ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿ ಸಮಸ್ಯೆ– ಕಾವೇರಿದ ಸಭೆ

ಪೌರಕಾರ್ಮಿಕರ ವೇತನ ನೀಡದ ಬಗ್ಗೆಯೂ ಚರ್ಚೆ
Last Updated 30 ಮೇ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ಕಸ ವಿಲೇವಾರಿ, ಪೌರಕಾರ್ಮಿಕರ ವೇತನ ಪಾವತಿಯಾಗದಿರುವುದು, ಸ್ವಚ್ಛತೆ ನಿರ್ವಹಣೆ, ರಸ್ತೆ ಗುಂಡಿಯ ಅನಾಹುತಗಳು, ಮಳೆಗಾಲ ಆರಂಭಕ್ಕೆ ಮುನ್ನ ಕೈಗೊಳ್ಳಬೇಕಾದ ಮುಂಜಾಗ್ರತೆ ಸೇರಿದಂತೆ ಹಲವು ಸಮಸ್ಯೆಗಳ ಸುತ್ತ, ಬುಧವಾರ ನಡೆದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಾಮಾನ್ಯ ಸಭೆಯ ಚರ್ಚೆ ಗಿರಕಿ ಹೊಡೆಯಿತು.

‘ರಸ್ತೆ ಗುಂಡಿಯಲ್ಲಿ ಜನ ಬಿದ್ದು ಅನಾಹುತಗಳಾದಾಗ ನಮಗೆ ಅವಮಾನವಾಗುತ್ತದೆ. ನಾವು ಮಾಡದ ತಪ್ಪಿಗೆ ಜನರಿಂದ ಬೈಸಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಸಾಲದು’ ಎಂದು ಹೇಳಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಚರ್ಚೆಗೆ ನಾಂದಿ ಹಾಡಿದರು.

‘ಈಗಾಗಲೇ ಅಧಿಕಾರಿಗಳ ಸಭೆ ನಡೆಸಲಾಗಿದೆ. ನಾಳೆ ಖುದ್ದು ಪರಿಶೀಲನೆ ನಡೆಸುತ್ತೇನೆ. ಕೌನ್ಸಿಲ್‌ ಸಭೆ ನಡೆಸಿ, ಎಲ್ಲರ ಸಲಹೆ ಪಡೆದು ಕ್ರಮ ಕೈಗೊಳ್ಳುತ್ತೇನೆ’ ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ಭರವಸೆ ನೀಡಿದರು.

ಪ್ರತಿಭಟನೆ– ಸಭೆಯಲ್ಲಿ ಪ್ರತಿಧ್ವನಿ
ಸಭೆ ಆರಂಭಕ್ಕೆ ಮುನ್ನ ಸದಸ್ಯರು ಪೌರಕಾರ್ಮಿಕರ ಪ್ರತಿಭಟನೆ ಎದುರಿಸಬೇಕಾಯಿತು. ಕಾರ್ಮಿಕರಿಗೆ ವೇತನ ಪಾವತಿಯಾಗದ ಕುರಿತ ಚರ್ಚೆ ಸಭೆಗೆ ಚುರುಕು ಮುಟ್ಟಿಸಿತು. ಗುತ್ತಿಗೆ ಪದ್ಧತಿ ಇದ್ದ ಕಾಲದಲ್ಲಿ ಕಾರ್ಮಿಕರ ವೇತನವನ್ನೂ ಗುತ್ತಿಗೆದಾರರೇ ವಿತರಿಸುತ್ತಿದ್ದರು. ಆಗ ಗುತ್ತಿಗೆದಾರರನ್ನು ಪ್ರಶ್ನಿಸಬಹುದಿತ್ತು. ಈಗ ಎಲ್ಲ ಸಮಸ್ಯೆಗಳು ಬಿಬಿಎಂಪಿ ತಲೆಗೆ ಸುತ್ತಿಕೊಂಡಿವೆ. ಈ ತೊಂದರೆ ತೆಗೆದುಕೊಂಡದ್ದು ಏಕೆ? ಸರ್ಕಾರ ನೇರ ವೇತನ ಪಾವತಿಸುವ ಕುರಿತು ಆದೇಶ ಹೊರಡಿಸಿದಾಗ ಕೌನ್ಸಿಲ್‌ ಸಭೆಯಲ್ಲೂ ಸಾಧಕ– ಬಾಧಕಗಳ ಬಗ್ಗೆ ಚರ್ಚಿಸಬೇಕಿತ್ತು ಎಂದು ಪಕ್ಷಾತೀತವಾಗಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

500 ಮೀಟರ್‌ಗೆ ಒಬ್ಬ ಪೌರ ಕಾರ್ಮಿಕ ಸ್ವಚ್ಛತೆ ನಿರ್ವಹಣೆ ಮಾಡುತ್ತಿದ್ದರು. ಅದನ್ನು ಬದಲಾಯಿಸಿ 700 ಜನಸಂಖ್ಯೆಗೆ ಅನುಗುಣವಾಗಿ ಒಬ್ಬ ಕಾರ್ಮಿಕನನ್ನು ನಿಯೋಜಿಸಲಾಯಿತು. ಎರಡೂ ಪದ್ಧತಿಗಳು ಅವೈಜ್ಞಾನಿಕ. ಈ ವ್ಯಾಪ್ತಿಯಲ್ಲಿ ಒಬ್ಬ ಕಾರ್ಮಿಕ ಕೆಲಸ ಮಾಡಲು ಅಸಾಧ್ಯ.

ಮೂರು ಬಾರಿ ಹೆಬ್ಬೆರಳ ಗುರುತಿನ ಸಹಿ ಪಡೆಯುವುದರಿಂದ ಇಡೀ ದಿನ ಗುರುತು ಹಾಕುವುದರಲ್ಲೇ ಕಳೆದುಹೋಗುತ್ತದೆ. ಅದರಲ್ಲೂ, ಲೋಪವಾದಾಗ ಕಾರ್ಮಿಕರ ಹಾಜರಾತಿ ನಮೂದಾಗುವುದೇ ಇಲ್ಲ. ಭವಿಷ್ಯನಿಧಿ, ವಿಮಾ ಯೋಜನೆಯನ್ನೂ ಕಾರ್ಮಿಕರಿಗೆ ಒದಗಿಸಿಲ್ಲ’ ಎಂದು ಸದಸ್ಯರು ಅಸಹನೆ ಹೊರಹಾಕಿದರು.

ಬೀದಿ ದೀಪ ನಿರ್ವಾಹಕರಿಗೂ ಹಣ ಪಾವತಿಯಾಗಿಲ್ಲ. 2015ರಲ್ಲಿ ಚುನಾವಣಾ ಕರ್ತವ್ಯಕ್ಕೆ ಹಾಜರಾದವರಿಗೂ ಹಣ ಕೊಟ್ಟಿಲ್ಲ. ಸ್ವಚ್ಛತೆ ನಿರ್ವಹಣೆ ವಾಹನಗಳ ಚಾಲಕರು, ಆಪರೇಟರ್‌ಗಳು, ಲೋಡರ್‌ಗಳಿಗೂ ಹಣ ಕೊಟ್ಟಿಲ್ಲ ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗೇಕಾಯಿತು ಎಂದು ಮೇಯರ್‌ ಕೂಡ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಕಾರ್ಮಿಕರ ವೇತನ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಘನತ್ಯಾಜ್ಯ ಮತ್ತು ಆರೋಗ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ಎಸ್‌., ಸುಮಾರು 15,500 ಪೌರಕಾರ್ಮಿಕರಿಗೆ ವೇತನ ಪಾವತಿಸಲಾಗಿದೆ. ಉಳಿದವರಿಗೆ ವೇತನ ಪಾವತಿಸುವ ಬಗ್ಗೆ ರೂಲಿಂಗ್‌ ನೀಡಿದರೆ ಅದಕ್ಕೆ ಬೇಕಾದ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚುವರಿಯಾಗಿ ತೆಗೆದುಕೊಂಡ ಕಾರ್ಮಿಕರ ಪಟ್ಟಿಯನ್ನು ಪರಿಶೀಲಿಸಿ ಅವರಿಗೂ ವೇತನ ಪಾವತಿಸಲು ಕ್ರಮ ಕೈಗೊಳ್ಳುತ್ತೇವೆ. ತುರ್ತು ನಿರ್ಧಾರಗಳನ್ನು ಪಾಲಿಕೆ ಸಭೆಯಲ್ಲಿ ಕೈಗೊಂಡು ಅನುಷ್ಠಾನಕ್ಕೆ ತರಲು ಅವಕಾಶವಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. 2ರಿಂದ 3 ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ’ ಎಂದರು. ಉಪಮೇಯರ್‌ ಪದ್ಮಾವತಿ ನರಸಿಂಹಮೂರ್ತಿ ಇದ್ದರು.

ಪಾಲಿಕೆಯಲ್ಲಿ ಪ್ರೇಮ ವಿವಾಹ, ವಿಧಾನಸಭೆಯಲ್ಲಿ ಅರೇಂಜ್ಡ್‌ ಮ್ಯಾರೇಜ್‌!
ಹಿರಿಯೂರು ಶಾಸಕಿಯಾಗಿ ಆಯ್ಕೆಯಾದ ಕೆ.ಆರ್‌.ಪುರಂ ಕ್ಷೇತ್ರದ ಪಾಲಿಕೆ ಸದಸ್ಯೆ ಪೂರ್ಣಿಮಾ ಯಾದವ್‌ ಅವರನ್ನು ಅಭಿನಂದಿಸುವಾಗ ಆಡಳಿತ ಪಕ್ಷದ ನಾಯಕ ಶಿವರಾಜ್‌ ಮಾತನಾಡಿ, ‘ರಾಜ್ಯದಲ್ಲಿ ಜನ ಸಮ್ಮಿಶ್ರ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ...’ ಎಂದರು. ಆಗ, ಪ್ರತಿಪಕ್ಷದ ಸದಸ್ಯರೊಬ್ಬರು ಎದ್ದು ನಿಂತು, ‘ಸರ್ಕಾರವನ್ನು ಜನ ಆಯ್ಕೆ ಮಾಡಿದ್ದಲ್ಲ. ಅವರೇ (ಸರ್ಕಾರ ರಚಿಸಿದವರು) ಆಯ್ಕೆ ಮಾಡಿಕೊಂಡದ್ದು’ ಎಂದರು. ಮೇಯರ್‌ ಮಾತನಾಡಿ, ‘ನೀವು ಎಲ್ಲಿಂದಲೇ ಆಯ್ಕೆಯಾಗಿರಿ. ನಿಮ್ಮ ಮೈಯಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ’ ಎಂದು ಹೇಳಿ, ಪೂರ್ಣಿಮಾ ಅವರ ಕಾಲೆಳೆದರು.

ಅಭಿನಂದನೆಗೆ ಪ್ರತಿಕ್ರಿಯಿಸಿದ ಪೂರ್ಣಿಮಾ, ‘ನನಗೆ ಕಮಲದ ಹೂವು ರಕ್ಷಣೆ ಕೊಟ್ಟಿದೆ. ಇಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಪ್ರೇಮವಿವಾಹ ಮಾಡಿಕೊಂಡಿವೆ. ಅಲ್ಲಿ (ವಿಧಾನಸಭೆ) ಇದೇ ಪಕ್ಷಗಳು ಅರೇಂಜ್ಡ್‌ ಮ್ಯಾರೇಜ್‌ ಮಾಡಿಕೊಂಡಿವೆ. ಇದು ಎಷ್ಟು ದಿನ ನಡೆಯುವುದೋ ಗೊತ್ತಿಲ್ಲ...’ ಎಂದರು.

ಅದಕ್ಕೆ ಮೇಯರ್‌, ‘ಅದೇನೇ ಇರಲಿ ಮದುವೆ ಮಾಡಿಕೊಂಡಿದ್ದಾರಲ್ಲಾ. ಸಂಸಾರ ಚೆನ್ನಾಗಿ ನಡೆಯುತ್ತಿದೆ’ ಎಂದರು.

ಸಮಸ್ಯೆ ಧ್ವನಿಸಿದ ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’
ನಗರದ ರಸ್ತೆ ಗುಂಡಿಗಳ ಬಗ್ಗೆ ಪತ್ರಿಕೆಗಳಲ್ಲಿ ದಿನವೂ ಸಚಿತ್ರ ವರದಿಗಳು ಬರುತ್ತಿವೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಹೇಗೆ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು, ರಸ್ತೆ ಅವ್ಯವಸ್ಥೆ ಕುರಿತು ಸರಣಿ ಚಿತ್ರಗಳನ್ನು ಪ್ರಕಟಿಸುತ್ತಿರುವ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳನ್ನು ಮೇಯರ್‌ ಮುಂದಿಟ್ಟರು.

*
ಹೋಟೆಲ್‌ಗಳ ಮುಂಭಾಗದ ಮರಗಳಿಗೆ ಹಾಕಲಾದ ಸೀರಿಯಲ್‌ ದೀಪಗಳನ್ನು ವಾರದ ಒಳಗೆ ತೆರವುಗೊಳಿಸಬೇಕು. ಇಲ್ಲಿ ಮಕ್ಕಳು ವಿದ್ಯುತ್‌ ಆಘಾತಕ್ಕೆ ಒಳಗಾದ ಪ್ರಸಂಗಗಳಿವೆ.
-ಆರ್‌.ಸಂಪತ್‌ರಾಜ್‌, ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT