ಹಸಿರು ಉಳಿಸಲು ಕುಂಚ ಹಿಡಿದ ಮಕ್ಕಳು

7
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸ್ಪರ್ಧೆ ಆಯೋಜನೆ

ಹಸಿರು ಉಳಿಸಲು ಕುಂಚ ಹಿಡಿದ ಮಕ್ಕಳು

Published:
Updated:
ಹಸಿರು ಉಳಿಸಲು ಕುಂಚ ಹಿಡಿದ ಮಕ್ಕಳು

ಚಾಮರಾಜನಗರ: ಬೆಳಿಗ್ಗೆ 10ರ ಎಳೆ ಬಿಸಿಲು. ಬಿದಿರ ಮೆಳೆಯ ನೆರಳಿನ ಅಡಿಯಲ್ಲಿ ಹರಡಿಕೊಂಡಿದ್ದ ಹುಲ್ಲುಹಾಸಿನ ಮೇಲೆ ಕುಳಿತಿದ್ದ ಮಕ್ಕಳು ಉತ್ಸಾಹದ ಚಿಲುಮೆಯಂತಿದ್ದರು. ಕೈಯಲ್ಲಿ ಬಣ್ಣ ಬಣ್ಣದ ಪೆನ್ಸಿಲ್‌ ಹಿಡಿದಿದ್ದ ಅವರು ಪರಿಸರದ ಬಗ್ಗೆ ತಮ್ಮದೇ ಆದ ಕಲ್ಪನೆಗಳನ್ನು ಚಿತ್ರಗಳ ಮುಖೇನ ಹರಿ ಬಿಡಲು ಸಿದ್ಧರಾಗಿದ್ದರು...

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶುಕ್ರವಾರ ಚಾಮರಾಜನಗರ ಜಿಲ್ಲಾಡಳಿತ ಭವನದ ಆವರಣದಲ್ಲಿ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯ ಇದು.‌

ಗಿಡಮರಗಳಿಂದ ಕೂಡಿದ ಸುಂದರ ಉದ್ಯಾನ ಹೊಂದಿರುವ ಜಿಲ್ಲಾ ಭವನದ ಆವರಣ ಮಕ್ಕಳ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಕಾರ್ಯಕ್ರಮದ ಉದ್ಘಾಟನೆ ಮುಗಿದ ಕೂಡಲೇ ಮಕ್ಕಳು ಗುಂಪು ಗುಂಪಾಗಿ, ಉದ್ಯಾನದಲ್ಲಿರುವ ಗಿಡ–ಮರಗಳ ಬಳಿಗೆ ಹೋಗಿ ಕುಳಿತು ಪರಿಸರದ ಕುರಿತ ತಮ್ಮ ಕಲ್ಪನೆಗೆ ಬಣ್ಣ ತುಂಬತೊಡಗಿದರು.

ಚಾಮರಾಜನಗರದ ಸುತ್ತ ಮುತ್ತಲಿನ ಸರ್ಕಾರಿ, ಇಂಗ್ಲಿಷ್‌ ಮಾಧ್ಯಮ ಶಾಲೆಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಹರೀಶ್‌ ಕುಮಾರ್‌, ‘ಪರಿಸರವನ್ನು ರಕ್ಷಿಸಲು ಹೊಸ ಹೊಸ ಚಿಂತನೆಗಳನ್ನು ಹೊರಗೆಡಹುವುದು ಈ ಸ್ಪರ್ಧೆಯ ಉದ್ದೇಶ’ ಎಂದರು.

‌‘ಮಕ್ಕಳು ಭಿನ್ನವಾಗಿ ಯೋಚಿಸುತ್ತಾರೆ. ಅವರಲ್ಲಿ ಸೃಜನಶೀಲ ಶಕ್ತಿಯೂ ಇದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಪರಿಸರ ಬಗ್ಗೆ ತಮ್ಮದೇ ಆದ ಯೋಚನೆಯನ್ನು ಚಿತ್ರದ ಮೂಲಕ ತೋರಿಸಲಿದ್ದಾರೆ. ಇದು ಹಸಿರನ್ನು ಉಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹೊಸ ಹೊಳಹುಗಳನ್ನು ನಮಗೆ ನೀಡಲಿದೆ’ ಎಂದು ಹೇಳಿದರು‌.

‌‘ಪರಿಸರ ರಕ್ಷಿಸುವುದು ಎಂದರೆ, ಕಾಡನ್ನು ಕಾಯುವುದು ಮಾತ್ರ ಅಲ್ಲ; ಚಿತ್ರದ ಮೂಲಕವೂ ಆ ಕೆಲಸವನ್ನು ಮಾಡಬಹುದು’ ಎಂದರು.

ಕಲಾವಿದರಾದ ಸಿ. ರಾಜಶೇಖರ್, ಅನಿಲ್ ಕುಮಾರ್ ತೀರ್ಪುಗಾರ ರಾಗಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಮಹದೇವಪ್ಪ, ಪರಿಸರ ಅಧಿಕಾರಿ ರಘುರಾಮ್‌, ರಾಧಾ ಇದ್ದರು.

5ಕ್ಕೆ ಬಹುಮಾನ ವಿತರಣೆ‌

ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಹೆಸರುಗಳನ್ನು ಇದೇ 5ರಂದು ಪ್ರಕಟಿಸಲಾಗುವುದು. ಅಂದು ನಡೆಯಲಿರುವ ಪರಿಸರ ದಿನಾಚರಣೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಗುವುದು ಎಂದು ಸ್ಪರ್ಧೆಗೆ ಸಹಯೋಗ ನೀಡಿರುವ ರಂಗತರಂಗ ಟ್ರಸ್ಟ್‌ನ ಕಾರ್ಯದರ್ಶಿ ಕಲೆ ನಟರಾಜ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry