ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ

7

ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ

Published:
Updated:
ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ

‍ಬೆಂಗಳೂರು: ‘ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೆ ನಂ.54ರಲ್ಲಿ 11 ಎಕರೆ 20 ಗುಂಟೆ ಜಮೀನನ್ನು ಅರ್ಜಿದಾರರ ಹೆಸರಿಗೆ ನೀಡುವಂತೆ ಕೋರ್ಟ್‌ ನೀಡಿರುವ ಡಿಕ್ರಿ ಆದೇಶ ಪಾಲಿಸುತ್ತಿಲ್ಲ’ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತಂತೆ ಎ.ಶಕುಂತಲಾ ಸೇರಿದಂತೆ ಆರು ಜನ ಸಲ್ಲಿಸಿರುವ ನ್ಯಾಯಾಂಗ ನಿಂದನಾ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ಎಸ್‌.ಪಾಟೀಲ ಹಾಗೂ ಆರ್.ಎಸ್.ಚೌಹಾಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಮಣ ರೆಡ್ಡಿ ಪರವಾಗಿ ಹಾಜರಾಗಿದ್ದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು, ‘ಭೂಮಿ ತಂತ್ರಾಂಶವು ಬಿ.ಖರಾಬ್‌ ಜಮೀನನ್ನು ಹಿಡುವಳಿ ಭೂಮಿ ಎಂದು ಪರಿವರ್ತಿಸಿಕೊಳ್ಳುವುದಿಲ್ಲ. ಇದರಿಂದಾಗಿ ಜಮೀನಿನ ವಿಸ್ತೀರ್ಣವನ್ನು ಪಹಣಿಯಲ್ಲಿ ಗುರುತಿಸಲು ವಿಳಂಬವಾಗಿದೆ’ ಎಂದರು.

‘ಸರ್ವೆ ನಂ 54ರ ಪ್ರದೇಶವನ್ನು 1859ರ ಸರ್ಕಾರಿ ದಾಖಲೆಗಳಲ್ಲಿ ಬಿ.ಖರಾಬ್‌ ಜಮೀನು ಎಂದೇ ಗುರುತಿಸಲಾಗಿದೆ. ಹಾಗಾಗಿ ಇದನ್ನು ಈಗ ಹಿಡುವಳಿ ಜಮೀನು ಎಂದು ಪರಿವರ್ತಿಸಲು ಸರ್ಕಾರದಿಂದ ಪ್ರತ್ಯೇಕ ಆದೇಶದ ಅಗತ್ಯವಿದೆ’ ಎಂದರು.

ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ‘ಇದೇನು ಪಟ್ನಾ ಅಥವಾ ರಾಂಚಿಯ ವಿಚಾರವಲ್ಲ. ಬೆಂಗಳೂರು ಸಿಲಿಕಾನ್‌ ಸಿಟಿ. ಇಲ್ಲಿಯೇ ಸಾಫ್ಟ್‌ವೇರ್‌ ಸರಿಯಾಗಿಲ್ಲ ಎಂದರೆ ಏನರ್ಥ, ತಂತ್ರಜ್ಞಾನದಲ್ಲಿ ಮುಂದುವರಿದ ನಗರದ ಕಥೆಯೇ ಹೀಗಾದರೆ ಹೇಗೆ’ ಎಂದು ಕಿಡಿ ಕಾರಿತು.

‘ಮುಂದಿನ ಮೂರು ದಿನದೊಳಗೆ ಅರ್ಜಿದಾರರ ಹೆಸರಿಗೆ ಪಹಣಿಯಲ್ಲಿ ಹಿಡುವಳಿ ಜಮೀನಿನ ವಿಸ್ತೀರ್ಣವನ್ನು ಗುರುತಿಸಿ ದಾಖಲೆ ನೀಡಬೇಕು. ಇಲ್ಲವಾದಲ್ಲಿ ಪ್ರತಿವಾದಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ಎಚ್ಚರಿಸಿತು.

ವಿಚಾರಣೆಯನ್ನು ಜೂನ್‌ 5ಕ್ಕೆ ಮುಂದೂಡಲಾಗಿದ್ದು ಅಂದು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲೆ ವಿಶೇಷ ಜಿಲ್ಲಾಧಿಕಾರಿ ಮತ್ತು ಬೆಂಗಳೂರು ಪೂರ್ವ ತಹಶೀಲ್ದಾರ್‌ ಕೋರ್ಟ್‌ಗೆ ಖುದ್ದು ಹಾಜರಿರಬೇಕು’ ಎಂದು ಆದೇಶಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry