ಸೋಮವಾರ, ಡಿಸೆಂಬರ್ 9, 2019
22 °C
ಲೈಂಗಿಕ ದೌರ್ಜನ್ಯದ ಬಳಿಕ ಹತ್ಯೆ ಮಾಡಿ ಪರಾರಿ

ಸೈಕೊ ಕಿಲ್ಲರ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಅಸಹಾಯಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ನಂತರ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಸೈಕೊ ಕಿಲ್ಲರ್‌ ದೊರೆ ಅಲಿಯಾಸ್ ಕತ್ತಲರಾಜ್‌ (50) ಎಂಬಾತನನ್ನು ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಧರ್ಮಪುರಿಯವನಾದ ಆರೋಪಿಯು ಬ್ಯಾಡರಹಳ್ಳಿ, ಪೀಣ್ಯ ಠಾಣೆಗಳ ವ್ಯಾಪ್ತಿಯಲ್ಲಿ ಹಾಗೂ ತಮಿಳುನಾಡಿನ ವಿವಿಧೆಡೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಮಾಡಿದ ಆರೋಪ ಹೊತ್ತಿದ್ದಾನೆ.

ಒಂಟಿ ಮಹಿಳೆಯರೇ ಗುರಿ: ಬೆಂಗಳೂರಿನ ಮೆಜೆಸ್ಟಿಕ್ ಬಳಿ ಒಂಟಿ ಮಹಿಳೆಯರು ಹಾಗೂ ಲೈಂಗಿಕ ಕಾರ್ಯಕರ್ತೆಯರನ್ನು ಸಂಪರ್ಕಿಸುತ್ತಿದ್ದ ಈತ ಅವರಿಗೆ ಹಣದ ಆಮಿಷ ಒಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದ. ಅಲ್ಲಿ ಮದ್ಯ ಸೇವಿಸಿ ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದ. ಒಪ್ಪದಿದ್ದರೆ ಅತ್ಯಾಚಾರ ಮಾಡುತ್ತಿದ್ದ. ಬಳಿಕ ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಇದೇ ತಿಂಗಳ 20ರಂದು ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ಸಿ.ಸಿ.ಟಿ.ವಿ ದೃಶ್ಯಗಳು ಮತ್ತಿತರ ಸಾಕ್ಷ್ಯಗಳನ್ನು ಆಧರಿಸಿ, ತಮಿಳುನಾಡಿನಲ್ಲಿ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಇನ್‌ಸ್ಪೆಕ್ಟರ್ ಕೆ.ಪಿ. ಸತ್ಯನಾರಾಯಣ ನೇತೃತ್ವದ ತಂಡವು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಏಳು ದಿನಗಳ ಕಾಲ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.

ಅಪರಾಧ ಹಿನ್ನೆಲೆ: ಬೆಂಗಳೂರಿನ ಮಾಗಡಿ ರಸ್ತೆಯ ಅಂದ್ರಹಳ್ಳಿಯಲ್ಲಿ ವಾಸವಿದ್ದ ಆರೋಪಿಯು ಕಟ್ಟಡ ನಿರ್ಮಾಣದ ಕೂಲಿ ಕೆಲಸ ಮಾಡುತ್ತಿದ್ದ. 2002ರಲ್ಲಿ ತಮಿಳುನಾಡಿನಲ್ಲಿ ಕೌಟುಂಬಿಕ ಕಾರಣಕ್ಕೆ ಪತ್ನಿಯನ್ನು ಕೊಲೆ ಮಾಡಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಬಂದಿದ್ದ ಎನ್ನಲಾಗಿದೆ. ನಂತರದಲ್ಲಿ ತನ್ನ ಕೃತ್ಯ ಮುಂದುವರಿಸಿದ್ದು, ಈತನ ವಿರುದ್ಧ ಹಲವು ಕೊಲೆ, ಅತ್ಯಾಚಾರ ಹಾಗೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ.

2013ರಲ್ಲಿ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯ ಸಿಂಡಿಕೇಟ್ ಲೇಔಟ್‌ನಲ್ಲಿ ಮಹಿಳೆ ಜೊತೆ ಲೈಂಗಿಕ ಕ್ರಿಯೆ ನಡೆಸಿ, ಬಳಿಕ ಬಿಯರ್‌ ಬಾಟಲಿಯಿಂದ ಹಲ್ಲೆ ನಡೆಸಿ ಈತ ಪರಾರಿಯಾಗಿದ್ದ. ನಂತರದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಹೊರಬಂದು ಮತ್ತೆ ಅದೇ ರೀತಿಯ ಕೃತ್ಯಗಳನ್ನು ಮುಂದುವರಿಸಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)