ಕುಸಿತಗೊಂಡ ಹಂದಿ ಮಾಂಸದ ವ್ಯಾಪಾರ

7
ನಿಫಾ ವೈರಾಣು ಸೋಂಕಿನ ಭೀತಿಗೆ ಮಾಂಸ ಖರೀದಿಗೆ ಹಿಂದೇಟು ಹಾಕುತ್ತಿರುವ ಜನ

ಕುಸಿತಗೊಂಡ ಹಂದಿ ಮಾಂಸದ ವ್ಯಾಪಾರ

Published:
Updated:
ಕುಸಿತಗೊಂಡ ಹಂದಿ ಮಾಂಸದ ವ್ಯಾಪಾರ

ಚಿಕ್ಕಬಳ್ಳಾಪುರ: ಎಲ್ಲೆಡೆ ನಿಫಾ ವೈರಾಣು ಸೋಂಕಿನ ಭೀತಿ ಆವರಿಸಿಕೊಂಡಿರುವ ಬೆನ್ನಲ್ಲೇ ನಗರದಲ್ಲಿ ಹಂದಿ ಮಾಂಸದ ವ್ಯಾಪಾರ ಕುಸಿತಗೊಂಡಿದೆ. ಮಾರಕ ಸೋಂಕಿನ ಭೀತಿಗೆ ಜನರು ಮಾಂಸ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ನಗರವನ್ನು ಸಂಪರ್ಕಿಸುವ ಬಿ.ಬಿ.ರಸ್ತೆ, ಗೌರಿಬಿದನೂರು ರಸ್ತೆ, ಶಿಡ್ಲಘಟ್ಟ ರಸ್ತೆ, ಚಿತ್ರಾವತಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಗರ ಹೊರವಲಯದಲ್ಲಿ ರಸ್ತೆ ಇಕ್ಕೆಲಗಳಲ್ಲಿ ಸಣ್ಣ ಸಣ್ಣ ಶೆಡ್‌ ನಿರ್ಮಿಸಿಕೊಂಡು ಹಂದಿ ಮಾಂಸ ಮಾರಾಟ ಮಾಡಲಾಗುತ್ತದೆ. ಕಳೆದ ನಾಲ್ಕೈದು ದಿನಗಳಿಂದ ಮಾಧ್ಯಮಗಳಲ್ಲಿ ನಿಫಾ ಸೋಂಕಿನ ಸುದ್ದಿ ಕೇಳಿರುವ ಜನರು ಹಂದಿ ಮಾಂಸ ತಿನ್ನಲು ಭಯ ಬೀಳುತ್ತಿದ್ದಾರೆ.

ಹೀಗಾಗಿ ಹಂದಿ ಮಾಂಸ ಮಾರುತ್ತಿದ್ದವರ ವಹಿವಾಟು ಒಂದೇ ವಾರದಲ್ಲಿ ಅರ್ಧದಷ್ಟು ಕೆಳಗೆ ಕುಸಿದಿದೆ. ಅನೇಕರು ಸದ್ಯ ಮಾರಾಟವನ್ನೇ ಸ್ಥಗಿತಗೊಳಿಸಿದ್ದಾರೆ. ಇನ್ನು ಕೆಲವರು ಅಲ್ಪಸ್ವಲ್ಪ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ.

ನಿಫಾ ಬಾವಲಿ, ಹಂದಿ ಹಾಗೂ ಇತರೆ ಪ್ರಾಣಿಗಳಿಂದ ಹರಡುವ ಸೋಂಕಾಗಿದೆ. ಈವರೆಗೆ ಇದಕ್ಕೆ ಯಾವುದೇ ಸಿದ್ಧ ಔಷಧ ಅಥವಾ ಲಸಿಕೆ ಲಭ್ಯವಿಲ್ಲ. ರೋಗ ಲಕ್ಷಣಗಳನ್ನು ನಿಯಂತ್ರಿಸಲು ಪೂರಕ ಹಾಗೂ ಉಪಶಮನಕಾರಿ ಚಿಕಿತ್ಸೆ ನೀಡಲಾಗುತ್ತದೆ. ಆದ್ದರಿಂದ ಜನರು ಜಿಲ್ಲೆಯಲ್ಲಿ ನಿಫಾ ಪ್ರಕರಣ ವರದಿಯಾಗದಿದ್ದರೂ ಭಯಭೀತರಾಗಿದ್ದಾರೆ.

‘ಅದು ಯಾವುದೇ ಕಾಯಿಲೆಗೆ ಭಯಗೊಂಡು ಜನರು ಹಂದಿ ಮಾಂಸ ಖರೀದಿಸಲು ಮುಂದೆ ಬರುತ್ತಿಲ್ಲ. ಕಳೆದ ಮೂರು ದಿನಗಳಿಂದ ವ್ಯಾಪಾರ ಸರಿಯಾಗಿ ನಡೆಯುತ್ತಿಲ್ಲ. ವಾರದಲ್ಲಿ ಭಾನುವಾರ, ಮಂಗಳವಾರ 100 ಕೆ. ಜಿ ಮಾಂಸ ಮಾಡುತ್ತಿದ್ದೆ. ಆದರೆ ಇತ್ತೀಚೆಗೆ 50 ಕೆ.ಜಿ ಕೂಡ ಮಾರಾಟವಾಗುತ್ತಿಲ್ಲ. ಇದೊಂದು ರೀತಿ ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಕೊಟ್ರು ಎನ್ನುವಂತಾಗಿದೆ’ ಎನ್ನುತ್ತಾರೆ ಗೌರಿಬಿದನೂರು ರಸ್ತೆಯಲ್ಲಿ ಹಂದಿ ಮಾಂಸ ಮಾರಾಟ ಮಾಡುವ ಮೈಲಪನಹಳ್ಳಿ ಮಹೇಶ್.

ಹಣ್ಣಿನ ವ್ಯಾಪಾರ ನಿರಾತಂಕ

ನಿಫಾ ಬಾವಲಿ ಕಚ್ಚುವ ಹಣ್ಣಿನ ಸೇವನೆ ಮೂಲಕ ಕೂಡ ಹರಡುತ್ತದೆ ಎನ್ನಲಾಗಿದೆ. ಹೀಗಾಗಿ ರಾಜ್ಯದ ಗಡಿಭಾಗದ ಅನೇಕ ನಗರದಲ್ಲಿ ಹಣ್ಣಿನ ವ್ಯಾಪಾರ ಸಹ ಕುಸಿತ ಕಂಡಿದೆ. ಆದರೆ ನಗರದಲ್ಲಿ ಹಣ್ಣಿನ ವ್ಯಾಪಾರದ ಮೇಲೆ ಸೋಂಕಿನ ಭಯ ಪರಿಣಾಮ ಬೀರಿಲ್ಲ. ವಹಿವಾಟು ಎಂದಿನಂತೆ ಸಹಜವಾಗಿ ಕಂಡುಬರುತ್ತಿದೆ.

‘ನಿಫಾ ಸುದ್ದಿ ಕೇಳುತ್ತಲೇ ನಾವು ಸಹ ಆರಂಭದಲ್ಲಿ ಭಯಗೊಂಡಿದ್ದೆವು. ಗ್ರಾಹಕರು ಭಯಬಿದ್ದರೆ ಹೇಗಪ್ಪ ವ್ಯಾಪಾರ ಮಾಡುವುದು ಎಂಬ ಆತಂಕ ಕಾಡಿತ್ತು. ಆದರೆ ಅದು ಸುಳ್ಳಾಯಿತು. ನನ್ನ ಬಾಳೆಹಣ್ಣಿನ ವಹಿವಾಟು ಎಂದಿನಂತಿದೆ. ಬೇಡಿಕೆ, ಬೆಲೆ ಯಾವುದರಲ್ಲೂ ಬದಲಾವಣೆಯಾಗಿಲ್ಲ’ ಎಂದು ಬಜಾರ್ ರಸ್ತೆಯ ಬಾಳೆ ಹಣ್ಣಿನ ವ್ಯಾಪಾರಿ ಶಿವು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry