‘ನಿಫಾ ವೈರಾಣು’: ಜಿಲ್ಲೆಯಾದ್ಯಂತ ಕಟ್ಟೆಚ್ಚರ

7
ಜಿಲ್ಲೆಯಲ್ಲಿ ರೋಗ ಬಾರದಂತೆ ಮುಂಜಾಗ್ರತಾ ಕ್ರಮ: ಜಿಲ್ಲಾಧಿಕಾರಿ ಶಾಂತಾರಾಮ್

‘ನಿಫಾ ವೈರಾಣು’: ಜಿಲ್ಲೆಯಾದ್ಯಂತ ಕಟ್ಟೆಚ್ಚರ

Published:
Updated:

ಬಾಗಲಕೋಟೆ: ‘ನಿಫಾ ವೈರಾಣು ಮಾರಣಾಂತಿಕ ಸೋಂಕು ರೋಗವಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಬಾವಲಿಗಳ ಸಂಖ್ಯೆ ಹೆಚ್ಚಾಗಿದ್ದು, ಆ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಿಫಾ ವೈರಾಣು ಸೋಂಕಿಗೆ ಯಾವುದೇ ರೀತಿಯ ಚಿಕಿತ್ಸೆ ಅಥವಾ ಔಷಧಗಳಿಲ್ಲ. ಇದು ಹರಡದಂತೆ ಮುಂಜಾಗ್ರತೆ ವಹಿಸಬೇಕು’ ಎಂದರು.

‘ಈ ವೈರಾಣು ಸೋಕಿಂತ ವ್ಯಕ್ತಿಯ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ರಕ್ತ ತಪಾಸಣಾ ಕೇಂದ್ರಕ್ಕೆ ಕಳಿಸಬೇಕಾಗುತ್ತದೆ. ಅಲ್ಲಿಂದ ವರದಿ ಬಂದ ಮೇಲೆಯೇ ಅದು ನಿಫಾ ವೈರಾಣು ಎಂಬುದು ದೃಢೀಕರಿಸಲಾಗುತ್ತದೆ. ಆದರೆ ಖಾಸಗಿ ವೈದ್ಯರು ಯಾವುದೇ ರೀತಿಯ ನಿಫಾ ವೈರಾಣು ತಗುಲಿದೆ ಎಂಬ ಬಗ್ಗೆ ಘೋಷಣೆ ಮಾಡುವಂತಿಲ್ಲ’ ಎಂದರು.

‘ನಿಫಾ ವೈರಾಣು ಸೋಂಕಿಗೆ ತುತ್ತಾದ ರೋಗಿಯ ಆರೈಕೆ ಮಾಡುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ ಮತ್ತು ಕೈಗವಸುಗಳನ್ನು ಧರಿಸಿ ಸ್ವಚ್ಛತೆಗೆ ಹೆಚ್ಚು ಗಮನ ಕೊಡಬೇಕು. ಹಣ್ಣು ಮಾರುವವರು ಹಣ್ಣುಗಳನ್ನು ಶುಚಿಗೊಳಿಸಿ ಮಾರಾಟ ಮಾಡಬೇಕು’ ಎಂದು ಹೇಳಿದರು.

‘ಈ ಸೋಂಕು ತಗುಲಿದವರಲ್ಲಿ ಶೇ 75ರಷ್ಟು ರೋಗಿಗಳು ಮರಣ ಹೊಂದುತ್ತಿದ್ದಾರೆ. ನೆರೆಯ ಕೇರಳ ರಾಜ್ಯದಲ್ಲಿ ಈ ಸೋಂಕು ಕಂಡುಬಂದಿದೆ. ಜಿಲ್ಲೆಯಲ್ಲಿ ಈ ಸೋಂಕು ಹರಡದಂತೆ ನಿಗಾ ವಹಿಸಲಾಗಿದೆ’ ಎಂದು ಶಾಂತಾರಾಮ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಂತ ದೇಸಾಯಿ ಮಾತನಾಡಿ, ‘ಜಿಲ್ಲೆಯ ಪ್ರವಾಸಿ ತಾಣಗಳಾದ ಐಹೊಳೆ, ಪಟ್ಟದಕಲ್ಲು ಹಾಗೂ ಬಾದಾಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾವಲಿಗಳು ಕಂಡುಬಂದಿದ್ದರಿಂದ ಆ ಸ್ಥಳಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಾದಾಮಿಯ ಅಗಸ್ತ್ಯ ತೀರ್ಥ ಹೊಂಡಕ್ಕೆ ಬಾವಲಿಗಳು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಲು ಆಗಮಿಸುವುದರಿಂದ ಆ ನೀರನ್ನು ಬಳಕೆ ಮಾಡದಂತೆ ಜಾಗೃತಿ ಫಲಕಗಳನ್ನು ಅಳವಡಿಸುವದರ ಜೊತೆಗೆ ಹೊಂಡಕ್ಕೆ ಸಾರ್ವಜನಿಕರು ಬರದಂತೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದರು.

‘ಕೇರಳದಿಂದ 246 ವಿದ್ಯಾರ್ಥಿಗಳು ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ನರ್ಸಿಂಗ್‌

ನಂಥ ಉನ್ನತ ಶಿಕ್ಷಣವನ್ನು ಜಿಲ್ಲೆಯಲ್ಲಿ ಪಡೆಯುತ್ತಿದ್ದಾರೆ. ಅವರನ್ನು ಸದ್ಯ ಕೇರಳಕ್ಕೆ ಹೋಗದಂತೆ ಸೂಚನೆ ನೀಡಲಾಗಿದೆ. ಗ್ರಾಮಗಳಲ್ಲಿರುವ ಆಶಾ ಕಾರ್ಯಕರ್ತರು ಮನೆಮನೆಗೆ ತೆರಳಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ಹಂದಿ ಸಾಕಾಣಿಕೆ ಮಾಡುವವರಿಗೆ ಪಶು ಸಂಗೋಪನಾ ಇಲಾಖೆಯಿಂದ ಮುಂಜಾಗ್ರತೆ ಕ್ರಮದ ಬಗ್ಗೆ ಮಾಹಿತಿ ನೀಡಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಎರಡು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ 5 ಬೆಡ್ಡಿನ ವಾರ್ಡ್‌ಗಳನ್ನು ತೆರೆಯಲಾಗಿದೆ. ಸಂಶಯಾಸ್ಪದ ರೋಗಿಗಳು ಕಂಡುಬಂದಲ್ಲಿ ಸ್ಯಾಂಪಲ್ ತೆಗೆದುಕೊಳ್ಳಲು ಬೇಕಾದ ದಾಸ್ತಾನು ಮಾಡಲಾಗಿದೆ. ಅಲ್ಲದೇ ರಾಜ್ಯ ಮಟ್ಟದಲ್ಲಿ 104 ಸಹಾಯವಾಣಿ ತೆಗೆಯಲಾಗಿದೆ. ಸಾರ್ವಜನಿಕರು ಕರೆ ಮಾಡಬಹುದಾಗಿದೆ. ಕೇರಳ, ಮಂಗಳೂರು ಹಾಗೂ ಉಡುಪಿಯಿಂದ ಈಚೆಗೆ ಮರಳಿದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅವರಲ್ಲಿ ಸಂಶಯಾಸ್ಪದ ಲಕ್ಷಣಗಳು ಕಂಡು ಬಂದರೆ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಲು ಮಾಹಿತಿ ನೀಡಲಾಗಿದೆ’ ಎಂದು ಡಾ.ಅನಂತ ದೇಸಾಯಿ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ವಂಶಿಕೃಷ್ಣ ಹಾಜರಿದ್ದರು.

‘ಮಕ್ಕಳ ಕಳ್ಳರು’, ಕೇವಲ ವದಂತಿ: ಎಸ್‌ಪಿ

ರಾಜ್ಯಕ್ಕೆ ಮಕ್ಕಳು ಕಳ್ಳರು ಬಂದಿದ್ದಾರೆ ಎಂದು ಹರಡಿರುವ ಸುದ್ದಿ ಕೇವಲ ವದಂತಿ ಅಷ್ಟೆ. ಸಾರ್ವಜನಿಕರು ಅಂತಹ ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ವಂಶಿಕೃಷ್ಣ ಮನವಿ ಮಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಅಪರಹರಣ ಪ್ರಕರಣಗಳ ಸುದ್ದಿ ಮತ್ತು ವಿಡಿಯೊ ತುಣುಕುಗಳನ್ನು ಹರಡಿಸುತ್ತಿರುವುದು ಮತ್ತು ಜನರಲ್ಲಿ ಭಯ ಮೂಡಿಸುತ್ತಿರುವುದು ಕೆಲವು ಕಿಡಿಗೇಡಿಗಳ ಕಾರ್ಯವಾಗಿದೆ. ಅಂತಹ ಸಂದೇಶಗಳನ್ನು ಹರಿಬಿಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಯಾವುದೇ ರೀತಿಯ ಮಕ್ಕಳ ಅಪಹರಣ ಪ್ರಕರಣಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಮತದಾರರನ್ನು ಗುರುತಿಸುವ ಕಾರ್ಯ ನಡೆದಿದೆ: ಡಿ.ಸಿ

ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಸಿದ್ದಪಡಿಸುವ ಕಾರ್ಯಕೈಗೊಳ್ಳಲಾಗಿದೆ. ಈಗಾಗಲೇ ವಾರ್ಡ್‌ ವಿಂಗಡಣೆ ಅಧಿಸೂಚನೆಯಂತೆ ಮತದಾರರನ್ನು ಗುರುತಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಹೇಳಿದರು.

ಮೇ 31 ರವರೆಗೆ ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ಗುರುತಿಸುವುದು. ಜೂನ್ 5ರಂದು ಪ್ರಥಮ ಚೆಕ್ಲಿಸ್ಟ್‌ನಂತೆ ವಾರ್ಡ್‌ವಾರು ಪರಿಶೀಲನೆ, 11 ರಂದು ಕರಡು ಪಟ್ಟಿ ಪ್ರಕಟಿಸಲಾಗುತ್ತದೆ. ಆಕ್ಷೇಪಣೆಗಳನ್ನು ಸಲ್ಲಿಸಲು ಜೂನ್ 17 ಕೊನೆಯ ದಿನವಾಗಿದ್ದು, ಅವುಗಳನ್ನು ಇತ್ಯರ್ಥಪಡಿಸಲು ಜೂನ್ 22 ಕೊನೆಯ ದಿನವಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಜೂನ್ 27 ರಂದು ಪ್ರಕಟಿಸಲಾಗುತ್ತದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry