‘ಒಳ್ಳೆಯ ಚಿತ್ರಗಳಿವೆ, ನೋಡುವ ಪ್ರೇಕ್ಷಕರಿಲ್ಲ’

3
ಪ್ರಾದೇಶಿಕ ಚಿತ್ರಗಳಿಗೆ ಸಿಗದ ಮನ್ನಣೆ: ನಿರ್ದೇಶಕ ಪಿ. ಶೇಷಾದ್ರಿ ಬೇಸರ

‘ಒಳ್ಳೆಯ ಚಿತ್ರಗಳಿವೆ, ನೋಡುವ ಪ್ರೇಕ್ಷಕರಿಲ್ಲ’

Published:
Updated:
‘ಒಳ್ಳೆಯ ಚಿತ್ರಗಳಿವೆ, ನೋಡುವ ಪ್ರೇಕ್ಷಕರಿಲ್ಲ’

ಬೆಂಗಳೂರು: ‘ಹೆಚ್ಚು ಸಿನಿಮಾಗಳು ತಯಾರಾಗುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ, ಗುಣಮಟ್ಟದ ವಿಚಾರದಲ್ಲಿ ಇತರೆ ರಾಷ್ಟ್ರಗಳಿಗಿಂತ ತುಂಬಾ ಹಿಂದಿದೆ’ ಎಂದು ನಿರ್ದೇಶಕ ಪಿ.ಶೇಷಾದ್ರಿ ಬೇಸರ ವ್ಯಕ್ತಪಡಿಸಿದರು.

ನಗರದ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಶನಿವಾರ ಏರ್ಪಡಿಸಿದ್ದ ‘ರಾಷ್ಟ್ರಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಉತ್ತಮ ಚಿತ್ರಗಳಿಗೆ ಆಯಾ ರಾಜ್ಯಗಳ ಸಂಘಸಂಸ್ಥೆಗಳು ಪ್ರಶಸ್ತಿಗಳನ್ನು ‌ನೀಡುವುದು ಸಹಜ. ಆದರೆ, ಒಂದು ಘನತೆ ಹಾಗೂ ತೂಕ ಉಳಿಸಿಕೊಂಡಿರು ವುದು ರಾಷ್ಟ್ರಪ್ರಶಸ್ತಿ ಮಾತ್ರ. ಎಷ್ಟೇ ಹಣ ಕೊಟ್ಟರೂ, ಯಾರೇ ಶಿಫಾರಸು ಮಾಡಿದರೂ ಇದು ಸಿಗುವುದಿಲ್ಲ. ಗುಣಮಟ್ಟಕ್ಕೆ ಮಾತ್ರ ಒಲಿಯುತ್ತದೆ. ಅಂಥ ಪ್ರಶಸ್ತಿ ಪ್ರಾದೇಶಿಕ ಸಿನಿಮಾಗಳಿಗೆ ಸಿಕ್ಕಿರುವುದು ಸಂತಸದ ವಿಷಯ’ ಎಂದರು.

‘ಹೆಬ್ಬೆಟ್ ರಾಮಕ್ಕ ಚಿತ್ರ, ರಾಷ್ಟ್ರಪ್ರಶಸ್ತಿ ಪಡೆದ ನಂತರ ತೆರೆಕಂಡಿತು. ಆದರೂ, ಅದು ಎರಡು ವಾರ ಕೂಡ ಪ್ರದರ್ಶನ ಕಾಣಲಿಲ್ಲ. ಪ್ರೇಕ್ಷಕರಲ್ಲಿ ಈ ಮಟ್ಟಿನ ನಿರಾಸಕ್ತಿ ಯಾಕೆ ಎಂಬ ಬಗ್ಗೆ ಆಲೋಚನೆ ಮಾಡಬೇಕಿದೆ.’

‘ಚಿತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ನಾವು, ಒಳ್ಳೆಯ ಪ್ರೇಕ್ಷಕರ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿದ್ದೇವೆ. ಹೀಗಾಗಿ, ಚಿತ್ರಗಳನ್ನು ಬೆಳೆಸುವುದಕ್ಕಿಂತ ಒಳ್ಳೆಯ ಪ್ರೇಕ್ಷಕರನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸಗಳು ಆಗಬೇಕಿವೆ.’

‘ಈ ಬಾರಿ ನಾನೂ ತೀರ್ಪುಗಾರನ ಸ್ಥಾನದಲ್ಲಿ ಕುಳಿತಿದ್ದೆ. ದೇಶದಿಂದ 27 ಭಾಷೆಗಳಲ್ಲಿ 327 ಸಿನಿಮಾಗಳು ಸ್ಪರ್ಧೆಯಲ್ಲಿದ್ದವು. ಅದರಲ್ಲಿ 28 ಕನ್ನಡ ಸಿನಿಮಾಗಳಿದ್ದವು’ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ‘ನಾನು ನೋಡಿದ ಉತ್ತಮ ಚಿತ್ರಗಳಲ್ಲಿ ಹೆಬ್ಬೆಟ್ ರಾಮಕ್ಕ ಕೂಡ ಒಂದು. ನಿರ್ದೇಶಕರು 30 ರಿಂದ 35 ಗಾದೆಗಳನ್ನು ಬಳಸಿಕೊಂಡು ಮನಸ್ಸಿಗೆ ಹತ್ತಿರವಾಗುವಂತಹ ಸಿನಿಮಾ ಮಾಡಿದ್ದಾರೆ’ ಎಂದರು.

ಸಂಗೀತ ನಿರ್ದೇಶಕ ಹಂಸಲೇಖ, ‘ನಿರ್ದೇಶಕರು ಹಳ್ಳಿ ಸೊಗಡನ್ನು ದಿಲ್ಲಿವರೆಗೂ ತೆಗೆದುಕೊಂಡು ಹೋಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಗ್ರಾಮೀಣ ಭಾಷೆಯ ಬಳಕೆ ಅಚ್ಚುಕಟ್ಟಾಗಿದೆ. ಪ್ರಾಸಗಳು ಚೆನ್ನಾಗಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಹೆಬ್ಬೆಟ್ ರಾಮಕ್ಕ’ ಚಿತ್ರದ ನಿರ್ದೇಶಕ ಎನ್‌.ಆರ್.ನಂಜುಂಡೇ ಗೌಡ, ನಿರ್ಮಾಪಕರಾದ ಎಸ್‌.ಎ. ಪುಟ್ಟರಾಜು, ಕವಿತಾ ರಾಜ್, ತುಳುವಿನ ‘ಪಡ್ಡಾಯಿ’ ಚಿತ್ರದ ನಿರ್ದೇಶಕ ಅಭಯ್ ಸಿಂಹ, ನಿರ್ಮಾಪಕ ನಿತ್ಯಾನಂದ ಪೈ ಹಾಗೂ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ ಪಡೆದ ‘ಮಾರ್ಚ್ 22’ ಚಿತ್ರದ ಜೆ.ಎಂ. ಪ್ರಹ್ಲಾದ್ ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry