7
ಬಸವನಗರ ಬಡಾವಣೆಯ ₹ 1.3 ಕೋಟಿ ವೆಚ್ಚದ ರಸ್ತೆ ಕಾಮಗಾರಿ

ಕೋಟಿ ಖರ್ಚಾದರೂ ಇಲ್ಲ ಸುವ್ಯವಸ್ಥೆ

Published:
Updated:
ಕೋಟಿ ಖರ್ಚಾದರೂ ಇಲ್ಲ ಸುವ್ಯವಸ್ಥೆ

ಚಿಂಚೋಳಿ: ಇಲ್ಲಿನ ಪುರಸಭೆಯ ಚಂದಾಪುರದ ಬಸವ ನಗರ ಬಡಾವಣೆಯಲ್ಲಿ ನಿರ್ಮಿಸಿದ 70 ಅಡಿ ಅಗಲದ ರಸ್ತೆಯು ಅವ್ಯವಸ್ಥೆಯ ಆಗರವಾಗಿದೆ.

ಚರಂಡಿ ಕಾಮಗಾರಿ ನಡೆಸಿದರೂ ಅವುಗಳ ಮೇಲೆ ಇನ್ನೂ 'ಪ್ರಿಕಾಸ್ಟ್‌ ಸ್ಟೋನ್‌' ಅಳವಡಿಸಿಲ್ಲ. ಡಾಂಬರ್‌ ರಸ್ತೆ ಮತ್ತು ಪಾರ್ಕಿಂಗ್‌ ಸ್ಥಳದ ಮೇಲೆ ನಿಲ್ಲುವ ಮಳೆ ನೀರು ಹೊರಗಡೆ ಹೋಗಲು ಕೊಳವೆಯನ್ನು  ಅಳವಡಿಸಿರುವುದು ಸಮರ್ಪಕವಾಗಿಲ್ಲ. ಹೀಗಾಗಿ ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಂತು ಜನರಿಗೆ ಓಡಾಡಲು ಸಮಸ್ಯೆ ಆಗುತ್ತಿದೆ.

70 ಮೀಟರ್‌ ಅಗಲ 300 ಮೀಟರ್‌ ಉದ್ದದ ಈ ರಸ್ತೆ ಕಾಮಗಾರಿಗೆ ಹೈದರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿಯು  ₹ 1.3 ಕೋಟಿ ಅನುದಾನ ಮಂಜೂರು ಮಾಡಿದೆ.

ಫೆಬ್ರವರಿ 28, 2016 ರಂದು ಆರಂಭವಾದ ಈ ಕಾಮಗಾರಿಯು ಇನ್ನೂ ಪೂರ್ಣಗೊಂಡಿಲ್ಲ. ಇಲ್ಲಿ ರಸ್ತೆ ವಿಭಜಕ, ಡಾಂಬರ್‌ ರಸ್ತೆ ಬಿಟ್ಟರೆ ಉಳಿದ ಕಾಮಗಾರಿಗಳನ್ನು ಹೆಸರಿಗಷ್ಟೇ ಮಾಡಿದಂತಿದೆ ಎಂದು ನಾಗರಿಕರು ದೂರುತ್ತಾರೆ.

ಚರಂಡಿಗಳನ್ನು ಭಾಗಶಃ ಮುಚ್ಚಲಾಗಿದೆ. ಚರಂಡಿಗಳಲ್ಲಿ ನೀರು ಹೋಗುವುದೇ ಇಲ್ಲ. ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ 'ಪೇವರ್ಸ್‌' ಕುಸಿಯುತ್ತಿವೆ.ವಾಹನಗಳ ಪಾರ್ಕಿಂಗ್‌ಗೆ ಕಾಯ್ದಿಟ್ಟ ರಸ್ತೆಯಲ್ಲಿ ಮಳೆ ನೀರು ನಿಂತು ಅವಾಂತರ ಸೃಷ್ಟಿಸುತ್ತಿವೆ. ಇವುಗಳ ಮೇಲೆ ಅಲ್ಲಲ್ಲಿ ಜಲ್ಲಿಕಲ್ಲು, ಮರಳು, ಹಾಕಲಾಗಿದ್ದು 6 ತಿಂಗಳಿನಿಂದ ತೆಗೆದಿಲ್ಲ. ರಸ್ತೆ ವಿಭಜಕದಲ್ಲಿ ಕೆಲವೆಡೆ ಮಣ್ಣು ಹಾಕಿದ್ದರೂ ಸಸಿ ನೆಟ್ಟಿಲ್ಲ. ಇನ್ನು ಕೆಲವು ಕಡೆ ಮಣ್ಣು ತುಂಬಿಲ್ಲ. 'ಪೇವರ್ಸ್‌'ನ ರಕ್ಷಣೆಗೆ ಲೇಪಿಸಿದ ಸಿಮೆಂಟ್‌ ಕಿತ್ತು ಹೋಗುತ್ತಿದೆ.

ಮಾದರಿ ರಸ್ತೆ ನಿರ್ಮಿಸಬೇಕೆಂದು ಅನುದಾನ ನೀಡಿದರೂ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ನಿಗಮದ ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಕಾಮಗಾರಿ ಕುಂಟುತ್ತಾ ಸಾಗಿದೆ.

ನಿಗಮದಲ್ಲಿ ಗುತ್ತಿಗೆ ಆಧಾರಿತ ಎಂಜಿನಿಯರ್‌ಗಳಿದ್ದು, ಅವರೇ ಗುತ್ತಿಗೆದಾರರಾಗಿದ್ದಾರೆ ಎಂಬ ಆರೋಪ ಜನರಿಂದ ಕೇಳಿ ಬಂದಿದೆ. ಚರಂಡಿಗಳನ್ನು ಇಳಿ ಮುಖದಲ್ಲಿ ಸಮತಟ್ಟು ಮಾಡಿ ನೀರು ಹರಿದು ಹೋಗುವಂತೆ ಮಾಡಬೇಕು. ಮನೆಗಳಿಗೆ ಹೋಗಲು ಚರಂಡಿಯ ಮೇಲೆ ಬೆಡ್‌ ಹಾಕಿ ಕೊಡಬೇಕು. 'ಕಳಪೆ ಪ್ರಿಕಾಸ್ಟ್‌ ಸ್ಟೋನ್‌' ಬಳಸಬಾರದು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಶಾಸಕ ಡಾ. ಉಮೇಶ ಜಾಧವ್‌ ಅವರ ಮನೆಯ ಹತ್ತಿರ ದಲ್ಲಿಯೇ ಇರುವ ಈ ರಸ್ತೆಯನ್ನು ಒಮ್ಮೆ ಶಾಸಕರು ಖುದ್ದಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry