ನೈರುತ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಒಲವು

7
ಸಮಸ್ಯೆ ಸೃಷ್ಟಿಸುವ ಬಿಜೆಪಿ– ಕೆಪಿಸಿಸಿ ವಕ್ತಾರ ಐವನ್ ಡಿಸೋಜ ಟೀಕೆ

ನೈರುತ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಒಲವು

Published:
Updated:

ಉಡುಪಿ: ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪದವೀದರರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಸ್‌.ಪಿ.ದಿನೇಶ್‌ ಹಾಗೂ ಶಿಕ್ಷಕರ ಕ್ಷೇತ್ರದಿಂದ ಮಂಜುನಾಥ್‌ (ಮೇಸ್ಟ್ರು) ಸ್ಪರ್ಧಿಸಿದ್ದಾರೆ. ಮತದಾರರು ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಐವನ್ ಡಿಸೋಜಾ ಮನವಿ ಮಾಡಿದರು.

ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, 5 ಜಿಲ್ಲೆಗಳು ಹಾಗೂ 2 ತಾಲ್ಲೂಕುಗಳ ಮತದಾರರು ನೈರುತ್ಯ ಕ್ಷೇತ್ರದ ವ್ಯಾಪ್ತಿಗೊಳಪಡಲಿದ್ದು, ಪಧವೀದರರ ಕ್ಷೇತ್ರದಿಂದ 60 ಸಾವಿರ, ಶಿಕ್ಷಕರ ಕ್ಷೇತ್ರದಿಂದ 20 ಸಾವಿರ ಮತದಾರರು ಇದ್ದಾರೆ. ಈ ಬಾರಿ ಮತದಾರರು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದರು.

ಕಳೆದ ಬಾರಿಯ ಚುನಾವಣೆಯಲ್ಲಿ ಕಡಿಮೆ ಅಂತರದ ಮತಗಳಿಂದ ಅಭ್ಯರ್ಥಿಗಳು ಪರಾಭವಗೊಂಡಿದ್ದರು. ಈ ಬಾರಿ ಪೂರ್ವತಯಾರಿ ಮಾಡಿಕೊಂಡಿದ್ದು, ಗೆಲುವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಐದು ವರ್ಷಗಳ ಕಾಂಗ್ರೆಸ್‌ ಆಡಳಿತದಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗಿದೆ. ಬಿಜೆಪಿ ಆಡಳಿತದಲ್ಲಿ ಮಾಡಲಾಗದ ಕೆಲಸಗಳನ್ನು ಕಾಂಗ್ರೆಸ್‌ ಮಾಡಿದೆ. ಕಾಲಕಾಲಕ್ಕೆ ವೇತನ ಪರಿಷ್ಕರಣೆ, ತುಟ್ಟಿಭತ್ಯೆ ಸೇರಿದಂತೆ ಶಿಕ್ಷಕರ ಬೇಡಿಕೆಗಳನ್ನು ಪರಿಗಣಿಸಿದೆ. ಶಿಕ್ಷಕರನ್ನು ಗೌರವಯುತವಾಗಿ ನಡೆಸಿಕೊಂಡಿದೆ ಎಂದರು.

ನೈರುತ್ಯ ಪದವೀದರರ ಕ್ಷೇತ್ರದಿಂದ ಸತತವಾಗಿ 25–30 ವರ್ಷಗಳಿಂದ ಆಯ್ಕೆಯಾಗುತ್ತಿರುವ ಬಿಜೆಪಿ ಅಭ್ಯರ್ಥಿಗಳು ಸಮಸ್ಯೆಗಳನ್ನು ಪರಿಹರಿಸುವ ಬದಲಾಗಿ, ಹುಟ್ಟುಹಾಕಿದ್ದಾರೆ. ಕೇಂದ್ರ ಸರ್ಕಾರ ಕೂಡ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ನಾಲ್ಕು ವರ್ಷದಲ್ಲಿ ಕೇವಲ ಮೂರುವರೆ ಲಕ್ಷ ಸೃಷ್ಟಿಸಿದೆ. ಇದಕ್ಕೆ ಪ್ರತಿಯಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಯಶಸ್ವಿಯಾಗಿ ಮಾಡಿ ನಾಲ್ಕುವರೆ ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿದೆ ಎಂದರು.

‘ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಅಭ್ಯರ್ಥಿಗಳು ಬ್ಯಾಗ್‌, ಉಡುಗೊರೆಗಳನ್ನು ನೀಡುವ ಮೂಲಕ ಪವಿತ್ರ ವೃತ್ತಿ ಮಾಡುತ್ತಿರುವ ಶಿಕ್ಷಕರಿಗೆ ಆಮಿಷಗಳನ್ನು ಒಡ್ಡುತ್ತಿದೆ. ಮತಗಳನ್ನು ಸೆಳೆಯಲು ನೀತಿಸಂಹಿತೆಯನ್ನು ಉಲ್ಲಂಘಿಸುತ್ತಿದೆ’ ಎಂದು ಐವನ್‌ ಡಿಸೋಜಾ ಆರೋಪಿಸಿದರು.

ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಮಂಜುನಾಥ್‌ ಮಾತನಾಡಿ, ‘ಕಳೆದ ಬಾರಿ ಶಿಕ್ಷಕರ ಪರವಾದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರೂ ಚುನಾವಣಾ ಕುತಂತ್ರ, ಅಪಪ್ರಚಾರಗಳಿಂದ ಸೋಲು ಅನುಭವಿಸಬೇಕಾಯಿತು ಎಂದರು.

ಕಾಂಗ್ರೆಸ್‌ ಮತಗಳನ್ನು ವಿಭಜಿಸಲು ಹೆಚ್ಚು ಹೆಚ್ಚು ಅಭ್ಯರ್ಥಿಗಳನ್ನು ನಿಲ್ಲಿಸುವಂತಹ ರಾಜಕಾರಣವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಈ ಬಾರಿ ಮತದಾರರು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಬರ್ಟ್‌ ಡಿಸೊಜಾ, ಮಹಮ್ಮದ್ ಫಾರೂಖ್‌, ಭಾಸ್ಕರ್ ರಾವ್ ಕಿದಿಯೂರು, ಪ್ರಶಾಂತ್, ಮೈಕಲ್ ಡಿಸೋಜಾ, ಕ್ರಿಸ್ಟನ್, ಎ.ಸಿ.ಜಯರಾಜ್‌, ಮೆಲ್ವಿನ್ ಡಿಸೋಜಾ ಅವರೂ ಇದ್ದರು.

**

ಜೆಡಿಎಸ್‌–ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಳೆ ಪಿಂಚಣಿ ಯೋಜನೆಯನ್ನು ರದ್ದುಮಾಡುವಂತಹ ಕೆಟ್ಟ ನಿರ್ಧಾರವನ್ನು ಕೈಗೊಳ್ಳಲಾಯಿತು. ಅನುದಾನಿತ ಶಿಕ್ಷಕರಿಗೆ ಪಿಂಚಣಿಯ ಸೌಲಭ್ಯ ಇಲ್ಲದಂತೆ ಮಾಡಲಾಯಿತು

- ಮಂಜುನಾಥ್‌, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry