ಮರಗಳನ್ನೇ ಹೆತ್ತ ಮಕ್ಕಳಂತೆ ಪ್ರೀತಿಸಿದೆ

7
ವನ ಮಹೋತ್ಸವ ಸಮಾರಂಭದಲ್ಲಿ ಸಾಲುಮರದ ತಿಮ್ಮಕ್ಕ ಅಭಿಮತ

ಮರಗಳನ್ನೇ ಹೆತ್ತ ಮಕ್ಕಳಂತೆ ಪ್ರೀತಿಸಿದೆ

Published:
Updated:

ಹಾಸನ: ‘ಮುಂದಿನ ಪೀಳಿಗೆ ಆರೋಗ್ಯ ಯುತ ಜೀವನ ನಡೆಸಬೇಕೆಂದರೆ ಗಿಡ, ಮರಗಳನ್ನು ಉಳಿಸಿ ಬೆಳೆಸಬೇಕು’ ಎಂದು ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಸಲಹೆ ನೀಡಿದರು.

ನಗರದ ಮಣಿ ಆಸ್ಪತ್ರೆಯ 12ನೇ ವಾರ್ಷಿಕೋತ್ಸವ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ, ಗರ್ಭಿಣಿಯರ ತೀವ್ರ ನಿಗಾ ಘಟಕ ಉದ್ಘಾಟನೆ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಸಸಿಗೆ ನೀರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

‘ವಿವಾಹವಾಗಿ 25 ವರ್ಷವಾದರೂ ಮಕ್ಕಳಾಗಲಿಲ್ಲ. ಇದರಿಂದ ಮಾನಸಿಕವಾಗಿ ಸಾಕಷ್ಟು ತೊಂದರೆ ಅನುಭವಿಸಿದೆ. ಮರಗಳನ್ನೇ ಹೆತ್ತ ಮಕ್ಕಳಂತೆ ಪ್ರೀತಿಸಲು ನಿರ್ಧರಿಸಿದೆ. ಅದರಂತೆ ಅನೇಕ ಗಿಡ ಬೆಳೆಸಿದ್ದೇನೆ. ಗಿಡ-ಮರಗಳು ಹೆಚ್ಚು ಇದ್ದರೇ ಉತ್ತಮ ಗಾಳಿ ಬರುತ್ತದೆ. ಕಾಲಕಾಲಕ್ಕೆ ಮಳೆ ಬರಲು ಸಾಧ್ಯ’ ಎಂದು ಹೇಳಿದರು.

‘ಪ್ರಸ್ತುತ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ರೈತ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಬೇಕು. ಕೃಷಿ ಚಟುವಟಿಕೆಯಲ್ಲಿ ತೊಡಗುವಂತೆ ಪೋಷಕರು ಮತ್ತು ಶಿಕ್ಷಕರು ಸಲಹೆ ನೀಡಬೇಕು’ ಎಂದು ನುಡಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಡಾ. ನಾಗೇಶ್ ಮಾತನಾಡಿ, ‘ಆರೋಗ್ಯ ಕೆಟ್ಟರೆ ಆಸ್ಪತ್ರೆಗೆ ಹೋಗುತ್ತೇವೆ. ಆಸ್ಪತ್ರೆಗಳು ಕಾಯಿಲೆಗೆ ಚಿಕಿತ್ಸೆ ಕೊಡುತ್ತದೆ ಹೊರತು ಪೂರ್ಣ ಆರೋಗ್ಯವನ್ನಲ್ಲ’ ಎಂದರು.

‘ಜೀವಿತದ ಕೊನೆವರೆಗೆ ಆರೋಗ್ಯವಾಗಿರಲು ಸುತ್ತಲಿನ ಪರಿಸರ ಉತ್ತಮವಾಗಿರಬೇಕು. ಮಿತ ಆಹಾರ, ದುಶ್ಚಟಗಳಿಂದ ದೂರವಿದ್ದರೆ ಮಾತ್ರ ನೆಮ್ಮದಿ ಬದುಕು ನಮ್ಮದಾಗುತ್ತದೆ’ ಎಂದು ಸಲಹೆ ನೀಡಿದರು.

ಆಸ್ಪತ್ರೆಯ ಸೌಮ್ಯಮಣಿ, ರೋಟರಿ ಕ್ಲಬ್‌ನ ಶಿವಕುಮಾರ್, ಡಿ. ಮೋಹನ್, ರಮಾನಂದ್, ಯತೀಶ್ ಕುಮಾರ್, ಬಳ್ಳೂರು ಉಮೇಶ್, ರಾಜಲಕ್ಷ್ಮಿ, ದಿನೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry