ಸಾವಯವ ಸಂತೆಗೆ ಉತ್ತಮ ಸ್ಪಂದನೆ

2
ಎನ್‌ಸಿಸಿ ಕಚೇರಿ ಮುಂದೆ ಆಯೋಜನೆ; ಅರ್ಧ ತಾಸಿನಲ್ಲಿ ಹಸುವಿನ ಬೆಣ್ಣೆ ಖಾಲಿ

ಸಾವಯವ ಸಂತೆಗೆ ಉತ್ತಮ ಸ್ಪಂದನೆ

Published:
Updated:
ಸಾವಯವ ಸಂತೆಗೆ ಉತ್ತಮ ಸ್ಪಂದನೆ

ಹಾಸನ: ನಗರದ ಆರ್‌.ಸಿ.ರಸ್ತೆಯಲ್ಲಿ ಎನ್‌ಸಿಸಿ ಕಚೇರಿ ಎದುರು ಭಾನುವಾರ ನಡೆದ ‘ಸಾವಯವ ರೈತರ ಸಂತೆ’ಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಆರಂಭವಾದ ಕೆಲಹೊತ್ತಿನಲ್ಲಿ ಹಸುವಿನ ಬೆಣ್ಣೆ ಖಾಲಿಯಾಯಿತು.

ಹಾಸನ ಮತ್ತು ಕೊಡಗು ಜಿಲ್ಲೆಯ ಸಾವಯವ ಕೃಷಿಕರ ಒಕ್ಕೂಟ, ಆರ್ಗ್ಯಾನಿಕ್‌ ಅಸೋಸಿಯೇಷನ್‌, ಸ್ವದೇಶಿ ಜಾಗರಣ ಮಂಚ್ ಹಾಗೂ ಅವನಿ ಆರ್ಗ್ಯಾನಿಕ್‌ ಸಹಯೋಗದಲ್ಲಿ ಸಂತೆ ಆಯೋಜಿಸಲಾಗಿತ್ತು.

ಹಸುವಿನ ಬೆಣ್ಣೆ, ಹಾಲು ಮತ್ತು ಮಜ್ಜಿಗೆಗೆ ಬೇಡಿಕೆ ಹೆಚ್ಚಾಗಿದ್ದು, ಸಂತೆ ಆರಂಭವಾದ ಅರ್ಧ ತಾಸಲ್ಲಿ ಬೆಣ್ಣೆ ಮತ್ತು ಹಾಲು ಮಾರಾಟವಾಯಿತು.

ಪ್ರತಿ ತಿಂಗಳ ಮೊದಲನೇ ಭಾನುವಾರ ಸಂತೆ ನಡೆಯುತ್ತದೆ. ಇದರಲ್ಲಿ ಹಾಸನ ಹಾಗೂ ಕೊಡಗು ಜಿಲ್ಲೆಯ 15ಕ್ಕೂ ಹೆಚ್ಚು ಸಾವಯವ ಕೃಷಿಕರು ಪಾಲ್ಗೊಂಡಿದ್ದರು.

ಸಾವಯವ ವಿಧಾನದಲ್ಲಿ ಬೆಳೆದ ಬದನೆ, ಬೀನ್ಸ್‌, ಮೆಣಸಿನಕಾಯಿ, ಹಲಸಿನ ಹಣ್ಣು, ಸಪೋಟ, ಬಾಳೆ ಕಾಯಿ ಹಾಗೂ ಬಾಳೆಹಣ್ಣು, ಮಾವಿನ ಹಣ್ಣು, ವಿವಿಧ ಬಗೆಯ ಸೊಪ್ಪುಗಳು, ಅಲಸಂದೆ, ಅಕ್ಕಿ, ಬೆಲ್ಲ, ಕೊಬ್ಬರಿ ಎಣ್ಣೆ, ಕಾಫಿ ಪುಡಿ, ಕಾಳು ಮೆಣಸು, ಕೆಸುವಿನ ಸೊಪ್ಪು, ಬಸಳೆ ಸೊಪ್ಪು, ಹಲಸಿನ ಬೀಜ, ಹಸುವಿನ ಹಾಲು, ಮಜ್ಜಿಗೆ, ಬೆಣ್ಣೆ, ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿ–ತಿನಿಸು ಲಭ್ಯವಿದ್ದವು.

‘ಸಾವಯವ ಕೃಷಿಗೆ ಉತ್ತೇಜನ, ಸಾವಯವ ಉತ್ಪನ್ನಗಳನ್ನು ರೈತರಿಂದ ಗ್ರಾಹಕರಿಗೆ ನೇರವಾಗಿ ತಲುಪಿಸಲು ಸಂತೆ ಮಾಡುತ್ತಿದ್ದೇವೆ. ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರುತ್ತಾರೆ. ನಾವು ರೈತರಿಂದ ಕಮಿಷನ್‌ ಪಡೆಯುವುದಿಲ್ಲ’ ಎಂದು ಸಂತೆಯ ಸಂಘಟಕ ಜಯಪ್ರಸಾದ್‌ ತಿಳಿಸಿದರು.

ಸಾವಯವ ಕೃಷಿ ಉತ್ಪನ್ನಗಳಿಗೆ ಗ್ರಾಹಕರಿಂದ ಉತ್ತಮ ಬೇಡಿಕೆ ಇದೆ. ಆರೋಗ್ಯದ ದೃಷ್ಟಿಯಿಂದಲೂ ಈ ಉತ್ಪನ್ನಗಳು ಪ್ರಯೋಜನಕಾರಿ’ ಎಂದರು.

‘ಸಂತೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಬಹುತೇಕ ಪದಾರ್ಥ ಗಳು ಮಾರಾಟವಾಯಿತು. ಒಳ್ಳೆ ಬೇಡಿಕೆಯಿದೆ. ಮುಂದಿನ ಬಾರಿ ಹೆಚ್ಚಿನ ಉತ್ಪನ್ನಗಳನ್ನು ತರಲಾಗುವುದು’ ಎಂದು ಸಕಲೇಶಪುರದ ದಬ್ಬೆಗದ್ದೆಯ ಸಾವಯವ ಕೃಷಿಕ ಕಾಂತರಾಜ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry