿವೆ.

ಹೆಚ್ಚುತ್ತಿರುವ ನಗರೀಕರಣ ಪರಿಸರ ಮಾಲಿನ್ಯಕ್ಕೆ ಕಾರಣವಾಗಿ ಪರಿಸರ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಾಡು ನಾಶ ಮಾಡಿ ಕಾಂಕ್ರೀಟ್‌ ರಸ್ತೆಗಳ ಅಬ್ಬರ ಹೆಚ್ಚಾಗಿದೆ. ಪ್ರಾಣಿ, ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿವೆ. ಪಕ್ಷಿ ಸಂಕುಲ ಜೀವ ಜಲ ಮತ್ತು ಆಹಾರಕ್ಕಾಗಿ ಹಾಹಾಕಾರ ಪಡುವಂತಾಗಿದೆ.

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪಕ್ಷಿ ಸಂಕುಲ ಸಂರಕ್ಷಣೆಗಾಗಿ ಯಕ್ಸಂಬಾ ಪಟ್ಟಣದ ದತ್ತ ಗಜಾನನ ಮಂಡಳ ಅಳಿಲು ಸೇವೆ ಸಲ್ಲಿಸುತ್ತಿದ್ದು, ದತ್ತ ಮಂದಿರದ ಆವರಣದಲ್ಲಿರುವ ಅತ್ತಿ ಮರದ ಟೊಂಗೆಗಳಿಗೆ ದವಸ, ಧಾನ್ಯ ತುಂಬಿದ ಪೆಟ್ಟಿಗೆ ಮತ್ತು ನೀರು ತುಂಬಿದ ಮಡಿಕೆಗಳನ್ನು ನೇತು ಬಿಡುತ್ತಿದ್ದು, ಹಸಿವು ಮತ್ತು ದಾಹದಿಂದ ಬರುವ ಪಕ್ಷಿಗಳು ಇಲ್ಲಿ ಹೊಟ್ಟೆ ತುಂಬ ಆಹಾರ ಸೇವಿಸಿ, ನೀರು ಕುಡಿದು ಸಂತ್ರಪ್ತರಾಗುತ್ತಿವೆ.

‘ಪಕ್ಷಿ ಸಂಕುಲ ಸಂರಕ್ಷಿಸಿ, ಪಕ್ಷಿ ಸಂಕುಲ ಸಂವರ್ಧಿಸಿ’ ಧ್ಯೇಯ ವಾಕ್ಯದೊಂದಿಗೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ಅನ್ನ, ನೀರು ಉದ್ದೇಶ ಹೊಂದಿರುವ ದತ್ತ ಗಜಾನನ ಮಂಡಳದ ಕಾರ್ಯಕರ್ತರು ನಿತ್ಯವೂ ಅತ್ತಿ ಮರವೇರಿ ಪೆಟ್ಟಿಗೆಯಲ್ಲಿ ದವಸ ಧಾನ್ಯ ಮತ್ತು ಮಡಿಕೆಗಳಲ್ಲಿ ನೀರು ಹಾಕುತ್ತಾರೆ. ಕಳೆದ ಸುಮಾರು ಮೂರು ತಿಂಗಳುಗಳಿಂದ ಯುವಕರು ಈ ಸೇವಾ ಕಾರ್ಯದಲ್ಲಿ ತೊಡಗಿದ್ದು, ಮರದಲ್ಲಿ ನಿತ್ಯವೂ ಹತ್ತಾರು ಪ್ರಭೇದಗಳ ಪಕ್ಷಿಗಳು ಜಮಾವಣೆಗೊಂಡು ಆಹಾರ, ನೀರು ಸೇವಿಸುತ್ತಿದ್ದು, ಇಡೀ ಪರಿಸರದಲ್ಲಿ ಪಕ್ಷಿಗಳ ಕಲರವ ಕೇಳಿ ಬರುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷಿ ಸಂಕುಲ ಸಂರಕ್ಷಣೆ ಮತ್ತು ಸಂವರ್ಧನೆ ಕುರಿತು ಹರಿದು ಬಂದ ಸಂದೇಶಗಳೇ ದತ್ತ ಗಜಾನನ ಮಂಡಳದ ಈ ಸೇವಾ ಕಾರ್ಯಕ್ಕೆ ಪ್ರೇರಣೆ. ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಪಕ್ಷಿ ಸಂಕುಲ ಸಂರಕ್ಷಣೆ ಕುರಿತ ಸಂದೇಶಗಳನ್ನು ಗಂಭೀರವಾಗಿ ಪರಿಗಣಿಸಿದ ಮಂಡಳದ ಕಾರ್ಯಕರ್ತರು ಸಭೆ ಸೇರಿ, ಚರ್ಚೆ ನಡೆಸಿದರು. ಒಮ್ಮತದ ನಿರ್ಣಯದಂತೆ ನಿತ್ಯವೂ ದತ್ತ ಮಂದಿರದ ಅತ್ತಿ ಮರದಲ್ಲಿ ಪಕ್ಷಿಗಳಿಗೆ ಆಹಾರ, ನೀರು ಒದಗಿಸುವಲ್ಲಿ ಕಾರ್ಯತತ್ಪರಗಾಗಿದ್ದು, ಸಸಿಗಳನ್ನು ನೆಟ್ಟು, ಅವುಗಳ ಪಾಲನೆ–ಪೋಷಣೆಗೂ ಮಂಡಳ ಮುಂದಾಗುತ್ತಿದೆ.

ಸುಧಾಕರ ತಳವಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry