ಅರಿಸಿನದ ಬೆಲೆ ಏರಿಕೆ: ಬೆಳೆಗಾರರಲ್ಲಿ ಸಂತಸ

7
ಚೇತರಿಕೆ ಕಂಡ ತರಕಾರಿ ಬೆಲೆಗಳು, ಕೋಳಿ ಮಾಂಸ ಇಳಿಕೆ; ರೈತರ ಮೊಗದಲ್ಲಿ ಸಂತಸ

ಅರಿಸಿನದ ಬೆಲೆ ಏರಿಕೆ: ಬೆಳೆಗಾರರಲ್ಲಿ ಸಂತಸ

Published:
Updated:
ಅರಿಸಿನದ ಬೆಲೆ ಏರಿಕೆ: ಬೆಳೆಗಾರರಲ್ಲಿ ಸಂತಸ

ಚಾಮರಾಜನಗರ: ಜಿಲ್ಲೆಯಲ್ಲಿ ಈ ಬಾರಿ ಅರಿಸಿನದ ಬೆಲೆ ಏರಿಕೆಯಾಗಿದೆ. ರಾಜ್ಯದ ಇತರೆ ಮಾರುಕಟ್ಟೆಗಳಿಗೆ ಹೋಲಿಸಿದರೆ ಬೆಂಗಳೂರು ಬಿಟ್ಟರೆ ಚಾಮರಾಜನಗರ ಎಪಿಎಂಸಿ ಮಾರುಕಟ್ಟೆಯಲ್ಲಿಯೇ ಅತ್ಯಧಿಕ ಬೆಲೆ ಇದೆ.

ರಾಜ್ಯದಲ್ಲಿ ಕೊಳ್ಳೇಗಾಲ, ಗುಂಡ್ಲುಪೇಟೆ, ನಿಪ್ಪಾಣಿ, ಬೆಂಗಳೂರು, ಮಹಾಲಿಂಗಪುರ ಹಾಗೂ ಚಾಮರಾಜನಗರದ ಎಪಿಎಂಸಿಗಳಲ್ಲಿ ಮಾತ್ರ ಸಗಟು ಮಾರುಕಟ್ಟೆ ಅರಿಸಿನಕ್ಕಾಗಿಯೇ ಇದೆ. ಇಲ್ಲಿ ಕೊಳ್ಳೇಗಾಲದಲ್ಲಿ ಒಂದು ಕ್ವಿಂಟಲ್‌ಗೆ ₹ 6,800, ಗುಂಡ್ಲುಪೇಟೆಯಲ್ಲಿ ₹ 7,910, ನಿಪ್ಪಾಣಿಯಲ್ಲಿ ₹ 5 ಸಾವಿರ, ಮಹಾಲಿಂಗಪುರದಲ್ಲಿ ₹ 6,600 ಬೆಲೆ ಇದೆ. ಆದರೆ, ಬೆಂಗಳೂರಿನಲ್ಲಿ ₹12,800 ಹಾಗೂ ಚಾಮರಾಜನಗರದಲ್ಲಿ ₹ 8,249 ದರ ನಿಗದಿಯಾಗಿದೆ.

ರಾಜ್ಯದಲ್ಲೇ ಅರಿಸಿನದ ಅತ್ಯಂತ ಹೆಚ್ಚಿನ ವಹಿವಾಟು ನಡೆಯುವ ಮಾರುಕಟ್ಟೆ ಎಂದೇ ಪರಿಗಣಿತವಾದ ಗುಂಡ್ಲುಪೇಟೆ ಎಪಿಎಂಸಿಯಲ್ಲಿ ಮೇ 23ರಂದು ಮಾತ್ರ ₹ 10,539 ದರ ಇತ್ತು. ಉಳಿದ ದಿನಗಳಲ್ಲಿ ಕ್ವಿಂಟಲ್‌ಗೆ ₹ 8 ಸಾವಿರದ ಒಳಗೆ ದರ ನಿಗದಿಯಾಗಿದೆ. ಆದರೆ, ಚಾಮರಾಜನಗರದ ಅರಿಸಿನ ಮಾರುಕಟ್ಟೆಯಲ್ಲಿ ಹೆಚ್ಚು ಎಂದರೆ ಒಂದು ಕ್ವಿಂಟಲ್ ಅಷ್ಟೇ ಮಾರಾಟಕ್ಕೆ ಆವಕವಾಗುತ್ತದೆ. ಹೆಚ್ಚಿನ ಪೂರೈಕೆ ಇಲ್ಲದಿರುವುದರಿಂದ ಸಹಜವಾಗಿಯೇ ಮೇ ತಿಂಗಳಿನಾದ್ಯಂತ ಕ್ವಿಂಟಲ್‌ಗೆ ₹ 8 ಸಾವಿರಕ್ಕೂ ಹೆಚ್ಚು ದರ ನಿಗದಿಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ.‌ ಕಳೆದ ವರ್ಷ ಇದೇ ಅವಧಿಯಲ್ಲಿ ಅರಿಸಿನ ಕ್ವಿಂಟಲ್‌ಗೆ ₹ 6,300 ಇತ್ತು.

ಸುಮಾರು 9 ತಿಂಗಳಿಗೂ ಅಧಿಕ ಅವಧಿಯವರೆಗೆ ಅರಿಸಿನ ಬೆಳೆಗೆ ಸಾಕಷ್ಟು ಖರ್ಚು ಮಾಡಿದ್ದ ರೈತರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ. ಬೆಳೆಗಳನ್ನು ಕೊಯ್ಲು ಮಾಡುವುದು, ಗೆಡ್ಡೆಗಳನ್ನು ಬೇರ್ಪಡಿ­ಸುವುದು, ನೀರಿನಲ್ಲಿ

ಕುದಿಸುವುದು, ಬಳಿಕ ಬಿಸಿಲಿಗೆ ಒಣಗಿಸಿ ಮಾರಾಟಕ್ಕೆ ಸಿದ್ಧಪಡಿಸುವಂತಹ ಸುದೀರ್ಘ ಬೆಳೆ ಸಂಸ್ಕರಣೆಯಲ್ಲಿ

ತೊಡಗಿ ಮಾರಾಟಕ್ಕೆ ತಂದಿದ್ದವರಲ್ಲಿ ಚೇತರಿಕೆ ಭಾವ ಮೂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪವಾದರೂ ಹೆಚ್ಚು ಬೆಲೆ ದೊರೆಯುತ್ತಿದೆ ಎಂಬ ಸಮಾಧಾನ ಅವರಲ್ಲಿ ಮನೆ ಮಾಡಿದೆ.

ಚೇತರಿಕೆ ಕಂಡ ತರಕಾರಿ ಬೆಲೆಗಳು: ಈ ವಾರ ತರಕಾರಿಗಳ ಬೆಲೆಗಳು ಚೇತರಿಕೆ ಕಂಡಿವೆ. ಬೀನ್ಸ್ ₹ 35, ಟೊಮೆಟೊ ₹ 6, ಕ್ಯಾರೆಟ್ ₹ 10, ಎಲೆಕೋಸು ₹ 5, ಬದನೆ ₹ 6 ಗರಿಷ್ಠ ಸಗಟು ಬೆಲೆ ಇಲ್ಲಿನ ಎಪಿಎಂಸಿಯಲ್ಲಿ ದಾಖಲಾಗಿದೆ. ಚಿಲ್ಲರೆ ಬೆಲೆಯೂ ಅಧಿಕವಾಗಿದೆ. ಆದರೆ, ಈಗ ಅಧಿಕ ಜೇಷ್ಠ ಮಾಸ ಇರುವುದರಿಂದ ಮದುವೆ ಮೊದಲಾದ ಶುಭ ಕಾರ್ಯಗಳು ಬೆರಳೆಣಿಕೆಯಷ್ಟು ನಡೆಯುತ್ತಿವೆ. ಇದರಿಂದ ಸಹಜವಾಗಿಯೇ ಬೇಡಿಕೆ ತಗ್ಗಿ ಬೆಲೆ ಇಳಿಯುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಿ ಸುಂದರ್‌ ಕೃಷ್ಣ ತಿಳಿಸಿದರು.

ಮೊಟ್ಟೆ ತುಟ್ಟಿ; ಉತ್ಪಾದಕರಲ್ಲಿ ಹಿಗ್ಗು

ಕೋಳಿಮೊಟ್ಟೆ ಧಾರಣೆ ತುಟ್ಟಿಯಾಗಿದ್ದು, ಉತ್ಪಾದಕರಲ್ಲಿ ಸಂತಸ ಮನೆ ಮಾಡಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಈ ತಿಂಗಳ ಆರಂಭದಲ್ಲಿ ಒಂದು ಮೊಟ್ಟೆಗೆ ₹ 3.50 ಇತ್ತು. ಇದೀಗ ಅದು ₹ 4.08 ಅನ್ನು ತಲುಪಿದೆ. ಬರೋಬರಿ 58 ಪೈಸೆಗಳಷ್ಟು ಬೆಲೆಯಲ್ಲಿ ಏರಿಕೆಯಾಗಿರುವುದು ಕುಕ್ಕುಟ್ಟೋದ್ಯಮದಲ್ಲಿ ನಿರೀಕ್ಷೆಗಳು ಗರಿಗೆದರುವಂತೆ ಮಾಡಿವೆ.

ತಮಿಳುನಾಡಿನಲ್ಲಿ ಶಾಲೆಗಳು ಆರಂಭವಾಗತೊಡಗಿರುವುದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಿದೆ. ಅಲ್ಲಿ ನಿತ್ಯ ಮಕ್ಕಳಿಗೆ ಕೋಳಿ ಮೊಟ್ಟೆ ನೀಡಲಾಗುತ್ತದೆ. ಇದರಿಂದ ಕೋಳಿ ಮೊಟ್ಟೆ ಧಾರಣೆ ಹೆಚ್ಚಿದೆ ಎಂದು ಇಲ್ಲಿ ಪೌಲ್ಟ್ರಿ ನಡೆಸುತ್ತಿರುವ ರಾಮು ತಿಳಿಸಿದರು.

ಕಳೆದ ವರ್ಷ ಇದೇ ತಿಂಗಳಿನ ಮಧ್ಯಭಾಗದಲ್ಲಿ ಒಂದೆರಡು ದಿನಗಳು ಮಾತ್ರ ಕೋಳಿ ಮೊಟ್ಟೆಯ ಸಗಟು ಧಾರಣೆ ₹ 4 ಅನ್ನು ದಾಟಿತ್ತು. ಉಳಿದಂತೆ, ₹ 3.50ರಲ್ಲೇ ಇತ್ತು. ಈಗ ಬೆಲೆ ಏರಿಕೆಯಾಗಿರುವುದು ಮೊಟ್ಟೆ ಉತ್ಪಾದಕರನ್ನು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

‌ಕೋಳಿಮಾಂಸ ಬೆಲೆಯಲ್ಲಿ ಇಳಿಕೆ

ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮಸ್ ಮತ್ತು ಬ್ರೀಡರ್ಸ್ ಅಸೋಸಿಯೇಷನ್‌ನ ದರದಲ್ಲಿ ಇಳಿಕೆಯಾಗಿದೆ. ಕಳೆದ ವಾರ ಬ್ರಾಯ್ಲರ್ ಕೋಳಿ ಬೆಲೆ ₹ 113 ಹಾಗೂ ಬ್ರಾಯ್ಲರ್ ಪ್ರೇರೇಂಟ್ ಕೋಳಿ ಬೆಲೆ ₹ 93 ಇತ್ತು. ಅದು ಈಗ ಕ್ರಮವಾಗಿ ₹ 105 ಹಾಗೂ ₹ 90ಕ್ಕೆ ಇಳಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry