ಭಗವಾನ್ ಹತ್ಯೆಗೆ ಸಂಚು; ನಾಲ್ವರ ಬಂಧನ

7
ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಬಗ್ಗೆಯೂ ವಿಚಾರಣೆ

ಭಗವಾನ್ ಹತ್ಯೆಗೆ ಸಂಚು; ನಾಲ್ವರ ಬಂಧನ

Published:
Updated:
ಭಗವಾನ್ ಹತ್ಯೆಗೆ ಸಂಚು; ನಾಲ್ವರ ಬಂಧನ

ಬೆಂಗಳೂರು: ಸಾಹಿತಿ ಕೆ.ಎಸ್. ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ನಾಲ್ವರನ್ನು ಬಂಧಿಸಿರುವ ಎಸ್‌ಐಟಿ ಅಧಿಕಾರಿಗಳು, ಗೌರಿ ಹತ್ಯೆಯಲ್ಲೂ ಇವರ ಪಾತ್ರವಿದೆಯೇ ಎಂಬುದನ್ನು ತಿಳಿಯಲು ವಿಚಾರಣೆ ತೀವ್ರಗೊಳಿಸಿದ್ದಾರೆ.

ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ (37), ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್, ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ (38) ಹಾಗೂ ವಿಜಯಪುರ ಜಿಲ್ಲೆ ರತ್ನಾಪುರ ಗ್ರಾಮದ ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್ (29) ಬಂಧಿತರು. ದಾದಾ ಅಲಿಯಾಸ್ ನಿಹಾಲ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಇವರೆಲ್ಲ ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಕೆ.ಟಿ.ನವೀನ್‌ಕುಮಾರ್‌ನ ಆಪ್ತರು. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಹತ್ತು ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿಕ್ಕಿಬಿದ್ದಿದ್ದು ಹೀಗೆ?: ‘ಗೌರಿ ಹತ್ಯೆ ಪ್ರಕರಣದ ತನಿಖೆಯ ಆರಂಭದಲ್ಲಿ, ಅನುಮಾನದ ಮೇಲೆ ಕೆಲ ಸಂಘಟನೆಗಳ ಮುಖಂಡರ ಹಾಗೂ ಕಾರ್ಯಕರ್ತರ ಮೊಬೈಲ್ ಸಂಭಾಷಣೆಯನ್ನು ಆಲಿಸಿದ್ದೆವು. ಆಗ ನವೀನ್ ಹಾಗೂ ಸುಜಿತ್, ಕೆ.ಎಸ್.ಭಗವಾನ್ ಅವರನ್ನು ಹತ್ಯೆಗೈಯ್ಯುವ ಬಗ್ಗೆ ಒಂದೂವರೆ ತಾಸು ಮೊಬೈಲ್ ಸಂಭಾಷಣೆ ನಡೆಸಿದ್ದರು. ಆ ಕೂಡಲೇ ಕಾರ್ಯಾಚರಣೆ ನಡೆಸಿ, ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನವೀನ್‌ನನ್ನು ವಶಕ್ಕೆ ಪಡೆದಿದ್ದೆವು. ಆ ನಂತರ ತಲೆಮರೆಸಿಕೊಂಡು ಓಡಾಡುತ್ತಿದ್ದ ಸುಜಿತ್‌ನನ್ನು ಇತ್ತೀಚೆಗೆ ಮಂಗಳೂರಿನಲ್ಲಿ ಹಿಡಿದುಕೊಂಡೆವು’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆತನನ್ನು ಕಾಟನ್‌ಪೇಟೆ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ‘ಭಗವಾನ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದು ನಿಜ. ಅದಕ್ಕಾಗಿ ಬೆಳಗಾವಿಯಲ್ಲಿ ಖರೀದಿಸಿದ್ದ ಪಿಸ್ತೂಲ್ ಹಾಗೂ ಗುಂಡುಗಳನ್ನು, ದಾವಣಗೆರೆಯ ನೆಹರೂ ನಗರ ಕ್ಯಾಂಪ್‌ನಲ್ಲಿರುವ ನನ್ನ ಅಜ್ಜಿಯ ಮನೆಯಲ್ಲಿ ಇಟ್ಟಿದ್ದೇನೆ’ ಎಂದು ಹೇಳಿದರು.

ಆದರೆ, ಗೌರಿ ಹತ್ಯೆಯಲ್ಲಿ ನಮ್ಮ ಪಾತ್ರವಿಲ್ಲ. ನನ್ನ ಸಹಚರರು ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಮೇ 21ರಂದು ದಾವಣಗೆರೆಗೆ ಬರಲಿದ್ದಾರೆ’ ಎಂಬ ಸಂಗತಿ ಬಾಯ್ಬಿಟ್ಟ. ಕೂಡಲೇ ಆತನನ್ನು ಕರೆದುಕೊಂಡು ಮಫ್ತಿಯಲ್ಲಿ ಅಲ್ಲಿಗೆ ತೆರಳಿದೆವು.’ ಎಂದು ಮಾಹಿತಿ ನೀಡಿದರು.

‘ದಾವಣಗೆರೆ ಖಾಸಗಿ ಬಸ್ ನಿಲ್ದಾಣದ ಬಳಿ ಮೇ 21ರ ಬೆಳಿಗ್ಗೆ 10.15ಕ್ಕೆ ಉಳಿದ ನಾಲ್ವರನ್ನು ಹಿಡಿದುಕೊಂಡು ಅವರು ತಂದಿದ್ದ ಕೆಂಪು ಬಣ್ಣದ ಇಂಡಿಕಾ ವಿಸ್ತಾ ಕಾರನ್ನು (ಎಂಎಚ್ 14 ಡಿಎಫ್ 2749) ಜಪ್ತಿ ಮಾಡಿದೆವು. ಸ್ಥಳದಲ್ಲಿ ಜನ ಸೇರಿದ್ದರಿಂದ ಆರೋಪಿಗಳನ್ನು ಹತ್ತಿರದ ಐ.ಬಿಗೆ (ಪ್ರವಾಸಿ ಮಂದಿರ) ಕರೆದೊಯ್ದು, ಅವರನ್ನು ತಪಾಸಣೆಗೆ ಒಳಪಡಿಸಿದೆವು’ ಎಂದು ಮಾಹಿತಿ ನೀಡಿದರು.

ಎಲ್ಲೆಲ್ಲಿ ಸಂಚು: ‘ಭಗವಾನ್ ಅವರನ್ನು ಕೊಲ್ಲಲು ಬೆಳಗಾವಿ, ವಿಜಯಪುರ ಹಾಗೂ ಮಹಾರಾಷ್ಟ್ರದ ಸತಾರಾದಲ್ಲಿ ಮೊದಲು ಸಂಚು ರೂಪಿಸಿಕೊಂಡ ಆರೋಪಿಗಳು, ಇದೇ ಜನವರಿಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡಾಲ್ ಜಲಾಶಯ ಸಮೀಪದ ಅರಣ್ಯ ಪ್ರದೇಶದಲ್ಲಿ ಸೇರಿ ಅಂತಿಮ ಸುತ್ತಿನ ಮಾತುಕತೆ ನಡೆಸಿದ್ದರು. ಮಹಾರಾಷ್ಟ್ರದಿಂದ ಬಂದಿದ್ದ ಅಮೋಲ್ ಕಾಳೆ ತನ್ನನ್ನು ಬಾಯ್‌ಸಾಬ್ ಎಂತಲೂ, ಅಮಿತ್ ದೇಗ್ವೇಕರ್‌ ತನ್ನನ್ನು ಪ್ರದೀಪ ಎಂತಲೂ ನವೀನ್‌ಗೆ ಪರಿಚಯಿಸಿಕೊಂಡಿದ್ದರು.’

‘ಭಗವಾನ್ ಅವರ ಮನೆ ಸುತ್ತಮುತ್ತ ಸಿ.ಸಿ ಟಿ.ವಿ ಕ್ಯಾಮೆರಾಗಳಿವೆಯೇ ಎಂಬುದನ್ನು ನೋಡಿಕೊಂಡು ಬರುವ ಕೆಲಸವನ್ನು ಸುಜಿತ್‌, ಶ್ರೀರಂಗಪಟ್ಟಣದ ಯುವಕನೊಬ್ಬನಿಗೆ ಕೊಟ್ಟಿದ್ದ. ಆ ಯುವಕನನ್ನೂ ಪತ್ತೆ ಮಾಡಲಾಗಿದ್ದು, ಆತ ಈಗಾಗಲೇ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ’ ಎಂದು ಮಾಹಿತಿ ನೀಡಿದರು.

ಬಂಧಿತರ ಬಳಿ ಸಿಕ್ಕಿದ್ದೇನೇನು?

ಎರಡು ದಿನಪತ್ರಿಕೆಗಳು (ಮಂಗಳೂರು ಆವೃತ್ತಿ), ಕಪ್ಪು ಬಣ್ಣದ ಎರಡು ಬ್ಯಾಗ್, ನಾಲ್ಕು ಮೊಬೈಲ್ ಬ್ಯಾಟರಿಗಳು, ಅಗರಬತ್ತಿ ಪೊಟ್ಟಣ, ಬೆಂಗಳೂರಿನ ನಕ್ಷೆ, ನಾಲ್ಕು ಮೊಬೈಲ್‌ಗಳು, ಮೊಬೈಲ್ ಸಂಖ್ಯೆಗಳಿರುವ ಡೈರಿ, ಶಿವ–ಪಾರ್ವತಿ, ಕೃಷ್ಣ–ರುಕ್ಮಿಣಿಯ ಫೋಟೊಗಳು ಹಾಗೂ ₹ 22,931 ನಗದು.

ಇಂದು ಚಾರ್ಜ್‌ಶೀಟ್

ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಬುಧವಾರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಿದೆ. ‘ಗೌರಿ ಹಂತಕರ ಬಗ್ಗೆ ನವೀನ್‌ಗೆ ಗೊತ್ತಿದೆ. ಆದರೆ, ಆತ ಅವರ ಹೆಸರುಗಳನ್ನು ಬಾಯ್ಬಿಡುತ್ತಿಲ್ಲ. ಸತ್ಯ ಬಯಲಾಗುತ್ತದೆ ಎಂಬ ಕಾರಣಕ್ಕೆ ಆತ ಮಂಪರು ಪರೀಕ್ಷೆಗೂ ಒಳಪಟ್ಟಿಲ್ಲ ಎಂಬ ಅಂಶಗಳನ್ನು ಆರೋಪಪಟ್ಟಿಯಲ್ಲಿ ಸೇರಿಸಿದ್ದೇವೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry