ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಆರಂಭವಾದ ಸಂಭ್ರಮದಲ್ಲಿ ಸರ್ಕಾರಿ ಶಾಲೆ

ಬಿಕ್ಕಲಹಳ್ಳಿ ಗ್ರಾಮಸ್ಥರ ಪ್ರಯತ್ನ
Last Updated 2 ಜೂನ್ 2018, 8:58 IST
ಅಕ್ಷರ ಗಾತ್ರ

ಗೌರಿಬಿದನೂರು: ಮೂರು ವರ್ಷಗಳ ಹಿಂದೆ ಹಾಜರಾತಿ ಕೊರತೆಯ ಕಾರಣಕ್ಕೆ ಬಂದ್ ಆಗಿದ್ದ ತಾಲ್ಲೂಕಿನ ಮಂಚೇನಳ್ಳಿ ಹೋಬಳಿ ಹಳೇಹಳ್ಳಿ ಕ್ಲಸ್ಟರ್ ವ್ಯಾಪ್ತಿಯಲ್ಲಿನ ಬಿಕ್ಕಲಹಳ್ಳಿ ಪ್ರಾಥಮಿಕ ಶಾಲೆ ಈಗ ಪುನರಾರಂಭಗೊಂಡಿದೆ.

ಇದು ಗ್ರಾಮಸ್ಥರಲ್ಲಿ ಸಂತಸಕ್ಕೆ ಕಾರಣವಾಗಿದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಶಾಲೆಗೆ 2013–14ರಲ್ಲಿ ಬೀಗ ಹಾಕಲಾಗಿತ್ತು. ಮಕ್ಕಳನ್ನು ಸಮೀಪದ ಶಾಲೆಗಳಿಗೆ ವಿಲೀನಗೊಳಲಾಗಿತ್ತು. ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜಿಸಲಾಗಿತ್ತು.

ಶಾಲೆ ಮುಚ್ಚಿದ ಕಾರಣ ಗ್ರಾಮದ ಮಕ್ಕಳು ಮಂಚೇನಳ್ಳಿ ಹೋಬಳಿ ಕೇಂದ್ರದಲ್ಲಿನ ಖಾಸಗಿ ಶಾಲೆಗೆ ದಾಖಲಾಗಿದ್ದರು. ಇನ್ನೂ ಕೆಲ ಮಕ್ಕಳು ಸಮೀಪದ ಕಾಮರೆಡ್ಡಿಹಳ್ಳಿ ಸರ್ಕಾರಿ ಶಾಲೆಗೆ ದಾಖಲಾಗಿದ್ದರು. ಸುಸಜ್ಜಿತ ಕಟ್ಟಡ, ಆಟದ ಮೈದಾನ ಹಾಗೂ ಮೂಲ ಸೌಕರ್ಯಗಳನ್ನು ಒಳಗೊಂಡಿದ್ದ ಬಿಕ್ಕಲಹಳ್ಳಿ ಶಾಲೆ ಅನಾಥವಾದಂತೆ ಇತ್ತು.

ಗ್ರಾಮಸ್ಥರು ‌ಏನಾದರೂ ಮಾಡಿ ಶಾಲೆಯನ್ನು ಮತ್ತೆ ಆರಂಭಿಸಬೇಕು, ನಮ್ಮ ಮಕ್ಕಳಿಗೆ ಸ್ವಗ್ರಾಮದಲ್ಲೆ ಶಿಕ್ಷಣ ಕೊಡಿಸಬೇಕು ಎಂದು ಪಣತೊಟ್ಟರು. ಸ್ಥಳೀಯರಾದ ನಿವೃತ್ತ ಶಿಕ್ಷಕ ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ ಹಳೇ  ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಮೇಲೆ ಒತ್ತಡ ಹೇರಿ ಶಾಲೆ ಮತ್ತೆ ಆರಂಭವಾಗಲು ಶ್ರಮಿಸಿದರು.

‘ಶಾಲೆಗೆ ಬೀಗ ಹಾಕಿದ ಕಾರಣ ಇಲ್ಲಿನ ಮಕ್ಕಳು 9 ಕಿ.ಮೀ ದೂರದ ಮಂಚೇನಹಳ್ಳಿ ಹಾಗೂ 25 ಕಿ.ಮೀ ಗೂ ಹೆಚ್ಚು ದೂರದ ನಗರ ಪ್ರದೇಶದ ಶಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದರು. ಸ್ವಗ್ರಾಮದಲ್ಲಿ ಶಾಲೆ ಪುನರಾರಂಭಗೊಂಡ ವಿಷಯ ತಿಳಿದ ಕೂಡಲೇ ಖಾಸಗಿ ಶಾಲೆಗಳನ್ನು ಬಿಟ್ಟು ಮತ್ತೆ ಇಲ್ಲಿಗೆ ಬಂದಿದ್ದಾರೆ’ ಎನ್ನುವರು ಶಿಕ್ಷಕ ನದೀಮ್ ಪಾಷಾ.

ಶಾಲೆಗೆ ಈಗ ಒಬ್ಬ ಶಿಕ್ಷಕರನ್ನು ನಿಯೋಜಿಸಲಾಗಿದೆ. ಒಂದನೇ ತರಗತಿಯಲ್ಲಿ 2, ಎರಡನೇ ತರಗತಿಯಲ್ಲಿ 4, ಮೂರನೇ ತರಗತಿಯಲ್ಲಿ 3, ನಾಲ್ಕನೇ ತರಗತಿಯಲ್ಲಿ 4 ಮತ್ತು ಐದನೇ ತರಗತಿಗೆ 3 ಮಕ್ಕಳು ಸೇರಿದ್ದಾರೆ. ಇನ್ನೂ ನಾಲ್ಕೈದು ಮಕ್ಕಳನ್ನು ಶೀಘ್ರದಲ್ಲೇ ಶಾಲೆಗೆ ಸೇರಿಸುವುದಾಗಿ ಪೋಷಕರು ಭರವಸೆ ನೀಡಿದ್ದಾರೆ.

ಪುನರಾರಂಭ

ತಾಲ್ಲೂಕಿನಲ್ಲಿ ನಾಲ್ಕೈದು ವರ್ಷಗಳಲ್ಲಿ 20 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಆದರೆ ಸ್ಥಳೀಯರ ಸಹಕಾರ, ಪೋಷಕರ ಉತ್ತೇಜನ ಮತ್ತು ಆಸಕ್ತಿಯಿಂದ ಕೆಲವು ಶಾಲೆಗಳು ಪುನರಾರಂಭವಾಗಿದೆ.

ತಾಲ್ಲೂಕಿನ ಪ್ರತಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದೇ ಶಿಕ್ಷಕರ ಮುಖ್ಯ ಗುರಿಯಾಗಿದೆ. ಇದಕ್ಕೆ ಪೋಷಕರು ಮಾರ್ಗದರ್ಶನ ಮತ್ತು ಅಗತ್ಯ ಪ್ರೋತ್ಸಾಹ ನೀಡಿಬೇಕು. ಆಗ ನಿಮ್ಮ ಮಕ್ಕಳನ್ನು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪಿಸಲು ಸಹಕಾರಿಯಾಗುತ್ತದೆ. ಇಲಾಖೆ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಸಿದ್ದವಾಗಿರುತ್ತದೆ ಎಂದು ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯ ಅಧಿಕಾರಿ ಗಂಗರೆಡ್ಡಿ ತಿಳಿಸಿದರು.

**

ಶಾಲೆ ಮತ್ತೆ ಆರಂಭವಾಗಿರುವುದು ಖುಷಿ ಸಂಗತಿ. ಮಕ್ಕಳಿಗೆ ಬೇಕಾದ ಕಲಿಕೆ ಮತ್ತು ಆಟಗಳು ಸ್ಥಳೀಯ ಸರ್ಕಾರಿ ಶಾಲೆಯಲ್ಲಿಯೇ ಆಗಬೇಕು ಎನ್ನುವುದೇ ನಮ್ಮ ಬಯಕೆಯಾಗಿದೆ
ನಾಗರತ್ನ, ಸ್ಥಳೀಯ ನಿವಾಸಿ
**
ಸರ್ಕಾರಿ ಶಾಲೆಗಳಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಅವುಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಕೈ ಜೋಡಿಸಬೇಕಾಗಿದೆ
ನಾಗರಾಜು, ಪೋಷಕ 
**
ಸ್ಥಳೀಯವಾಗಿರುವ ಪ್ರತಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಏಳಿಗೆಗಾಗಿ ಎಲ್ಲರೂ ಶ್ರಮಿಸಿದಲ್ಲಿ ರಾಷ್ಟ್ರದ ಪ್ರಗತಿಗೆ ಸಹಕಾರ ನೀಡಿದಂತಾಗುತ್ತದೆ. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ
ನಾರಾಯಣಪ್ಪ, ಸ್ಥಳೀಯ ನಿವಾಸಿ 
**
ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಬಲಿಯಾಗಿ ಮಕ್ಕಳ ಭವಿಷ್ಯ ಹಾಳುಮಾಡದಿರಿ. ಸರ್ಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣ ಕೊರೆಯುತ್ತಿದೆ
– ಗಂಗರತ್ನಮ್ಮ, ಪೋಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT