ರೈತರ ಕೃಷಿ ಸಾಲ ಮನ್ನಾ ಶೀಘ್ರ

7
ಜೆಡಿಎಸ್‌ ಸಂಸದೀಯ ಮಂಡಳಿ ಅಧ್ಯಕ್ಷ ಬಂಡೆಪ್ಪ ಕಾಶೆಂಪುರ ಹೇಳಿಕೆ

ರೈತರ ಕೃಷಿ ಸಾಲ ಮನ್ನಾ ಶೀಘ್ರ

Published:
Updated:
ರೈತರ ಕೃಷಿ ಸಾಲ ಮನ್ನಾ ಶೀಘ್ರ

ಬೀದರ್: ‘ರೈತರು ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ಮಾಡಿರುವ ಕೃಷಿ ಸಾಲವನ್ನು ಸರ್ಕಾರ ಶೀಘ್ರ ಮನ್ನಾ ಮಾಡಲಿದೆ. ಇದು ದೇಶಕ್ಕೆ ಮಾದರಿಯಾಗಲಿದೆ’ ಎಂದು ಜೆಡಿಎಸ್‌ ಸಂಸದೀಯ ಮಂಡಳಿ ಅಧ್ಯಕ್ಷ ಬಂಡೆಪ್ಪ ಕಾಶೆಂಪುರ ತಿಳಿಸಿದರು.

‘ಸಾಲ ಮನ್ನಾಕ್ಕೆ ಈಗಾಗಲೇ ಕಾಂಗ್ರೆಸ್‌ ಸಹಮತ ವ್ಯಕ್ತಪಡಿಸಿದೆ. ಆದರೂ ಕೆಲವು ವಿಚಾರಗಳಲ್ಲಿ ಕಾಂಗ್ರೆಸ್‌ ನಾಯಕರ ಜತೆಗೆ ಚರ್ಚೆ ನಡೆಯಬೇಕಿದೆ. ನಿಜವಾದ ರೈತರಿಗೆ ಲಾಭ ದೊರಕಿಸಿಕೊಡುವ ದಿಸೆಯಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

‘ಹಿಂದಿನ ಕಾಂಗ್ರೆಸ್‌ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳು ಹಾಗೂ ಆ ಪಕ್ಷದ ಪ್ರಣಾಳಿಕೆಯಲ್ಲಿನ ಉತ್ತಮ ವಿಷಯಗಳನ್ನು ಅನುಷ್ಠಾನಗೊಳಿಸಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಈ ಭಾಗದ ಸಮಸ್ಯೆಗಳ ನಿವಾರಣೆಗಾಗಿಯೇ ಬೀದರ್‌ ದಕ್ಷಿಣ ಕ್ಷೇತ್ರದ ಮತದಾರರು ಆಸಕ್ತಿಯಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ  , ಏರ್‌ಪೋರ್ಟ್‌ ಟರ್ಮಿನಲ್‌, ಕಾರಂಜಾ ಸಂತ್ರಸ್ತರ ಸಮಸ್ಯೆ ಹಾಗೂ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ ಸಮಸ್ಯೆಗಳ ನಿವಾರಣೆಗಾಗಿ ಶೀಘ್ರದಲ್ಲೇ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಲಾಗುವುದು’ ಎಂದು ಹೇಳಿದರು.

‘ನಾನು ಹಿಂದೆ ಕೃಷಿ ಸಚಿವನಾಗಿದ್ದಾಗ ಬೀದರ್‌ ಏರ್‌ಪೋರ್ಟ್‌ ಟರ್ಮಿನಲ್‌ ಆರಂಭಿಸಿದೆ. ಆದರೆ ವಿಮಾನ ಹಾರಾಟ ಆರಂಭವಾಗಲಿಲ್ಲ. ಪ್ರಸ್ತುತ ಏರ್‌ಪೋರ್ಟ್‌ ಟರ್ಮಿನಲ್ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ವಿಮಾನ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಜೆಡಿಎಸ್‌–ಕಾಂಗ್ರೆಸ್ಮಧ್ಯೆ 20 ಅಥವಾ 30 ತಿಂಗಳ ಅಧಿಕಾರ ಹಂಚಿಕೆಯ ಒಪ್ಪಂದ ಆಗಿಲ್ಲ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸುವರು. ಮೊದಲೇ ಮಾತು ಕೊಟ್ಟಂತೆ ಎಲ್ಲ ಸಮುದಾಯಗಳಲ್ಲಿ ಇರುವ ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಲಾಗುವುದು’ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ರಾಜು ಚಿಂತಾಮಣಿ, ಅಶೋಕ ಕರಂಜಿ, ಮಾರುತಿ ಬೌದ್ಧೆ, ಪದವೀಧರ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರತಾಪರೆಡ್ಡಿ ಇದ್ದರು.

ಜೆಡಿಎಸ್ ಬೆಂಬಲಿಸಿ: ಪ್ರತಾಪರೆಡ್ಡಿ

ಬೀದರ್‌: ‘ಹೈದರಾಬಾದ್‌ ಕರ್ನಾಟಕದ ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತದಾರರು ಜೆಡಿಎಸ್‌ ಪರ ಮತ ಚಲಾಯಿಸಬೇಕು’ ಎಂದು ಈಶಾನ್ಯ ಪದವೀಧರ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರತಾಪರೆಡ್ಡಿ ಮನವಿ ಮಾಡಿದರು.

‘6 ತಿಂಗಳ ಅವಧಿಯಲ್ಲಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಸಂಚರಿಸಿ ಪದವೀಧರರ ಸಮಸ್ಯೆಗಳನ್ನು ಅರಿತುಕೊಂಡಿದ್ದೇನೆ. ಯಾದಗಿರಿ ಹಾಗೂ ಬೀದರ್‌ ಶೈಕ್ಷಣಿಕವಾಗಿ ಹಿಂದೆ ಉಳಿದಿವೆ. ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ಕಾರಣಕ್ಕೆ ಯಾದಗಿರಿ ಜಿಲ್ಲೆಯ 700 ಶಿಕ್ಷಕರಿಗೆ ಷೋಕಾಸ್‌ ನೋಟಿಸ್‌ ನೀಡಲಾಗಿದೆ. ಮೂಲಸೌಕರ್ಯ ಒದಗಿಸದೆ ಶಿಕ್ಷಕರಿಗೆ ನೋಟಿಸ್ ನೀಡಿರುವುದು ಸರಿಯಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದರೂ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಿವೆ. ಆಯಾ ಪಕ್ಷಗಳ ಅಭ್ಯರ್ಥಿಗಳ ಸಾಮರ್ಥ್ಯ ಪರಿಗಣಿಸಿ ಮತದಾರರು ಚುನಾವಣೆಯಲ್ಲಿ ಬೆಂಬಲಿಸಲಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೇಲೆ ಜೆಡಿಎಸ್‌ಗೆ ಬಲ ಇನ್ನಷ್ಟು ಬಲ ಬಂದಿದೆ. ಪದವೀಧರ ಮತಕ್ಷೇತ್ರದಲ್ಲೂ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ತಿಳಿಸಿದರು.

**

ಐತಿಹಾಸಿಕ ಸ್ಮಾರಕಗಳಿಂದಾಗಿಯೇ ಬೀದರ್ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಪ್ರವಾಸಿ ತಾಣಗಳ ಅಭಿವೃದ್ಧಿ ಸಮ್ಮಿಶ್ರ ಸರ್ಕಾರದ ಗುರಿ

– ಬಂಡೆಪ್ಪ ಕಾಶೆಂಪುರ, ಅಧ್ಯಕ್ಷ , ಜೆಡಿಎಸ್‌ ಸಂಸದೀಯ ಮಂಡಳಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry