ನಿಫಾ ಬಗ್ಗೆ ಬೇಡ ಭಯ!

7

ನಿಫಾ ಬಗ್ಗೆ ಬೇಡ ಭಯ!

Published:
Updated:
ನಿಫಾ ಬಗ್ಗೆ ಬೇಡ ಭಯ!

ನಿಫಾ ದಕ್ಷಿಣ ಏಷ್ಯಾ ದೇಶಗಳನ್ನು ಸುಮಾರು ಹದಿನೆಂಟು ವರ್ಷಗಳಿಂದ ಕಾಡುತ್ತಿದ್ದ ಇತಿಹಾಸ ಇದೆ. ಆಗ ಇಂದಿನಷ್ಟು ಸುದ್ದಿಮಾಧ್ಯಮಗಳಲ್ಲಿ ನಿಫಾ ಮಾಹಿತಿಗಳು ಪ್ರಚಾರ ಪಡೆದಿಲ್ಲ. ಇಂದಿನಷ್ಟು ಸಂಚಾರ ವ್ಯವಸ್ಥೆ ಮುಂದುವರಿದಿರಲಿಲ್ಲ. ಹಾಗಾಗಿ ರೋಗ ಕಾಣಿಸಿಕೊಂಡ ಕಡೆಯಿಂದ ರೋಗಿ ಬೇರೆಡೆಗೆ ವಲಸೆ ಹೋಗದ ಕಾರಣ ಅದು ಶುರುವಾದ ಕಡೆಯಲ್ಲಿಯೇ ಕೆಲಕಾಲ ಉಳಿದು ಮತ್ತೆ ಮಾಯವಾಗುತ್ತಿತ್ತು. ಬಹುತೇಕ ದೇಶಗಳಲ್ಲಿ ಇದು ಕಡು ಬೇಸಿಗೆಯ ದಿನಗಳಲ್ಲಿ ಉಲ್ಬಣಿಸಿದ ಅಂಕೆ ಸಂಖ್ಯೆ ಲಭ್ಯ. ಮಲೇಷ್ಯಾದಲ್ಲಿ ಸೆಪ್ಟಂಬರ್ 1998ರ ಆಸುಪಾಸಿಗೆ ಅದರ ಮೊದಲ ರೋಗಿಯ ಪತ್ತೆ ಮಾಹಿತಿ ವಿಶ್ವ ಆರೋಗ್ಯ ಸಂಸ್ಥೆ ದಾಖಲಿಸಿದೆ. ಅನಂತರದ ವಿವಿಧ ದೇಶಗಳಲ್ಲಿ ರೋಗದ ಜಾಡು ಗಮನಿಸಿದರೆ ಜನವರಿಯಿಂದ ಏಪ್ರಿಲ್ ಪರ್ಯಂತದ ರೋಗ ಉಲ್ಬಣತೆ ದಾಖಲೆಗಳಿವೆ.

ಭಾರತದಲ್ಲಿ ಈ ಮೊದಲು 2001ರಲ್ಲಿ ಸಿಲಿಗುರಿ ಹಾಗೂ 2007ರಲ್ಲಿ ನಾಡಿಯಾ ಎಂಬಲ್ಲಿ ನಿಫಾ ಪ್ರಕರಣ ಪತ್ತೆಯಾದ ಸಂಗತಿ ಕೂಡ ಗಮನಾರ್ಹ. ಮುಖ್ಯವಾಗಿ ಬಾಂಗ್ಲಾದೇಶ, ಮಯನ್ಮಾರ್‌, ಆಸ್ಟ್ರೇಲಿಯಾ, ಸಿಂಗಾಪುರ, ಥಾಯ್ಲೆಂಡ್, ಫಿಲಿಪಿನ್ಸ್‌ ದೇಶಗಳಲ್ಲಿಯೇ ನಿಫಾ ವೈರಾಣು ದಾಂಧಲೆ ಕಂಡು ಬಂದಿದೆ. ಬಾವಲಿ ಹಕ್ಕಿಯ ಪ್ರಭೇದಗಳು ಇಂತಹ ದೇಶಗಳಲ್ಲಿ ಧಾರಾಳ ಇರುವುದರ, ಈ ಕಾಯಿಲೆ ಇಂತಹ ದೇಶಗಳಿಗೆ ಸೀಮಿತ ಎಂಬ ಅಂದಾಜು ನಾವು ಮಾಡಲು ಸಾಧ್ಯ. ಅಲ್ಲದೆ ಗುಂಡುಕಿವಿಯ ಬಾವಲಿಗಳು ಇಂತಹ ವೈರಾಣು ಪ್ರಸಾರಕ್ಕೆ ಮುಖ್ಯ ಕಾರಣ ಎಂಬ ಶಂಕೆ ಕೂಡ ವೈದ್ಯವಿಜ್ಞಾನಿಗಳ ವಲಯದಲ್ಲಿದೆ.

ಪ್ಟಿರೋಪಸ್ ಪ್ರಭೇದಗಳ ವೈರಾಣುಗಳಿಂದ ನಿಫಾ ಜ್ವರದ ಹಾವಳಿ ಎಂಬ ವಿಚಾರ ರೋಗ ವಿಜ್ಞಾನಶಾಸ್ತ್ರದ ಮೂಲಕ ಇದೀಗ ಬಿತ್ತರಗೊಳುತ್ತಿದೆ. ಶೀತರಕ್ತ ಪ್ರಾಣಿಯಾದ ಬಾವಲಿಯ ಜೊಲ್ಲು, ಮೂತ್ರ, ಹಿಕ್ಕೆ ಮತ್ತು ವೀರ್ಯದಲ್ಲಿ ಇಂತಹ ವೈರಾಣುಗಳ ಸಂಖ್ಯೆ ಹೇರಳವಿದೆಯಂತೆ. ಅದು ಮನುಷ್ಯದೇಹ ಪ್ರವೇಶದಿಂದ ರೋಗ ಹರಡುತ್ತದೆ. ಮನುಷ್ಯರ ದೇಹ ಹೊಕ್ಕ ಅನಂತರ ರಕ್ತದಲ್ಲಿ ವೈರಾಣು ವಿಪುಲಗೊಳ್ಳುತ್ತದೆ. ಅಂತಹ ರೋಗ ಪೀಡಿತ ವ್ಯಕ್ತಿ ಉಸಿರಾಟದ ಮೂಲಕ ಇನ್ನೊಬ್ಬರಿಗೆ ರೋಗ ಹರಡುವ ಸಾಧ್ಯತೆ ಇದೆ ಎಂಬ ಸಂಗತಿ ವೈದ್ಯಕೀಯ ಜಗತ್ತಿನ ಇಂದಿನ ನಿಲುವು. ಹಾಗಾಗಿ ರೋಗದ ತಡೆಗೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಅನೇಕ ಹಾದಿಗಳಿವೆ.

ನಿಫಾ ವೈರಾಣು ತಗಲಿದ ಅನಂತರ ರೋಗಿಗಳ ಪರಿಸ್ಥಿತಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಅಂಕಿ–ಅಂಶಗಳನ್ನು ಗಮನಿಸಿರಿ. ಇದುವರೆಗೆ ಕೇವಲ ಶೇ 40 ರೋಗಿಗಳಷ್ಟೆ ಮರಣಿಸಿದ ಸಂಗತಿ ಗಮನಾರ್ಹ. ಕ್ಲುಪ್ತ ಕಾಲದಲ್ಲಿ ವೈದ್ಯಕೀಯ ನೆರವು ದೊರಕಿದರೆ ಖಂಡಿತ ಅಂತಹ ಸಾವು–ನೋವು ತಡೆಯಲು ಸಾಧ್ಯವಿದೆ. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಇನ್ನೊಂದು ವಿಚಾರ ಇಲ್ಲಿದೆ. ವರದಿಗಳ ಪ್ರಕಾರ ಇಂದಿನ ತನಕ ವಿಶ್ವದಲ್ಲಿ ಕೇವಲ 477 ರೋಗಿಗಳು ಪತ್ತೆಯಾದ ಸಂಗತಿ ಹಾಗೂ ಅವರ ಪೈಕಿ 248 ರೋಗಿಗಳು ಮರಣಿಸಿದ ವಿಷಯ ಕೂಡ ಗಮನಾರ್ಹ. ಹಾಗಾದರೆ ನಿಫಾ ಬಗ್ಗೆ ಅದೊಂದು ಮಾರಣಾಂತಿಕ ಮತ್ತು ಮದ್ದಿಲ್ಲದ ಕಾಯಿಲೆ ಎಂಬ ಅನಗತ್ಯ ಪ್ರಚಾರ ಎನ್ನುವುದನ್ನು ನಾವು ತಿಳಿಯಬೇಕಿದೆ.

ಬಾವಲಿ ಹಾಗೂ ಹಂದಿಗಳನ್ನು ರೋಗದ ಪ್ರಸಾರಕಗಳು ಎಂದು ಗುರುತಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವೈಜ್ಞಾನಿಕ ಅಧ್ಯಯನ ಪತ್ರದ ಪ್ರಕಾರ ಅತಿ ಹೆಚ್ಚಿನ ಸಾವು–ನೋವು ಉಂಟಾದುದು ಬಾಂಗ್ಲಾ ದೇಶದಲ್ಲಿಯೇ. ಅಲ್ಲಿ ಬಹುತೇಕ ಮಂದಿ ಕಳ್ಳು ಕುಡಿದು ಈ ರೋಗ ಬರಿಸಿಕೊಂಡರು ಎಂಬ ವರದಿ ನಂಬಲು ಸಾಧ್ಯ. ಸೇಂದಿಯಂತಹ ಅಗ್ಗದ ಅಮಲು ಪದಾರ್ಥ ಸೇವಿಸುವ ಮಂದಿಗೆ ರೋಗ ನಿರೋಧಕಶಕ್ತಿ ತಾನಾಗಿಯೇ ಕುಂದಿರುತ್ತದೆ ಎಂಬುದನ್ನು ಗಮನಿಸಬೇಕು. ಹಾಗಾಗಿ ಇಲ್ಲಿ ವೈಯಕ್ತಿಕ ಜೀವನಶೈಲಿ ಸುಧಾರಣೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವತ್ತ ನಾವು ಗಮನವಿಡುವುದು ಬಹಳ ಮುಖ್ಯ.

ರೋಗದಲ್ಲಿ ಕಂಡು ಬರುವ ಲಕ್ಷಣಗಳು ಜ್ವರ ಮತ್ತು ಮೈ ಕೈ ನೋವು. ವೈರಾಣುಗಳು ಅತಿ ಹೆಚ್ಚು ಉತ್ಪಾದನೆಯಾದಾಗ ಮಾತ್ರ ಪರಿಸ್ಥಿತಿ ಕೊಂಚ ಕ್ಲಿಷ್ಟ. ತದನಂತರದಲ್ಲಿ ಮೆದುಳಿನಲ್ಲಿ ಉರಿಯೂತ ಉಂಟಾಗುತ್ತದೆ. ಮೆದುಳು ಬಾವು ಚೇತರಿಸಿಕೊಳ್ಳದಿದ್ದರೆ ಬಹು ಅಂಗಾಂಗ ವೈಫಲ್ಯ. ಅದರಿಂದ ಸಾವು. ಇಂತಹ ಪರಿಸ್ಥಿತಿ ಬಂದಾಗಲಷ್ಟೆ ರೋಗದ ದೆಸೆಯಿಂದ ಸಾವು ಉಂಟಾದೀತು. ರಕ್ತದ ಸಕಾಲಿಕ ತಪಾಸಣೆಯಿಂದ ವೈರಾಣು ಪತ್ತೆ ಸಾಧ್ಯವಿದೆ. ವೈರಾಣು ತಪಾಸಣೆ ‘ಎಲೀಸಾ ಪರೀಕ್ಷೆ’ ಮೂಲಕ ಇಂತಹ ರೋಗದ ಜಾಡು ತಿಳಿಯಲಾದೀತು.

ಹಾಗಾಗಿ ಬಂದ ಎಲ್ಲ ನೆಗಡಿ–ಜ್ವರದ ಬಗ್ಗೆ ಭೀತಿ ಅನಗತ್ಯ. ರೋಗದ ತಡೆಗೆ ಮುನ್ನೆಚ್ಚರಿಕೆ ತುಂಬ ಅಗತ್ಯ. ಉತ್ತಮ ಜೀವನಶೈಲಿಯ ಮೂಲಕ ರೋಗ ನಿರೋಧಕಶಕ್ತಿ ಹೆಚ್ಚಳವೇ ರೋಗ ತಡೆಯುವ ಮೂಲಮಂತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry