ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲನಿಧಿಗಳಿಂದ ಗಳಿಕೆ ಹೇಗೆ?

ಮ್ಯೂಚುಯಲ್ ಫಂಡ್‌ ಮಾಹಿತಿ
Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

ಸಾಲ ನಿಧಿಗಳು ಹೂಡಿಕೆದಾರರಿಂದ ತಾವು ಸಂಗ್ರಹಿಸಿದ ಹಣವನ್ನು ದೀರ್ಘಾವಧಿ, ಅಲ್ಪಾವಧಿ ಕಾರ್ಪೊರೇಟ್‌ ಬಾಂಡ್‌, ಬ್ಯಾಂಕ್‌ ಬಾಂಡ್‌... ಹೀಗೆ ಬೇರೆ ಬೇರೆ ಸಾಲಪತ್ರಗಳಲ್ಲಿ ತೊಡಗಿಸುತ್ತವೆ.

ಎಲ್ಲಾ ಕಾಲದಲ್ಲೂ ಬೇರೆ ಬೇರೆ ಬಡ್ಡಿ ದರಗಳಲ್ಲಿ, ಬೇರೆ ಬೇರೆ ಅವಧಿಯ, ಹೂಡಿಕೆಗೆ ಯೋಗ್ಯವಾದ ಸಾಲಪತ್ರಗಳು ಲಭ್ಯ ಇರುತ್ತವೆ. ಸಾಲ ನಿಧಿಗಳು, ಬಡ್ಡಿ ದರಕ್ಕೆ ಅನುಗುಣವಾಗಿ ಹಣವನ್ನು ಈ ಸಾಲಪತ್ರ (ಬಾಂಡ್‌) ಗಳಲ್ಲಿ ಹೂಡಿಕೆ ಮಾಡುತ್ತ, ತೆಗೆಯುತ್ತ ಇರುತ್ತವೆ.

ಹೂಡಿಕೆ ಮಾಡಿರುವ ಸಾಲಪತ್ರಗಳ ಸರಾಸರಿ ಅವಧಿ, ಅವುಗಳ ಬಡ್ಡಿ ದರಗಳ ಜೊತೆಗೆ ನಿಧಿಗಳು ಅವುಗಳನ್ನು ಹೇಗೆ ನಿರ್ವಹಿಸುತ್ತವೆ ಎಂಬುದರ ಮೇಲೆ ಸಾಲ ನಿಧಿಗಳ ಲಾಭ ನಿಗದಿಯಾಗುತ್ತದೆ. ಪಕ್ವತೆಯ ಅವಧಿ ದೀರ್ಘವಾದಷ್ಟು ಅಪಾಯ ಹೆಚ್ಚು, ಆದರೆ ಲಾಭವೂ ಹೆಚ್ಚಾಗಿರುತ್ತದೆ.

ಸಾಲ ನಿಧಿಗಳು ಎರಡು ರೀತಿಗಳಲ್ಲಿ ವರಮಾನ ಗಳಿಸುತ್ತವೆ. ಇಂತಹ ನಿಧಿಗಳ, ನಿವ್ವಳ ಸಂಪತ್ತಿನ ಮೌಲ್ಯ (ಎನ್‌ಎವಿ) ವೃದ್ಧಿಯಾಗುವುದು ಅದರಲ್ಲಿ ಮೊದಲನೆಯದಾಗಿದೆ. ಷೇರುಗಳಂತೆಯೇ ಸಾಲಪತ್ರಗಳ ವಹಿವಾಟು ಸಹ ನಡೆಯುತ್ತದೆ. ಷೇರು ಮಾರುಕಟ್ಟೆಯಷ್ಟು ದೊಡ್ಡ ಪ್ರಮಾಣದಲ್ಲಿ ಸಾಲಪತ್ರಗಳ ಖರೀದಿ ಅಥವಾ ಮಾರಾಟ ನಡೆಯಲಿಕ್ಕಿಲ್ಲ.

ಕೆಲವು ಸಾಲಪತ್ರಗಳು ಮಾರುಕಟ್ಟೆ ಸೂಚ್ಯಂಕದಲ್ಲಿ ನಮೂದು ಆಗಿರುವುದೂ ಇಲ್ಲ ಎಂಬುದು ನಿಜ. ಆದರೆ, ಮಾರುಕಟ್ಟೆಯಲ್ಲಿ ನಡೆಯುವ ವಹಿವಾಟಿನಿಂದ ನಿಧಿಗಳ ನಿವ್ವಳ ಸಂಪತ್ತಿನ ಮೌಲ್ಯದಲ್ಲಿ (ಎನ್‌ಎವಿ) ಏರಿಳಿತ ಆಗುತ್ತದೆ. ಬಡ್ಡಿ ದರದಲ್ಲಿ ಏರಿಕೆ ಆದಾಗ ಸಾಲಪತ್ರಗಳ ಗಳಿಕೆ ಹೆಚ್ಚಾಗಿ ಆ ಮೂಲಕ ಸಾಲ ನಿಧಿಯ ‘ಎನ್ಎವಿ’ ಹೆಚ್ಚಲು ಅವಕಾಶ ಇರುತ್ತದೆ.

ಬಡ್ಡಿ ದರ ಇಳಿಕೆಯಾದಾಗ ಹೊಸ ಸಾಲಪತ್ರಗಳಲ್ಲಿ ಹೆಚ್ಚಿನ ಗಳಿಕೆಗೆ ಅವಕಾಶ ಇಲ್ಲದಿದ್ದರೂ, ಹಳೆಯ ಸಾಲಪತ್ರಗಳ ಬೆಲೆ ಏರಿಕೆಯಾಗುತ್ತದೆ. ಉದಾಹರಣೆಗೆ: ₹ 100ರ ಮುಖಬೆಲೆಯ ಬಾಂಡ್‌ ಮತ್ತು ಬಡ್ಡಿ ದರ ಶೇ 10ರಷ್ಟು ಇದೆ ಎಂದಿಟ್ಟುಕೊಳ್ಳೋಣ.

ಒಂದೊಮ್ಮೆ ಬಡ್ಡಿದರ ಇಳಿಕೆಯಾಯಿತು ಎಂದಿಟ್ಟುಕೊಳ್ಳೋಣ. ಅಂತಹ ಸಂದರ್ಭದಲ್ಲಿ ಹೊಸದಾಗಿ ಬಿಡುಗಡೆಯಾದ ಬಾಂಡ್‌ನ ಬಡ್ಡಿ ದರ ಶೇ 9ರಷ್ಟಕ್ಕೆ ಇಳಿಕೆಯಾಗುತ್ತದೆ. ಹಳೆಯ ಬಾಂಡ್‌, ಹೊಸ ಬಡ್ಡಿ ಬಡ್ಡಿ ದರಕ್ಕೆ ಅನುಗುಣವಾಗಿ ವರಮಾನ ಗಳಿಸುವ ಉದ್ದೇಶಕ್ಕೆ ಅದರ ಬೆಲೆ ₹ 110ರವರೆಗೆ ಏರಿಕೆಯಾಗುತ್ತದೆ.

ಸಾಲ ನಿಧಿಯು, ಈ ಬಾಂಡ್‌ ಹೊಂದಿದ್ದರೆ, ಬಾಂಡ್‌ ದರ ಹೆಚ್ಚಾದಾಗ ಅದರ ‘ಎನ್‌ಎವಿ’ ಕೂಡ ಹೆಚ್ಚಾಗುತ್ತದೆ. ಬಡ್ಡಿ ದರಗಳು ಏರಿಕೆಯಾದಾಗ ಇದಕ್ಕೆ ವ್ಯತಿರಿಕ್ತವಾದ ಬೆಳವಣಿಗೆಗಳು ಕಂಡು ಬರುತ್ತವೆ. ಬಾಂಡ್‌ ಬೆಲೆಗಳು ಕಡಿಮೆಯಾಗಿ ಸಾಲದ ನಿಧಿಗಳ ‘ಎನ್‌ಎವಿ’ ಕೂಡ ಕಡಿಮೆಯಾಗುತ್ತದೆ.

ಬಾಂಡ್‌ ಬೆಲೆ ಏರಿಕೆ

ಆದಾಗ ಅವುಗಳನ್ನು ಹೊಂದಿರುವ ಸಾಲ ನಿಧಿಯು ಅವುಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಅದು ಬಾಂಡ್‌ಗಳ ಬಂಡವಾಳದಿಂದ ಗಳಿಸುವ ಲಾಭ (ಕ್ಯಾಪಿಟಲ್‌ ಗೇನ್‌) ಎನಿಸುತ್ತದೆ. ಅದರಿಂದ ಸಾಲ ನಿಧಿಯ ಮೌಲ್ಯ ವೃದ್ಧಿ ಆಗುತ್ತದೆ. ಸರ್ಕಾರಿ ಸಾಲಪತ್ರಗಳಲ್ಲಿ ಹೆಚ್ಚಾಗಿ ಇಂಥ ವಹಿವಾಟು ನಡೆಯುತ್ತದೆ. ಇದಕ್ಕೆ ಅವುಗಳು ಹೊಂದಿರುವ ದ್ರವ್ಯತೆಯೇ ಕಾರಣ.

ಬಡ್ಡಿದರ ಇಳಿಕೆಯ ಸಂಕೇತಗಳು ಲಭಿಸುತ್ತಿದ್ದಂತೆ ಸಾಲ ನಿಧಿಗಳ ನಿರ್ವಾಹಕರು (ಫಂಡ್‌ ಮ್ಯಾನೇಜರ್‌ಗಳು) ಲಾಭ ಗಳಿಕೆಯ ಉದ್ದೇಶದಿಂದ ದೀರ್ಘಾವಧಿಯ ಸರ್ಕಾರಿ ಸಾಲಪತ್ರಗಳನ್ನು ಖರೀದಿಸಿ ಇಟ್ಟುಕೊಳ್ಳುತ್ತಾರೆ. ಬಡ್ಡಿ ದರ ಏರಿಕೆಯ ಸೂಚನೆ ಇದ್ದಾಗ ಅಲ್ಪಾವಧಿಯ ಸಾಲಪತ್ರಗಳನ್ನು ಖರೀದಿಸುತ್ತಾರೆ.

ಆ ಮೂಲಕ ಬಂಡವಾಳ ವೃದ್ಧಿಯ ಪ್ರಯೋಜನ ಪಡೆದುಕೊಳ್ಳುತ್ತಾರೆ. ದೀರ್ಘಾವಧಿಯ ಸಾಲನಿಧಿಗಳು ಸಾಮಾನ್ಯವಾಗಿ ಈ ರೀತಿಯ ಮಾರಾಟ– ಖರೀದಿ ಚಟುವಟಿಕೆಗಳನ್ನು ನಡೆಸುತ್ತವೆ. ಇವು ಹೆಚ್ಚಾಗಿ ಕಾರ್ಪೊರೇಟ್‌ ಸಾಲಪತ್ರ, ಸರ್ಕಾರಿ ಸಾಲಪತ್ರಗಳನ್ನೇ ನೆಚ್ಚಿಕೊಂಡಿರುತ್ತವೆ.

ಇದರಲ್ಲಿರುವ ಅಪಾಯಗಳಾದರೂ ಏನು? ಮೊದಲನೆಯದು– ಈ ನಿಧಿಗಳ ಮೌಲ್ಯವು ಬಾಂಡ್‌ಗಳ ಬೆಲೆಯ ಏರುಪೇರನ್ನು ಅವಲಂಬಿಸಿರುತ್ತದೆ. ಬಡ್ಡಿ ದರ ಏರಿಳಿತ, ಸರ್ಕಾರದ ಸಾಲ ಪಡೆಯುವ ಸಾಮರ್ಥ್ಯ, ವಿದೇಶಿ ಹೂಡಿಕೆ ಪ್ರಮಾಣ ಮುಂತಾದ ಬೆಳವಣಿಗೆಗಳು ಸಾಲಪತ್ರಗಳ ಬೆಲೆಯ ಮೇಲೆ ಪರಿಣಾಮ ಉಂಟುಮಾಡುತ್ತಿರುತ್ತವೆ. ಅದರ ಪರಿಣಾಮ ಸಾಲ ನಿಧಿಗಳ ಬೆಲೆಯೂ ಆಗಾಗ ಏರುಪೇರಾಗುತ್ತಲೇ ಇರುತ್ತದೆ.

ಅದರಿಂದಾಗಿ ನಿಗದಿತ ಗಳಿಕೆ ದಾಖಲಿಸಲು ಬೇಕಾಗುವ ಅವಧಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂಬುದು ಎರಡನೆಯ ಅಪಾಯವಾಗಿದೆ. ಕಳೆದ ಏಳೆಂಟು ತಿಂಗಳುಗಳಿಂದ ಸಾಲನಿಧಿಗಳು ಈ ಸಮಸ್ಯೆ ಎದುರಿಸುತ್ತಿವೆ. ನೀವೂ ಒಂದುವೇಳೆ ಇಂತಹ ನಿಧಿಗಳಲ್ಲಿ ಹೂಡಿಕೆ ಮಾಡಿದ್ದರೆ, ದರ ಏರುಪೇರಿನಿಂದ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ.

ವರಮಾನ ಸಂಚಯ

ಸಾಲ ನಿಧಿಗಳು ಆದಾಯ ಗಳಿಸುವ ಇನ್ನೊಂದು ವಿಧಾನವೆಂದರೆ ‘ವರಮಾನ ಸಂಚಯ’.

ಇಂತಹ ನಿಧಿಗಳು ಸಾಲಪತ್ರಗಳು ನೀಡುವ ನಿಗದಿತ ಬಡ್ಡಿಯನ್ನು ಸಂಚಯ ಮಾಡುತ್ತಿರುತ್ತವೆ. ಬಡ್ಡಿ ದರ ಏರಿಳಿಕೆಯ ಮೇಲೆ ಅವಲಂಬಿಸುವುದಾಗಲಿ, ಸಾಲಪತ್ರಗಳ ಮಾರಾಟ– ಖರೀದಿ ವ್ಯವಹಾರವನ್ನಾಗಲಿ ಇವುಗಳು ಮಾಡುವುದಿಲ್ಲ. ಸಾಮಾನ್ಯವಾಗಿ ಅಲ್ಪಾವಧಿಯ ಸಾಲನಿಧಿಗಳು ಈ ವಿಧಾನವನ್ನು ಅನುಸರಿಸುತ್ತವೆ.

ಇಂಥ ನಿಧಿಗಳ ಫಂಡ್‌ ಮ್ಯಾನೇಜರ್‌ಗಳು ಅಲ್ಪಾವಧಿಯಲ್ಲಿ ಗರಿಷ್ಠ ಲಾಭ ತಂದುಕೊಡಬಲ್ಲ ಸಾಲಪತ್ರಗಳ ಮೇಲೆಯೇ ಕಣ್ಣಿಟ್ಟಿರುತ್ತಾರೆ.

ಈ ನಿಧಿಗಳಲ್ಲೂ ಒಂದೆರಡು ಅಪಾಯಗಳು ಇವೆ. ಸಾಲಪತ್ರ ನೀಡಿರುವ ಕಂಪನಿಯ ನೀತಿಯಲ್ಲಿ ಬದಲಾವಣೆ ಆದರೆ ಅದರ ಸಾಲ ಪಡೆಯುವ ಸಾಮರ್ಥ್ಯದ ರೇಟಿಂಗ್‌ನಲ್ಲಿ ಏರುಪೇರು ಆಗಬಹುದು. ಅಂತಹ ಸಂದರ್ಭದಲ್ಲಿ ಬಾಂಡ್‌ನ ಮೌಲ್ಯ ಇಳಿಕೆಯಾಗಿ, ಗಳಿಕೆಯೂ ಕಡಿಮೆಯಾಗುವ ಅಪಾಯ ಇದೆ. ಇದರಿಂದಾಗಿ ಒಟ್ಟಾರೆಯಾಗಿ ಸಾಲ ನಿಧಿಯ ಮೌಲ್ಯವೂ (ಎನ್‌ಎವಿ) ಇಳಿಕೆಯಾಗಬಹುದು.

ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಮುಖ ಕಂಪನಿಗಳ ನೀತಿಗಳಲ್ಲಿ ಬದಲಾವಣೆ ಆಗಿ, ಅವುಗಳ ಸಾಲಪತ್ರಗಳನ್ನು ಹೊಂದಿದ್ದ ಪ್ರಮುಖ ಸಾಲ ನಿಧಿಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿತ್ತು.

ಆದರೆ, ಈ ಇಳಿಕೆ ಅನ್ವಯವಾಗುವುದು ‘ಎನ್‌ಎವಿ’ಗೆ ಮಾತ್ರ. ಆದ್ದರಿಂದ ಸಾಲ ನಿಧಿಗಳು ಅಂತಹ ಕಂಪನಿಗಳ ಸಾಲಪತ್ರಗಳನ್ನು ಮಾರಾಟ ಮಾಡದೆ ಇನ್ನೂ ಸ್ವಲ್ಪ ಅವಧಿಗೆ ಇಟ್ಟುಕೊಳ್ಳಬಹುದು. ಕಂಪನಿಯೊಂದರ ಸಾಲ ಸಾಮರ್ಥ್ಯ ಇಳಿಕೆ ಆಯಿತೆಂದರೆ ಅದು ಕೆಟ್ಟ ಸ್ಥಿತಿಯಲ್ಲಿದೆ ಎಂದು ಅರ್ಥೈಸಬೇಕಾಗಿಲ್ಲ. ಬದಲಿಗೆ, ಅಪಾಯ ಪ್ರಮಾಣ ಸ್ವಲ್ಪ ಏರಿಕೆ ಆಗಿದೆ ಎಂದು ಭಾವಿಸಬಹುದು.

ಬಡ್ಡಿ ಪಾವತಿಸುವ ಸಾಮರ್ಥ್ಯವನ್ನೇ ಕಂಪನಿ ಕಳೆದುಕೊಳ್ಳುತ್ತಿದೆ ಎಂದು ಫಂಡ್‌ ಮ್ಯಾನೇಜರ್‌ಗಳಿಗೆ ಅನ್ನಿಸಿದರೆ ಅಂಥ ಕಂಪನಿಗಳ ಸಾಲಪತ್ರಗಳು ಅಪಾಯದಲ್ಲಿವೆ ಎನ್ನಬಹುದು.

ಕಂಪನಿಯೊಂದರ ಸಾಲ ಸಾಮರ್ಥ್ಯ ಏರಿಕೆಯಾದಾಗ ಇದಕ್ಕೆ ವಿರುದ್ಧವಾದ ಬೆಳವಣಿಗೆಯೂ ಕಾಣಿಸುತ್ತದೆ. ಆದ್ದರಿಂದ ನಾವು ಮಾಡಿದ ಹೂಡಿಕೆಯಲ್ಲಿರುವ ಅಪಾಯದ ಪ್ರಮಾಣ ಎಷ್ಟು ಎಂಬುದನ್ನು ಹೂಡಿಕೆದಾರರು ಅರಿಯುವುದು ಮುಖ್ಯ. ಸಾಲಪತ್ರಗಳಂತೆ ಸಾಲ ನಿಧಿಯಲ್ಲೂ ನಿಗದಿತ ಗಳಿಕೆ ದಾಖಲಿಸಬೇಕಾದರೆ ದೀರ್ಘ ಕಾಲದ ಹೂಡಿಕೆ ಅಗತ್ಯ ಎಂಬುದನ್ನು ಮರೆಯಬಾರದು.

ಷೇರು ನಿಧಿಗಳಂತೆ, ಸಾಲ ನಿಧಿಗಳಲ್ಲಿನ ಹೂಡಿಕೆಗೂ ನಿರ್ದಿಷ್ಟ ಕಾಲಮಿತಿಯ ಅಗತ್ಯ ಇರುತ್ತದೆ. ನಿಮ್ಮ ಅಗತ್ಯಗಳು ಎರಡು ಅಥವಾ ಅದಕ್ಕಿಂತ ಕಡಿಮೆ ವರ್ಷ ಇದ್ದರೆ, ಅಲ್ಪಾವಧಿ ನಿಧಿಗಳಿಗೆ ಅಥವಾ ಲಿಕ್ವಿಡ್‌ ಫಂಡ್ಸ್‌ಗಳಲ್ಲಿ ಹೂಡಿಕೆ ಮಾಡಿ. ವರಮಾನದ ಅಗತ್ಯ ದೀರ್ಘಾವಧಿಯದು ಆಗಿದ್ದರೆ, ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಸಾಲ ನಿಧಿಗಳಲ್ಲಿ ಹೂಡಿಕೆ ಮಾಡಿ.

ಗಮನಿಸಿ: ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಹೂಡಿಕೆ ನಿರ್ಧಾರಕ್ಕೆ ಬರುವ ಮುನ್ನ, ಫಂಡ್ಸ್‌ಗಳ ಯೋಜನೆ ಮತ್ತಿತರ ಮಾಹಿತಿಯನ್ನು ಜಾಗರೂಕತೆಯಿಂದ ಓದಲು ಮರೆಯಬೇಡಿ.

–ಫಂಡ್ಸ್‌ ಇಂಡಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT