ಆರ್‌ಟಿಇ ಮಕ್ಕಳ ದಾಖಲಾತಿಗೆ ನಿರಾಕರಣೆ: ಆರೋ ಮೀರಾ ಅಂತರರಾಷ್ಟ್ರೀಯ ಶಾಲೆಗೆ ನೋಟಿಸ್‌

7

ಆರ್‌ಟಿಇ ಮಕ್ಕಳ ದಾಖಲಾತಿಗೆ ನಿರಾಕರಣೆ: ಆರೋ ಮೀರಾ ಅಂತರರಾಷ್ಟ್ರೀಯ ಶಾಲೆಗೆ ನೋಟಿಸ್‌

Published:
Updated:
ಆರ್‌ಟಿಇ ಮಕ್ಕಳ ದಾಖಲಾತಿಗೆ ನಿರಾಕರಣೆ: ಆರೋ ಮೀರಾ ಅಂತರರಾಷ್ಟ್ರೀಯ ಶಾಲೆಗೆ ನೋಟಿಸ್‌

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಒಂದನೇ ತರಗತಿಗೆ ಸೀಟು ಹಂಚಿಕೆ ಮಾಡಿರುವ ಮಕ್ಕಳನ್ನು ದಾಖಲಿಸಿಕೊಳ್ಳಲು ಹಲಸೂರಿನಲ್ಲಿನ ಆರೋ ಮೀರಾ ಅಂತರರಾಷ್ಟ್ರೀಯ ಶಾಲೆ ಹಿಂದೇಟು ಹಾಕುತ್ತಿದೆ.

ಪ್ರಸಕ್ತ ಸಾಲಿನಲ್ಲಿ ಮೊದಲನೇ ಸುತ್ತಿನ ಲಾಟರಿ ಪ್ರಕ್ರಿಯೆಯಲ್ಲಿ ಒಂದನೇ ತರಗತಿಗೆ 8 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ 5 ಮಕ್ಕಳಿಗೆ ಮಾತ್ರ ಅವಕಾಶ ನೀಡುವುದಾಗಿ ಶಾಲೆ ಹೇಳುತ್ತಿದೆ.

ಒಂದನೇ ಸುತ್ತಿನಲ್ಲಿ ಈ ಶಾಲೆಗೆ ಆಯ್ಕೆಯಾದ ಶಬೀರ್‌ ಅಹಮದ್‌, ಮಜೇದ್‌ ಖಾನ್‌, ಆರ್.ಡಿ. ಲೋಹಿತ್‌ ನೀರಜ್‌ಗೆ ದಾಖಲಾತಿ ನೀಡಲು ಶಾಲೆ ನಿರಾಕರಿಸುತ್ತಿದೆ. ಶಿಕ್ಷಣ ಇಲಾಖೆಯ ಯಾವುದೇ ಆದೇಶಕ್ಕೂ ಜಗ್ಗದ ಶಾಲಾ ಆಡಳಿತ ಮಂಡಳಿ, ತನ್ನ ಹಟವನ್ನೇ ಮುಂದುವರಿಸುತ್ತಿದೆ. ಇದರಿಂದ ಮಕ್ಕಳ ಸ್ಥಿತಿ ಅತಂತ್ರವಾಗಿದೆ.

‘ಈಗಾಗಲೇ ಮೂರು ಬಾರಿ ನೋಟಿಸ್‌ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅರಬಿಂದೊ ಸಮೂಹಕ್ಕೆ ಸೇರಿದ ಶಾಲೆ ಇದಾಗಿದೆ. ದೇಶದಾದ್ಯಂತ ಸಂಸ್ಥೆಯ ಶಾಲೆಗಳಿವೆ. ಇಲ್ಲಿ ಆಡಳಿತ ಮಂಡಳಿಯವರು ಇಲ್ಲ. ಕೇವಲ ಸಿಬ್ಬಂದಿಯಿದ್ದಾರೆ. ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳದಂತೆ ಅವರಿಗೆ ಆಡಳಿತ ಮಂಡಳಿ ಒತ್ತಡ ಹೇರುತ್ತಿದೆ. ಹೀಗಾಗಿ ಅವರು ಏನೂ ಮಾಡದ ಸ್ಥಿತಿಯಲ್ಲಿದ್ದಾರೆ’ ಎಂದು ಬೆಂಗಳೂರು ಉತ್ತರ ವಲಯ–3ರ ಬಿಇಒ ಪ್ರಭಾ ಅಲೆಕ್ಸಾಂಡರ್ ತಿಳಿಸಿದರು.

‘ಇಲಾಖೆ ವತಿಯಿಂದಲೂ ಸಾಕಷ್ಟು ಒತ್ತಡವನ್ನು ಹಾಕಲಾಗುತ್ತಿದೆ. ಆದರೆ, ಯಾವುದೇ ಪ್ರಯೋಜನವಾಗುತ್ತಿಲ್ಲ. ಆರ್‌ಟಿಇ ವಿಭಾಗದ ಉಪ ನಿರ್ದೇಶಕರು ದಾಖಲಾತಿ ಮಾಡಿಸಲೇ ಬೇಕು ಎಂದು ಸೂಚನೆ ನೀಡಿದ್ದಾರೆ. ನಮ್ಮ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ’ ಎಂದರು.

ಈ ಶಾಲೆಯಲ್ಲಿ ಎಲ್‌ಕೆಜಿಗೆ ಒಟ್ಟು 75 ಮಕ್ಕಳು ಹಾಗೂ 1ನೇ ತರಗತಿಗೆ 110 ಮಕ್ಕಳು ಸೇರಲು ಅವಕಾಶ ಇದೆ. ಆರ್‌ಟಿಇ ಅಡಿ ಶೇ 25ರಂತೆ ಎಲ್‌ಕೆಜಿಗೆ 19 ಮಕ್ಕಳು ಹಾಗೂ 1ನೇ ತರಗತಿಗೆ 28 ಮಕ್ಕಳನ್ನು ದಾಖಲಿಸಿಕೊಳ್ಳಬೇಕು. ಕಳೆದ ಸಾಲಿನಲ್ಲಿ ಎಲ್‌ಕೆಜಿಗೆ ಸೇರಿದ 19 ಮಕ್ಕಳು ಈ ಬಾರಿ ಒಂದನೇ ತರಗತಿಗೆ ಹೋಗಲಿದ್ದಾರೆ. ಅಲ್ಲದೆ ಆರ್‌ಟಿಇ ಅಡಿ ಇನ್ನೂ 9 ಮಕ್ಕಳನ್ನು ಪ್ರಸಕ್ತ ಸಾಲಿನಲ್ಲಿ ಒಂದನೇ ತರಗತಿಗೆ ಸೇರಿಸಲು ಅವಕಾಶವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry