ವೀಣಾಪಾಣಿಯ ಭಕ್ತಿ ಶ್ರುತಿ

7

ವೀಣಾಪಾಣಿಯ ಭಕ್ತಿ ಶ್ರುತಿ

Published:
Updated:
ವೀಣಾಪಾಣಿಯ ಭಕ್ತಿ ಶ್ರುತಿ

ಭಕ್ತಿ ಮತ್ತು ಭಾವನೆಗಳ ಸಮ್ಮಿಲನ, ಆಸೆ ಮತ್ತು ದುರಾಸೆಗಳ ನಡುವಿನ ತಾಕಲಾಟಗಳ ಸುತ್ತ ಹೆಣೆದಿರುವ ಕಥೆ ‘ಇವಳೇ ವೀಣಾ ಪಾಣಿ!’ ಶಾರದಾಂಬೆಯ ಭಕ್ತೆಯಾದ ಹಳ್ಳಿಯ ಹುಡುಗಿಯೊಬ್ಬಳ ಬದುಕಿನ ಪಯಣ ಇದು ಎಂದರೆ ತಪ್ಪಾಗಲಾರದು. ಒಂದು ಮಹಿಮೆಯುಳ್ಳ ಕಲ್ಲಿನ ವೀಣೆಗೆ ಜೀವ ತರಿಸಲು ಭಕ್ತಿಯಿಂದ ಸಾಧ್ಯವೇ? ಭಕ್ತಿ ಗೆಲ್ಲುತ್ತಾ, ದುರಾಸೆ ಸೋಲುತ್ತಾ ಎನ್ನುವ ಕುತೂಹಲವನ್ನು ವೀಕ್ಷಕರ ಮುಂದಿಡಲು ನಿರ್ಮಾಪಕ‌ ಮತ್ತು ನಿರ್ದೇಶಕ ಸುಜಯ್ ಹುಣಸೂರು ಭರ್ಜರಿ ತಯಾರಿಯನ್ನೇ ಮಾಡಿಕೊಂಡಿದ್ದಾರೆ.

ಭಕ್ತಿಪ್ರಧಾನ ಧಾರಾವಾಹಿಯ ಚಿತ್ರೀಕರಣ ಭರದಿಂದ ಸಾಗಿದೆ. ಮೊದಲ ಹಂತದ ಚಿತ್ರೀಕರಣ ಶೃಂಗೇರಿ ಮತ್ತು ಹೆಬ್ರಿಯ ಪರಿಸರದಲ್ಲಿ ಮುಗಿದಿದೆ. ಎರಡ‌ನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಜೂನ್‌ನಿಂದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

ನಟ ಆರವ್  ಅಭಿನಯದ ‘ಶ್ರೀಚಕ್ರಂ’ ಮತ್ತು ‘ಹಳ್ಳಿ ಸೊಗಡು’ ಚಿತ್ರಗಳು ನಿರೀಕ್ಷಿತ ಗೆಲುವು ಕಾಣಲಿಲ್ಲ. ಈಗ ಕಿರುತೆರೆ ವೀಕ್ಷಕರ ಹೃದಯದಲ್ಲಿ ಮೊದಲು ಜಾಗ ಮಾಡಿಕೊಳ್ಳುವ ಇರಾದೆಯೊಂದಿಗೆ ಈ ಧಾರಾವಾಹಿಯ ಪ್ರಧಾನ ಪಾತ್ರದಲ್ಲಿ (ಮಯೂರ) ಕಾಣಿಸಿಕೊಳ್ಳುತ್ತಿದ್ದಾರೆ.

‘ಕಿರುತೆರೆಯಲ್ಲಿ ಇದು ನನ್ನ ಮೊದಲ ಧಾರಾವಾಹಿ. ಉತ್ತಮ ಕಥೆ ಇರುವ, ಅಭಿನಯಕ್ಕೆ ಹೆಚ್ಚು ಅವಕಾಶವಿರುವ, ಹೆಚ್ಚು ವೀಕ್ಷಕರಿಗೆ ಮುಖ ಪರಿಚಯಿಸಿಕೊಳ್ಳಲು ಸಾಧ್ಯವಿರುವ ಕಾರಣಕ್ಕೆ ಕಿರುತೆರೆಯತ್ತ ಮುಖ ಮಾಡಿದ್ದೇನೆ. ಈ ಧಾರಾವಾಹಿಗಾಗಿ ಚಿತ್ರರಂಗದಿಂದ ಒಂದು ವರ್ಷ ಬಿಡುವು ಮಾಡಿಕೊಂಡಿದ್ದೇನೆ’ ಎನ್ನುತ್ತಾರೆ ಬಳ್ಳಾರಿಯ ಪ್ರತಿಭೆ ಆರವ್.

ಬ್ರಹ್ಮಪುರಿಯ ಮಯೂರನಿಗೆ ಉಗ್ಗು ಸಮಸ್ಯೆ ಇರುತ್ತದೆ. ಈತನ ತಂದೆಗೆ 20 ವರ್ಷಗಳ ಹಿಂದೆ ಒಂದು ವೀಣೆ ಸಿಕ್ಕಿರುತ್ತದೆ. ಆದರೆ, ಅದು ಶ್ರುತಿ ಮಿಡಿಯದಂತೆ ಕಲ್ಲಾಗಿರುತ್ತದೆ. ಈ ವೀಣೆಯನ್ನು ನುಡಿಸಬೇಕಾದರೆ ಶಾರದಾ ಹಾರ (ಶಾರದಾ ಪದಕ) ಬೇಕಾಗಿರುತ್ತದೆ. ಈ ಶಾರದಾ ಪದಕಕ್ಕೆ ನಡೆಯುವ ಹುಡುಕಾಟವೇ ಕಥೆಯ ಕುತೂಹಲ ಮತ್ತು ಇಡೀ ಕಥೆಯ ತಿರುಳು.

ಇನ್ನು ಶಾರದಾಂಬೆಯ ಭಕ್ತ ದಂಪತಿಗೆ ಆಕೆಯ ವರಪ್ರಸಾದವಾಗಿ ಹುಟ್ಟುವ ಅಜ್ಜಂಪುರದ ಭಕ್ತಿ (ವರ್ಷಿಕಾ) ಈ ಧಾರಾವಾಹಿಯಲ್ಲಿನ ಮತ್ತೊಂದು ಪ್ರಧಾನ ಪಾತ್ರ.

ತಮಿಳು ಚಿತ್ರರಂಗದಿಂದ ಅದೃಷ್ಟ ಪರೀಕ್ಷೆಗೆ ಇಳಿದಿರುವ ವರ್ಷಿಕಾ, ‘ವೈಕಲ್ ತಗರಾರು’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನೊಂದು ಹಾಡು ಚಿತ್ರೀಕರಣ ಬಾಕಿ ಇದ್ದು, ಸದ್ಯದಲ್ಲೇ ಈ ಚಿತ್ರ ಕಾಲಿವುಡ್‌ನಲ್ಲಿ ಹವಾ ಎಬ್ಬಿಸುವ ನಿರೀಕ್ಷೆಯಲ್ಲಿದ್ದಾರೆ ಅವರು.

‘ಮೊದಲ ಚಿತ್ರದಲ್ಲಿಯೂ ಪಕ್ಕಾ ಹಳ್ಳಿ ಹುಡುಗಿಯ ಪಾತ್ರವೇ ಸಿಕ್ಕಿತ್ತು. ಈಗ ಮೊದಲ‌ ಧಾರಾವಾಹಿಯಲ್ಲೂ ಹಳ್ಳಿ ಹುಡುಗಿ ಪಾತ್ರವೇ ಸಿಕ್ಕಿದೆ. ಇದಕ್ಕೆ ಇನ್ನೊಂದು ಪ್ಲಸ್ ಪಾಯಿಂಟ್ ಎಂದರೆ, ಶಾರದೆಯ ಪರಮ ಭಕ್ತೆಯ ಪಾತ್ರ’ ಎನ್ನುವ ಖುಷಿಯಲ್ಲಿದ್ದಾರೆ ವರ್ಷಿಕಾ.

‘ಇಂತಹ ಪಾತ್ರದಲ್ಲಿ ನಟಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎನ್ನುವ ಮಾತನ್ನು ಹಲವರ ಬಾಯಲ್ಲಿ ಕೇಳಿದ್ದೇನೆ. ನಿಜ ಜೀವನದಲ್ಲೂ ಅಪಾರ ದೈವ ಭಕ್ತೆಯಾದ ನನಗೆ ‘ಭಕ್ತಿ’ ಪಾತ್ರ ಸಿಕ್ಕಿರುವುದು ಅದೃಷ್ಟವೆಂದೇ ಭಾವಿಸಿದ್ದೇನೆ. ಈಗಾಗಲೇ ಬಹಳಷ್ಟು ಜನರಿಂದ ಲೈಕ್ಸ್, ಒಳ್ಳೆಯ ಕಮೆಂಟ್ಸು ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲಿ ಬರುತ್ತಿವೆ’ ಎಂದು ಸಂತಸ ಹಂಚಿಕೊಂಡರು ನಟಿ ವರ್ಷಿಕಾ.

ಬೆಂಗಳೂರಿನ ಐಡಿಯಾ ವರ್ಲ್ಡ್‌ವೈಡ್ ಇನ್‌ಸ್ಟಿಟ್ಯೂಟ್‌ನಲ್ಲಿ ಫ್ಯಾಷನ್ ಡಿಸೈನಿಂಗ್ ಡಿಪ್ಲೊಮಾ ಓದುತ್ತಿರುವ ವರ್ಷಿಕಾಗೆ ಕನ್ನಡ ಚಿತ್ರರಂಗದಿಂದಲೂ ಅವಕಾಶಗಳು ಬರುತ್ತಿವೆಯಂತೆ.

‘ಮೀನ್ ಕಣಜ’ ಸಿನಿಮಾದಲ್ಲಿ‌ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದೇನೆ’ ಎನ್ನುವ ಅವರು, ‘‘ಭಕ್ತಿ‘ಯಾಗಿ ಕಿರುತೆರೆ ವೀಕ್ಷಕರ ಮನಸ್ಸಿಗೆ ಲಗ್ಗೆ ಇಡಲು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಮೊದಲು ಪ್ರತಿದಿನ ಮುಂಜಾನೆ ತಪ್ಪದೆ ಒಂದೆರಡು ತಾಸು ರಿಹರ್ಸಲ್ ಮಾಡುತ್ತೇನೆ. ತಯಾರಿ ತೃಪ್ತಿ ಕೊಡದೆ ಸೆಟ್‌ಗೆ ಕಾಲೇ ಇಡುವುದಿಲ್ಲ’ ಎನ್ನುತ್ತಾರೆ.

‘‘ಇವಳೇ ವೀಣಾ ಪಾಣಿ’ಯಲ್ಲಿ ಒಳ್ಳೆಯ ಶ್ರುತಿ ಹೊರಹೊಮ್ಮಲಿದೆ. ಪ್ರೇಕ್ಷಕರಿಗೂ ಇಷ್ಟವಾಗಲಿದೆ. ಏಕೆಂದರೆ ಇದು ಹೇಳಿಕೇಳಿ ಶಾರದಾಂಬೆಯ ಮಹಿಮೆ ಸಾರುವ ಕತೆ‌. ಜತೆಗೆ ತಾಯಿ ಶಾರದೆಯ ಅನುಗ್ರಹವೂ ಇದೆ’ ಎನ್ನುವುದು ಇಡೀ ಧಾರಾವಾಹಿ ತಂಡದ ಭರವಸೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry