4
ಪಂಪ್‌ಹೌಸ್ ಸಮೀಪದ ಟ್ರಾನ್ಸ್‌ಫಾರ್ಮರ್ ಕಳವು

ಔರಾದ್‌: ಕುಡಿವ ನೀರಿನ ಸಮಸ್ಯೆ ಉಲ್ಬಣ

Published:
Updated:
ಔರಾದ್‌: ಕುಡಿವ ನೀರಿನ ಸಮಸ್ಯೆ ಉಲ್ಬಣ

ಔರಾದ್: ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. 10 ದಿನಗಳ ಹಿಂದೆ ಹಾಲಹಳ್ಳಿ ಪಂಪ್‌ಹೌಸ್ ಸಮೀಪದ ಟ್ರಾನ್ಸ್‌ಫಾರ್ಮರ್ ಕಳವು ಆಗಿದೆ. ಇದರಿಂದಾಗಿ ಮಾಂಜ್ರಾ ನದಿ ನೀರು ಪೂರೈಕೆ ಸ್ಥಗಿತಗೊಂಡು ಪಟ್ಟಣದ ಜನರು ನೀರಿಗಾಗಿ ಪರದಾಡುವಂತಾಗಿದೆ.

ಸದ್ಯ 2–3 ದಿನಕ್ಕೊಮ್ಮೆ ತೇಗಂಪುರ ಕೆರೆ ನೀರನ್ನು ಪೂರೈಸಲಾಗುತ್ತಿದೆ. ಆದರೂ ಅದೂ ಎಲ್ಲ ವಾರ್ಡ್‌ಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗ ಕಾರಣ ಜನರು ಪಟ್ಟಣ ಪಂಚಾಯಿತಿ ಕಾರ್ಯನಿರ್ವಹಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ನಮ್ಮಲ್ಲಿ ವಾರದಿಂದ ನೀರು ಬಾರದ ಕಾರಣ ಬೇರೆಡೆಯಿಂದ ನೀರು ಖರೀದಿ ಅನಿವಾರ್ಯವಾಗಿದೆ. 1000 ಲೀಟರ್‌ ನೀರಿಗೆ ₹ 400 ರಿಂದ ₹ 500 ಕೊಡಬೇಕಾಗಿದೆ. ತೇಗಂಪುರ ಕೆರೆ ನೀರು ಕಲುಷಿತವಾಗಿದ್ದು, ಅದನ್ನು ಕುಡಿಯಲು ಆಗುವುದಿಲ್ಲ. ಕೊಳವೆ ಬಾವಿ ನೀರು ಬತ್ತಿದೆ. ಕುಡಿವ ನೀರಿನ ಸಮಸ್ಯೆ ತೀವ್ರಗೊಂಡಿದೆ’ ಎಂದು ’ ಎಂದು ಪಟ್ಟಣದ ಶಿಕ್ಷಕ ಕಾಲೊನಿ ಮತ್ತು ಇತರ ಬಡಾವಣೆಗಳ ನಿವಾಸಿಗಳು ಹೇಳುತ್ತಾರೆ.

‘ಕುಡಿಯುವ ನೀರು ಪೂರೈಸುವ ಹಾಲಹಳ್ಳಿ ಪಂಪ್‌ಹೌಸ್ ಬಳಿ ಟಾನ್ಸ್‌ಫಾರ್ಮರ್‌ನ್ನು ಕಿಡಿಗೇಡಿಗಳು ಕಳವು ಮಾಡಿದ್ದಾರೆಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಕೃತ್ಯ ನಡೆಸಿದವರನ್ನು ಈವರೆಗೆ ಬಂಧಿಸಲಾಗಿಲ್ಲ.ತಕ್ಷಣ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಿ, ಜನರಿಗೆ ಕುಡಿಯುವ ನೀರು ಪೂರೈಸಬೇಕು’ ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

‘ತಾಲ್ಲೂಕಿನ ಎಕಂಬಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹುಲ್ಯಾಳ ಗ್ರಾಮದಲ್ಲಿ ಜನ ಕುಡಿಯವ ನೀರಿಗಾಗಿ ಪರದಾಡುತ್ತಿದ್ದಾರೆ. 2 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಏಕೈಕ ನೀರಿನ ಮೂಲ ಇದೆ. ಅಲ್ಲಿಂದಲೂ ಕೂಡ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ’ ಎಂದು ಅವರು ಹೇಳುತ್ತಾರೆ.

‘ನಮ್ಮ ಊರಲ್ಲಿ ಎರಡು ತಿಂಗಳಿನಿಂದ ಕುಡಿಯುವ ನೀರಿಗಾಗಿ ಜಗಳ  ನಡೆಯುತ್ತಿದೆ. 2–3 ದಿನಕ್ಕೊಮ್ಮೆಯಾದರೂ ಸರಿಯಾಗಿ ನೀರು ಬರುತ್ತಿಲ್ಲ. ಈ ಕಾರಣ ಮಹಿಳೆಯರು, ಮಕ್ಕಳು ನೀರಿಗಾಗಿ ಅಲೆಯಬೇಕಾಗಿದೆ’ ಎಂದು ಹುಲ್ಯಾಳ ನಿವಾಸಿ ಮಾರುತಿ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಸಾವರಗಾಂವ್, ಲಿಂಗಿ ಸೇರಿದಂತೆ ವಿವಿಧ ಗ್ರಾಮ ಮತ್ತು ತಾಂಡಾಗಳಲ್ಲಿ ಜನ ನೀರಿಗಾಗಿ ಪರದಾಡುತ್ತಿದ್ದರೂ ಗ್ರಾಮ ಪಂಚಾಯಿತಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಸಮಸ್ಯೆ ನಿವಾರಣೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ದೂರುತ್ತಾರೆ.

**

ಪಂಪ್‌ಹೌಸ್ ಸಮೀಪದ ಟ್ರಾನ್ಸ್‌ಫಾರ್ಮರ್‌ ಕಳವು ಆಗಿ ಕುಡಿಯುವ ನೀರು ಪೂರೈಸಲು ಸಮಸ್ಯೆಯಾಗಿದೆ. ಸಮಸ್ಯೆ ಪರಿಹರಿಸಲು ಎರಡು ದಿನ ಕಾಲಾವಕಾಶ ಬೇಕು

ಸವಿತಾ, ಮುಖ್ಯಾಧಿಕಾರಿ, ಪಪಂ. ಔರಾದ್ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry