ಅತಿಸಾರ ಭೇದಿ: ವರ್ಷಕ್ಕೆ 1.20 ಲಕ್ಷ ಮಕ್ಕಳ ಸಾವು

7
ತೀವ್ರತರ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮದಲ್ಲಿ ಡಿಎಚ್‌ಒ ಹೇಳಿಕೆ

ಅತಿಸಾರ ಭೇದಿ: ವರ್ಷಕ್ಕೆ 1.20 ಲಕ್ಷ ಮಕ್ಕಳ ಸಾವು

Published:
Updated:

ಕೋಲಾರ: ‘ದೇಶದಲ್ಲಿ ಅತಿಸಾರ ಭೇದಿಯಿಂದ ಪ್ರತಿ ವರ್ಷ 1.20 ಲಕ್ಷ ಮಕ್ಕಳು ಮೃತಪಡುತ್ತಿವೆ. ಇದಕ್ಕೆ ತಾಯಂದಿರ ಅರಿವಿನ ಕೊರತೆ ಪ್ರಮುಖ ಕಾರಣ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಡಾ.ಎಸ್.ಎನ್.ವಿಜಯ್‌ಕುಮಾರ್ ತಿಳಿಸಿದರು.

ಆರೋಗ್ಯ ಇಲಾಖೆಯು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಶಿಶು ಮರಣ ತಡೆಯುವ ಉದ್ದೇಶದಿಂದ ತಾಯಂದಿರಿಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಕುರಿತು ಅರಿವು ಮೂಡಿಸಬೇಕು’ ಎಂದರು.

‘ದೇಶದಲ್ಲಿ ಪ್ರತಿ ಒಂದು ಸಾವಿರ ಮಕ್ಕಳಿಗೆ 40 ಮಕ್ಕಳು ಸಾಯುತ್ತಿವೆ. ಈ ಪ್ರಮಾಣವನ್ನು 2025ರೊಳಗೆ 25ಕ್ಕಿಂತಲೂ ಕಡಿಮೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಪಾಕ್ಷಿಕ ಕಾರ್ಯಕ್ರಮ ಜಾರಿಗೆ ತಂದಿದೆ. 15 ದಿನಗಳಲ್ಲಿ ಮಗುವಿಗೆ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಬೇಕು. ಜಿಲ್ಲೆಯಲ್ಲಿ ಶಿಶುಗಳ ಮರಣ ಪ್ರಮಾಣ 22ರಿಂದ 24 ಇದೆ’ ಎಂದು ವಿವರಿಸಿದರು.

ಓಆರ್‌ಎಸ್‌ ಕುಡಿಸಿ: ‘ಮಕ್ಕಳಿಗೆ ಅತಿಸಾರ ಭೇದಿಯಾದ ಸಂದರ್ಭದಲ್ಲಿ ವೈದ್ಯರು ಶಿಫಾರಸು ಮಾಡಿದ ಔಷಧಗಳನ್ನು ನೀಡಬೇಕು. ತಾಯಂದಿರು ತಮಗೆ ಇಷ್ಟ ಬಂದ ಔಷಧ ನೀಡಬಾರದು. ಭೇದಿ ನಿಯಂತ್ರಣಕ್ಕಾಗಿ ಕಾಯಿಸಿದ ಒಂದು ಲೀಟರ್ ನೀರಿಗೆ ಓಆರ್‍ಎಸ್ ಪುಡಿ ಮಿಶ್ರಣ ಮಾಡಿ ಕುಡಿಸಬೇಕು. ಯಾವುದೇ ಕಾರಣಕ್ಕೂ ಹಣ್ಣಿನ ರಸ ಕೊಡಬಾರದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಸಂತಕುಮಾರ್ ಸಲಹೆ ನೀಡಿದರು.

‘ಮಕ್ಕಳಿಗೆ ಭೇದಿಯಾದ ಸಂದರ್ಭದಲ್ಲಿ ತಾಯಿಯ ಎದೆ ಹಾಲು ನೀಡಬಾರದೆಂಬುದು ತಪ್ಪು ಕಲ್ಪನೆ. ಆ ಸಮಯದಲ್ಲಿ ಹಾಲು ನೀಡಬಹುದು. ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಪಾಕ್ಷಿಕ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ ಅತಿಸಾರ ಭೇದಿ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದರು.

ಸ್ವಚ್ಛತೆಗೆ ಆದ್ಯತೆ: ‘ತಾಯಂದಿರು ಶಿಶುಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಸ್ವಚ್ಛತೆಯಿಂದ ಶಿಶುಗಳು ಆರೋಗ್ಯಕರವಾಗಿರುತ್ತವೆ. ತುರ್ತು ಸಂದರ್ಭದಲ್ಲಿ ಅಂಗಡಿಗಳಲ್ಲಿ ಸಿಗುವ ಮಾತ್ರೆಗಳನ್ನು ಬಳಸದೆ ವೈದ್ಯರಿಂದ ಸಲಹೆ ಪಡೆದು ಔಷಧಗಳನ್ನು ಮಾತ್ರ ಬಳಸಬೇಕು’ ಎಂದು ಮಕ್ಕಳ ತಜ್ಞ ಡಾ.ಶ್ರೀನಾಥ್‌ ಸಲಹೆ ನೀಡಿದರು.

‘ಬೇಸಿಗೆ ಕಾಲದಲ್ಲಿ ಅತಿಸಾರ ಭೇದಿ ಪ್ರಕರಣಗಳು ಹೆಚ್ಚುವ ಕಾರಣ ಸರ್ಕಾರ ಪ್ರತಿ ವರ್ಷ ಪಾಕ್ಷಿಕ ಕಾರ್ಯಕ್ರಮ ನಡೆಸುತ್ತಿದೆ. ಈ ವರ್ಷದ ಆಚರಣೆಯಲ್ಲಿ -5 ವರ್ಷದೊಳಗಿನ 1,68,533 ಮಕ್ಕಳಿದ್ದು, 1,185 ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌ ವಿವರಿಸಿದರು.

ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ (ಪ್ರಭಾರ) ಡಾ.ನಾರಾಯಣಸ್ವಾಮಿ ಹಾಜರಿದ್ದರು.

**

ಓಆರ್‍ಎಸ್ ಪುಡಿಯ ಜತೆಗೆ ಜಿಂಕ್ ಮಾತ್ರೆಗಳನ್ನು ದಿನಕ್ಕೆ ಒಂದರಂತೆ 14 ದಿನ ಕಡ್ಡಾಯವಾಗಿ ನೀಡುವುದರಿಂದ ಮಗುವನ್ನು ಅತಿಸಾರ ಭೇದಿಯಿಂದ ಕಾಪಾಡಬಹುದು. ಓಆರ್‌ಎಸ್‌ ಪುಡಿ ಮತ್ತು ಜಿಂಕ್‌ ಮಾತ್ರೆಯನ್ನು ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುವುದು

ಡಾ.ಶ್ರೀನಾಥ್, ಮಕ್ಕಳ ತಜ್ಞ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry