ಏಕತೆಯ ಕೊರತೆ; ಇತಿಹಾಸದಲ್ಲಿ ಸಮಾಜಕ್ಕೆ ಅನ್ಯಾಯ

7
"ನಮ್ಮ ನಡಿಗೆ-ಚನ್ನಮ್ಮ ನಾಡಿಗೆ' ಸದ್ಭಾವನೆ ಪಾದಯಾತ್ರೆಯಲ್ಲಿ ಸಿರಿಗೆರೆ ಸ್ವಾಮೀಜಿ

ಏಕತೆಯ ಕೊರತೆ; ಇತಿಹಾಸದಲ್ಲಿ ಸಮಾಜಕ್ಕೆ ಅನ್ಯಾಯ

Published:
Updated:
ಏಕತೆಯ ಕೊರತೆ; ಇತಿಹಾಸದಲ್ಲಿ ಸಮಾಜಕ್ಕೆ ಅನ್ಯಾಯ

ಹರಿಹರ: ‘ಏಕತೆಯ ಕೊರತೆಯಿಂದ ಸಮಾಜಕ್ಕೆ ಇತಿಹಾಸಕಾರರು ಮಾಡಿದ ಅನ್ಯಾಯದ ಅರಿವು ಮೂಡಿ, ನ್ಯಾಯ ಪಡೆಯಲು ಈ ಪಾದಯಾತ್ರೆ ವೇದಿಕೆ ಮುನ್ನುಡಿಯಾಗಲಿ’ ಎಂದು ಎಂದು ಸಿರಿಗೆರೆಯ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶಿಸಿದರು.

‘ನಮ್ಮ ನಡಿಗೆ ಚನ್ನಮ್ಮನ ನಾಡಿಗೆ’ ಸದ್ಭಾವನೆ ಪಾದಯಾತ್ರೆಗೆ ನಗರದ ಹೊರವಲಯದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಆಂಗ್ಲರ ಆಡಳಿತದ ವಿರುದ್ಧ ಸಮರ ಸಾರಿದ ಪ್ರಥಮ ವೀರಾಗ್ರಣಿ ಮಹಿಳೆ ಕಿತ್ತೂರು ಚನ್ನಮ್ಮ ಹಾಗೂ ಆಧ್ಯಾತ್ಮಿಕ ವಚನಗಾರ್ತಿ ಅಕ್ಕಮಹಾದೇವಿ ಅವರಿಗೆ ಇತಿಹಾಸದಲ್ಲಿ ಸೂಕ್ತ ಸ್ಥಾನ-ಮಾನ ನೀಡುವಲ್ಲಿ ಇತಿಹಾಸಕಾರರು ಎಡವಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಸುವ ಮೂಲಕ ಇತಿಹಾಸದ ತಪ್ಪುಗಳನ್ನು ಸರಿಪಡಿಸಲು ಪೀಠ ಹಾಗೂ ಸಮಾಜದ ಬುದ್ಧಿಜೀವಿಗಳು ಮುಂದಾಗಬೇಕು ಎಂದು ಕರೆ ನೀಡಿದರು.

ಗಾಂಧಿ ಸ್ವಾತಂತ್ರ್ಯ ಹೋರಾಟದಲ್ಲಿ ದಂಡಿಗೆ ಪಾದಯಾತ್ರೆ ನಡೆಸುವ ಮೂಲಕ ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದರು. ಪ್ರಸ್ತುತ ಪಂಚಮಸಾಲಿ ಸಮಾಜದಲ್ಲಿ ಸಂಘಟನೆಯ ಕಿಚ್ಚು ಮೂಡಲು ಈ ಸದ್ಭಾವನ ಪಾದಯಾತ್ರೆ ನಾಂದಿ ಹಾಡಲಿದೆ ಎಂದು ಹೇಳಿದರು.

ಕಾಯಕವೇ ಕೈಲಾಸ ಎಂಬ ವಚನ ಬದುಕಿನ ಸಾರ್ಥಕತೆಯ ಮೂಲ. ಈ ಸಾಧನೆಗೆ ಅಗತ್ಯವಾದ ದೇಹ ಹಾಗೂ ಮನಸ್ಸನ್ನು ಸಿದ್ಧಗೊಳಿಸುವ ವಿಧಾನವೇ ಯೋಗ. ಈ ಕಲೆಯ ಕಲಿಕೆ ಹಾಗೂ ಸಾಧನೆ ಮೂಲಕ ಜಗದ್ವಿಖ್ಯಾತಿ ಪಡೆದಿರುವ ವಚನಾನಂದರು ತಮ್ಮ ಬದುಕನ್ನು, ಸಂಪೂರ್ಣ ಸಾಧನೆಯನ್ನು ಸಮಾಜದ ಅಭಿವೃದ್ಧಿಗೆ ಧಾರೆ ಎರೆಯಲು ಸಿದ್ಧವಾಗಿರುವುದು ಸಮಾಜದ ಅದೃಷ್ಟ ಎಂದು ಬಣ್ಣಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ‘ಈ ಪೀಠದ ಜವಾಬ್ದಾರಿ ನಮಗೆ ದೊರೆಯಲು ತರಳಬಾಳು ಸ್ವಾಮೀಜಿ ಅವರ ಆಶೀರ್ವಾದ ಕಾರಣ. ಭವಿಷ್ಯದಲ್ಲಿ ಪೀಠಕ್ಕೆ ಹಾಗೂ ಸಮಾಜಕ್ಕೆ ಅವರ ಮಾರ್ಗದರ್ಶನ ಅಗತ್ಯ’ ಎಂದರು.

ಚನ್ನಮ್ಮ ಅವರು ಆಡಳಿತ ನಡೆಸಿದ್ದ ಐತಿಹಾಸಿಕ ಕೋಟೆ ಸರ್ಕಾರದ ನಿರ್ಲಕ್ಷ್ಯದಿಂದ ಪಾಳು ಬೀಳುತ್ತಿದೆ. ಕೋಟೆಯನ್ನು ಹಾಗೂ ಅವರ ಐಕ್ಯಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿಸುವ ಜತೆಗೆ ಅವರ ಇತಿಹಾಸದಲ್ಲಿ ನಡೆದಿರುವ ತಪ್ಪುಗಳನ್ನು ಸರಿಪಡಿಸುವ ಕಾರ್ಯ ನಡೆಯಬೇಕು ಎಂದು ಆಗ್ರಹಿಸಿದರು.

ಸಮಾಜದ ಸಂಘಟನೆ ಹಾಗೂ ಬಲವೃದ್ಧಿಗೆ ಪಾದಯಾತ್ರೆ ಸಹಕಾರಿಯಾಗಲಿದೆ ಎಂಬ ಚಿಂತನೆ ಈ ಕಾರ್ಯಕ್ರಮದ ಮೂಲ ಉದ್ದೇಶ. ಪಾದಯಾತ್ರೆಯ ಸಮಯದಲ್ಲಿ ಪ್ರಮುಖ ನಗರಗಳಲ್ಲಿ ವಾಸ್ತವ್ಯ ಹೂಡಿ ಧಾರ್ಮಿಕ, ಯೋಗ ಹಾಗೂ ಆಧ್ಯಾತ್ಮಿಕ ಚಿಂತನೆಯನ್ನು ಸಾರ್ವಜನಿಕರಲ್ಲಿ ಮೂಡಿಸುವ ಮೂಲಕ ಸಮಾಜದಲ್ಲಿ ಆರೋಗ್ಯ, ನೆಮ್ಮದಿ ಹಾಗೂ ಶಾಂತಿಯನ್ನು ಸೃಷ್ಟಿಸಬಹುದು ಎಂದರು.

ಹಗರಿಬೊಮ್ಮನಹಳ್ಳಿ ಶಾಖಾ ಪೀಠದ ಮಹಾಂತ ಸ್ವಾಮೀಜಿ, ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಣಸಿ ಸಿದ್ದೇಶ್, ಉಪಾಧ್ಯಕ್ಷ ಜಿ.ಪಿ. ಪಟೇಲ್, ಮಾಜಿ ಅಧ್ಯಕ್ಷ ಬಸವರಾಜ್ ದಿಂಡೂರು, ಟ್ರಸ್ಟಿಗಳಾದ ಬಾವಿ ಬೆಟ್ಟಪ್ಪ, ಚಂದ್ರಶೇಖರ್ ಪೂಜಾರ್, ಮುಖಂಡರಾದ ಮಲಣ್ಣ ಬೂಮಸಾಗರ್, ಎನ್.ಜಿ. ನಾಗನಗೌಡ, ಲಕ್ಷಣ ಹುಳ್ಳೇರ್, ರಮೇಶ್ ಗೌಡ ಪಾಟೀಲ್, ವಸಂತಮ್ಮ ಹುಲತ್ತಿ, ನಾಗರತ್ನಮ್ಮ ಬಾವಿಕಟ್ಟಿ, ಕರಿಬಸಪ್ಪ ಹಾಗೂ ಇತರರು ಹಾಜರಿದ್ದರು.

ಪಾದಯಾತ್ರೆ ಹಾದಿ....

ಪಾದಯಾತ್ರೆಯು ಮಠದ ಆವರಣದಿಂದ ಆರಂಭಗೊಂಡು ಹರಿಹರೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಸಭೆಯಲ್ಲಿ ಮುಂದುವರಿಯಿತು. ನಂತರ, ಕೋಡಿಯಾಲ ಹೊಸಪೇಟೆಯಲ್ಲಿ ವಾಸ್ತವ್ಯ. 2ನೇ ದಿನ ಬೆಳಿಗ್ಗೆ 5ರಿಂದ ರಾಣೆಬೆನ್ನೂರು, 3ನೇ ದಿನ ಮೋಟೆಬೆನ್ನೂರು, 4ನೇ ದಿನ ಹಾವೇರಿ, 5ನೇ ದಿನ ಬಿಸಲಹಳ್ಳಿ, 6ನೇ ದಿನ ತಡಸ ಗ್ರಾಮ, 7ನೇ ದಿನ ಹುಬ್ಬಳ್ಳಿ, 8ನೇ ದಿನ ಧಾರವಾಡ, 9ನೇ ದಿನ ಕಿತ್ತೂರು ನಂತರ, 10ನೇ ದಿನ ಬೈಲಹೊಂಗಲಕ್ಕೆ ಪಾದಯಾತ್ರೆ ಸಾಗಲಿದೆ. ಮುಕ್ತಾಯಗೊಳಿಸಿ, ಕಿತ್ತೂರು ರಾಣಿ ಚನ್ನಮ್ಮ ಅವರ ಐಕ್ಯಸ್ಥಳಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ, ಕಿತ್ತೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

**

ಪೀಠ ಸ್ಥಾಪನೆಯಾಗಿ ದಶಕದ ನಂತರ ಆಯೋಜನೆಯಾಗಿರುವ ಪಾದಯಾತ್ರೆ ದಶಮಾನೋತ್ಸವಕ್ಕೆ ಮೆರುಗು ನೀಡಿದೆ

- ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಗುರುಪೀಠ, ಸಿರಿಗೆರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry