ಬರಡು ನೆಲದಲ್ಲಿ ಅರಣ್ಯೀಕರಣ

7
ಐತಿಹಾಸಿಕ ಭೂತನಾಳ ಕೆರೆ ಹಿಂಬದಿಯಲ್ಲಿ ಹಸರೀಕರಣ; ಹಕ್ಕಿಗಳ ಚಿಲಿಪಿಲಿ ಅನುರಣನ

ಬರಡು ನೆಲದಲ್ಲಿ ಅರಣ್ಯೀಕರಣ

Published:
Updated:
ಬರಡು ನೆಲದಲ್ಲಿ ಅರಣ್ಯೀಕರಣ

ವಿಜಯಪುರ: ಹತ್ತು ತಿಂಗಳ ಹಿಂದೆ ಬಟಾಬಯಲು. ಕಲ್ಲು ಮಿಶ್ರಿತ ಬರಡು ನೆಲ. ಎತ್ತ ದೃಷ್ಟಿ ಹಾಯಿಸಿದರೂ; ಹಸಿರು ಕಾಣುತ್ತಿರಲಿಲ್ಲ. ಹೇಳಿಕೊಳ್ಳಲು ಒಂದೇ ಒಂದು ಗಿಡ–ಮರವೂ ಇಲ್ಲಿರಲಿಲ್ಲ.

ಇದೀಗ ಚಿತ್ರಣವೇ ಬದಲಾಗಿದೆ. ಕಣ್ಣು ಹಾಯಿಸಿದಷ್ಟು ದೂರ ಹಸಿರು ತುಂಬಿ ನಳನಳಿಸುವ ಗಿಡಗಳೇ ಗೋಚರಿಸುತ್ತಿವೆ. ಕಡು ಬೇಸಿಗೆ ಮುಗಿದು, ಮಳೆಗಾಲದ ಆರಂಭದಲ್ಲೇ ಐತಿಹಾಸಿಕ ಭೂತನಾಳ ಕೆರೆಯ ಒಡಲಲ್ಲಿ ನೀರಿದೆ.

ಕೆರೆಯ ನೀರಿನಲ್ಲಿ ಹಕ್ಕಿಗಳ ವಿಹಾರ ನಡೆದಿದೆ. ದಂಡೆಗೆ ಹೊಂದಿಕೊಂಡಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಆಲಮಟ್ಟಿಯ ಅರಣ್ಯ ವಿಭಾಗದ ಅರಣ್ಯೀಕರಣ ಇದೀಗ ಹಸಿರಿನಿಂದ ನಳನಳಿಸುತ್ತಿದೆ. ನೀರಿನಲ್ಲಿ ವಿಹರಿಸುವ ಪಕ್ಷಿ ಸಂಕುಲ ದಂಡೆಯಲ್ಲಿನ ಪುಟ್ಟ ಸಸಿಗಳ ಮೇಲೆ, ನೆರಳಲ್ಲಿ ಕುಳಿತು ವಿರಮಿಸುವುದನ್ನು ಕಾಣಬಹುದಾಗಿದೆ.

ಈ ಬದಲಾವಣೆಯ ಕೀರ್ತಿ ಹಿಂದಿನ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲರಿಗೆ ಸಲ್ಲಬೇಕಿದೆ.

ಕರಾಡದೊಡ್ಡಿ ನೆಡುತೋಪು: ‘ಬರಡು ಭೂಮಿಯಲ್ಲಿ ಹಸಿರು ಚಿಗುರುವಂತೆ ಮಾಡಬೇಕು. ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ಕಳಚಿ ಬೀಳಬೇಕು’ ಎಂಬ ಸದಾಶಯ ಹೊಂದಿದ್ದ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ, ಕೆಲ ವರ್ಷಗಳ ಹಿಂದೆ ವೃಕ್ಷ ಅಭಿಯಾನ ಟ್ರಸ್ಟ್‌ ಆರಂಭಿಸಿದರು.

ಜಲಸಂಪನ್ಮೂಲ ಸಚಿವರಿದ್ದ ಸಂದರ್ಭ ಕೆಬಿಜೆಎನ್‌ಎಲ್‌ನ ಆರ್ಥಿಕ ನೆರವು, ಅರಣ್ಯ ವಿಭಾಗದ ಸಹಕಾರ ಪಡೆದು ‘ಕೋಟಿ ವೃಕ್ಷ ಅಭಿಯಾನ’ವನ್ನು ವಿಜಯಪುರ ಜಿಲ್ಲೆಯಲ್ಲಿ ಹಮ್ಮಿಕೊಂಡರು. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಜೋಡಿಸಿ ವ್ಯವಸ್ಥಿತವಾಗಿ ಅರಣ್ಯೀಕರಣಕ್ಕೆ ಮುನ್ನುಡಿ ಬರೆದರು.

ಇದರ ಫಲವಾಗಿ ಕೆಬಿಜೆಎನ್‌ಎಲ್‌ ಆಡಳಿತ ಮಂಡಳಿ ಆಲಮಟ್ಟಿಯ ತನ್ನ ನರ್ಸರಿಗಳಲ್ಲಿ ಪ್ರತಿ ವರ್ಷ 10 ಲಕ್ಷ ಸಸಿ ಬೆಳೆಸಿ, ಪೋಷಣೆಗೆ ರೈತರಿಗೆ ವಿತರಿಸುತ್ತಿದೆ. ಸಾಮಾಜಿಕ ಅರಣ್ಯ ಇಲಾಖೆಯೂ ಸಹ ಜಿಲ್ಲೆಯ ವಿವಿಧೆಡೆ ಹಸರೀಕರಣಕ್ಕೆ ತನ್ನದೇ ಕೊಡುಗೆ ನೀಡಿದೆ.

ಕೆಬಿಜೆಎನ್‌ಎಲ್‌ ಜಲಸಂಪನ್ಮೂಲ ಇಲಾಖೆಯಡಿಯೇ ಬರುವುದರಿಂದ ಎಂ.ಬಿ.ಪಾಟೀಲ ಸೂಚನೆಯನ್ನು ಅಕ್ಷರಶಃ ಅನುಷ್ಠಾನ ರೂಪಕ್ಕೆ ತಂದಿತು. ಇದರ ಪರಿಣಾಮ ಐತಿಹಾಸಿಕ ಭೂತನಾಳ ಕೆರೆಯ ಹಿಂಬದಿಗೆ ಹೊಂದಿಕೊಂಡಂತಿರುವ 550 ಎಕರೆ ಕಂದಾಯ ಇಲಾಖೆಯ ಬರಡು ಭೂಮಿಯಲ್ಲಿ 2017ರ ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ 59700 ಸಸಿಗಳನ್ನು ನೆಟ್ಟು, ನಿರ್ವಹಣೆಯ ಹೊಣೆಯನ್ನು ಹೊತ್ತಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದರು.

ನಾನಾ ನಮೂನೆಯ ಸಸಿಗಳು...: ವಿಭಿನ್ನ ತಳಿಯ ಸಸಿಗಳು ಕರಾಡದೊಡ್ಡಿ ನೆಡುತೋಪಿನಲ್ಲಿ ಬೆಳೆಯುತ್ತಿವೆ. ಬೇವು ಹೆಚ್ಚಿನ ಪ್ರಮಾಣದಲ್ಲಿದೆ. ವೈವಿಧ್ಯಮಯ ಸಸ್ಯ ಸಂಪತ್ತನ್ನು ಕಣ್ತುಂಬಿಕೊಳ್ಳುವ ಅವಕಾಶ ಇದೀಗ ವಿಜಯಪುರಿಗರಿಗೆ ಸಿಕ್ಕಿದೆ.

ಬೇವು, ಹೊಂಗೆ, ಆಲ, ಅರಳಿ, ಬಸರಿ ಗಿಡಗಳು ಹೆಚ್ಚಿನ ಪ್ರಮಾಣದಲ್ಲಿ ಸಮೃದ್ಧಿಯಾಗಿ ಬೆಳೆದಿವೆ. ಇವುಗಳ ಜತೆಗೆ ಅಂಜನ್, ಅತ್ತಿ, ಬಿದಿರು, ನೇರಳೆ, ಸೀತಾಫಲ, ಇಲಾಯಿತಿ ಹುಣಸೆ, ನೆಲ್ಲಿ, ಇಪ್ಪೆ, ಬಸವನ ಪಾದ, ಕಾಸೋಡಾ, ತಬೂಬಿಯಾ, ಕಾಡು ಬದಾಮ, ಸ್ಪೇತೋಡಿಯಾ, ಹೆಬ್ಬೇವು, ಸೀಮಾರೂಬಾ, ಕಾಡು ನೆಲ್ಲಿ, ತಪ್ಸಿ, ರೇನ್ ಟ್ರೀ, ಸಂಕೇಶ್ವರ, ಕ್ರೀಪಸರ್್, ಅಲೋವೇರಾ ಸೇರಿದಂತೆ ಹತ್ತಾರು ವೈವಿಧ್ಯಮಯ ಫಲ, ಪುಷ್ಪ ನೀಡುವ ಸಸಿಗಳು ಇಲ್ಲಿ ಬೆಳೆಯುತ್ತಿವೆ.

ಇದೀಗ ಐತಿಹಾಸಿಕ ಭೂತನಾಳ ಕೆರೆ ಹಕ್ಕಿಗಳ ವಾಸ ತಾಣವಾಗಿ ಬದಲಾಗಿದೆ. ಪಕ್ಷಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಗೂಡು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಬಿದರಿನ ಜಾತಿಯ ಗಿಡ ಹಾಗೂ ವಿವಿಧ ಹಣ್ಣಿನ ಗಿಡಗಳನ್ನು ಅರಣ್ಯ ಇಲಾಖೆ ನೆಟ್ಟಿದ್ದು, ಸಮೃದ್ಧಿಯಿಂದ ಬೆಳೆಯುತ್ತಿರುವುದು ಪೂರಕವಾಗಿದೆ.

ಮುಂಜಾನೆ– ಮುಸ್ಸಂಜೆ ವೇಳೆ ಪ್ರಶಾಂತ ವಾತಾವರಣದಲ್ಲಿ ಕರಾಡದೊಡ್ಡಿಯ ನೆಡುತೋಪಿನೊಳಗೆ ಒಮ್ಮೆ ಸಂಚರಿಸಿದರೆ ಮನಸ್ಸು ನಿರುಮ್ಮಳಗೊಳ್ಳುವ ವಾತಾವರಣ ಈಗಾಗಲೇ ಸೃಷ್ಟಿಯಾಗಿದೆ. ಹಕ್ಕಿಗಳ ಚಿಲಿಪಿಲಿಯ ಕಲರವ ಕೇಳುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಹತ್ತಾರು ಪ್ರಭೇದದ ಪುಟ್ಟ ಪುಟ್ಟ ಹಕ್ಕಿಗಳ ಪ್ರಣಯ, ಸಂಸಾರವೂ ಗೋಚರಿಸಲಿದೆ.

ಆಕರ್ಷಣೀಯ ಪ್ರವಾಸಿ ತಾಣ...

ಸರ್ ಎಂ.ವಿಶ್ವೇಶ್ವರಯ್ಯ ಸಲಹೆ, ಮಾರ್ಗದರ್ಶನದಲ್ಲಿ ಶತಮಾನದ ಹಿಂದೆ ನಿರ್ಮಿಸಿದ ಭೂತನಾಳ ಕೆರೆ ವಿಜಯಪುರದ 70,000ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಜಲಮೂಲ. ಕೆರೆ ತುಂಬುವ ಯೋಜನೆಯಡಿ 2016ರಿಂದ ಈ ಕೆರೆ ತುಂಬಿಸುತ್ತಿದ್ದು, 2017, 2018ರ ಕಡು ಬೇಸಿಗೆಯಲ್ಲೂ ನೀರು ತುಂಬಿತ್ತು. ಇದರಿಂದ ದೇಶ–-ವಿದೇಶದ ಹಕ್ಕಿಗಳು ಇಲ್ಲಿ ವಾಸ್ತವ್ಯ ಹೂಡಿದ್ದು ವಿಶೇಷ. ಇದೀಗ ಕೆರೆಯ ಹಿಂಬದಿ ಅರಣ್ಯೀಕರಣ ಸಮೃದ್ಧವಾಗಿದ್ದು, ಮೂರ್ನಾಲ್ಕು ವರ್ಷದಲ್ಲಿ ಸುಂದರ ಪರಿಸರ ನಿರ್ಮಾಣಗೊಳ್ಳಲಿದೆ. ವಿಜಯಪುರಿಗರ ಆಕರ್ಷಣೀಯ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ ಎಂದು ಕೆಬಿಜೆಎನ್‌ಎಲ್‌ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

2017ರಲ್ಲಿ ಮಳೆಗಾಲ ಆರಂಭಗೊಂಡ ಬೆನ್ನಿಗೆ ವಿಜಯಪುರದ ಪ್ರೇರಣಾ ಶಿಕ್ಷಣ ಸಂಸ್ಥೆ ಸಹ ಗೋಮಾಳದ ಜಮೀನಿನಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರದ ಕಾಳಜಿ ಮೂಡಿಸಲು 8,400 ಗಿಡಗಳನ್ನು ನೆಡುವ ಜತೆಗೆ 10 ವರ್ಷ ನಿರ್ವಹಣೆಯ ಹೊಣೆ ಹೊತ್ತಿತ್ತು. ಈಗ ಗಿಡಗಳು ಹಸಿರಿನಿಂದ ನಳನಳಿಸುತ್ತಿವೆ.

**

ಸಸಿಗಳ ಆರೈಕೆ, ನೀರುಣಿಸುವುದು, ಕಸ ಆಯಲು ನಿತ್ಯ 40 ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ 13 ಡೀಸೆಲ್‌ ಎಂಜಿನ್‌ ಬಳಸಿ ನಿತ್ಯ ನೀರುಣಿಸಿದೆವು

ವಿಶ್ವನಾಥರೆಡ್ಡಿ, ನೆಡುತೋಪಿನ ಮೇಸ್ತ್ರಿ

**

ನೆಡುತೋಪಿನಲ್ಲಿ ಕೆಲಸಕ್ಕೆಂದು ಬಂದರೇ ನಿತ್ಯ ₹ 400 ಪಗಾರ ಕೊಡ್ತಾರೆ. ಎಂಟತ್ತು ತಿಂಗಳಿನಿಂದ ಕೆಲಸ ಅರಸಿ ಅಲೆಯುವುದು ತಪ್ಪಿದೆ – ರಾವೋಬ ಯಶವಂತ ಮೋಹಿತೆ, ಅರಕೇರಿಯ ಕೂಲಿ ಕಾರ್ಮಿಕ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry