ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: ಬಂದ್‌ಗೆ ಬೆಂಬಲ

7
ಬಿಗಿ ಭದ್ರತೆಗೆ ಡಿಜಿಪಿ ಸೂಚನೆ

ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: ಬಂದ್‌ಗೆ ಬೆಂಬಲ

Published:
Updated:
ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: ಬಂದ್‌ಗೆ ಬೆಂಬಲ

ಬೆಂಗಳೂರು:  ಬಂದ್‌ಗೆ ಬೆಂಬಲ ಸೂಚಿಸಿ ಬಿಜೆಪಿ ರಾಜ್ಯದಾದ್ಯಂತ ಸೋಮವಾರ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

‘ಬಂದ್‌ಗೆ ಹಲವು ರೈತ ಸಂಘಟನೆಗಳು ಬೆಂಬಲ ನೀಡಿವೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಸೋಮವಾರ ಮತದಾನ ನಡೆಯಲಿದೆ. ಹಾಗಾಗಿ, ಬೆಂಗಳೂರಿನಲ್ಲಿ ಬಂದ್‌ ಇರುವುದಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಬೆಂಬಲ ಇಲ್ಲ: ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ‘ಸೋಮವಾರದ ಬಂದ್‌ ಬಗ್ಗೆ ನಮಗೆ ಗೊತ್ತಿಲ್ಲ. ಅದಕ್ಕೆ ನಮ್ಮ ಬೆಂಬಲವೂ ಇಲ್ಲ’ ಎಂದಿದ್ದಾರೆ.

ಬಂದ್‌ಗೆ ಬೆಂಬಲ ನೀಡದಿರಲು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮಾನಿಸಿದೆ ಎಂದು ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ತಿಳಿಸಿದರು.

ಬಂದ್‌ಗೆ ಬೆಂಬಲ ಇಲ್ಲ ಎಂದು ‘ಓಲಾ ಟ್ಯಾಕ್ಸಿ ಫಾರ್ ಶೋರ್ ಉಬರ್‌ (ಓಟಿಯು) ಚಾಲಕರು ಹಾಗೂ ಮಾಲೀಕರ ಸಂಘ’, ಅಖಿಲ ಭಾರತೀಯ ಲಾರಿ ಮಾಲೀಕರ ಒಕ್ಕೂಟ ಹಾಗೂ ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘ ತಿಳಿಸಿವೆ.

‘ರೈತರು ಮೆರವಣಿಗೆ ನಡೆಸಲಿದ್ದು, ಅದಕ್ಕೆ ಬಿಜೆಪಿ ಬಂಬಲ ನೀಡಿದೆ’ ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅವರು ರಾಯಚೂರಿನಲ್ಲಿ ತಿಳಿಸಿದ್ದಾರೆ.

ಬಿಗಿ ಭದ್ರತೆಗೆ ಡಿಜಿಪಿ ಸೂಚನೆ: ಬಂದ್‌ ವೇಳೆ ಬಿಗಿ ಭದ್ರತೆ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ (ಡಿಜಿ–ಐಜಿ) ನೀಲಮಣಿ ರಾಜು, ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ರಾಜ್ಯದ ಐಜಿಪಿಗಳು, ಪೊಲೀಸ್ ಕಮಿಷನರ್‌ ಹಾಗೂ ಜಿಲ್ಲಾ ಎಸ್ಪಿಗಳಿಗೆ ಜ್ಞಾಪನಾ ಪತ್ರ ಕಳುಹಿಸಿರುವ ನೀಲಮಣಿ, ‘ಬಂದ್‌ಗೆ ಕರೆ ನೀಡಿರುವುದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಆಗುತ್ತದೆ. ಯಾರಾದರೂ ಒತ್ತಾಯದಿಂದ ಬಂದ್‌ ಮಾಡಲು ಮುಂದಾದರೆ, ಅಂಥವರನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಿ’ ಎಂದು ಹೇಳಿದ್ದಾರೆ. ‘ಬಂದ್ ನಡೆಸುವುದಾಗಿ ಹೇಳಿರುವ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೆ ತಿಳಿವಳಿಕೆ ಹೇಳಿ. ನ್ಯಾಯಾಲಯದ ಆದೇಶ ಪಾಲಿಸುವಂತೆ ತಿಳಿಸಿ’ ಎಂದು ಹೇಳಿದ್ದಾರೆ.

ಬಂದ್‌ಗೆ ಅನುಮತಿ ಇಲ್ಲ: ‘ನಗರದಲ್ಲಿ ಬಂದ್‌ ನಡೆಸಲು ಅನುಮತಿ ನೀಡಿಲ್ಲ. ಯಾರಾದರೂ ಬಂದ್ ಮಾಡಲು ಮುಂದಾದರೆ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ. ಸುನೀಲ್ ಕುಮಾರ್ ಎಚ್ಚರಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಂದ್‌ ಮಾಡದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಈಗಾಗಲೇ ಮನವಿ ಮಾಡಿದ್ದೇವೆ. ಅವರು ಏನಾದರೂ ಬಂದ್‌ ಮಾಡಿದರೆ, ಕ್ರಮ ಕೈಗೊಳ್ಳುವಂತೆ ಆಯಾ ವಿಭಾಗಗಳ ಡಿಸಿಪಿಗಳಿಗೆ ನಿರ್ದೇಶನ ನೀಡಿದ್ದೇವೆ’ ಎಂದರು.

ಬಸ್‌ ಸಂಚಾರ ಸರಾಗ

‘ಸೋಮವಾರ ಬಸ್‌ ಸಂಚಾರ ಎಂದಿನಂತೆ ಇರಲಿದೆ. ಪರಿಸ್ಥಿತಿಗನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. ನಗರದಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವುದಿಲ್ಲ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry