ಶುಕ್ರವಾರ, ಜೂನ್ 25, 2021
22 °C

70 ವಸಂತಗಳ ಅನುಭವದ ಪಡೆ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

70 ವಸಂತಗಳ ಅನುಭವದ ಪಡೆ

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳ ಅಂತರರಾಷ್ಟ್ರೀಯ ದಿನಾಚರಣೆ ಮಂಗಳವಾರವಷ್ಟೇ (ಮೇ 29) ನಡೆದಿದೆ. ಶಾಂತಿಗಾಗಿ ಪ್ರಾಣತ್ಯಾಗ ಮಾಡಿದ ವಿವಿಧ ದೇಶಗಳ ಯೋಧರನ್ನು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಸ್ಮರಿಸಿಕೊಂಡರು. ಶಾಂತಿಪಾಲನಾ ಪಡೆಯ ಹುಟ್ಟು, ಕಾರ್ಯವೈಖರಿಯ ಕುರಿತು ಇಲ್ಲಿದೆ ಮಾಹಿತಿ.

* ಶಾಂತಿಪಾಲನಾ ಪಡೆಯ ಉದ್ದೇಶವೇನು?

ಸಶಸ್ತ್ರ ಹೋರಾಟ ನಡೆಯುವ ದೇಶಗಳಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಈ ಪಡೆಯ ಉದ್ದೇಶ. ವಿಶ್ವಸಂಸ್ಥೆ ಈ ಪಡೆಗಳನ್ನು ಅಗತ್ಯವೆನಿಸಿದ ಸಂದರ್ಭದಲ್ಲಿ ನಿಯೋಜಿಸುತ್ತದೆ. ಪ್ರಚೋದಿತ ಸಶಸ್ತ್ರ ತಿಕ್ಕಾಟ ನಡೆದಾಗ, ವಿಶ್ವಸಂಸ್ಥೆಯು ಮೊದಲು ಶಾಂತಿ ಸಂಧಾನದ ಪ್ರಯತ್ನಕ್ಕೆ ಮುಂದಾಗುತ್ತದೆ. ಅದೂ ಸಾಧ್ಯವಾಗದೇ ಹೋದಾಗ ಪರಿಸ್ಥಿತಿಯನ್ನು ತಹಬಂದಿಗೆ ತರಲು ಶಾಂತಿಪಾಲನಾ ಪಡೆಗಳು ಕಾರ್ಯಪ್ರವೃತ್ತವಾಗುತ್ತವೆ.

* ಶಾಂತಿಪಾಲನೆ ಕಾರ್ಯಾಚರಣೆಯ ವಿಧಗಳೇನು?

ನಿಶ್ಶಸ್ತ್ರ ಪಡೆಗಳು ನಿಗಾ ಸಮೂಹಗಳಾಗಿ ಕೆಲಸ ನಿರ್ವಹಿಸುತ್ತವೆ. ಲಘು ಶಸ್ತ್ರಾಸ್ತ್ರ ಹೊಂದಿದ ಪಡೆಗಳೂ ಇವೆ. ಅವು ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಬಳಸುತ್ತವೆಯಷ್ಟೆ.

* ಭಾರತದ ಎಷ್ಟು ಯೋಧರು ಈಗ ಈ ಪಡೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ?

6,693 ಮಂದಿ ಯೋಧರು ನಿರತರಾಗಿದ್ದಾರೆ. ಶಾಂತಿಪಾಲನಾ ಪಡೆಗೆ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿ ನಿಯೋಜಿಸಿದ ದೇಶಗಳಲ್ಲಿ ಭಾರತಕ್ಕೆ ಮೂರನೇ ಸ್ಥಾನ.

* ಶಾಂತಿಸ್ಥಾಪನಾ ಕಾರ್ಯದಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ಸಂಖ್ಯೆ ಎಷ್ಟು?

1948ರಿಂದ ಇಲ್ಲಿಯವರೆಗೆ ಒಟ್ಟು 3,737 ಜನ ಪ್ರಾಣತ್ಯಾಗ ಮಾಡಿದ್ದಾರೆ. ಕರ್ತವ್ಯದ ವೇಳೆ ಭಾರತದ ಯೋಧರು, ಪೊಲೀಸರು ಸೇರಿ 163 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ ಭಾರತದ ಒಬ್ಬ ಯೋಧನೂ ಮೃತಪಟ್ಟಿರಲಿಲ್ಲ. 2016ರಲ್ಲಿ ಇಬ್ಬರು ಜೀವತೆತ್ತಿದ್ದರು.

* ಶಾಂತಿಪಾಲನೆ ಕಾರ್ಯಾಚರಣೆ ಮೊದಲು ನಡೆದದ್ದು ಯಾವಾಗ, ಎಲ್ಲಿ, ಯಾಕೆ?

ಮಧ್ಯಪ್ರಾಚ್ಯದಲ್ಲಿ ವಿಶ್ವಸಂಸ್ಥೆಯ ನೆರವಿನ ಅಗತ್ಯ ಮೊದಲು ಕಂಡುಬಂದಿದ್ದು 1948ರಲ್ಲಿ; ಇಸ್ರೇಲ್ ಹಾಗೂ ಅರಬ್ ರಾಷ್ಟ್ರಗಳ ನಡುವಿನ ತಿಕ್ಕಾಟದ ಸಂದರ್ಭದಲ್ಲಿ. ಮೊದಲು ಎರಡೂ ಬಣಗಳ ಹೋರಾಟದ ಕುದಿಬಿಂದು ಹೇಗಿದೆ ಎಂದು ಗಮನಿಸಲು ನಿಗಾ ಪಡೆಯನ್ನು ವಿಶ್ವಸಂಸ್ಥೆ ನಿಯೋಜಿಸಿತು. 1956, 1967 ಹಾಗೂ 1973ರ ಯುದ್ಧಗಳ ನಂತರವೂ ನಿಗಾ ಪಡೆಗಳ ಕಾರ್ಯಾಚರಣೆ ಮುಂದುವರಿಯಿತು. 1956ರ ಯುದ್ಧಾನಂತರ ಇಸ್ರೇಲ್ ಹಾಗೂ ಈಜಿಪ್ಟ್ ಸೇನೆಗಳ ನಡುವಿನ ತಿಕ್ಕಾಟ ತಗ್ಗಿಸಲೆಂದು ಸಿನಾಯ್‌ನಲ್ಲಿ ವಿಶ್ವಸಂಸ್ಥೆ ಮೊದಲ ಬಾರಿಗೆ ಸಶಸ್ತ್ರ ಪಡೆಯನ್ನು ನಿಯೋಜಿಸಿತು. ಹತ್ತು ದೇಶಗಳು ಯೋಧರನ್ನು ಪೂರೈಸಿದ್ದವು.

1967ರಲ್ಲಿ ಈಜಿಪ್ಟ್–ಇಸ್ರೇಲ್ ನಡುವಿನ ಯುದ್ಧಾನಂತರ ಕದನ ವಿರಾಮವನ್ನು ಖಾತರಿಪಡಿಸಿಕೊಳ್ಳಲು ಮತ್ತೊಂದು ಸಶಸ್ತ್ರ ಶಾಂತಿಪಾಲನಾ ಪಡೆಯನ್ನು ನಿಯೋಜಿಸಲಾಯಿತು. ಸಿರಿಯಾ ಹಾಗೂ ಇಸ್ರೇಲ್ ಪಡೆಗಳ ನಡುವೆ ಗಡಿ ರೇಖೆಯನ್ನು ಕಾಯ್ದುಕೊಳ್ಳಲು ಗೋಲನ್ ಹೈಟ್ಸ್‌ಗೆ 1974ರಲ್ಲಿ ವಿಶ್ವಸಂಸ್ಥೆಯು ಸಣ್ಣ ಪಡೆಯನ್ನು ಕಳುಹಿಸಿತು. 1978ರಲ್ಲಿ ಲೆಬನಾನ್ ಮೇಲೆ ಇಸ್ರೇಲ್ ಆಕ್ರಮಣ ನಡೆಸಿದಾಗ ‘ಯೂನಿಫಿಲ್’ (United Nations Interim Force in Lebanon–ಯುಎನ್ಐಎಫ್ಐಎಲ್ ಅರ್ಥಾತ್ ಲೆಬನಾನ್‌ನಲ್ಲಿ ವಿಶ್ವಸಂಸ್ಥೆಯ ಮಧ್ಯಂತರ ಪಡೆ) ರಚಿಸಲಾಯಿತು. ಇದು ವಿಶ್ವಸಂಸ್ಥೆ ನಿಯೋಜಸಿದ ಅತಿ ಬಲಾಢ್ಯ ಪಡೆ. ಇಸ್ರೇಲ್ ತನ್ನ ಪಡೆಯನ್ನು ಹಿಂದಕ್ಕೆ ಪಡೆದ ನಂತರದ ಸ್ಥಿತಿ ಹಾಗೂ ಶಾಂತಿ, ಸುವ್ಯವಸ್ಥೆ ನೆಲೆಸಿದೆ ಎನ್ನುವುದನ್ನು ಖಾತರಿಪಡಿಸಿಕೊಳ್ಳುವುದು ಈ ಪಡೆ ನಿಯೋಜನೆಯ ಉದ್ದೇಶವಾಗಿತ್ತು.

* ಸದ್ಯಕ್ಕೆ ವಿಶ್ವಸಂಸ್ಥೆಯ ಎಷ್ಟು ಶಾಂತಿಪಾಲನಾ ಪಡೆಗಳು ವಿಶ್ವದಾದ್ಯಂತ ಕಾರ್ಯತತ್ಪರವಾಗಿವೆ?

ನಾಲ್ಕು ಖಂಡಗಳಲ್ಲಿ ಹದಿನೈದು ಕಾರ್ಯಾಚರಣೆಗಳು ನಡೆದಿವೆ. ಈಗ ಪಡೆಗಳ ಉದ್ದೇಶ ಶಾಂತಿಪಾಲನೆಯೊಂದೇ ಅಲ್ಲ. ರಾಜಕೀಯ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಮಾಡುವುದು, ನಾಗರಿಕರ ರಕ್ಷಣೆ, ನಿಶ್ಶಸ್ತ್ರೀಕರಣಕ್ಕೆ ನೆರವು, ಚುನಾವಣೆ ಸುಸೂತ್ರವಾಗಿ ನಡೆಯುವಂತೆ ಮಾಡುವುದು, ಮಾನವ ಹಕ್ಕುಗಳು, ಮಹಿಳೆಯರ ಹಕ್ಕುಗಳ ರಕ್ಷಣೆ ಹಾಗೂ ಕಾನೂನು ಕಟ್ಟಳೆಗಳ ಮರುಸ್ಥಾಪನೆಯ ಉದ್ದೇಶಗಳೂ ಸೇರಿಕೊಂಡಿವೆ.

* ಶಾಂತಿಪಾಲನೆ ಕಾರ್ಯಕ್ಕೆ ಖಾತರಿ ಇದೆಯೇ?

ಇದು ತುಂಬಾ ಸಾಪೇಕ್ಷ ಸಂಗತಿ. ಸಂಕಷ್ಟದ ಪರಿಸ್ಥಿತಿಯಲ್ಲಿ, ಯುದ್ಧಾನಂತರ ಶಾಂತಿ ಕಾಪಾಡುವ ಕೆಲಸ ತುಂಬಾ ಕಷ್ಟಕರ. ಈ ಕೆಲಸದ ಕುರಿತು ಯಾರೂ ಖಾತರಿ ನೀಡಲಾಗದು. ಆದರೂ 70 ವರ್ಷಗಳ ಇತಿಹಾಸ ಗಮನಿಸಿದರೆ ಶಾಂತಿಪಡೆಗಳ ಕಾರ್ಯ ಶ್ಲಾಘನೀಯವೆನ್ನಬೇಕು. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರವು ಪಡೆಗಳಿಗೆ ಸಂದಿರುವುದೇ ಇದಕ್ಕೆ ಸಾಕ್ಷಿ.

* ಈ ಪಡೆಗಳ ಕಾರ್ಯಪರಿಶೀಲನೆ ಹೇಗೆ ನಡೆಯುತ್ತದೆ?

ವಿಶ್ವಸಂಸ್ಥೆಯ ಮಾಜಿ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು 17 ಸದಸ್ಯರ ಉನ್ನತ ಮಟ್ಟದ ಸ್ವತಂತ್ರ ಸಮಿತಿಯನ್ನು ರಚಿಸಿದ್ದಾರೆ. ಶಾಂತಿಪಾಲನಾ ಕಾರ್ಯವನ್ನು ಅದು ಪರಿಶೀಲಿಸುತ್ತದೆ. ಭವಿಷ್ಯದ ಕಾರ್ಯಯೋಜನೆಗಳನ್ನೂ ರೂಪಿಸುತ್ತದೆ.

* ಪ್ರಕ್ರಿಯೆಯಲ್ಲಿ ತೊಡಗುವ ವಿಶ್ವಸಂಸ್ಥೆಯ ಅಂಗಗಳಾವುವು?

ಸಾಮಾನ್ಯ ಸಭೆ, ಭದ್ರತಾ ಸಮಿತಿ, ಸೆಕ್ರೆಟರಿಯೆಟ್, ಪಡೆಗಳು, ನೆರವಿನ ಹಸ್ತ ಚಾಚಿದ ಪೊಲೀಸ್ ಪಡೆಗಳು, ಶಾಂತಿ ಬಯಸುವ ಆತಿಥೇಯ ರಾಷ್ಟ್ರಗಳ ಸರ್ಕಾರಗಳ ಒಗ್ಗೂಡುವಿಕೆಯಿಂದ ಶಾಂತಿ ಪ್ರಕ್ರಿಯೆ ಸಾಧ್ಯವಾಗುತ್ತದೆ.

* ಶಾಂತಿಪಾಲನಾ ಪಡೆಗೆ ಅನುದಾನ ಹೇಗೆ ಪೂರೈಕೆಯಾಗುತ್ತದೆ?

ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಶಾಂತಿಪಾಲನಾ ಪ್ರಕ್ರಿಯೆಯ ನಿರ್ವಹಣೆ, ವಿಸ್ತರಣೆಯ ನಿರ್ಧಾರ ತೆಗೆದುಕೊಳ್ಳುತ್ತದೆ. ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳು ಶಾಂತಿಪಾಲನೆಗಾಗಿ ತಮ್ಮ ಪಾಲನ್ನು ನೀಡಬೇಕು. ಭದ್ರತಾ ಸಮಿತಿಯ ಐದು ಶಾಶ್ವತ ರಾಷ್ಟ್ರಗಳು ಸಿಂಹಪಾಲು ಮೊತ್ತ ನೀಡುತ್ತವೆ. ಉಳಿದ ರಾಷ್ಟ್ರಗಳ ಆರ್ಥಿಕ ಚೈತನ್ಯಕ್ಕೆ ತಕ್ಕಂತೆ ಪಾಲನ್ನು ಪಡೆಯಲಾಗುತ್ತದೆ.

* 2017–2018ರಲ್ಲಿ ಶಾಂತಿಪಾಲನೆಗಾಗಿ ವಿನಿಯೋಗಿಸಿದ ಮೊತ್ತವೆಷ್ಟು?

2017ರ ಜುಲೈ 1ರಿಂದ 2018ರ ಜೂನ್‌ವರೆಗೆ 680 ಕೋಟಿ ಡಾಲರ್ (ಸುಮಾರು ₹ 45,803 ಕೋಟಿ). ಸೊಮಾಲಿಯಾದಲ್ಲಿನ ಆಫ್ರಿಕಾ ಒಕ್ಕೂಟ ಕಾರ್ಯಾಚರಣೆ, ಇಟಲಿಯ ಬ್ರಿಂಡಿಸಿ, ಸ್ಪೇನ್‌ನ ವೆಲೆನ್ಸಿಯಾ ಹಾಗೂ ಉಗಾಂಡದ ಎಂಟೆಬೆಯಲ್ಲಿನ ಪ್ರಾದೇಶಿಕ ಸೇವಾ ಕೇಂದ್ರದಲ್ಲಿನ ಕಾರ್ಯಾಚರಣೆಗಾಗಿ ಈ ಮೊತ್ತದ ಬಹುಪಾಲನ್ನು ವಿನಿಯೋಗಿಸಲಾಗಿದೆ.

ಹೆಚ್ಚಿನ ಕಾಣಿಕೆ

2017ರಲ್ಲಿ ಶಾಂತಿಪಾಲನಾ ಪಡೆಗಳ ವೆಚ್ಚಕ್ಕೆ ಅತಿ ಹೆಚ್ಚು ಕಾಣಿಕೆ ನೀಡಿದ ದೇಶಗಳು ಯಾವುವು?


ಅಮೆರಿಕ–ಶೇ 28.47, ಚೀನಾ– ಶೇ 10.25, ಜಪಾನ್– ಶೇ 9.68, ಜರ್ಮನಿ–ಶೇ 6.39, ಫ್ರಾನ್ಸ್‌– ಶೇ 6.28, ಯುನೈಟೆಡ್ ಕಿಂಗ್‌ಡಂ– ಶೇ 5.77, ರಷ್ಯಾ ಒಕ್ಕೂಟ– ಶೇ 3.99, ಇಟಲಿ–ಶೇ 3.75, ಕೆನಡಾ– ಶೇ 2.92 ಹಾಗೂ ಸ್ಪೇನ್– ಶೇ 2.44.

ಪ್ರತಿ ಶಾಂತಿಪಾಲನಾ ಕಾರ್ಯಾಚರಣೆಯ ಬಜೆಟ್ ಭಿನ್ನವಾಗಿರುತ್ತದೆ. ಆಯಾ ಪರಿಸ್ಥಿತಿಯ ತೀವ್ರತೆಯನ್ನು ಅವಲಂಬಿಸಿರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.