ಷರತ್ತು ಇಲ್ಲದೇ ಸಾಲ ಮನ್ನಾ ಮಾಡಿ

7
ರೈತ ಸಂಘಟನೆಯಿಂದ ಮನವಿ

ಷರತ್ತು ಇಲ್ಲದೇ ಸಾಲ ಮನ್ನಾ ಮಾಡಿ

Published:
Updated:

ಮಂಡ್ಯ: ರಾಜ್ಯ ಸರ್ಕಾರ ಸ್ತ್ರೀಶಕ್ತಿ ಸಂಘಗಳ ಹಾಗೂ ರೈತರ ಸಾಲವನ್ನು ಯಾವುದೇ ನಿಬಂಧನೆಗಳನ್ನು ಹಾಕದೇ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್ ಮನವಿ ಮಾಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಯಾವುದೇ ಮಾನದಂಡಗಳನ್ನು ನಿಗದಿ ಮಾಡದೇ ರೈತರು ಹಾಗೂ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಮನ್ನಾ ಮಾಡಬೇಕು. ಮುಖ್ಯಮಂತ್ರಿ ಈಚೆಗೆ ನಡೆದ ರೈತರ ಸಭೆಯಲ್ಲಿ ರೈತರ ಸಾಲ ಮನ್ನಾ ಕುರಿತು 4 ಏಪ್ರಿಲ್‌ 2009ರಿಂದ 31 ಡಿಸೆಂಬರ್‌ 2017ರ ನಡುವಿನ ಅವಧಿಯ ಸಾಲವನ್ನು ಕೆಲವು ನಿಬಂಧನೆಗಳಿಗೆ ಒಳಪಡಿಸಿ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತದೆ ಎಂದು ಅವರು ದೂರಿದರು.

ಸಹಕಾರಿ ಸಂಘ, ಗ್ರಾಮೀಣ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಬ್ಯಾಂಕ್, ಒಡವೆ ಅಡವಿಟ್ಟು ಪಡೆದಿರುವ ಸಾಲ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಾಲವನ್ನು ವರ್ಗೀಕರಣ ಮಾಡದೇ ಮನ್ನಾ ಮಾಡಬೇಕು. ಅವಧಿಯನ್ನು ಪೂರ್ವ (4 ಏ. 2009) ದಿನಾಂಕ ನಿಗದಿ ಮಾಡದೇ ಅಂತಿಮ ದಿನಾಂಕ 31 ಮಾರ್ಚ್ 2018ರವರೆಗೆ ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಐದು ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳಿಗೆ ಸಾಗಿಸಿದ ಕಬ್ಬಿನ ಹಣದ ಬಾಕಿಯನ್ನು ರೈತರಿಗೆ ಕೊಡಬೇಕು. ಈಗಾಗಲೆ ಕಬ್ಬು ಕಟಾವಿಗೆ ಬಂದಿದ್ದು, ಸಕ್ಕರೆ ಕಾರ್ಖಾನೆಗಳು ತಕ್ಷಣ ಕಬ್ಬು ನುರಿಸಲು ಆರಂಭಿಸಬೇಕು. ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಜಿಲ್ಲೆಯಲ್ಲಿ ನೀರಿನ ಕೊರತೆ ಉಂಟಾಗುತ್ತಿದ್ದು, ಇಸ್ರೇಲ್‌ ಮಾದರಿಯ ಕೃಷಿ ತಂತ್ರಜ್ಞಾನ ಅಳವಡಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಬಿ.ಬೊಮ್ಮೇಗೌಡ, ರಾಮಕೃಷ್ಣಯ್ಯ, ಜಿ.ಎಸ್.ಲಿಂಗಪ್ಪಾಜಿ, ಪಿ.ಕೆ.ನಾಗಣ್ಣ, ಲತಾಶಂಕರ್, ಶಿವರಾಮೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry