ಖಾತೆ ಹಂಚಿಕೆ: ಕಾಂಗ್ರೆಸ್‌ನಲ್ಲಿ ಒಳ ತುಮುಲ

7
ಪಾಟೀಲರ ರಾಜೀನಾಮೆ ಕಾರಣ ಗೊತ್ತಿಲ್ಲ: ಪರಮೇಶ್ವರ

ಖಾತೆ ಹಂಚಿಕೆ: ಕಾಂಗ್ರೆಸ್‌ನಲ್ಲಿ ಒಳ ತುಮುಲ

Published:
Updated:
ಖಾತೆ ಹಂಚಿಕೆ: ಕಾಂಗ್ರೆಸ್‌ನಲ್ಲಿ ಒಳ ತುಮುಲ

ಬೆಂಗಳೂರು: ಮೈತ್ರಿ ಸರ್ಕಾರದ ಭಾಗಿದಾರ ಪಕ್ಷವಾದ ಕಾಂಗ್ರೆಸ್‌ನಲ್ಲಿ ಖಾತೆ ಹಂಚಿಕೆ ಗೊಂದಲ, ಅಸಮಾಧಾನ ಇನ್ನೂ ಮುಂದುವರಿದಿದ್ದು, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಕೂಡ ಈ ಬಗ್ಗೆ ಸ್ಪಷ್ಟ ಉತ್ತರ ನೀಡಲು ಮುಂದಾಗಿಲ್ಲ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಪಕ್ಷದ ಬೆಳವಣಿಗೆಗಳ ಕುರಿತು ಯಾವ ‍ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಮಾಧ್ಯಮ ಪ್ರತಿನಿಧಿಗಳ ಜತೆ ಸೋಮವಾರ ಮಾತನಾಡಿದ ಜಿ.ಪರಮೇಶ್ವರ, ‘ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್‌.ಆರ್‌.ಪಾಟೀಲರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಬಾಗಲಕೋಟೆಯ ಅವರ ನಿವಾಸದ ಬಳಿ ಕೆಲವರು ಪ್ರತಿಭಟನೆ ನಡೆಸಿದ್ದಾರೆ. ಆ ಕಾರಣಕ್ಕೆ ಬೇಸತ್ತು ಪದತ್ಯಾಗ ಮಾಡಿರಬಹುದು. ಅವರ ಬಳಿ ಮಾತನಾಡುತ್ತೇನೆ. ಬೇಸರ ಆಗಿದ್ದರೆ ಸಮಾಧಾನ ಮಾಡುತ್ತೇನೆ’ ಎಂದಷ್ಟೇ ಹೇಳಿದರು.

ಹಿರಿಯ ನಾಯಕ ಡಿ.ಕೆ.ಶಿವಕುಮಾರ್‌, ‘ಪಾಟೀಲರು ಉತ್ತರ ಕರ್ನಾಟಕ ಭಾಗದ ಪ್ರಮುಖ ನಾಯಕ. ದಕ್ಷಿಣ ಕರ್ನಾಟಕದಲ್ಲಿ ನಮ್ಮವರು (ಒಕ್ಕಲಿಗರು) ಇದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ವೀರಶೈವ– ಲಿಂಗಾಯತ ಪ್ರಮುಖ ಸಮುದಾಯ. ಸಚಿವ ಸ್ಥಾನ ನೀಡುವಾಗ ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ’ ಎಂದು ಹೇಳುವ ಮೂಲಕ ಪಾಟೀಲರ ಪರ ವಾದ ಮಂಡಿಸಿದರು.

ಸಚಿವ ಸಂಪುಟ ಸೇರ್ಪಡೆ ಬಗ್ಗೆ ಯಾವುದೇ ಸುಳಿವು ನೀಡದ ಅವರು, ‘ನಾನು ಸಂಪುಟದಲ್ಲಿ ಇರಬೇಕೋ ಅಥವಾ ಪಕ್ಷದ ಸಾರಥ್ಯ ವಹಿಸಬೇಕೋ ಎಂಬುದನ್ನು ಹೈಕಮಾಂಡ್‌ ತೀರ್ಮಾನಿಸುತ್ತದೆ. ಪಕ್ಷದ ತೀರ್ಮಾನಕ್ಕೆ ಬದ್ಧ. ಪಕ್ಷದಲ್ಲಿ ನಾನು ಏಕಾಂಗಿಯಾಗಿಲ್ಲ. ಏಕಾಂಗಿಯಾಗುವುದು ನನ್ನ ಜಾಯಮಾನವೂ ಅಲ್ಲ’ ಎಂದೂ ಹೇಳಿದರು.

‘ನಾನು ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ಸರಿಯಲ್ಲ. ಚುನಾವಣೆ ಮುಗಿದ ಕಾರಣ ದೇವಸ್ಥಾನಕ್ಕೆ ಹೋಗಿದ್ದೆ. ದೇವಸ್ಥಾನಗಳಿಗೂ ಹೋಗಲೇಬಾರದಾ’ ಎಂದೂ ಅವರು  ಪ್ರಶ್ನಿಸಿದರು.

ಅದೃಷ್ಟ ಇದ್ದರೆ ಮಂತ್ರಿ: ‘ಸಚಿವ ಸಂಪುಟದಲ್ಲಿ ಹಿರಿಯರಿರಬೇಕೊ, ಕಿರಿಯರಿರಬೇಕೊ ಎಂಬುದನ್ನು ಹೈಕಮಾಂಡ್‌ ತೀರ್ಮಾನಿಸುತ್ತದೆ. ನಮ್ಮ ಅದೃಷ್ಟ ಎಲ್ಲಿಯವರೆಗೆ ಚೆನ್ನಾಗಿ ಇರುತ್ತದೆಯೊ ಅಲ್ಲಿಯವರೆಗೆ ಮುಂದುವರಿಯುತ್ತೇವೆ. ನಾನು ಯಾವತ್ತೂ ಅಧಿಕಾರದ ಹಿಂದೆ ಬಿದ್ದಿಲ್ಲ. ಅಧಿಕಾರವೇ ನನ್ನನ್ನು ಹುಡುಕಿಕೊಂಡು ಬಂದಿದೆ’ ಎಂದು ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬೈರತಿ, ಮುನಿರತ್ನ, ಸೋಮಶೇಖರ್‌ ಒತ್ತಡ: ‘ಸಚಿವ ಸಂಪುಟದಲ್ಲಿ ನಮಗೂ ಸ್ಥಾನ ನೀಡಬೇಕು’ ಎಂದು ಬೈರತಿ ಬಸವರಾಜು, ಮುನಿರತ್ನ ಮತ್ತು ಎಸ್‌.ಟಿ.ಸೋಮಶೇಖರ್‌ ಒತ್ತಾಯಿಸಿದ್ದಾರೆ.

‘ಐದು ವರ್ಷ ಕುಮಾರಸ್ವಾಮಿ ಸಿ.ಎಂ’

‘ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಐದು ವರ್ಷ ಕುಮಾರಸ್ವಾಮಿ ಮುಂದುವರೆಯುತ್ತಾರೆ’ಎಂದು ಪರಮೇಶ್ವರ ಹಾಗೂ ರಾಮಲಿಂಗಾರೆಡ್ಡಿ ಹೇಳಿದರು.

‘ಕಾಂಗ್ರೆಸ್‌ ಬೆಂಬಲ ಅವರಿಗಿದೆ, ಅವರು ಅನುಮಾನ ಪಡಬೇಕಾಗಿಲ್ಲ. ಸರ್ಕಾರ ಸುಭದ್ರವಾಗಿರಬೇಕು ಎಂಬುದು ನಮ್ಮ ಬಯಕೆಯೂ ಆಗಿದೆ’ ಎಂದೂ ಅವರಿಬ್ಬರೂ ಹೇಳಿದರು.

‘ಖಾತೆ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಯಾರಿಗೂ ಅಸಮಾಧಾನವಿಲ್ಲ. ಯಾವುದೇ ಅಸಮಾಧಾನ ಆಗದಂತೆ ಮೈತ್ರಿ ಸರ್ಕಾರ ನಡೆಸುತ್ತೇವೆ.’

– ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry