7

ಸುರತ್ಕಲ್: ಮಳೆಗೆ ₹40 ಲಕ್ಷದ ಹಾನಿ

Published:
Updated:
ಸುರತ್ಕಲ್: ಮಳೆಗೆ ₹40 ಲಕ್ಷದ ಹಾನಿ

ಸುರತ್ಕಲ್ : ಮಂಗಳವಾರ ಬೆಳಿಗ್ಗೆಯಿಂದಲೇ ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ 10ಕ್ಕೂ ಅಧಿಕ ಕಾರ್ಖಾನೆಗಳು, ಕುಳಾಯಿ ಸಮೀಪ ಮನೆಗಳು ಜಲಾವೃತ್ತಗೊಂಡಿದ್ದು ₹40 ಲಕ್ಷಕ್ಕೂ ಅಧಿಕ ಹಾನಿ, ನಷ್ಟ ಅಂದಾಜಿಸಲಾಗಿದೆ.

ಕುಳಾಯಿ ಸಮೀಪ ನಾಲ್ಕು ಮನೆ ಜಲಾವೃತ್ತಗೊಂಡಿದ್ದು ಒಂದು ಮನೆ ಭಾಗಶಃ ಕುಸಿದು ಬಿದ್ದಿದೆ, ಕೃಷ್ಣಾಪುರ ಪ್ರದೇಶದಲ್ಲೂ ಕೆಲ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಸಂತ್ರಸ್ತ ಮನೆಗಳಿಗೆ ಸುರತ್ಕಲ್ ಮಾಜಿ ಶಾಸಕ ಮೊಹಿದ್ದೀನ್ ಬಾವಾ ಭೇಟಿ ನೀಡಿದ್ದಾರೆ.

ಬೈಕಂಪಾಡಿ ಕೈಗಾರಿಕ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದ್ದು ಇಲ್ಲಿನ ಕೆಲವೊಂದು ಕಾರ್ಖಾನೆಗಳು ನೆರೆ ಭಾದಿತವಾಗಿದೆ. ಕೆಲ ಕೈಗಾರಿಕೆಯ ಸೊತ್ತಿಗೂ ಹಾನಿ ಉಂಟಾಗಿದ್ದು ನಷ್ಟ ಸಂಭವಿಸಿದೆ. ಹೆಚ್ಚಿನ ಫ್ಯಾಕ್ಟ್ರಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿದು ಬಂದಿದೆ. ಕೂಳೂರು, ಸುರತ್ಕಲ್ ಮತ್ತು ಕೊಟ್ಟಾರ ಮೇಲುಸೇತುವೆಯ ಕೆಳಭಾಗದಲ್ಲಿ ನೀರು ಹರಿದು ಹೋಗಲು ಅವಕಾಸ ಇಲ್ಲದೆ ಕೃತಕ ನೆರೆ ಉಂಟಾಗಿದ್ದು ವಾಹನಗಳು ಚಲಿಸಲಾಗದೆ ನಿಂತಿದ್ದು ಸಂಚಾರ ಅಸ್ತವ್ಯಸ್ತಗೊಳ್ಳಲು ಕಾರಣವಾಗಿದೆ.

ಹೆದ್ದಾರಿ ಸಂಚಾರ ಸ್ಥಗಿತ: ಸಸಿಹಿತ್ಲು ಬೈಕಂಪಾಡಿ ಪ್ರದೇಶದಲ್ಲಿ ಮರಗಳು ಧರೆಗುರುಳಿದ್ದು ನಿರಂತರ ಮಳೆಯ ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕೊಟ್ಟಾರ ಪ್ರದೇಶದಲ್ಲಿ ಕೃತಕ ನೆರೆಯಿಂದಾಗಿ ವಾಹನ ಸಂಚಾರವಿಲ್ಲದೆ ಜನ ಪರದಾಡುವಂತಾಗಿತ್ತು. ವಿದ್ಯಾದಾಯಿನಿ ಮುಂಭಾಗದ ಅಂಡರ್ ಪಾಸ್ ನೀರುತುಂಬಿ ಈಜುಕೊಳದಂತೆ ಕಂಡು ಬರುತ್ತಿದೆ. ಮುಕ್ಕ, ಬೈಕಂಪಾಡಿ ಪ್ರದೇಶದ ಕೆಲ ಮನೆಮಂದಿಯನ್ನು ಸುರಕ್ಷತೆ ದೃಷ್ಟಿಯಿಂದ ಸ್ಥಳಾಂತರಿಸಲಾಗಿದೆ.

ಸಮುದ್ರ ಪ್ರಕ್ಷುಬ್ದ: ಸಸಿಹಿತ್ಲು, ಪಣಂಬೂರು, ಮುಕ್ಕ, ಕುಳಾಯಿ ಬಳಿ ಸಮುದ್ರ ಪ್ರಕ್ಷುಬ್ದಗೊಂಡಿದ್ದು ಭಾರಿ ಗಾತ್ರದ ಅಲೆಗಳು ಮೇಲೆಳುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry