ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಲ್ ಫ್ರೆಂಡ್ ಆದ್ರೆ ರಾಜಕೀಯದಲ್ಲಿ ಯಶಸ್ಸು: ಲೀಲಾದೇವಿ ಪ್ರಸಾದ್

Last Updated 30 ಸೆಪ್ಟೆಂಬರ್ 2018, 7:44 IST
ಅಕ್ಷರ ಗಾತ್ರ

ತುಮಕೂರು: ರಾಜಕೀಯದಲ್ಲಿ ಮಹಿಳೆಯರು ಯಶಸ್ಸು ಕಾಣಬೇಕಾದರೆ ಗಾಡ್ ಫಾದರ್ ಇರಬೇಕು, ಹಣ ಇರಬೇಕು. ಇಲ್ಲದೇ ಇದ್ದರೆ ಗರ್ಲ್ ಫ್ರೆಂಡ್ ಆಗಬೇಕು ಇದು ನಮ್ಮ ಈಗಿನ ರಾಜಕೀಯ ವ್ಯವಸ್ಥೆ ಎಂದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಹೇಳಿದರು.

ಭಾನುವಾರ ಕನ್ನಡ ಭವನದಲ್ಲಿ ನಡೆದ ಚುನಾವಣೆ- ಒಳ, ಹೊರಗೆ ಮಹಿಳೆಯರು ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಾನು ಎಲ್ಲ ಪಕ್ಷಗಳು, ಮುಖಂಡರನ್ನು ನೋಡಿದ್ದೇನೆ. ಎಲ್ಲ ಪಕ್ಷಗಳು ಹೆಚ್ಚು ಕಡಿಮೆ ಒಂದೇ ಆಗಿವೆ. ನಾನು ವಿಧಾನಸಭೆ ಪ್ರವೇಶಿಸಲು 40 ವರ್ಷ ಬೇಕಾಯಿತು. ಎಂಟುಜನರಿಗೆ ವಿಧಾನಸಭೆ ಟಿಕೆಟ್ ಕೊಡಿಸಿದ ನನಗೇ ಟಿಕೆಟ್ ಸಿಗಲಿಲ್ಲ. ನನಗೆ ಈಗ 83 ವರ್ಷ. ಆಶಾವಾದಿಯಾಗಿದ್ದೇನೆ. ರಾಜಕೀಯದಲ್ಲಿ ಮಹಿಳೆಯರಿಗೆ ಶೇ 33, ಮೀಸಲಾತಿ ಬೇಕು ಎಂದು ಆಗಿನ ಪ್ರಧಾನಿ ನರಸಿಂಹರಾವ್ ಮುಂದೆ ಧ್ವನಿ ಎತ್ತಿದೆ. ಈಗಲೂ ಅದು ಆಗಿಲ್ಲ. ಆ ಹಕ್ಕಿಗೆ ಈಗಲೂ ಹೋರಾಟಕ್ಕೆ ಬದ್ಧವಾಗಿದ್ದೇನೆ. ಲೋಕಸಭೆಯಲ್ಲಿರುವ ಪುರುಷ ಪಟ್ಟಭದ್ರ ಹಿತಾಸಕ್ತಿಗಳು ಶೇ 33 ಜಾರಿಗೆ ಬಿಡುತ್ತಿಲ್ಲ ಎಂದು ವಿಷಾದಿಸಿದರು.

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 110 ಮಹಿಳಾ ಸದಸ್ಯೆಯರಾಗಿದ್ದಾರೆ. ಸ್ವತಂತ್ರವಾಗಿ ಅಧಿಕಾರ ನಡೆಸುವ ಛಾತಿ ಇಲ್ಲ. ಗಂಡಂದಿರೇ ಅಧಿಕಾರ ನಡೆಸುತ್ತಿದ್ದಾರೆ. ಮಹಿಳೆಯರಲ್ಲಿ ಶಕ್ತಿ ಇದೆ. ಆಡಳಿತದ ಬಗ್ಗೆ ತಿಳಿದುಕೊಂಡು ಅಧಿಕಾರ ನಡೆಸಬೇಕು. ಈಗ ಗ್ರಾಮ ಪಂಚಾಯತಿಯಲ್ಲಿ ಮಹಿಳೆ ಅಧ್ಯಕ್ಷರಾಗಿದ್ದರೆ ಗಂಡಂದಿರ ಅಧಿಕಾರ ನಡೆಯುತ್ತಿದೆ. ಹೆಬ್ಬೆಟ್ಟು ಒತ್ತುವ ಮಹಿಳೆಯರು ಅಧ್ಯಕ್ಷರಾಗಿದ್ದಾರೆ. ಪಂಚಾಯಿತಿಯನ್ನು ಸೆಕ್ರೆಟರಿಯೇ ನಡೆಸುತ್ತಾರೆ. ಆತನೇ ಪಂಚಾಯಿತಿ ಪ್ರಭಾವಿ ವ್ಯಕ್ತಿ. ಹೆಬ್ಬೆಟ್ಟು ಒತ್ತುವ ಮಹಿಳೆ ಗೊತ್ರಿಲ್ಲದೇ ಲಕ್ಷಾಂತರ ಲೂಟಿ ಹೊಡೆಯುತ್ತಿದ್ದಾರೆ. ಹೆಬ್ಬೆಟ್ಟು ಸಹಿ ಹಾಕಲು ₹150 ಕೊಡುತ್ತಾರೆ ಎಂದು ಹೇಳಿದರು.

ಎಲ್ಲಿಯವರೆಗೆ ಸರಳವಾಗಿ ಚುನಾವಣೆ ನಡೆಯುವುದಿಲ್ಲವೊ, ಪ್ರಾಮಾಣಿಕ ಮತ್ತು ಅರ್ಹರಿಗೆ, ಸೇವಾ ಮನೋಭಾವದವರಿಗೆ ಟಿಕೆಟ್ ಕೊಡುವುದಿಲ್ಲವೋಅಲ್ಲಿಯವರೆಗೂ ಇದೇ ಸ್ಥಿತಿ ಇರುತ್ತದೆ.ಬೆಂಗಳೂರಲ್ಲಿ ನಾನು ಕೆಲಸ ಮಾಡಿದ ಸ್ಥಳದಲ್ಲಿ ಟಿಕೆಟ್ ಕೊಡಲಿಲ್ಲ. ಟಿಕೆಟ್ ಕೇಳಿದರೆ ಕ್ಷೇತ್ರ ಹುಡುಕಿಕೊಂಡು ಬನ್ನಿ ಅಂದ್ರು. ಮಗಳಿಗೆ ಗಂಡು ಹುಡುಕುವ ರೀತಿ ಕ್ಷೇತ್ರ ಹುಡುಕಬೇಕೇ? ಇದು ಪುರುಷರು ರಾಜಕೀಯದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ. ಕೊನೆಗೆ ಅಥಣಿಯಲ್ಲಿ ಅಭ್ಯರ್ಥಿ ಇರಲಿಲ್ಲ. ಅಲ್ಲಿಗೆ ಟಿಕೆಟ್ ಕೊಟ್ಟರು. ಅಲ್ಲಿಗೆ ಹೋದಾಗ ಪ್ರವಾಸಿ ಮಂದಿರದಲ್ಲಿ ಕೊಠಡಿ ಕೊಡಲಿಲ್ಲ. ಧೈರ್ಯ ಮಾಡಿ ಹೋಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದೆ. ಶಾಸಕಿಯಾಗಿ, ಸಚಿವೆಯಾದೆ. ಅಥಣಿ ಈಗ ನನ್ನೂರು ಆಗಿದೆ.ಜಾತಿ, ಬೇಧ ಮಾಡದೇ ಜನರು ಗೆಲ್ಲಿಸಿದರು ಎಂದು ವಿವರಿಸಿದರು.

ಮಹಿಳೆ ರಾಜಕೀಯಕ್ಕೆ ಬರಬೇಕಾದರೆ ಇದೆಲ್ಲ ಎದುರಿಸಬೇಕು. ಇಲ್ಲದೇ ಇದ್ದರೆ ಮನೆಯಲ್ಲಿರಿ. ಮಹಿಳೆಯರನ್ನು ರಾಜಕೀಯವಾಗಿ ಎದುರಿಸಲಾಗದವರು ವ್ಯಕ್ತಿತ್ವಕ್ಕೆ ಕೆಟ್ಟ ಹೆಸರು ತರುತ್ತಾರೆ. ಮಹಿಳೆಯರಷ್ಟೇ ಮತ ಹಾಕಿದರೆ ಗೆಲ್ಲುವುದಿಲ್ಲ. ಪುರುಷರಿಗೆ ಕೈ ಮುಗಿದು ಮತ ಪಡೆದು ಗುರಿ ಸಾಧಿಸಬೇಕು. ಹಣ ಇದ್ದವರು, ಅಧಿಕಾರ ಇದ್ದವರು ಚುನಾವಣೆ ಒಳಗಡೆ ಇದ್ದಾರೆ. ಸಮಾಜ ಸೇವೆ ಮಾಡಿದವರು, ದೇಶಭಕ್ತಿ ಸಾರಿದವರು, ಸಂಗೀತಗಾರರು ಹೊರಗೆ ಇದ್ದಾರೆ. ಇದೇ ಚುನಾವಣೆ ಒಳ ಹೊರಗು ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT