3
ಕೊರಟಗೆರೆ, ಮಧುಗಿರಿ, ಪಾವಗಡ ತಾಲ್ಲೂಕುಗಳ ಜನರ ಅಳಲು; ನೌಕರರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಮಸ್ಯೆ

ಸಂಜೆ ವೇಳೆ ಜಿಲ್ಲಾ ಕೇಂದ್ರದಿಂದ ಬಸ್ಸಿಲ್ಲ!

Published:
Updated:

ತುಮಕೂರು: ಜಿಲ್ಲಾ ಕೇಂದ್ರವಾದ ತುಮಕೂರಿನಿಂದ ಕೊರಟಗೆರೆ, ಮಧುಗಿರಿ ಮತ್ತು ಪಾವಗಡಕ್ಕೆ ಹೋಗಲು ಸಂಜೆ 6.30ರ ನಂತರ ಬಸ್ಸುಗಳಿಲ್ಲ! ಅಷ್ಟೇ ಅಲ್ಲ. ಆ ಸಮಯದಲ್ಲಿ ಆ ತಾಲ್ಲೂಕು ಕೇಂದ್ರಗಳಿಂದಲೂ ಜಿಲ್ಲಾ ಕೇಂದ್ರಕ್ಕೆ ಒಂದೇ ಒಂದು ಬಸ್ ಇಲ್ಲ!

ಈ ಮೂರು ತಾಲ್ಲೂಕುಗಳ ಜನರು ಸಂಜೆಯಾಗುವುದರೊಳಗೆ ಊರು ಸೇರಿಕೊಳ್ಳಬೇಕು ಅಥವಾ ಬೇರೆ ಊರಿಗೆ ಹೋಗುವವರಿದ್ದರೆ ಸಂಜೆಯೊಳಗೇ ಹೋಗಬೇಕಾದ ಪರಿಸ್ಥಿತಿ ಇದೆ. ಅನೇಕ ವರ್ಷಗಳಿಂದ ಈ ಸಮಸ್ಯೆಯನ್ನು ಜನರು ಅನುಭವಿಸಿಕೊಂಡು ಬಂದಿದ್ದಾರೆ.

ತುಮಕೂರು– ಬಳ್ಳಾರಿ ರಾಜ್ಯ ಹೆದ್ದಾರಿಯಲ್ಲಿ ಮೂರು ತಾಲ್ಲೂಕು ಕೇಂದ್ರಗಳಿವೆ. ನಗರದಿಂದ ಬೆಳಿಗ್ಗೆ 5 ಗಂಟೆಗೆ ತುಮಕೂರಿನಿಂದ ಬಸ್ ಸಂಚಾರ ಪ್ರಾರಂಭ ಆಗುತ್ತದೆ. ಸಂಜೆ 6.30ರವರೆಗೆ ಮಾತ್ರ ಈ ಮಾರ್ಗದಲ್ಲಿ ಬಸ್ಸುಗಳು ಸಂಚರಿಸುತ್ತವೆ.

ಈ ಮೂರು ತಾಲ್ಲೂಕು ಕೇಂದ್ರಗಳಿಂದ ತುಮಕೂರು ನಗರಕ್ಕೆ ಸರ್ಕಾರಿ ನೌಕರರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಉದ್ಯೋಗ ಅರಸಿಕೊಂಡು ಸಾವಿರಾರು ಜನರು ಕೆಲಸಕ್ಕಾಗಿ ಬರುತ್ತಾರೆ.

ನಗರಕ್ಕೆ ಕೆಲಸಕ್ಕೆ ಬರುವ ಜನರು ವಾರಕ್ಕೆ ಒಂದು ಬಾರಿ, ಹದಿನೈದು ದಿನಗಳಿಗೊಮ್ಮೆ, ತಿಂಗಳಿಗೊಮ್ಮೆ ಊರಿಗೆ ಹೋಗುತ್ತಾರೆ. ಹಾಗೆ ಹೋಗಬೇಕೆಂದಾಗ ಸಂಜೆ ಬಸ್‌ಗಳು ಇಲ್ಲದೇ ಇರುವುದರಿಂದ ಬೆಳಗಿನ ತನಕ ಕಾದು ಹೋಗಬೇಕಾದ ಪರಿಸ್ಥಿತಿ ಇದೆ.

ಬದಲಿಸಬೇಕಿದೆ ಬಸ್‌ ವೇಳಾಪಟ್ಟಿ: ಕೇಂದ್ರ ಬಸ್‌ ನಿಲ್ದಾಣದಲ್ಲಿ ಇರುವ ಬಸ್ ವೇಳಾ ಪಟ್ಟಿ ಸರಿಯಾಗಿಲ್ಲ. ಈ ಪಟ್ಟಿ ಪ್ರಕಾರ ಸರಿಯಾಗಿ ಬಸ್ ಸಂಚರಿಸುವುದಿಲ್ಲ. ಹಳೆಯ ಪಟ್ಟಿಯನ್ನೇ ಪ್ರದರ್ಶಿಸಲಾಗಿದೆ. ಅಲ್ಲದೇ, ಸಮಯಕ್ಕೆ ಸರಿಯಾಗಿ ಬಸ್‌ ಹೊರಡುವುದಿಲ್ಲ ಎಂದು ಪ್ರಯಾಣಿಕರು ದೂರುತ್ತಾರೆ.

ಕೆಲವು ಬಸ್‌ಗಳ ತೆರಳುವ ಸಮಯ ಬದಲಾವಣೆ ಆಗಿರುವುದನ್ನು ಇತ್ತೀಚೆಗೆ ಪೆನ್ನಿನಿಂದ ತಿದ್ದಲಾಗಿದೆ. ಇನ್ನು ಹಲವು ಬಸ್ಸುಗಳ ಸಮಯವನ್ನು ಬದಲಿಸಿಲ್ಲ. ಇದು ಪ್ರಯಾಣಿಕರಲ್ಲಿ ಗೊಂದಲ ಉಂಟು ಮಾಡುತ್ತದೆ. ಆದ್ದರಿಂದ ಸರಿಯಾದ ಸಮಯ ನಮೂದಿಸಿರುವ ಹೊಸ ವೇಳಾ ಪಟ್ಟಿ ಹಾಕಬೇಕಿದೆ.

ಅಧಿಕಾರಿಗಳಿಗೂ ತಿಳಿದಿಲ್ಲ ಮಾಹಿತಿ: ‘ಬಸ್‌ ಯಾವ ಸಮಯಕ್ಕೆ ಇದೆ. ಎಷ್ಟು ಹೊತ್ತಿಗೆ ತೆರಳಲಿದೆ ಎಂದು ಅಧಿಕಾರಿಗಳಿಗೆ ಕೇಳಿದರೆ ಪಾವಗಡ ಫ್ಲಾಟ್‌ ಫಾರಂಗೆ ಹೋಗಿ ನೋಡಿ, ಬಸ್‌ ಬಂದಿದೆ ಎಂದು ಉತ್ತರಿಸುವುದೇ ಹೆಚ್ಚು. ಅಲ್ಲಿ ಬಸ್‌ಗಳೇ ಇರುವುದಿಲ್ಲ’ ಎಂದು ತುಂಬಾಡಿಯ ಮಹೇಶ್‌ ದೂರುತ್ತಾರೆ.

ವಿದ್ಯಾರ್ಥಿಗಳಿಗೆ ಸಿಟಿ ಬಸ್ಸೇ ಗತಿ

ಮಧುಗಿರಿ, ಕೊರಟಗೆರೆ ತಾಲ್ಲೂಕುಗಳಿಗೆ ಪ್ರತ್ಯೇಕ ಬಸ್‌ ಸೌಲಭ್ಯ ಇರದ ಕಾರಣ ದಿನಕ್ಕೆ 10 ಬಾರಿ ಸಿಟಿ ಬಸ್‌ ಹೋಗಿ ಬರುವ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಿಟಿ ಬಸ್‌ ಬಿಟ್ಟರೆ ಪಾವಗಡಕ್ಕೆ ಬರುವ ಬಸ್‌ಗಳಲ್ಲಿ ಸ್ಥಳಾವಕಾಶ ಮಾಡಿಕೊಡುವುದಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

‘ವಿದ್ಯಾರ್ಥಿಗಳು ಬಸ್‌ ಹತ್ತಿದರೆ ವಿದ್ಯಾರ್ಥಿಗಳಿಗಾಗಿಯೇ ಸಿಟಿ ಬಸ್‌ ಬಿಡಲಾಗಿದೆ. ಆ ಬಸ್‌ಗಳಿಗೇ ನೀವು ಹೋಗಿ ಎಂದು ಬಸ್‌ ಕಂಡಕ್ಟರ್‌ ಕೆಳಗಡೆ ಇಳಿಸುತ್ತಾರೆ’ ಎಂದು ಕೊರಟಗೆರೆಯ ವಿದ್ಯಾರ್ಥಿ ಸುಭಾಷ್ ಸಮಸ್ಯೆ ವಿವರಿಸುತ್ತಾರೆ.

ಸಂಜೆ ಪ್ರಯಾಣ ತೊಂದರೆ

ಸಂಜೆ 6.30 ಗಂಟೆಯ ಮೇಲೆ ಪಾವಗಡಕ್ಕೆ ಬಸ್‌ ಇಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂಬ ಮಾಹಿತಿ ಇಲ್ಲ. ಈ ಬಗ್ಗೆ ಯಾರು ಮನವಿ ಮಾಡಿಕೊಂಡಿಲ್ಲ. ಮನವಿ ಮಾಡಿಕೊಂಡರೆ ಕ್ರಮಕೈಗೊಳ್ಳಲಾಗುವುದು – ಗಜೇಂದ್ರ, ವಿಭಾಗೀಯ ನಿಯಂತ್ರಣಾಧಿಕಾರಿ, ಕರ್ನಾಟಕ ರಸ್ತೆ ಸಾರಿಗೆ ನಿಗಮ, ತುಮಕೂರು

ಕೊರಟಗೆರೆ ಹೊರತುಪಡಿಸಿ ಉಳಿದ ಎಲ್ಲ ವಿದ್ಯಾರ್ಥಿಗಳಿಗೆ ಬಸ್ಸಿನಲ್ಲಿ ಹತ್ತಿಸಿಕೊಳ್ಳುತ್ತೇವೆ. ನಗರದ ಸಮೀಪ ಹಳ್ಳಿಗಳ ಹಾಗೂ ಕಾಲೇಜಿನ ವಿದ್ಯಾರ್ಥಿಗಳೇ ಬಸ್‌ ನಲ್ಲಿ ಹೆಚ್ಚಾಗಿ ತುಂಬಿಕೊಂಡರೆ ಮಧುಗಿರಿ, ಪಾವಗಡಕ್ಕೆ ಹೋಗುವ ಪ್ರಯಾಣಿಕರಿಗೆ ಸ್ಥಳಾವಕಾಶ ಇರುವುದಿಲ್ಲ. ಆದಾಗ್ಯೂ ವಿದ್ಯಾರ್ಥಿಗಳಿಗೆ ತೊಂದರೆಯನ್ನು ಬಸ್ಸಿನವರು ಕೊಟ್ಟಿಲ್ಲ

ಚನ್ನಕೇಶವ, ಬಸ್‌ ನಿರ್ವಾಹಕ

ಕಾಯಬೇಕು

ಪಾಸ್‌ ಇರುವುದರಿಂದ ಸರ್ಕಾರಿ ಬಸ್‌ಗಳಿಗಾಗಿಯೇ ಕಾಯಬೇಕು. ಆದರೆ, ಸಿಟಿ ಬಸ್‌ಗಳು ಕಡಿಮೆ ಇದ್ದು, ಸಮಯಕ್ಕೆ ಸಿಗುವುದಿಲ್ಲ. ಹಾಗಾಗಿ ಪಾವಗಡ ಬಸ್‌ಗಳಿಗೆ ಹತ್ತಿದರೆ ಕೆಳಗೆ ಇಳಿಸುತ್ತಾರೆ

–ಮಂಜುಶ್ರೀ, ಸಿದ್ಧಗಂಗಾ ಕಾಲೇಜು, ಮಧುಗಿರಿ

ಗಂಟೆಗೆ ಬಸ್‌

ಸಿಟಿ ಬಸ್‌ ಗಂಟೆಗೆ ಒಂದು ಬರುತ್ತವೆ. ಅವುಗಳಿಗೆ ಕಾದು ಕುಳಿತರೆ ಕಾಲೇಜಿಗೆ ತಡವಾಗುತ್ತದೆ. ಆದ್ದರಿಂದ ಪಾವಗಡದಿಂದ ಬರುವ ಬಸ್‌ಗಳಿಗೆ ಹತ್ತುವುದು ಅನಿವಾರ್ಯ

–ಎನ್.ರಕ್ಷಿತಾ, ವಿದ್ಯಾರ್ಥಿನಿ, ಮಧುಗಿರಿ

ಕೂಲಿ ಕಾರ್ಮಿಕರು ಹೆಚ್ಚಾಗಿ ಸಂಜೆ ಸಮಯದಲ್ಲಿಯೇ ಊರಿಗೆ ಹೋಗುತ್ತಾರೆ. ಸಂಜೆ ಮೇಲೆ ಬಸ್‌ ಇಲ್ಲದೆ ರಾತ್ರಿ ನಗರದಲ್ಲಿ ಇದ್ದು, ಮುಂಜಾನೆ ಹೋಗಬೇಕಾಗಿದೆ 

–ಗೋಪಿ, ಗುತ್ತಿಗೆದಾರ, ಪಾವಗಡ

ಪಾವಗಡದಿಂದ ಕೆಲಸ ಅರಸಿಕೊಂಡು ಬರುವ ಕಾರ್ಮಿಕರು ಬಸ್ ಇಲ್ಲದೇ ಪರದಾಡುತ್ತಾರೆ. ನಮ್ಮ ಸಮಸ್ಯೆ ಯಾರಿಗೆ ಹೇಳಬೇಕು ಎಂದು ಗೊತ್ತಿಲ್ಲದೇ ಸುಮ್ಮನಿರುತ್ತಾರೆ

ಚಂದ್ರ, ಕೂಲಿ ಕಾರ್ಮಿಕ, ಪಾವಗಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry