ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯ ಏರಿಳಿತ ಊಹಿಸುವುದು ವ್ಯರ್ಥ ಪ್ರಯತ್ನ

ಊಹೆ ಆಧರಿಸಿ ಷೇರು ಹೂಡಿಕೆ ಬೇಡ
Last Updated 16 ಜೂನ್ 2018, 10:50 IST
ಅಕ್ಷರ ಗಾತ್ರ

ಹೂಡಿಕೆದಾರರು ತಮ್ಮ ನಿಯಂತ್ರಣದಲ್ಲಿ ಇಲ್ಲದಿರುವ ವಿಚಾರಗಳ ಬಗ್ಗೆ ‘ಊಹೆ’ಗಳನ್ನು ಮಾಡುವುದರ ಬದಲು, ಯಾವ ಸಂಗತಿಗಳ ಮೇಲೆ ತಾವು ಹೆಚ್ಚು ಪ್ರಭಾವ ಬೀರಬಲ್ಲೇವು ಎನ್ನುವುದರ ಬಗ್ಗೆ ಮಾತ್ರ ಹೆಚ್ಚು ಗಮನ ಹರಿಸುವುದು ಜಾಣತನದ ನಿಲುವಾಗಿರುತ್ತದೆ. ಹಣ ಹೂಡಿಕೆಯ ವಿಷಯದಲ್ಲಂತೂ ಈ ಮಾತನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಪರಿಪಾಲನೆ ಮಾಡುವುದು ಮುಖ್ಯವಾಗಿರುತ್ತದೆ.

ಬೇರೆ, ಬೇರೆ ಆರ್ಥಿಕ ಅಗತ್ಯಗಳನ್ನು ಈಡೇರಿಸುವುದೇ ಹಣ ಹೂಡಿಕೆಯ ಮುಖ್ಯ ಉದ್ದೇಶ ಎನ್ನುವುದಾದರೆ, ಹೆಚ್ಚಿನ
ವಿವೇಚನೆಯಿಂದ ಹಣ ತೊಡಗಿಸಬೇಕು. ಇದು ಒಂದು ರೀತಿಯಲ್ಲಿ ಸುದೀರ್ಘವಾದ ಸುಖಕರ ಪ್ರಯಾಣ ಇದ್ದಂತೆ. ಯಾವುದೇ ಪ್ರಯಾಣದಲ್ಲಿ ಗುರಿ ತಲುಪುವುದು ಹೇಗೆ ಎಂದು ನಿರ್ಧರಿಸುವುದಕ್ಕೂ ಮುನ್ನ, ನಾವು ಈಗ ಎಲ್ಲಿದ್ದೇವೆ ಎಂದು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಹೆಚ್ಚು ಮುಖ್ಯವಾಗಿರುತ್ತದೆ.

ಹೂಡಿಕೆಯ ಜಗತ್ತಿನಲ್ಲಿ ಅನೇಕ ಅಸಂಬದ್ಧ ನಂಬಿಕೆಗಳಿವೆ. ಅವುಗಳಲ್ಲಿ ಹೆಚ್ಚು ಪ್ರಚಲಿತದಲ್ಲಿ ಇರುವುದು ಯಾವುದು ಎಂದರೆ (ಬಹುಶಃ ಹೆಚ್ಚು ಜನರಿಗೆ ಆಘಾತವನ್ನು ಉಂಟುಮಾಡುವಂಥದ್ದೂ ಕೂಡ), ‘ಷೇರು ಮಾರುಕಟ್ಟೆ ಅಥವಾ ಒಂದು ಕಂಪನಿಯ ಷೇರು ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಬಗ್ಗೆ ಹೂಡಿಕೆದಾರನಿಗೆ ಮತ್ತು ನಿಧಿಗಳ ನಿರ್ವಾಹಕರಿಗೆ ನಿಖರವಾಗಿ ಊಹೆ ಮಾಡಲು ಸಾಧ್ಯವಾಗಬೇಕು’ ಎಂಬ ನಂಬಿಕೆ.

ಊಹೆಯ ಮಾತು ಹಾಗಿರಲಿ, ಷೇರು ಬೆಲೆ ಮೇಲಕ್ಕೇರುವುದು ಹೇಗೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ: ಬೆಲೆ ಏರಿಕೆಗೆ ಒಂದು ಕಾರಣವೆಂದರೆ ಹೂಡಿಕೆ ಮಾಡಿದವರಲ್ಲಿ ಹೆಚ್ಚಿನವರು ಆ ಷೇರಿನ ಬೆಲೆ ಇನ್ನಷ್ಟು ಏರಿಕೆ ಆಗಲಿದೆ ಎಂದು ‘ನಂಬಿರುವುದು’. ಆ ಷೇರಿನ ಬೆಲೆ ಅಲ್ಪಾವಧಿಯಲ್ಲಿ ಏರಿಕೆ ಕಾಣಲು ಸಾವಿರಾರು ಮಂದಿ ಹೂಡಿಕೆದಾರರ ಇಂಥ ನಂಬಿಕೆ ಕಾರಣ.

ಜೊತೆಗೆ ಹತ್ತಾರು ಇತರ ಕಾರಣಗಳೂ ಇರುತ್ತವೆ. ಅವು ರಾಜಕೀಯ ಸ್ಥಿತಿ, ರಾಷ್ಟ್ರೀಯ– ಅಂತರರಾಷ್ಟ್ರೀಯ ಸುದ್ದಿಗಳು, ಪ್ರಕೃತಿ ವಿಕೋಪ, ಯಾವುದೇ ರಾಜಕಾರಣಿ, ಆರ್‌ಬಿಐ ಗವರ್ನರ್‌ ಅಥವಾ ಯಾವುದೋ ದೊಡ್ಡ ಹಣಕಾಸು ಸಂಸ್ಥೆಯ ಮುಖ್ಯಸ್ಥರು ಕೊಡುವ ಒಂದು ಹೇಳಿಕೆ, ಯಾವುದೋ ಹಗರಣದ ಸುದ್ದಿ, ರೂಪಾಯಿ ಅಥವಾ ಅಗತ್ಯವಸ್ತುಗಳ ಬೆಲೆ ಏರಿಳಿತ... ಹೀಗೆ ಹಲವು ಕಾರಣಗಳೂ ಷೇರಿನ ಏರಿಳಿತಕ್ಕೆ ಕಾರಣ ಆಗಬಹುದು. ಏಕೆಂದರೆ ಇಂಥ ವಿಚಾರಗಳು ಒಂದು ಕಂಪನಿಯ ವರಮಾನ ಗಳಿಕೆಯ ಮೇಲೆ ಪರಿಣಾಮ ಉಂಟುಮಾಡಬಲ್ಲವು.

ಇಂಥ ವಿಚಾರಗಳಿಗೆ ಹೂಡಿಕೆದಾರರು ಹೇಗೆ ಪ್ರತಿಕ್ರಿಯಿಸುತ್ತಾರೆ, ಅದರ ಪರಿಣಾಮ ಷೇರುಪೇಟೆಯ ಮೇಲೆ ಹೇಗೆ ಬೀರಬಲ್ಲದು ಎಂಬುದನ್ನು ಸಾಮಾನ್ಯವಾಗಿ ಊಹಿಸಬಹುದು. ಆದರೆ ಪ್ರತಿಬಾರಿಯೂ ನಿಖರವಾಗಿ ಊಹಿಸುವುದು ಅಸಾಧ್ಯ. ಅಂದಮೇಲೆ ಊಹೆಯನ್ನಾದರೂ ಯಾಕೆ ಮಾಡಬೇಕು?

ಷೇರು ಮಾರುಕಟ್ಟೆಯ ಏರುಪೇರಿನ ಬಗ್ಗೆ ಊಹೆಗಳನ್ನು ಮಾಡಲು ಮುಖ್ಯ ಕಾರಣವೆಂದರೆ, ‘ಷೇರು ಮಾರುಕಟ್ಟೆ ತೇಜಿಯಲ್ಲಿರುವಾಗ ಹೂಡಿಕೆ ಮಾಡಬೇಕು’ ಎಂದು ಅನೇಕ ಹೂಡಿಕೆದಾರರು ನಂಬಿರುವುದು. ಇಂತಹ ಹೂಡಿಕೆದಾರರು ಮಾರುಕಟ್ಟೆ ಇಳಿಮುಖವಾದಾಗ ಅದರಿಂದ ದೂರವಿದ್ದು, ಮತ್ತೆ ತೇಜಿಗೆ ಬರುತ್ತಿದೆ ಎಂಬ ವಿಶ್ವಾಸ ಮೂಡಿದಾಗ ಪುನಃ ಹೂಡಿಕೆ ಆರಂಭಿಸುತ್ತಾರೆ. ಈ ವಿಚಾರದಿಂದ ನೋಡುವುದಾದರೆ ವ್ಯವಸ್ಥಿತ ಹೂಡಿಕೆ ಯೋಜನೆ (ಸಿಪ್‌) ಈಚೆಗೆ ಜನಪ್ರಿಯವಾಗುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ.

ಭ್ರಮೆ ಒಳ್ಳೆಯದಲ್ಲ

ನಮ್ಮ ಹೂಡಿಕೆಗೆ ಒಂದು ಉದ್ದೇಶ ಇರುವುದರಿಂದ, ಅದನ್ನು ಈಡೇರಿಸಬೇಕಾದರೆ ‘ಭವಿಷ್ಯವನ್ನು ನಾನು ಸರಿಯಾಗಿ ಊಹಿಸಬಲ್ಲೆ’ ಎಂಬ ಭ್ರಮೆಯನ್ನು ಬಿಟ್ಟುಬಿಡಬೇಕು. ನಾವು ಬಯಸಿದಂತೆ ಈ ಜಗತ್ತು ಸಾಗುವುದಿಲ್ಲ ಎಂಬ ಸತ್ಯವನ್ನು ಎಷ್ಟು ಬೇಗ ಅರ್ಥಮಾಡಿಕೊಳ್ಳುತ್ತೇವೋ ಅಷ್ಟು ಒಳ್ಳೆಯದು.

ಷೇರು ಮಾರುಕಟ್ಟೆಯ ಏರಿಳಿತದ ಬಗ್ಗೆ ಊಹೆಗಳನ್ನು ಮಾಡುವುದಕ್ಕಿಂತಷೇರು ಸೂಚ್ಯಂಕ ಹೇಗೆ ಏರಿಳಿಕೆ ದಾಖಲಿಸಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಸೂಚ್ಯಂಕ ಯಾವುದೋ ಒಂದು ಅಂಶವನ್ನು ಅವಲಂಬಿಸಿಲ್ಲ. ಅದರ ಏರಿಳಿಕೆಯ ಹಿಂದೆ ಹಲವು ಅಂಶಗಳು ಕೆಲಸ ಮಾಡುತ್ತವೆ. ಅವೆಲ್ಲವೂ ಒಂದೇ ದಿಕ್ಕಿನಲ್ಲಿ ಸಾಗುವುದಿಲ್ಲ ಎಂಬುದನ್ನು ಷೇರು ಮಾರುಕಟ್ಟೆ ಹಲವು ಬಾರಿ ಸಾಬೀತುಪಡಿಸಿದೆ.

ಉದಾಹರಣೆಗೆ 2000ದ ಫೆಬ್ರುವರಿಯಲ್ಲಿ ಷೇರು ಸೂಚ್ಯಂಕ ಒಮ್ಮೆ ಗರಿಷ್ಠ ಮಟ್ಟಕ್ಕೆ ಹೋಗಿತ್ತು. ಅದಾದ ಬಳಿಕ ಮತ್ತೆ ಏರುಮುಖ ಕಂಡು, ಹೊಸ ದಾಖಲೆ ಬರೆದದ್ದು 2003ರಲ್ಲಿ. ಅದರಂತೆ 2007ರ ಡಿಸೆಂಬರ್‌ ತಿಂಗಳಲ್ಲಿ ಮತ್ತೆ ಹೊಸ ಎತ್ತರಕ್ಕೆ ಏರಿದ ಸೂಚ್ಯಂಕವು ನಂತರ ಇಳಿಕೆ ಕಂಡು ಪುನಃ ಗರಿಷ್ಠ ಮಟ್ಟಕ್ಕೆ ಏರಿದ್ದು 2014ರಲ್ಲಿ. ಈ ನಡುವೆಯೂ ಕೆಲವು ಕಂಪನಿಗಳ ಷೇರುಗಳು ಅತ್ಯುತ್ತಮ ಸಾಧನೆ ಮಾಡಿದ್ದರೆ, ಕೆಲವು ಪಾತಾಳಕ್ಕೆ ಇಳಿದಿವೆ.

ಆದ್ದರಿಂದ ಹೂಡಿಕೆದಾರರು ಒಂದು ಶಿಸ್ತು ಅನುಸರಿಸುವುದು ಮುಖ್ಯ. ಬೇರೆ,ಬೇರೆ ಕ್ಷೇತ್ರಗಳ ಷೇರುಗಳನ್ನು ಆಯ್ಕೆ ಮಾಡಿಕೊಳ್ಳುವುದು ಬುದ್ಧಿವಂತಿಕೆ ಎನಿಸುವುದು. ಎಲ್ಲ ಕ್ಷೇತ್ರಗಳೂ ಏಕಕಾಲಕ್ಕೆ ಕುಸಿತ ಕಾಣುವ ಅಥವಾ ಏಕಕಾಲಕ್ಕೆ ಏರಿಕೆ ದಾಖಲಿಸುವ ಸಾಧ್ಯತೆಗಳು ಅತಿ ವಿರಳ. ಒಂದು ವೇಳೆ ಕುಸಿತ ಕಂಡರೂ ಮತ್ತೆ ಸಮಸ್ಥಿತಿಗೆ ಬರಲು ಪ್ರತಿ ಕ್ಷೇತ್ರಕ್ಕೂ ತನ್ನದೇ ಆದ ಯೋಜನೆಗಳು ಇದ್ದೇ ಇರುತ್ತವೆ. ಆದ್ದರಿಂದ ‘ಊಹೆ’ ಮಾಡುವುದಕ್ಕಿಂತ ಹೂಡಿಕೆಗೆ ಬುದ್ಧಿವಂತಿಕೆಯ ವಿಧಾನ ಅನುಸರಿಸುವುದೇ ಸರಿಯಾದ ಮಾರ್ಗ.

ಲೇಖಕ: ಡಿಎಚ್‌ಎಫ್‌ಎಲ್‌ ಪ್ರಮೆರಿಕ ಅಸೆಟ್‌ ಮ್ಯಾನೇಜರ್ಸ್‌ನಕಾರ್ಯನಿರ್ವಾಹಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT